ಬಿಬಿಎಂಪಿಯ 198 ವಾರ್ಡ್‌ಗಳಿಗೆ 6 ವಾರಗಳಲ್ಲಿ ಚುನಾವಣೆ ಘೋಷಿಸಿ: ಕರ್ನಾಟಕ ಹೈಕೋರ್ಟ್‌

ನಿಗದಿ ಅವಧಿಯಲ್ಲಿ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆಗೆ (ಬಿಬಿಎಂಪಿ) ಚುನಾವಣೆ ನಡೆಸುವಂತೆ ರಾಜ್ಯ ಸರ್ಕಾರಕ್ಕೆ ನಿರ್ದೇಶಿಸುವಂತೆ ಕೋರಿದ್ದ ಮೂರು ಮನವಿಗಳನ್ನು ಆಧರಿಸಿ ನ್ಯಾಯಾಲಯವು ತೀರ್ಪು ನೀಡಿದೆ.
ಬಿಬಿಎಂಪಿಯ 198 ವಾರ್ಡ್‌ಗಳಿಗೆ 6 ವಾರಗಳಲ್ಲಿ ಚುನಾವಣೆ ಘೋಷಿಸಿ: ಕರ್ನಾಟಕ ಹೈಕೋರ್ಟ್‌

ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆಯ 198 ವಾರ್ಡ್‌ಗಳಿಗೆ 6 ವಾರಗಳಲ್ಲಿ ಚುನಾವಣೆ ನಡೆಸುವಂತೆ ಕರ್ನಾಟಕ ಹೈಕೋರ್ಟ್‌ ಗುರುವಾರ ಆದೇಶ ಹೊರಡಿಸಿದೆ.

ಮುಖ್ಯ ನ್ಯಾಯಮೂರ್ತಿ ಅಭಯ್‌ ಶ್ರೀನಿವಾಸ್‌ ಓಕಾ ಮತ್ತು ನ್ಯಾಯಮೂರ್ತಿ ವಿಶ್ವಜಿತ್‌ ಶೆಟ್ಟಿ ಅವರಿದ್ದ ವಿಭಾಗೀಯ ಪೀಠವು ಕರ್ನಾಟಕ ಮುನಿಸಿಪಲ್‌ ಕಾರ್ಪೊರೇಷನ್‌ ಮೂರನೇ ತಿದ್ದುಪಡಿ ಕಾಯಿದೆ 2020 (ತಿದ್ದುಪಡಿ ಕಾಯಿದೆ) ಅನ್ನು ಎತ್ತಿ ಹಿಡಿದಿದ್ದರೂ, ತಿದ್ದುಪಡಿ ಕಾಯಿದೆ ಜಾರಿಗೆ ಬರುವುದಕ್ಕೂ ಮುನ್ನ ನಡೆಯಬೇಕಿದ್ದ ಚುನಾವಣೆಗೆ ಸದರಿ ಕಾನೂನು ಅನ್ವಯಿಸುವುದಿಲ್ಲ ಎಂದು ಹೇಳಿದೆ. ವಾದ-ಪ್ರತಿವಾದ ಆಲಿಸಿದ್ದ ನ್ಯಾಯಾಲಯವು ನವೆಂಬರ್‌ 26ರಂದು ತೀರ್ಪು ಕಾಯ್ದಿರಿಸಿತ್ತು.

ನಿಗದಿತ ಸಂದರ್ಭದಲ್ಲಿ ಬಿಬಿಎಂಪಿಗೆ ಚುನಾವಣೆ ನಡೆಸುವಂತೆ ಸೂಚಿಸಿ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡುವಂತೆ ಕೋರಿದ್ದ ಮೂರು ಮನವಿಗಳನ್ನು ಆಧರಿಸಿ ನ್ಯಾಯಾಲಯವು ತೀರ್ಪು ಪ್ರಕಟಿಸಿದೆ. ಎಂ ಶಿವರಾಜು ಅವರು ಮೊದಲನೇ ಮನವಿ ಸಲ್ಲಿಸಿದ್ದು, ರಾಜ್ಯ ಚುನಾವಣಾ ಆಯೋಗವು (ಎಸ್‌ಇಸಿ) ಎರಡನೇ ಮತ್ತು ರವಿ‌ ಎಂಬವರು ಮೂರನೇ ಮನವಿ ಸಲ್ಲಿಸಿದ್ದರು.

ಇತ್ತೀಚೆಗೆ ಜಾರಿಗೆ ತರಲಾದ ಕರ್ನಾಟಕ ಮುನಿಸಿಪಾಲಿಟಿ ಕಾರ್ಪೊರೇಷನ್‌ ಮೂರನೇ ತಿದ್ದುಪಡಿ ಕಾಯಿದೆ 2020 (ತಿದ್ದುಪಡಿ ಕಾಯಿದೆ) ಅನ್ನು ಬೆಂಬಲಿಸಿ ಅಡ್ವೊಕೇಟ್‌ ಜನರಲ್‌ ಪ್ರಭುಲಿಂಗ ನಾವದಗಿ ವಾದಿಸಿದ್ದರು.

ಹಾಲಿ ಇರುವ 198 ವಾರ್ಡ್‌ಗಳ ಸಂಖ್ಯೆಯನ್ನು 243ಕ್ಕೆ ಹೆಚ್ಚಿಸುವ ಉದ್ದೇಶದಿಂದ ಕರ್ನಾಟಕ ಮುನಿಸಿಪಲ್ ಕಾರ್ಪೊರೇಷನ್‌ ಕಾಯಿದೆಗೆ ರಾಜ್ಯ ಶಾಸನಸಭೆಯು ತಿದ್ದು ಮಾಡಿದೆ. ಬಿಬಿಎಂಪಿಯ ಆಡಳಿತಕ್ಕಾಗಿ ಪ್ರತ್ಯೇಕ ಕಾನೂನು ಜಾರಿಗೆ ಬಾಕಿ ಉಳಿದಿದೆ.

ಸಕಾರಣದಿಂದ ಜಾರಿಗೊಳಿಸಲಾದ ಕಾನೂನನ್ನು ಮೂರು ವಿಚಾರಗಳನ್ನು ಆಧರಿಸಿ ಮಾತ್ರ ನ್ಯಾಯಾಲಯ ರದ್ದುಗೊಳಿಸಬಹುದು ಎಂದು ನಾವದಿಗಿ ವಾದಿಸಿದರು. ಶಾಸಕಾಂಗದ ಸಾಮರ್ಥ್ಯ ಕೊರತೆಯಾದಾಗ, ಮೂಲಭೂತ ಹಕ್ಕುಗಳನ್ನು ಉಲ್ಲಂಘಿಸಿದಾಗ ಮತ್ತು ಸ್ವಷ್ಟವಾಗಿ ಸ್ವೇಚ್ಛೆಯಿಂದ ಕೂಡಿದ್ದಾಗ ಮಾತ್ರ ಅದನ್ನು ವಜಾ ಮಾಡಬಹುದಾಗಿದೆ. ಇವುಗಳನ್ನು ಹೊರತುಪಡಿಸಿ ಸಕಾರಣದಿಂದ ಜಾರಿಗೆ ತಂದ ಕಾನೂನನ್ನು ಉಪೇಕ್ಷಿಸುವಂತೆ ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಲಾಗದು ಎಂದಿದ್ದರು.

ನಿರ್ದಿಷ್ಟ ಕಾಲಾವಧಿಯಲ್ಲಿ ಬಿಬಿಎಂಪಿ ಚುನಾವಣೆ ನಡೆಸುವಂತೆ ಮನವಿ ಮಾಡಿರುವ ಅರ್ಜಿದಾರರ ಕೋರಿಕೆಗೆ ಸಂಬಂಧಿಸಿದಂತೆ ಅದಕ್ಕೆ ರಾಜ್ಯ ಸರ್ಕಾರದ ತಕರಾರು ಇಲ್ಲ ಎಂದು ನಾವದಗಿ ಹೇಳಿದರು. ಸಮಯಸೂಚಿಗೆ ಸಂಬಂಧಿಸಿದಂತೆ ನೀಡಲಾಗುವ ನಿರ್ದೇಶನಗಳನ್ನು ಮುಕ್ತ ಹೃದಯದಿಂದ ಸ್ವಾಗತಿಸುವುದಾಗಿ ತಿಳಿಸಿದ ಅವರು ಹೊಸ ವಾರ್ಡ್‌ಗಳ ಮರು ವಿಂಗಡಣೆ ಮತ್ತು ಆನಂತರ ಚುನಾವಣೆ ನಡೆಯಲಿದೆ ಎಂದಿದ್ದರು.

ಕ್ಷೇತ್ರ ಮರುವಿಂಗಡಣೆಯ ಕುರಿತಾದ ಶಾಸನಬದ್ಧ ಕರ್ತವ್ಯ ಮತ್ತು 2018ರ ಜುಲೈನಿಂದ ವಾರ್ಡ್‌ಗಳ ಮೀಸಲಾತಿಗೆ ಸಂಬಂಧಿಸಿದಂತೆ ಕ್ರಮಕೈಗೊಳ್ಳುವಂತೆ ಚುನಾವಣಾ ಆಯೋಗವು ರಾಜ್ಯ ಸರ್ಕಾರಕ್ಕೆ ಒಂದು ಡಜನ್‌ ಪತ್ರ ಸಂವಹನ ನಡೆಸಿದೆ ಎಂದು ಅರ್ಜಿದಾರರ ಪರ ಹಿರಿಯ ವಕೀಲ ಪ್ರೊ. ರವಿವರ್ಮಾ ಕುಮಾರ್‌ ವಾದಿಸಿದರು. ಇದಕ್ಕೆ ಸ್ಪಂದನೆ ಸಿಗದಿದ್ದರಿಂದ ಆಯೋಗವು ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡುವಂತೆ ನ್ಯಾಯಾಲಯದ ಮೆಟ್ಟಿಲೇರಿದೆ ಎಂದು ರವಿವರ್ಮ ಕುಮಾರ್‌ ಹೇಳಿದ್ದರು.

ಚುನಾವಣಾ ಆಯೋಗ ಅಥವಾ ಮನವಿದಾರರು ಬಿಬಿಎಂಪಿಗೆ ಚುನಾವಣೆ ನಡೆಸುವಂತೆ ರಾಜ್ಯ ಸರ್ಕಾರಕ್ಕೆ ನಿರ್ದೇಶಿಸುವಂತೆ ನ್ಯಾಯಾಲಯದ ಕದತಟ್ಟುವ ಸ್ಥಿತಿ ನಿರ್ಮಾಣವಾಗಿದೆ. 2015ರಲ್ಲೂ ಬಿಬಿಎಂಪಿಗೆ ಚುನಾವಣೆ ನಡೆಸುವುದು ತಡವಾಗಿತ್ತು. ಸೆಪ್ಟೆಂಬರ್‌ 10ಕ್ಕೆ ಬಿಬಿಎಂಪಿ ಅವಧಿ ಮುಗಿದಿದೆ. ಆಡಳಿತಾಧಿಕಾರಿ ನೇಮಿಸುವುದಕ್ಕೆ ಕಾನೂನಿನಲ್ಲಿ ಅವಕಾಶವಿಲ್ಲ ಎಂದೂ ರವಿವರ್ಮ ಕುಮಾರ್‌ ವಾದಿಸಿದ್ದರು.

ಒಂದು ವರ್ಷದ ವರೆಗೆ ಬಿಬಿಎಂಪಿ ಚುನಾವಣೆ ನಡೆಸಲು ಅಸಾಧ್ಯ. ಕ್ಷೇತ್ರ ಮರುವಿಂಗಡಣಾ ಕಾರ್ಯ ನಡೆಸಿ 225 ವಾರ್ಡ್‌ಗಳನ್ನಾಗಿ ಮಾಡಬೇಕಿರುವುದರಿಂದ ಅದಕ್ಕೆ ಆರು ತಿಂಗಳು ಬೇಕಾಗುತ್ತದೆ. ಬಳಿಕ ಮೀಸಲಾತಿ ನಿಗದಿಗೊಳಿಸಿ, ಹೊಸ ಮತದಾರರ ಪಟ್ಟಿ ಸಿದ್ಧಪಡಿಸಲು ಆರು ತಿಂಗಳು ಬೇಕು ಎಂದು ಆಯೋಗ ಪ್ರತಿನಿಧಿಸುತ್ತಿರುವ ಹಿರಿಯ ವಕೀಲ ಕೆ ಎನ್‌ ಫಣೀಂದ್ರ ವಾದಿಸಿದ್ದರು.

Also Read
ವಾರ್ಡ್‌ಗಳ ಮರುವಿಂಗಡಣೆಯಾದರೆ ಕನಿಷ್ಠ ಒಂದು ವರ್ಷ ಬಿಬಿಎಂಪಿ ಚುನಾವಣೆ ತಡವಾಗಬಹುದು: ಹೈಕೋರ್ಟ್‌ಗೆ ಆಯೋಗ ಪ್ರತಿಕ್ರಿಯೆ

ಹಿಂದಿನ ಕಾಲಾವಧಿ ಮುಗಿಯುವುದರ ಒಳಗೆ ಅಂದರೆ ಸದರಿ ಪ್ರಕರಣದಲ್ಲಿ ಸೆಪ್ಟೆಂಬರ್‌ 10ರ ಒಳಗೆ ಬಿಬಿಎಂಪಿಗೆ ಚುನಾವಣೆ ನಡೆಸುವುದು ಸಂವಿಧಾನದ 243-U (3) ನೇ ವಿಧಿಯ ಅಡಿ ಕಡ್ಡಾಯವಾಗಿ ರಾಜ್ಯ ಸರ್ಕಾರದ ಆದ್ಯ ಕರ್ತವ್ಯವಾಗಿದೆ ಎಂದು ಪಾಲಿಕೆಯ ಮಾಜಿ ಸದಸ್ಯ ಶಿವರಾಜು ತಮ್ಮ ಮನವಿಯಲ್ಲಿ ಉಲ್ಲೇಖಿಸಿದ್ದರು. ಬಹು ಹಿಂದೆಯೇ ಚುನಾವಣೆ ನಡೆಸುವ ಕುರಿತು ನಿರ್ಧಾರ ಕೈಗೊಳ್ಳಬೇಕಿತ್ತು. ಆದರೆ, ಇದುವರೆಗೂ ಬೆಂಗಳೂರಿನ 198 ವಾರ್ಡ್‌ಗಳಿಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರವು ಚುನಾವಣಾ ಪಟ್ಟಿ, ಮೀಸಲಾತಿ ನಿಗದಿ ಇತ್ಯಾದಿ ಆರಂಭಿಸಿಲ್ಲ. ಕಾಲಮಿತಿಯೊಳಗೆ ಚುನಾವಣೆ ನಡೆಸಲು ಉದ್ದೇಶಪೂರ್ವಕವಾಗಿ ತಮ್ಮ ಸಾಂವಿಧಾನಿಕ ಕರ್ತವ್ಯದಿಂದ ಪ್ರತಿವಾದಿಗಳು ವಿಮುಖರಾಗಿದ್ದಾರೆ ಎಂದು ಮನವಿಯಲ್ಲಿ ಆರೋಪಿಸಲಾಗಿತ್ತು.

ಸಂವಿಧಾನದ 243-U ವಿಧಿ ಮತ್ತು ಕರ್ನಾಟಕ ಮುನಿಸಿಪಲ್‌ ಕಾರ್ಪೊರೇಷನ್‌ ಕಾಯಿದೆ 1976ರ ಸೆಕ್ಷನ್‌ 8ರ ಅಡಿ ಚುನಾವಣೆ ನಡೆಸಲು ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡುವಂತೆ ನ್ಯಾಯಾಲಯಕ್ಕೆ ಮನವಿ ಮಾಡಲಾಗಿತ್ತು. ಇದನ್ನು ಹೊರತುಪಡಿಸಿ ವಾರ್ಡ್‌ಗಳ ಸಂಖ್ಯೆಯನ್ನು ಹೆಚ್ಚಿಸುವ ತಿದ್ದುಪಡಿ ಕಾಯಿದೆಯನ್ನು ಪ್ರಶ್ನಿಸಲಾಗಿತ್ತು.

Related Stories

No stories found.
Kannada Bar & Bench
kannada.barandbench.com