lawyers
lawyers 
ಸುದ್ದಿಗಳು

ಕೇಂದ್ರ ಕಾನೂನು ಇಲಾಖೆಯಿಂದ ವಕೀಲರ ವೈದ್ಯಕೀಯ ವಿಮೆಗಾಗಿ ಕರಡು ಪ್ರಸ್ತಾವನೆ: ಸದಸ್ಯರಿಂದ ಮಾಹಿತಿ ಕೋರಿದ ಕೆಎಸ್‌ಬಿಸಿ

Bar & Bench

ದೇಶಾದ್ಯಂತ ಕರ್ತವ್ಯ ನಿರ್ವಹಿಸುತ್ತಿರುವ ವಕೀಲರನ್ನು ಗಮನದಲ್ಲಿಟ್ಟುಕೊಂಡು ಕೇಂದ್ರ ಕಾನೂನು ಇಲಾಖೆಯು ವೈದ್ಯಕೀಯ ವಿಮೆಗಾಗಿ ಕರಡು ಪ್ರಸ್ತಾವನೆ ಸಿದ್ಧಪಡಿಸುತ್ತಿದೆ. ಈ ಹಿನ್ನೆಲೆಯಲ್ಲಿ ಎಲ್ಲಾ ವಕೀಲರ ಮಾಹಿತಿ ಸಲ್ಲಿಸುವಂತೆ ಸಂಬಂಧಿತ ವಕೀಲರ ಸಂಘಗಳಿಗೆ ಕರ್ನಾಟಕ ರಾಜ್ಯ ವಕೀಲರ ಪರಿಷತ್‌ (ಕೆಎಸ್‌ಬಿಸಿ) ಕೋರಿದೆ. ಇದೇ ವೇಳೆ, ಸಂಬಂಧಪಟ್ಟ ಮಾಹಿತಿಯನ್ನು ನಿರ್ದಿಷ್ಟ ನಮೂನೆಯಲ್ಲಿ ಸಲ್ಲಿಸಲು ಸಂಬಂಧಪಟ್ಟ ವಕೀಲ ಸಂಘದ ಅಧ್ಯಕ್ಷರು, ಕಾರ್ಯದರ್ಶಿಗಳನ್ನು ಸಂಪರ್ಕಿಸುವಂತೆ ತನ್ನ ಸದಸ್ಯರೆಲ್ಲರಿಗೂ ಅದು ವಿನಂತಿಸಿದೆ.

ವಿಮೆಯ ಜಾರಿ ಸಲುವಾಗಿ ನಿರ್ದಿಷ್ಟ ಮಾಹಿತಿ ಒದಗಿಸುವಂತೆ ಭಾರತೀಯ ವಕೀಲರ ಪರಿಷತ್‌ ಕೋರಿದೆ. ಈ ಹಿನ್ನೆಲೆಯಲ್ಲಿ 2023ರ ಮೇ 31ರೊಳಗೆ ಮಾಹಿತಿ ಒದಗಿಸುವಂತೆ ಎಲ್ಲಾ ಜಿಲ್ಲಾ ವಕೀಲರ ಸಂಘಗಳಿಗೆ ಮನವಿ ಮಾಡಲಾಗಿದೆ, ಇದಕ್ಕೆ ಪೂರಕವಾಗಿ ಸದಸ್ಯರು ಆ ಅವಧಿಯೊಳಗೆ ನಿರ್ದಿಷ್ಟ ನಮೂನೆಯಲ್ಲಿ ಮಾಹಿತಿ ಸಲ್ಲಿಸುವಂತೆ ಕೆಎಸ್‌ಬಿಸಿ ಅಧ್ಯಕ್ಷ ವಿಶಾಲ್‌ ರಘು ಎಚ್‌ ಎಲ್‌ ಪ್ರಕಟಣೆಯಲ್ಲಿ ಕೋರಿದ್ದಾರೆ.

ಇತ್ತ ಬೆಂಗಳೂರು ವಕೀಲರ ಸಂಘವು ಈ ಕುರಿತಾದ ಪ್ರಕಟಣೆಯನ್ನು ಹೊರಡಿಸಿದ್ದು ತನ್ನ ಸದಸ್ಯರಲ್ಲಿ ಮಾಹಿತಿಯನ್ನು ಕೋರಿದೆ. ಸದಸ್ಯರು ತಮ್ಮ ಹಾಗೂ ಕುಟುಂಬದ ಮಾಹಿತಿ ವಿವರವನ್ನು ಒದಗಿಸುವಂತೆ ವಿನಂತಿಸಿದೆ.

ಈಚೆಗೆ ರಾಜ್ಯದ ವಕೀಲರಿಗೆ ವಿಮೆ ಸೌಲಭ್ಯ ಕಲ್ಪಿಸುವ ನಿಟ್ಟಿನಲ್ಲಿ ಗುಂಪು ವಿಮಾ ಯೋಜನೆಗೆ ಅತ್ಯಾಕರ್ಷಕ ರಿಯಾಯಿತಿ ಒಳಗೊಂಡ ಅತ್ಯುತ್ತಮ ದರದ ಪ್ರೀಮಿಯಂ ನಿರ್ಧರಿಸಲು ಹಾಗೂ ಪ್ರಸ್ತಾವನೆಗಳ ಅಧ್ಯಯನದ ಸಲುವಾಗಿ ಹಿರಿಯ ವಕೀಲರಾದ ಎನ್‌ ಎಸ್‌ ಎಸ್‌ ಗುಪ್ತಾ ಅವರ ನೇತೃತ್ವದಲ್ಲಿ ಏಳು ಸದಸ್ಯರ ಸಮಿತಿಯನ್ನು ಬೆಂಗಳೂರು ವಕೀಲರ ಸಂಘವು ರಚಿಸಿದ್ದನ್ನು ಇಲ್ಲಿ ನೆನೆಯಬಹುದಾಗಿದೆ.