BMTC 
ಸುದ್ದಿಗಳು

ಭಾರೀ ಸರಕು ಸಾಗಣೆ ವಾಹನ ಚಾಲನಾ ಪರವಾನಗಿ ಹೊಂದಿರುವವರು ಪ್ರಯಾಣಿಕ ವಾಹನ ಓಡಿಸಲು ಅರ್ಹರು: ಕಾಶ್ಮೀರ ಹೈಕೋರ್ಟ್

ಮೋಟಾರು ವಾಹನ ಕಾಯಿದೆಯ ಸೆಕ್ಷನ್ 10 (2)ರ ತಿದ್ದುಪಡಿ ಮಾಡಲಾದ ಷರತ್ತು (ಇ) ಎಲ್ಲಾ ರೀತಿಯ ವಾಣಿಜ್ಯ ವಾಹನಗಳನ್ನು ಸಾರಿಗೆ ವಾಹನ ಎಂದು ಬದಲಾಯಿಸಿದ್ದು ಇದರಲ್ಲಿ ಸರಕು ವಾಹನ ಮತ್ತು ಪ್ರಯಾಣಿಕರನ್ನು ಸಾಗಿಸುವ ವಾಹನಗಳೂ ಸೇರಿವೆ ಎಂದಿದೆ ಪೀಠ.

Bar & Bench

ನಿರ್ದಿಷ್ಟ ರೀತಿಯ ವಾಣಿಜ್ಯ ವಾಹನ ಚಲಾಯಿಸಲು ಪರವಾನಗಿ ಹೊಂದಿರುವ ವ್ಯಕ್ತಿ ಯಾವುದೇ ಬಗೆಯ ವಾಣಿಜ್ಯ ವಾಹನ ಚಲಾಯಿಸಲು ಸ್ವಯಂಚಾಲಿತವಾಗಿ ಅರ್ಹತೆ ಪಡೆದಿರುತ್ತಾರೆ ಎಂದು ಜಮ್ಮು, ಕಾಶ್ಮೀರ ಹಾಗೂ ಲಡಾಖ್‌ ಹೈಕೋರ್ಟ್‌ ಇತ್ತೀಚೆಗೆ ತೀರ್ಪು ನೀಡಿದೆ [ನ್ಯೂ ಇಂಡಿಯಾ ಇನ್ಶುರೆನ್ಸ್ ಸಿ. ಲಿಮಿಟೆಡ್ ಮತ್ತು ಜಗಜೀತ್ ಸಿಂಗ್ ಇನ್ನಿತರರ ನಡುವಣ ಪ್ರಕರಣ].

ಹೀಗಾಗಿ, ಭಾರೀ ಸರಕು ಸಾಗಣೆ ವಾಹನ ಚಲಾಯಿಸಲು ಚಾಲನಾ ಪರವಾನಗಿ ಪಡೆದಿರುವ ಚಾಲಕರು ಪ್ರಯಾಣಿಕರನ್ನು ಸಾಗಿಸುವ ವಾಹನವನ್ನು ಚಲಾಯಿಸಲು ಅರ್ಹರು ಎಂದು  ನ್ಯಾ. ಸಂಜಯ್ ಧರ್ ಅವರಿದ್ದ ಏಕಸದಸ್ಯ ಪೀಠ ಅಭಿಪ್ರಾಯಪಟ್ಟಿದೆ.

"ಚಾಲನಾ ಪರವಾನಗಿ ಇರುವ ವ್ಯಕ್ತಿ ನಿರ್ದಿಷ್ಟ ರೀತಿಯ ವಾಣಿಜ್ಯ ವಾಹನ ಓಡಿಸಲು ಅಧಿಕಾರ ಪಡೆದಿದ್ದರೆ ಆಗ ಆತ ಯಾವುದೇ ರೀತಿಯ ವಾಣಿಜ್ಯ ವಾಹನವನ್ನು ಚಲಾಯಿಸಲು ಸ್ವಯಂಚಾಲಿತವಾಗಿ ಅರ್ಹನಾಗುತ್ತಾನೆ, ಅಂದರೆ ಭಾರೀ ಸರಕು ವಾಹನ ಚಲಾಯಿಸಲು ಪರವಾನಗಿ ಪಡೆದಿರುವ ಚಾಲಕ ಪ್ರಯಾಣಿಕರನ್ನು ಹೊತ್ತೊಯ್ಯುವ ವಾಹನ ಚಲಾಯಿಸಲು ಸಮರ್ಥನಾಗಿರುತ್ತಾನೆ” ಎಂದು ಆದೇಶದಲ್ಲಿ ಹೇಳಲಾಗಿದೆ.

ನವೆಂಬರ್ 2008ರಲ್ಲಿ ಕಥುವಾದ ಮೋಟಾರು ಅಪಘಾತ ಪರಿಹಾರ ನ್ಯಾಯಮಂಡಳಿ (MACT) ನೀಡಿದ ತೀರ್ಪನ್ನು ಪ್ರಶ್ನಿಸಿ ವಿಮಾ ಕಂಪನಿ ಸಲ್ಲಿಸಿದ್ದ ಮೇಲ್ಮನವಿಯ ವಿಚಾರಣೆ ವೇಳೆ ನ್ಯಾಯಾಲಯ ಈ ವಿಚಾರ ಸ್ಪಷ್ಟಪಡಿಸಿತು.

ತೇಜಿಂದರ್ ಸಿಂಗ್  ಎಂಬುವವರು 2002ರಲ್ಲಿ ಮೋಟಾರ್‌ ಸೈಕಲ್‌ನಲ್ಲಿ ತೆರಳುತ್ತಿದ್ದಾಗ ನಿರ್ಲಕ್ಷ್ಯ ಮತ್ತು ಅಜಾಗರೂಕತೆಯಿಂದ ಬಸ್ಸೊಂದು ಡಿಕ್ಕಿ ಹೊಡೆದು ಸಾವನ್ನಪ್ಪಿದ್ದರು. ಈ ಹಿನ್ನೆಲೆಯಲ್ಲಿ ಸಲ್ಲಿಸಲಾದ ಅರ್ಜಿಗೆ ಸಂಬಂಧಿಸಿದಂತೆ ನ್ಯಾಯಮಂಡಳಿಯ ಮೊರೆ ಹೋಗಿದ್ದರು. ಅಪಘಾತ ನಡೆದಾಗ ಮೇಲ್ಮನವಿ ಸಲ್ಲಿಸಿರುವ ವಿಮಾ ಕಂಪೆನಿ ಬಳಿ ಬಸ್‌ನ ವಿಮೆ ಮಾಡಿಸಲಾಗಿತ್ತು.

ವಿಚಾರಣೆ ನಡೆಸಿದ ನ್ಯಾಯಮಂಡಳಿ ಮತ್ತು ಮೃತ ತೇಜಿಂದರ್ ಸಿಂಗ್ ಅವರ ಕಾನೂನುಬದ್ಧ ವಾರಸುದಾರರಾದ ಪ್ರತಿವಾದಿಗಳಿಗೆ ₹ 2.62 ಲಕ್ಷ ಪರಿಹಾರ ನೀಡುವಂತೆ ವಿಮಾ ಕಂಪೆನಿಗೆ ನಿರ್ದೇಶಿಸಿತು. ಇದನ್ನು ಪ್ರಶ್ನಿಸಿ ವಿಮಾ ಕಂಪೆನಿ ಹೈಕೋರ್ಟ್‌ ಮೊರೆ ಹೋಯಿತು. ಘಟನೆಗೆ ಕಾರಣವಾದ ಬಸ್‌ನ ಚಾಲಕನ ಬಳಿ ಸೂಕ್ತ ಚಾಲನಾ ಪರವಾನಗಿ ಇಲ್ಲ ಹೀಗಾಗಿ ಆದೇಶ ರದ್ದುಗೊಳಿಸುವಂತೆ ಅದು ಮನವಿ ಮಾಡಿತ್ತು.  

ವಿಚಾರಣೆ ನಡೆಸಿದ ಹೈಕೋರ್ಟ್‌ ಈ ಪ್ರಕರಣದಲ್ಲಿ ತಾನು ಉತ್ತರಿಸಬೇಕಾದ ಪ್ರಶ್ನೆಯೆಂದರೆ, “ಭಾರೀ ಸರಕು ಸಾಗಣೆ ವಾಹನ ಚಲಾಯಿಸಲು ಪರವಾನಗಿ ಇರುವ ಚಾಲಕ ಪ್ರಯಾಣಿಕರನ್ನು ಹೊತ್ತೊಯ್ಯುವ ವಾಹನವನ್ನು ಓಡಿಸಲು ಅರ್ಹನೇ”ಎಂಬುದಾಗಿದೆ ಎಂದು ತಿಳಿಸಿತು.

ಮೋಟಾರು ವಾಹನ ಕಾಯಿದೆಯ ಸೆಕ್ಷನ್ 10 (2)ರ ತಿದ್ದುಪಡಿ ಮಾಡಲಾದ ಷರತ್ತು (ಇ) ಎಲ್ಲಾ ರೀತಿಯ ವಾಣಿಜ್ಯ ವಾಹನಗಳನ್ನು 'ಸಾರಿಗೆ ವಾಹನಗಳು' ಎಂದು ಬದಲಾಯಿಸಿದ್ದು ಇದರಲ್ಲಿ ಸರಕು ವಾಹನ ಮತ್ತು ಪ್ರಯಾಣಿಕರನ್ನು ಸಾಗಿಸುವ ವಾಹನಗಳೂ ಸೇರಿವೆ ಎಂದ ನ್ಯಾಯಾಲಯ, ನ್ಯಾಯಮಂಡಳಿಯ ಆದೇಶ ಎತ್ತಿಹಿಡಿದು ವಿಮಾ ಕಂಪೆನಿ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿತು.