Dushyant Dave and CJI SA bobde 
ಸುದ್ದಿಗಳು

ನ್ಯಾ.ಮಿಶ್ರಾ ಬೀಳ್ಕೊಡುಗೆಯಲ್ಲಿ ಮಾತನಾಡಲು ಅವಕಾಶ ನಿರಾಕರಣೆ: ವಕೀಲ ವೃಂದ ಕಂಡರೆ ನ್ಯಾಯಮೂರ್ತಿಗಳಿಗೆ ಭಯವೇ ಎಂದ ದವೆ

ತಮ್ಮ ಎಸ್‌ಸಿಬಿಎ ಅಧ್ಯಕ್ಷ ಅವಧಿ ಪೂರ್ಣಗೊಳ್ಳುವವರೆಗೆ ಸುಪ್ರೀಂ ಕೋರ್ಟ್ ಆಯೋಜಿಸುವ ಯಾವುದೇ ಕಾರ್ಯಕ್ರಮದಲ್ಲಿ ಭಾಗವಹಿಸುವುದಿಲ್ಲ ಎಂದು ಸಿಜೆಐಗೆ ಬರೆದ ಪತ್ರದಲ್ಲಿ ದುಷ್ಯಂತ್ ದವೆ ಬೇಸರಿಸಿದ್ದಾರೆ.

Bar & Bench

ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಅರುಣ್ ಮಿಶ್ರಾ ಅವರ ವರ್ಚುವಲ್ ಬೀಳ್ಕೊಡುಗೆ ಸಮಾರಂಭದಲ್ಲಿ ಮಾತನಾಡಲು ಆಹ್ವಾನಿಸದಿರುವುದಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಸುಪ್ರೀಂ ಕೋರ್ಟ್ ವಕೀಲರ ಸಂಸ್ಥೆ (ಎಸ್‌ಸಿಬಿಎ) ಅಧ್ಯಕ್ಷ ದುಷ್ಯಂತ್ ದವೆ ಅವರು ಮುಖ್ಯ ನ್ಯಾಯಮೂರ್ತಿ (ಸಿಜೆಐ) ಎಸ್‌ ಎ ಬೊಬ್ಡೆ ಅವರಿಗೆ ಪತ್ರ ಬರೆದು ಬೇಸರ ವ್ಯಕ್ತಪಡಿಸಿದ್ದಾರೆ.

ಸಿಜೆಐಗೆ ಬರೆದ ಪತ್ರದಲ್ಲಿ ದವೆ ಹೀಗೆ ಹೇಳಿದ್ದಾರೆ,

“ಈ ಪ್ರಕರಣವು, ಅತ್ಯಂತ ಮಹತ್ವದ ಈ ಸಂಸ್ಥೆಯಿಂದ ಇನ್ನೂ ಹೆಚ್ಚಿನದನ್ನು ನಿರೀಕ್ಷಿಸುವಂತೆ ಮಾಡಿದೆ. ಕಾರ್ಯಕ್ರಮಕ್ಕೆ ನನ್ನನ್ನು ಆಹ್ವಾನಿಸಿ, ಆಹ್ವಾನವನ್ನು ನಾನು ಒಪ್ಪಿಕೊಂಡ ಬಳಿಕ ನಾನು ಎಸ್‌ಸಿಬಿಎ ಮತ್ತು ಅದರ ಕಾರ್ಯಕಾರಿ ಸಮಿತಿಯ ಪರವಾಗಿ ಮಾತನಾಡುವುದನ್ನು ತಡೆಯಲು ಸರ್ವ ಪ್ರಯತ್ನ ಮಾಡಲಾಗಿದೆ. ಇದು ವಕೀಲ ವೃಂದ ಹಾಗೂ ವೈಯಕ್ತಿಕವಾಗಿ ನನ್ನನ್ನು ಅವಮಾನಿಸುವ ಪ್ರಯತ್ನವಾಗಿದೆ.”
ದುಷ್ಯಂತ್ ದವೆ, ಎಸ್‌ಸಿಬಿಎ ಅಧ್ಯಕ್ಷ

ಬೀಳ್ಕೊಡುಗೆ ಸಮಾರಂಭದಲ್ಲಿ ಪಾಲ್ಗೊಳ್ಳುವಂತೆ ನನ್ನನ್ನು ಆಹ್ವಾನಿಸಲಾಗಿದ್ದು, ಮಧ್ಯಾಹ್ನ 12.20ರ ವೇಳೆಗೆ ಕಾರ್ಯಕ್ರಮದಲ್ಲಿ ಪಾಲ್ಗೊಂಡೆ. ಆಗ ತಾಂತ್ರಿಕ ತಂಡವು ನನ್ನ ಆಡಿಯೋ ಮತ್ತು ವಿಡಿಯೋ ಸ್ಪಷ್ಟವಾಗಿದೆ ಎಂದು ಹೇಳಿತ್ತು. ಅಟಾರ್ನಿ ಜನರಲ್ ಕೆ ಕೆ ವೇಣುಗೋಪಾಲ್ ಅವರ ಭಾಷಣ ಪೂರ್ಣಗೊಂಡ ಬಳಿಕ ಒಂದೆರಡು ಮಾತನಾಡಲು ನನಗೆ ಅವಕಾಶ ಕಲ್ಪಿಸಬಹುದು ಎಂದು ತಿಳಿದುಕೊಂಡಿದ್ದೆ ಎಂದು ದವೆ ಹೇಳಿದ್ದಾರೆ.

ಆದರೆ, ನನ್ನ ಬದಲಿಗೆ ಸುಪ್ರೀಂ ಕೋರ್ಟ್ ನ ಅಡ್ವೊಕೇಟ್ಸ್ ಆನ್‌ ರೆಕಾರ್ಡ್‌ ಒಕ್ಕೂಟದ ಅಧ್ಯಕ್ಷರಾದ ಶಿವಾಜಿ ಜಾಧವ್ ಅವರನ್ನು ಮಾತನಾಡಲು ಆಹ್ವಾನಿಸಲಾಯಿತು. ಈ ಸಂದರ್ಭದಲ್ಲಿ ಹಲವು ಬಾರಿ ನನ್ನ ಆಡಿಯೋ ಸಂಪರ್ಕ ತುಂಡಾಯಿತು. ಮರು ಸೇರ್ಪಡೆ ಪ್ರಯತ್ನ ಯಶ ಕಾಣಲಿಲ್ಲ ಎಂದು ದವೆ ಹೇಳಿದ್ದಾರೆ. ಈ ವೇಳೆ ಜಾಧವ್, ಸಿಜೆಐ ಬೊಬ್ಡೆ ಮತ್ತು ನ್ಯಾ. ಮಿಶ್ರಾ ಅವರ ಭಾಷಣವನ್ನು ಆಲಿಸಿದೆ ಎಂದು ದವೆ ಪತ್ರದಲ್ಲಿ ಹೇಳಿದ್ದಾರೆ.

ಮುಂದುವರೆದು ಅವರು, “ಈ ಸಂದರ್ಭದಲ್ಲಿ ಇದರ ಹಿಂದಿನ ತಂತ್ರವನ್ನು ಅರ್ಥೈಸಿಕೊಂಡು ವಕೀಲ ವೃಂದ ಹಾಗೂ ನನ್ನ ಹಿತಾಸಕ್ತಿಯ ದೃಷ್ಟಿಯಿಂದ ವರ್ಚುವಲ್ ಕಾರ್ಯಕ್ರಮದಿಂದ ಹೊರಬಂದೆ. ಬಹುಮುಖ್ಯ ಅಂಶವೆಂದರೆ ಸೆಕ್ರೆಟರಿ ಜನರಲ್ ಅವರಿಗೆ ವಾಟ್ಸ್‌ ಅಪ್‌ನಲ್ಲಿ ಮಧ್ಯಾಹ್ನ 12.39 ಮತ್ತು 12.53ರಲ್ಲಿ ಸಂದೇಶ ಕಳುಹಿಸಿ ನನ್ನನ್ನು ಮ್ಯೂಟ್‌ನಲ್ಲಿ ಇಟ್ಟಿರುವುದೇಕೆ ಮತ್ತು ನನ್ನನ್ನು ಆಹ್ವಾನಿಸಿದ್ದೇಕೆ ಎಂದು ಪ್ರಶ್ನಿಸಿದೆ. ಆದರೆ, ಅವರು ರಿಜಿಸ್ಟ್ರಾರ್‌ಗೆ ಪರಿಶೀಲಿಸುವಂತೆ ಸೂಚಿಸಿದ್ದಾಗಿ ಮಧ್ಯಾಹ್ನ 1.02 ಕ್ಕೆ ಪ್ರತಿಕ್ರಿಯಿಸಿದರು. ಈ ವೇಳೆಗಾಗಲೇ ಕಾಲ ಮೀರಿ ಹೋಗಿತ್ತು. ನಾನು ಸಂಪರ್ಕದಿಂದ ನಿರ್ಗಮಿಸಿದ್ದಾಗಿ ಅವರಿಗೆ ಸಂದೇಶ ಕಳುಹಿಸಿದೆ,” ಎಂದಿದ್ದಾರೆ.

“ನ್ಯಾ. ಮಿಶ್ರಾ ಅವರೇ ನಿಮ್ಮ ಜೀವನವು ಸಂತಸ ಮತ್ತು ಸಂತೃಪ್ತಿಯಿಂದ ಸುದೀರ್ಘವಾಗಿರಲಿ ಎಂದು ಎಸ್‌ ಸಿಬಿಎ, ಇಸಿ ಮತ್ತು ನನ್ನ ಪರವಾಗಿ ನಿಮಗೆ ಆಶಿಸುತ್ತೇನೆ. ಈ ಹಿಂದಿನಂತೆಯೇ ಅದು ಎಲ್ಲ ರೀತಿಯಲ್ಲೂ ಫಲಪ್ರದವೂ ಮತ್ತು ಪುರಸ್ಕೃತವೂ ಆಗಲಿದೆ. ಆ ಮಹಾಬಲೇಶ್ವರ ದೈವವು ನಿಮಗೆ ಆತ್ಮಾವಲೋಕನ ಮಾಡಿಕೊಳ್ಳುವ ಶಕ್ತಿಯನ್ನು ನೀಡಿ ನಿಮ್ಮ ಆತ್ಮಸಾಕ್ಷಿಯನ್ನು ಕಲಕಲಿ ಎಂದು ನಾನು ಬೇಡುತ್ತೇನೆ.”
“ವಕೀಲ ವೃಂದ ಕಂಡರೆ ನ್ಯಾಯಮೂರ್ತಿಗಳು ಹೆದರುವ ಸ್ಥಿತಿಗೆ ಸುಪ್ರೀಂ ಕೋರ್ಟ್ ಬಂದು ತಲುಪಿದೆ ಎಂಬುದನ್ನು ನಾನು ಒಪ್ಪಿಕೊಳ್ಳಬೇಕು. ನ್ಯಾಯಮೂರ್ತಿಗಳು ಬರುತ್ತಾರೆ, ಹೋಗುತ್ತಾರೆ. ಆದರೆ ನಾವು ವಕೀಲ ವೃಂದ ಸದಾ ಇರುತ್ತೇವೆ. ನಾವು ಶಾಶ್ವತವಾಗಿರುವುದರಿಂದಲೇ ಈ ಮಹಾನ್ ಸಂಸ್ಥೆಯ ನೈಜ ಶಕ್ತಿಯಾಗಿದ್ದೇವೆ”.
ದುಷ್ಯಂತ್ ದವೆ, ಎಸ್‌ಸಿಬಿಎ ಅಧ್ಯಕ್ಷ

ಡಿಸೆಂಬರ್ ನಲ್ಲಿ ತನ್ನ ಎಸ್‌ಸಿಬಿಎ ಅಧ್ಯಕ್ಷ ಅವಧಿ ಪೂರ್ಣಗೊಳ್ಳಲಿದ್ದು, ಅಲ್ಲಿಯವರೆಗೆ ಸುಪ್ರೀಂ ಕೋರ್ಟ್ ಆಯೋಜಿಸುವ ಯಾವುದೇ ಕಾರ್ಯಕ್ರಮದಲ್ಲಿ ಭಾಗವಹಿಸುವುದಿಲ್ಲ ಎಂದು ದವೆ ಪತ್ರದಲ್ಲಿ ಸ್ಪಷ್ಟವಾಗಿ ನುಡಿದಿದ್ದಾರೆ.

“ಬಾರ್ ಅಂಡ್ ಬೆಂಚ್” ಜೊತೆ ಮಾತನಾಡಿದ ಸುಪ್ರೀಂ ಕೋರ್ಟ್‌ನ ತಾಂತ್ರಿಕ ತಂಡದ (ಸಂಜೆ 4.03ಕ್ಕೆ ಕರೆ ಮಾಡಿ) ಮೂಲವೊಂದು, “ನ್ಯಾ. ಮಿಶ್ರಾ ಅವರ ವರ್ಚುವಲ್ ಬೀಳ್ಕೊಡುಗೆ ಸಮಾರಂಭದ ಲಿಂಕ್‌ಅನ್ನು ಹಿರಿಯ ವಕೀಲರಾದ ದವೆ ಅವರ ಜೊತೆ ಹಂಚಿಕೊಳ್ಳಲಾಗಿತ್ತು. ಅದನ್ನು ಅವರು ಬಳಸುವಲ್ಲಿ ಸಮಸ್ಯೆಯಾಗಿತ್ತು ಎಂದಾದರೆ ಸಂಬಂಧಿತ ತಂಡದ ಜೊತೆ ಮಾತನಾಡಿ ಸರಿಪಡಿಸಿಕೊಳ್ಳಬಹುದಿತ್ತು. ಆದರೆ, ದವೆ ಅವರು ಸಿಜೆಐಗೆ ನೇರವಾಗಿ ಪತ್ರ ಬರೆದಿದ್ದಾರೆ" ಎನ್ನುತ್ತದೆ. ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿಯವರ ಬೀಳ್ಕೊಡುಗೆ ಸಮಾರಂಭವನ್ನು ಎಸ್‌‌ಸಿಬಿಎ ಅಧ್ಯಕ್ಷರಾದ ದವೆ ಅವರನ್ನು ಬಿಟ್ಟು ಮಾಡಲು ಸಾಧ್ಯವಿಲ್ಲ ಎಂದೂ ಮುಂದುವರೆದು ಮೂಲವು ತಿಳಿಸಿದೆ.