ವಕೀಲರಿಗೆ ಆರೋಗ್ಯ ವಿಮೆ: ದರ ಪ್ರೀಮಿಯಂ ನಿರ್ಧರಿಸಲು ಏಳು ಸದಸ್ಯರ ಸಮಿತಿ ರಚಿಸಿದ ಎಎಬಿ

ಮಾರುಕಟ್ಟೆಯಲ್ಲಿರುವ ಎಲ್ಲಾ ವಿಮಾ ಕಂಪೆನಿಗಳಿಂದ ಪ್ರಸ್ತಾವ ಸ್ವೀಕರಿಸಿ, ಅತ್ಯುತ್ತಮವಾದ ನಗದುರಹಿತ ವೈದ್ಯಕೀಯ ವಿಮಾ ಆಯ್ಕೆಯನ್ನು 2-3 ತಿಂಗಳಲ್ಲಿ ಅಂತಿಮಗೊಳಿಸುವಂತೆ ಸಮಿತಿಗೆ ಎಎಬಿಯು ಕೋರಿಕೆ ಸಲ್ಲಿಸಿದೆ.
Lawyers
Lawyers
Published on

ರಾಜ್ಯದ ವಕೀಲರಿಗೆ ವಿಮೆ ಸೌಲಭ್ಯ ಕಲ್ಪಿಸುವ ನಿಟ್ಟಿನಲ್ಲಿ ಗುಂಪು ವಿಮಾ ಯೋಜನೆಗೆ ಅತ್ಯಾಕರ್ಷಕ ರಿಯಾಯಿತಿ ಒಳಗೊಂಡ ಅತ್ಯುತ್ತಮ ದರದ ಪ್ರೀಮಿಯಂ ನಿರ್ಧರಿಸಲು ಹಾಗೂ ಪ್ರಸ್ತಾವಗಳ ಅಧ್ಯಯನದ ಸಲುವಾಗಿ ಹಿರಿಯ ವಕೀಲರಾದ ಎನ್‌ ಎಸ್‌ ಎಸ್‌ ಗುಪ್ತಾ ಅವರ ನೇತೃತ್ವದಲ್ಲಿ ಏಳು ಸದಸ್ಯರ ಸಮಿತಿಯನ್ನು ಬೆಂಗಳೂರು ವಕೀಲರ ಸಂಘವು ಈಚೆಗೆ ರಚಿಸಿದೆ.

ಹಿರಿಯ ವಕೀಲರಾದ ಉದಯ್‌ ಹೊಳ್ಳ, ಪ್ರಮೋದ್‌ ಕಠಾವಿ, ಕೆ ಎನ್‌ ಫಣೀಂದ್ರ, ಲಕ್ಷ್ಮಿ ಐಯ್ಯಂಗಾರ್‌, ಪ್ರಶಾಂತ್‌ ಚಂದ್ರ ಹಾಗೂ ಬಿ ಎಂ ಅರುಣ್‌ ಸಮಿತಿಯ ಇತರೆ ಸದಸ್ಯರಾಗಿದ್ದಾರೆ. ಫಣೀಂದ್ರ ಅವರು ಸಂಚಾಲಕರಾಗಿಯೂ ಕೆಲಸ ನಿರ್ವಹಿಸಲಿದ್ದಾರೆ ಎಂದು ಎಎಬಿ ಹೇಳಿಕೆಯಲ್ಲಿ ತಿಳಿಸಲಾಗಿದೆ.

ಮಾರುಕಟ್ಟೆಯಲ್ಲಿ ಲಭ್ಯವಿರುವ ವಿವಿಧ ವಿಮಾ ಆಯ್ಕೆಗಳನ್ನು ಅಧ್ಯಯನ ನಡೆಸಲು ಒಕ್ಕೊರಲಿನಿಂದ ಸಮಿತಿ ರಚಿಸಲು ಜನವರಿ 12ರಂದು ಎಎಬಿ ಆಡಳಿತ ಸಮಿತಿ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಹೇಳಲಾಗಿದೆ.

ಮಾರುಕಟ್ಟೆಯಲ್ಲಿರುವ ಎಲ್ಲಾ ವಿಮಾ ಕಂಪೆನಿಗಳಿಂದ ಪ್ರಸ್ತಾವ ಸ್ವೀಕರಿಸಿ, ಅತ್ಯುತ್ತಮವಾದ ನಗದುರಹಿತ ವೈದ್ಯಕೀಯ ವಿಮಾ ಆಯ್ಕೆಯನ್ನು 2-3 ತಿಂಗಳಲ್ಲಿ ಅಂತಿಮಗೊಳಿಸುವಂತೆ ಸಮಿತಿಗೆ ಎಎಬಿಯು ಕೋರಿಕೆ ಸಲ್ಲಿಸಿದೆ.

ಸಹಾಯಕ್ಕಾಗಿ ಯಾರ ನೆರವನ್ನಾದರೂ ಸಮಿತಿಯು ಪಡೆದುಕೊಳ್ಳಬಹುದಾಗಿದೆ. ಕೆಳಗೆ ಉಲ್ಲೇಖಿಸಿರುವ ಮೊತ್ತಕ್ಕೆ ವಿಮೆ ಸೌಲಭ್ಯವನ್ನು ಸಮಿತಿ ಪರಿಶೀಲಿಸಬೇಕು ಎಂದು ಹೇಳಲಾಗಿದೆ.

  1. ಐವತ್ತು ಸಾವಿರದಿಂದ ಒಂದು ಲಕ್ಷ ರೂಪಾಯಿ (ವಕೀಲರು ಮತ್ತು ಕುಟುಂಬ ಸದಸ್ಯರು).

  2. ಎರಡೂವರೆ ಲಕ್ಷ ರೂಪಾಯಿ (ವಕೀಲರು ಮತ್ತು ಕುಟುಂಬ ಸದಸ್ಯರು).

  3. ಎರಡೂವರೆಯಿಂದ ಐದು ಲಕ್ಷ ರೂಪಾಯಿ (ವಕೀಲರು ಮತ್ತು ಕುಟುಂಬ ಸದಸ್ಯರು).

Also Read
ವಕೀಲರಿಗೆ ಆರೋಗ್ಯ ವಿಮೆ: ರೂ. 50 ಕೋಟಿ ಹೊಂದಿಸಲು ಯೋಜನೆ ರೂಪಿಸಲು ಉಪ ಸಮಿತಿಗೆ ಹೊಣೆ

ಸೂಕ್ತ ಯೋಜನೆ ನಿರ್ಧಾರ ಮಾಡಲು ರಾಜ್ಯದ ಎಲ್ಲಾ ವಕೀಲರು ಸಮಿತಿಗೆ ಸಲಹೆ ನೀಡಬಹುದಾಗಿದೆ ಎಂದು ಕೋರಲಾಗಿದೆ.

ರಾಜ್ಯದ ವಕೀಲರಿಗೆ ಆರೋಗ್ಯ ವಿಮೆ ಸೌಲಭ್ಯ ಕಲ್ಪಿಸಲು ರಾಜ್ಯ ಸರ್ಕಾರವು 50 ಕೋಟಿ ರೂಪಾಯಿ ಮೂಲನಿಧಿ ನೀಡಲಿದ್ದು, ಬಾಕಿ 50 ಕೋಟಿ ರೂಪಾಯಿ ಹೊಂದಿಸುವುದಕ್ಕೆ ಸಂಬಂಧಿಸಿದಂತೆ ಯೋಜನೆ ರೂಪಿಸಲು ಉಪಸಮಿತಿ ರಚಿಸಲು ಕಾನೂನು ಸಚಿವ ಎಂ ಮಾಧುಸ್ವಾಮಿ ಅವರ ನೇತೃತ್ವದಲ್ಲಿ ಈಚೆಗೆ ನಡೆದ ಸಭೆಯಲ್ಲಿ ನಿರ್ಧಾರ ಕೈಗೊಂಡಿದ್ದನ್ನು ಇಲ್ಲಿ ಸ್ಮರಿಸಬಹುದಾಗಿದೆ.

Kannada Bar & Bench
kannada.barandbench.com