Senior Advocate Dushyant Dave 
ಸುದ್ದಿಗಳು

ಐದು ದಶಕಗಳ ಸೇವೆ ಬಳಿಕ ವಕೀಲ ವೃತ್ತಿಗೆ ಹಿರಿಯ ನ್ಯಾಯವಾದಿ ದುಶ್ಯಂತ್ ದವೆ ವಿದಾಯ

ಕಿರಿಯ ವಕೀಲರಿಗೆ ಹಾದಿ ಮಾಡಿಕೊಡುವ ಸಲುವಾಗಿ ಈ ನಿರ್ಧಾರ ಕೈಗೊಂಡಿದ್ದೇನೆಯೇ ವಿನಾ ಇದರ ಹಿಂದೆ ಬೇರೆ ನಿರ್ದಿಷ್ಟ ಕಾರಣ ಇಲ್ಲ ಎಂದಿದ್ದಾರೆ.

Bar & Bench

ಸುಮಾರು 48 ವರ್ಷಗಳ ಕಾಲ ವಕೀಲರಾಗಿ ಸೇವೆ ಸಲ್ಲಿಸಿದ್ದ ಹೆಸರಾಂತ ಹಿರಿಯ ನ್ಯಾಯವಾದಿ ದುಶ್ಯಂತ್‌ ದವೆ ಅವರು ವೃತ್ತಿಗೆ ವಿದಾಯ ಹೇಳಲು ಮುಂದಾಗಿದ್ದಾರೆ.

ಈ ನಿರ್ಧಾರವನ್ನು ವಾಟ್ಸಾಪ್‌ ಸಂದೇಶದ ಮೂಲಕ ಪ್ರಕಟಿಸಿರುವ ಅವರು  48 ವರ್ಷಗಳ ಕಾಲ ವಕೀಲ ವರ್ಗದಲ್ಲಿ ಸೇವೆ ಸಲ್ಲಿಸಿರುವ ತಾನು 70ನೇ ಹುಟ್ಟುಹಬ್ಬ ಆಚರಿಸಿಕೊಂಡಿರುವ ಈ  ಹೊತ್ತಿನಲ್ಲಿ ವೃತ್ತಿ ತೊರೆಯಲು ನಿರ್ಧರಿಸಿದ್ದೇನೆ ಎಂದು ಘೊಷಿಸಿದ್ದಾರೆ.

ತಾವು ವೃತ್ತಿ ತೊರೆಯುತ್ತಿರುವುದನ್ನು ವಕೀಲರು ಮತ್ತು ನ್ಯಾಯವಾದಿಗಳ ವರ್ಗಕ್ಕೆ ದೃಢಪಡಿಸಿದ ದವೆ ಅವರು ಕಿರಿಯ ವಕೀಲರಿಗೆ ಹಾದಿ ಮಾಡಿಕೊಡುವ ಸಲುವಾಗಿ ಈ ನಿರ್ಧಾರ ಕೈಗೊಂಡಿದ್ದೇನೆಯೇ ವಿನಾ ಬೇರೆ ನಿರ್ದಿಷ್ಟ ಕಾರಣ ಇಲ್ಲ ಎಂದಿದ್ದಾರೆ,.

ಪ್ರಮುಖ ಪ್ರಕರಣಗಳಲ್ಲಿಯೂ ವಾದ ಮಂಡಿಸುವುದಿಲ್ಲ ಎಂದು ಅವರು ಇದೇ ವೇಳೆ ಸ್ಪಷ್ಟಪಡಿಸಿರುವ ಅವರು ಇದೀಗ ಮೊಮ್ಮಕ್ಕಳೊಂದಿಗೆ ಸಮಯ ಕಳೆಯಲು ಆಲೋಚಿಸುತ್ತಿರುವುದಾಗಿ ಹೇಳಿದ್ದಾರೆ.

ಯಾವುದೇ ಪ್ರಚೋದನೆಯಿಂದ ಈ ನಿರ್ಧಾರ ಕೈಗೊಂಡಿಲ್ಲ. ನನಗೆ ಈಗ 70 ವರ್ಷ. ಯುವಕರು ವಕೀಲಿಕೆ ಮುಂದುವರೆಸಲಿ.
ದುಷ್ಯಂತ್ ದವೆ

"ಮುಂಬರುವ ದಿನಗಳಲ್ಲಿ ನಾನು ನನ್ನದೇ ಆದ ರೀತಿಯಲ್ಲಿ ಪುಟ್ಟದಾಗಿ ಸಮಾಜಕ್ಕಾಗಿ ಸೇವೆ ಸಲ್ಲಿಸಲು ಉದ್ದೇಶಿಸಿದ್ದೇನೆ. ಓದುತ್ತೇನೆ, ಸಾಮಾಜಿಕ ಸಂವಹನ ನಡೆಸುತ್ತೇನೆ, ಪ್ರಯಾಣ ಮಾಡುತ್ತೇನೆ, ಗಾಲ್ಫ್ ಆಡುತ್ತೇನೆ ಮುಖ್ಯವಾಗಿ ನನ್ನ ಬದುಕಿನ ಯಾನದಲ್ಲಿ ಬಂಡೆಯಂತೆ ಆಸರೆಯಾಗಿ ನಿಂತ ನನ್ನ ಪತ್ನಿ ಅಮಿಯೊಂದಿಗೆ ಸಮಯ ಕಳೆಯುತ್ತೇನೆ" ಎಂದು ಅವರು ತಿಳಿಸಿದ್ದಾರೆ.  

ಗುಜರಾತ್‌ನ ಬರೋಡಾ ಬಳಿಯ  ಸಂಖೇಡ ತಾಲೂಕನ್ನು ದತ್ತು ಪಡೆದು ಕೃಷಿ, ವಸತಿ ಇತ್ಯಾದಿ ಕ್ಷೇತ್ರಗಳಿಗೆ ಕೊಡುಗೆ ನೀಡುವೆ ಎಂದಿದ್ದಾರೆ. ದೆಹಲಿಯನ್ನು ತೊರೆಯುವುದಿಲ್ಲ. ಅಲ್ಲಿಯೇ ಇದ್ದು ಬರೋಡಾಕ್ಕೆ ಓಡಾಡುತ್ತಿರುತ್ತೇನೆ ಎಂದು ಅವರು ಇದೇ ವೇಳೆ ಸ್ಪಷ್ಟಪಡಿಸಿದ್ದಾರೆ.  

ದವೆ ಅವರು ಸಾಗಿ ಬಂದ ಹಾದಿ…

ಅವರು  1977ರಲ್ಲಿ ಕಾನೂನು ವೃತ್ತಿ ಆರಂಭಿಸಿದರು.  ಅಹಮಾದಾಬಾದ್‌ನಲ್ಲಿ ಸಿವಿಲ್‌ ಮತ್ತು ಸಾಂವಿಧಾನಿಕ ಪ್ರಕರಣಗಳಿಗೆ ಸಂಬಂಧಿಸಿದಂತೆ ಪ್ರಾಕ್ಟೀಸ್‌ ಆರಂಭಿಸಿದ ಅವರು ದೆಹಲಿಯತ್ತ ಮುಖ ಮಾಡಿದ್ದು 1990ರ ದಶಕದಲ್ಲಿ. ಅವರನ್ನು 1994ರಲ್ಲಿ ಸುಪ್ರೀಂ ಕೋರ್ಟ್ ಹಿರಿಯ ವಕೀಲರನ್ನಾಗಿ ನೇಮಕ ಮಾಡಲಾಯಿತು. 

ಸುಪ್ರೀಂ ಕೋರ್ಟ್‌ನಲ್ಲಿ ಆಳವಾಗಿ ವಕೀಲಿಕೆಯಲ್ಲಿ ತೊಡಗಿಕೊಂಡ ಅವರು ಕೆಲವು ಮಹತ್ವದ ಪ್ರಕರಣಗಳಲ್ಲಿ ವಾದ ಮಂಡಿಸಿದರು. ಮಧ್ಯಸ್ಥಿಕೆ ಪ್ರಕರಣಗಳಿಗೂ ಅವರ ಕೊಡುಗೆ ಅನನ್ಯವಾದುದು. ಸುಪ್ರೀಂ ಕೋರ್ಟ್‌ ವಕೀಲರ ಸಂಘದ ಅಧ್ಯಕ್ಷರಾಗಿ 2014, 2019 ಹಾಗೂ 2020ರಲ್ಲಿ ಮೂರು ಬಾರಿ ಆಯ್ಕೆಯಾದರು.

 ವಕೀಲ ವರ್ಗ, ನ್ಯಾಯಾಧೀಶ ವರ್ಗ ಹಾಗೂ ಸಾರ್ವಜನಿಕರನ್ನು ಕಾಡುತ್ತಿದ್ದ ಸಮಸ್ಯೆಗಳ ವಿಚಾರವಾಗಿ ಧ್ವನಿ ಎತ್ತುತ್ತಿದ್ದ ಅವರು ನ್ಯಾಯಪೀಠ ಅಥವಾ ಅಧಿಕಾರಶಾಹಿಯನ್ನು ಟೀಕಿಸುವಾಗ ಹಿಂಜರಿಯುತ್ತಿರಲಿಲ್ಲ.

ಕಳೆದ ನಾಲ್ಕು ದಶಕಗಳಲ್ಲಿ ಅವರು ಸುಪ್ರೀಂ ಕೋರ್ಟ್‌ನಲ್ಲಿ ಹಲವು ಪ್ರಮುಖ ಸಾಂವಿಧಾನಿಕ ಮತ್ತು ಸಾರ್ವಜನಿಕ ಹಿತಾಸಕ್ತಿ ಪ್ರಕರಣಗಳಲ್ಲಿ ವಾದ ಮಂಡಿಸಿದ್ದಾರೆ.

ತಮ್ಮಸಹೋದ್ಯೋಗಿಗಳುಮತ್ತುಕಕ್ಷಿದಾರರಿಗೆಧನ್ಯವಾದಅರ್ಪಿಸಿರುವ ಅವರು ನ್ಯಾಯವಾದಿಗಳು ಹಾಗೂ ನ್ಯಾಯಪೀಠಗಳು ತಮ್ಮನ್ನು ಅಪಾರ ಪ್ರೀತಿ ಮತ್ತು ವಾತ್ಸಲ್ಯದಿಂದ ಕಂಡಿವೆ ಎಂದಿದ್ದಾರೆ. ತಮ್ಮೊಂದಿಗೆ ದುಡಿದ ವೈಯಕ್ತಿಕ ಸಿಬ್ಬಂದಿಗೂ ಅವರು ಇದೇ ವೇಳೆ ಧನ್ಯವಾದ ಅರ್ಪಿಸಿದ್ದಾರೆ.