[ವಾಹನ ಅಪಘಾತ ಪ್ರಕರಣ] ಹಣದಿಂದ ವಿಕಲಚೇತನ ವ್ಯಕ್ತಿಯ ಶಾರೀರಿಕ ಸ್ವರೂಪ ಸರಿಪಡಿಸಲಾಗದು: ಬಾಂಬೆ ಹೈಕೋರ್ಟ್

ಗಾಯಗೊಂಡ ವ್ಯಕ್ತಿಗೆ ನೀಡುವ ಪರಿಹಾರವು ಪೂರ್ಣಜೀವನ ನಡೆಸಲಾಗದ ಅಸಮರ್ಥತೆಯನ್ನು ಹಾಗೂ ಅಂತಹ ಅಪಘಾತಕ್ಕೂ ಮುನ್ನ ಸಂಪಾದಿಸುತ್ತಿದ್ದುದನ್ನು ಸರಿದೂಗಿಸುವುದಕ್ಕಾಗಿ ಇದೆ ಎಂದ ನ್ಯಾಯಾಲಯ.
Two-wheeler
Two-wheeler Image for representative purpose

ಅಪಘಾತದಲ್ಲಿ ಅಂಗಾಂಗಗಳನ್ನು ಕಳೆದುಕೊಂಡ ವ್ಯಕ್ತಿಯ ಶಾರೀರಿಕ ಸ್ವರೂಪವನ್ನು ಹಣದಿಂದ ಸರಿಪಡಿಸಲು ಸಾಧ್ಯವಿಲ್ಲ ಎಂದು ಇತ್ತೀಚೆಗೆ ತಿಳಿಸಿದ ಬಾಂಬೆ ಹೈಕೋರ್ಟ್‌ ನಾಗಪುರ ಪೀಠ ವಾಹನ ಅಪಘಾತದಲ್ಲಿ ಬಲಗೈ ತುಂಡಾಗಿದ್ದ ವ್ಯಕ್ತಿಯೊಬ್ಬರಿಗೆ ನೀಡಲಾದ ₹ 3.40 ಲಕ್ಷ ಪರಿಹಾರ ಮೊತ್ತವನ್ನು ಎತ್ತಿ ಹಿಡಿಯಿತು [ಯುನೈಟೆಡ್ ಇಂಡಿಯಾ ಇನ್ಶುರೆನ್ಸ್ ಕಂಪನಿ ಲಿಮಿಟೆಡ್ ಮತ್ತು ತೌಫಿಕ್‌ ಅಹಮದ್‌ ಇನ್ನಿತರರ ನಡುವಣ ಪ್ರಕರಣ].

ಗಾಯಗೊಂಡ ವ್ಯಕ್ತಿಗೆ ನೀಡುವ ಪರಿಹಾರವು ಪೂರ್ಣಜೀವನ ನಡೆಸಲಾಗದ ಅವರ ಅಸಮರ್ಥತೆ ಹಾಗೂ ಅಂತಹ ಅಪಘಾತಕ್ಕೂ ಮುನ್ನ ಸಂಪಾದಿಸುತ್ತಿದ್ದ ಹಣವನ್ನು ಸರಿದೂಗಿಸುವುದಕ್ಕಾಗಿ ಇದೆ ಎಂದು ನ್ಯಾ. ಊರ್ಮಿಳಾ ಜೋಶಿ- ಫಾಲ್ಕೆ ಅವರಿದ್ದ ಏಕಸದಸ್ಯ ಪೀಠ ತಿಳಿಸಿತು.

ತಮ್ಮ ಆದೇಶದಲ್ಲಿ ನ್ಯಾಯಮೂರ್ತಿಗಳು, “ಅಪಘಾತದಿಂದ ಉಂಟಾದ ಗಾಯದ ಪರಿಣಾಮವಾಗಿ ಆತ ಅನುಭವಿಸುವ ನಷ್ಟಕ್ಕಾಗಿ ಆ ವ್ಯಕ್ತಿಗೆ (ಸಂತ್ರಸ್ತ) ಪರಿಹಾರ ನೀಡಲಾಗುತ್ತದೆ, ಅವನು ಅನುಭವಿಸುವ ನಷ್ಟ ದೇಹದ ಅವಯವಗಳಿಗೆ ಸಂಬಂಧಿಸಿದ್ದಲ್ಲ, ಅದು ಪೂರ್ಣ ಜೀವನ ನಡೆಸಲಾಗದ ಅಸಮರ್ಥತೆ, ಚಲನೆಯ ಸ್ವಾತಂತ್ರ್ಯವನ್ನು ಅವಲಂಬಿಸಿರುವ ಆ ಸೌಕರ್ಯಗಳನ್ನು ಆನಂದಿಸಲು ಹಾಗೂ ತಾನು ಗಳಿಸಬಹುದಾದಷ್ಟು ಸಂಪಾದಿಸಲಾಗದ ಅವನ ಅಸಮರ್ಥತೆಗೆ ಸಂಬಂಧಿಸಿದ್ದಾಗಿದೆ. ಹಾನಿಗೊಳಗಾದ ಶಾರೀರಿಕ ಸ್ವರೂಪವನ್ನು ಹಣದಿಂದ ಮರಳಿ ತರಲಾಗುವುದಿಲ್ಲ ಎಂಬುದು ನಿಜವಾದರೂ ಪರಿಹಾರವನ್ನು ನೀಡುವ ಯತ್ನ ನ್ಯಾಯಯುತ ಮತ್ತು ಸಮಂಜಸವಾಗಿರಬೇಕು ”ಎಂದು ನ್ಯಾಯಮೂರ್ತಿಗಳು ತಿಳಿಸಿದರು.

ಮಹಾರಾಷ್ಟ್ರದ ಯವತ್ಮಾಲ್‌ನಲ್ಲಿರುವ ಮೋಟಾರ್ ಅಪಘಾತ ಪರಿಹಾರ ನ್ಯಾಯಮಂಡಳಿ (ಎಂಎಸಿಟಿ) ನೀಡಿದ್ದ ಆದೇಶವನ್ನು ಪ್ರಶ್ನಿಸಿ ಯುನೈಟೆಡ್ ಇಂಡಿಯಾ ಇನ್ಶುರೆನ್ಸ್ ಕಂಪೆನಿ ಸಲ್ಲಿಸಿದ್ದ  ಮೇಲ್ಮನವಿಗೆ ಸಂಬಂಧಿಸಿದಂತೆ ಈ ಅಭಿಪ್ರಾಯ ವ್ಯಕ್ತಪಡಿಸಲಾಯಿತು.

ಕಾರು ಮರಕ್ಕೆ ಡಿಕ್ಕಿ ಹೊಡೆದು ಗಂಭೀರ ಗಾಯೊಂಡಿದ್ದ ಸಂತ್ರಸ್ತ ತೌಫಿಕ್‌ ಅಹಮದ್‌ ಅವರಿಗೆ ವಾರ್ಷಿಕ ಶೇ 9ರಷ್ಟು ಬಡ್ಡಿದರದೊಂದಿಗೆ ₹3,40,768 ಪರಿಹಾರ ನೀಡುವಂತೆ ಎಂಎಸಿಟಿ ಆಗಸ್ಟ್ 2009ರಲ್ಲಿ  ಆದೇಶಿಸಿತ್ತು. ಆದರೆ ತೌಫಿಕ್‌ ಮಾನ್ಯತೆ ಪಡೆದ ಚಾಲನಾ ಪರವಾನಗಿ ಹೊಂದಿಲ್ಲ, ಹೀಗಾಗಿ ವಿಮಾ ಪಾಲಿಸಿ ಪ್ರಕಾರ ತನಗೆ ಸೀಮಿತ ಹೊಣೆಗಾರಿಕೆಯಿದ್ದು ಪ್ರಕರಣವನ್ನು ವಜಾಗೊಳಿಸುವಂತೆ ಕೋರಿ ಕಂಪೆನಿ ಹೈಕೋರ್ಟ್‌ ಮೆಟ್ಟಿಲೇರಿತ್ತು.

ಮೋಟಾರು ವಾಹನಗಳ ಕಾಯಿದೆಯ ಪ್ರಕಾರ ಯಾವುದೇ ಅಪಘಾತಕ್ಕೆ ಸಂಬಂಧಿಸಿದಂತೆ ಹೊಣೆಗಾರಿಕೆಯ ಮಿತಿಯು ವಿಮಾ ಪಾಲಿಸಿಯ ನಿಯಮಗಳು ಮತ್ತು ಷರತ್ತುಗಳು ಅಡಿಯಲ್ಲಿ ನಮೂದಾಗಿರುತ್ತದೆ. ಆದರೆ, ತನಗೆ ಸೀಮಿತ ಹೊಣೆಗಾರಿಕೆ ಇದೆ ಎಂಬುದನ್ನು ವಿಮಾ ಪಾಲಿಸಿಯಲ್ಲೆಲ್ಲೂ ವಿಮಾ ಕಂಪೆನಿ ತೋರಿಸಿಲ್ಲ ಎಂದ ಪೀಠವು ಮೇಲ್ಮನವಿಯನ್ನು ವಜಾಗೊಳಿಸಿತು.

[ಆದೇಶದ ಪ್ರತಿಯನ್ನು ಇಲ್ಲಿ ಓದಿ]

Attachment
PDF
United_India_Insurance_Company_Ltd__v__Toufic_Ahemed___Anr_.pdf
Preview

Related Stories

No stories found.
Kannada Bar & Bench
kannada.barandbench.com