S Jaishankar, Supreme Court  
ಸುದ್ದಿಗಳು

ರಾಜ್ಯಸಭೆ ಸ್ಪರ್ಧೆ ವೇಳೆ ಕಾನೂನು ಉಲ್ಲಂಘನೆಯಾಗಿಲ್ಲ: ಸುಪ್ರೀಂಕೋರ್ಟ್‌ನಲ್ಲಿ ಕೇಂದ್ರ ಸಚಿವ ಜೈಶಂಕರ್ ಸಮರ್ಥನೆ

ಗುಜರಾತ್‌ನಿಂದ ರಾಜ್ಯಸಭೆಗೆ ಚುನಾಯಿತರಾದಾಗ ಯಾವುದೇ ಕಾನೂನು ಉಲ್ಲಂಘನೆಯಾಗಿಲ್ಲ ಎಂದು ಸುಪ್ರೀಂಕೋರ್ಟ್‌ಗೆ ಸಲ್ಲಿಸಿರುವ ಅಫಿಡವಿಟ್‌ನಲ್ಲಿ ಡಾ. ಜೈಶಂಕರ್ ತಿಳಿಸಿದ್ದಾರೆ.

Bar & Bench

ಪ್ರತ್ಯೇಕ ದಿನಗಳಲ್ಲಿ ತೆರವಾದ ರಾಜ್ಯಸಭಾ ಸ್ಥಾನಗಳಿಗೆ ಒಂದೇ ಉಪಚುನಾವಣೆಯ ಮೂಲಕ ಚುನಾವಣೆ ನಡೆಸಬೇಕು ಎಂಬುದಾಗಿ ಸಂವಿಧಾನ ಅಥವಾ ಜನಪ್ರತಿನಿಧಿ ಕಾಯಿದೆಯಡಿ ಯಾವುದೇ ನಿಬಂಧನೆಗಳಿಲ್ಲ ಎಂದು ವಿದೇಶಾಂಗ ವ್ಯವಹಾರಗಳ ಸಚಿವ ಡಾ. ಎಸ್ ಜೈಶಂಕರ್ ಸುಪ್ರೀಂಕೋರ್ಟ್‌ಗೆ ತಿಳಿಸಿದ್ದಾರೆ. ಗುಜರಾತ್‌ನಿಂದ ರಾಜ್ಯಸಭೆಗೆ ಚುನಾಯಿತರಾದಾಗ ಯಾವುದೇ ಕಾನೂನು ಉಲ್ಲಂಘನೆಯಾಗಿಲ್ಲ ಎಂದು ಕೂಡ ಅಫಿಡವಿಟ್‌ನಲ್ಲಿ ವಿವರಿಸಲಾಗಿದೆ.

"ಒಂದೇ ಉಪಚುನಾವಣೆ ಮೂಲಕ ಚುನಾವಣೆ ನಡೆಸುವುದು ಕಡ್ಡಾಯ ಎಂಬ ಬಗ್ಗೆ ಸಂವಿಧಾನದನ್ವಯ ಅಥವಾ ಜನಪ್ರತಿನಿಧಿ ಕಾಯಿದೆಯಡಿ ಯಾವುದೇ ನಿಬಂಧನೆಗಳು ಇಲ್ಲ. ಆದ್ದರಿಂದ ಪ್ರಸ್ತುತ ಪ್ರಕರಣದ ಸಂಗತಿ ಮತ್ತು ಸನ್ನಿವೇಶಗಳಲ್ಲಿ ಯಾವುದೇ ಕಾನೂನಿನ ಉಲ್ಲಂಘನೆಯಾಗಿಲ್ಲ"ಎಂದು ತಿಳಿಸಲಾಗಿದೆ.

ರಾಜ್ಯಸಭೆಯಲ್ಲಿ ಅನಿಯತ ಮತ್ತು ನಿಯತ ಖಾಲಿ ಸ್ಥಾನಗಳಿಗೆ ಉಪಚುನಾವಣೆ ನಡೆಸಲು ಚುನಾವಣಾ ಆಯೋಗ ಎರಡು ಪ್ರತ್ಯೇಕ ಅಧಿಸೂಚನೆಗಳನ್ನು ಹೊರಡಿಸಿದ್ದು ಅದು ಕಾನೂನಿನ ಉಲ್ಲಂಘನೆ ಎಂದು ಕಾಂಗ್ರೆಸ್‌ ಮುಖಂಡ ಗೌರವ್‌ ಪಾಂಡ್ಯ ಅರ್ಜಿ ಸಲ್ಲಿಸಿದ್ದರು.

2019ರ ಸೆಪ್ಟೆಂಬರ್‌ನಲ್ಲಿ ಗುಜರಾತ್ ಹೈಕೋರ್ಟ್ ಪಾಂಡ್ಯ ಅವರ ಮನವಿಯನ್ನು ವಜಾಗೊಳಿಸಿತ್ತು. ತಾವು ಚುನಾವಣೆಯಲ್ಲಿ ಮತದಾರನಲ್ಲ ಅಥವಾ ಅಭ್ಯರ್ಥಿಯಲ್ಲ ಎಂಬ ಕಾರಣಕ್ಕೆ ಸೀಮಿತಗೊಂಡು ಹೈಕೋರ್ಟ್‌ ತೀರ್ಪು ನೀಡಿದ್ದು ಇದು ಕಾನೂನಾತ್ಮಕ ದೋಷ ಎಂದು ಪಾಂಡ್ಯ ಸುಪ್ರೀಂಕೋರ್ಟ್‌ಗೆ ಸಲ್ಲಿಸಿದ ಮನವಿಯಲ್ಲಿ ತಿಳಿಸಿದ್ದರು.

ಅಡ್ವೊಕೇಟ್- ಆನ್- ರೆಕಾರ್ಡ್ ಕ್ರಿಸ್ಟಿ ಜೈನ್ ಅವರ ಮೂಲಕ ಅರ್ಜಿ ಸಲ್ಲಿಕೆಯಾಗಿದೆ. 2017ರಲ್ಲಿ ಬಿಜೆಪಿ ನಾಯಕರಾದ ಅಮಿತ್ ಶಾ ಮತ್ತು ಸ್ಮೃತಿ ಇರಾನಿ ಅವರು ಲೋಕಸಭೆಗೆ ಚುನಾಯಿತರಾದ ಪರಿಣಾಮ ಅವರ ರಾಜ್ಯಸಭಾ ಸ್ಥಾನಗಳು ತೆರವಾಗಿದ್ದವು.

1951ರ ಜನಪ್ರತಿನಿಧಿ ಕಾಯಿದೆಯ ಸೆಕ್ಷನ್ 147 ರ ಅಡಿಯಲ್ಲಿ ಹಾಗೆ ಖಾಲಿ ಇರುವ ಸ್ಥಾನಗಳ ಬಗ್ಗೆ ಚುನಾವಣಾ ಆಯೋಗ, ಗುಜರಾತ್ ರಾಜ್ಯದ ವಿಧಾನಸಭೆಯ ಚುನಾಯಿತ ಸದಸ್ಯರಿಗೆ ತಿಳಿಸಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಸದಸ್ಯರನ್ನು ಆಯ್ಕೆ ಮಾಡಬೇಕಿತ್ತು ಎಂಬುದು ಪಾಂಡ್ಯ ಅವರ ವಾದವಾಗಿತ್ತು. ಅಂತಹ ಅನಿಯತ ಖಾಲಿ ಹುದ್ದೆಗಳ ಬಗ್ಗೆ ಕೇವಲ ಒಂದೇ ಒಂದು ಅಧಿಸೂಚನೆ ಹೊರಡಿಸಿ, ಪರ್ಯಾಯ ಅಭ್ಯರ್ಥಿಗಳನ್ನು ಆಯ್ಕೆ ಮಾಡಲು ರಾಜ್ಯದ ವಿಧಾನಸಭೆಗೆ ತಿಳಿಸಿ ಚುನಾವಣಾ ಆಯೋಗ ಅಧಿಸೂಚನೆ ಹೊರಡಿಸಬೇಕಿತ್ತು ಎಂದು ಪಾಂಡ್ಯ ತಕರಾರು ಎತ್ತಿದ್ದರು.

"ಚುನಾವಣಾ ಆಯೋಗ ಎರಡು ಖಾಲಿ ಹುದ್ದೆಗಳಿಗೆ ಎರಡು ಪ್ರತ್ಯೇಕ ಅಧಿಸೂಚನೆಗಳನ್ನು ಹೊರಡಿಸಿತು. ಈ ಎರಡು ಅಧಿಸೂಚನೆಗಳ ಲಾಭ ಪಡೆದುಕೊಂಡ ಗುಜರಾತ್ ವಿಧಾನಸಭೆ ರಾಜ್ಯಸಭೆಯ ಖಾಲಿ ಹುದ್ದೆಗಳನ್ನು ಭರ್ತಿ ಮಾಡಲು ಒಂದೇ ದಿನದಲ್ಲಿ (ಅಂದರೆ 5.7.2009ರಲ್ಲಿ) ಎರಡು ಪ್ರತ್ಯೇಕ ಚುನಾವಣೆಗಳನ್ನು ನಡೆಸಿತು” ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ.

ಎರಡೂ ಚುನಾವಣೆಗಳಿಗೂ (ಆಯ್ಕೆ) ಪ್ರಕ್ರಿಯೆ ಅನುಸರಿಸುವ ಮೂಲಕ, ಖಾಲಿ ಇರುವ ಎರಡು ಸ್ಥಾನಗಳನ್ನು “ಬಿಜೆಪಿ ಆಕ್ರಮಿಸಿಕೊಂಡಿದೆ”ಎಂದು ಪಾಂಡ್ಯ ವಾದಿಸಿದ್ದರು. ಆದರೆ ಒಂದೇ ಚುನಾವಣೆ ನಡೆದರೆ, ಕಾಂಗ್ರೆಸ್ ಕನಿಷ್ಠ ಒಂದು ಸ್ಥಾನವನ್ನು ಗೆಲ್ಲಬಹುದಿತ್ತು ಎಂಬುದು ಅವರ ನಿಲುವಾಗಿತ್ತು.

ಪ್ರಕರಣದ ವಿವರವಾದ ವಿಚಾರಣೆ ನಡೆಸುವ ಉದ್ದೇಶದಿಂದ ಸುಪ್ರೀಂಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಎಸ್‌ ಎ ಬೊಬ್ಡೆ ಅವರಿದ್ದ ಪೀಠ ಜನವರಿ ಮೂರನೇ ವಾರಕ್ಕೆ ವಿಚಾರಣೆಯನ್ನು ಮುಂದೂಡಿದೆ.