ದಿ ವೈರ್ ಮತ್ತು ದೆಹಲಿ ಹೈಕೋರ್ಟ್
ದಿ ವೈರ್ ಮತ್ತು ದೆಹಲಿ ಹೈಕೋರ್ಟ್ 
ಸುದ್ದಿಗಳು

[ದ್ವಾರಕಾ ಎಕ್ಸ್ ಪ್ರೆಸ್ ವೇ] ಮುಖ್ಯ ಕಾರ್ಯದರ್ಶಿ ಕುರಿತ ವರದಿ ತೆಗೆದುಹಾಕಲು ʼದಿ ವೈರ್‌ʼಗೆ ದೆಹಲಿ ಹೈಕೋರ್ಟ್ ಆದೇಶ

Bar & Bench

ದ್ವಾರಕಾ ಎಕ್ಸ್‌ಪ್ರೆಸ್‌ ವೇ ಯೋಜನೆಗಾಗಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್ಎಚ್ಎಐ) ಭೂಸ್ವಾಧೀನಕ್ಕೆ ಸಂಬಂಧಿಸಿದಂತೆ ದೆಹಲಿ ಮುಖ್ಯ ಕಾರ್ಯದರ್ಶಿ ನರೇಶ್ ಕುಮಾರ್ ಅವರ ಮೇಲೆ ಅನುಮಾನ ವ್ಯಕ್ತಪಡಿಸಿದ್ದ ವರದಿ ತೆಗೆದುಹಾಕುವಂತೆ ದೆಹಲಿ ಹೈಕೋರ್ಟ್ ಬುಧವಾರ ಆನ್ ಲೈನ್ ಸುದ್ದಿತಾಣ ʼದಿ ವೈರ್ʼಗೆ ಆದೇಶಿಸಿದೆ.

ಕುಮಾರ್ ಅವರು ದಿ ವೈರ್ ಮತ್ತು ಅದರ ವರದಿಗಾರ ಮೀತು ಜೈನ್ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದು ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸಚಿನ್ ದತ್ತಾ ಈ ಆದೇಶ ನೀಡಿದ್ದಾರೆ.

ಲೇಖನ ತೆಗೆದುಹಾಕಲು ಮತ್ತು ಭವಿಷ್ಯದಲ್ಲಿ ತನ್ನ ವಿರುದ್ಧ ಯಾವುದೇ ಮಾನಹಾನಿಕರ ವಿಚಾರ ಪ್ರಕಸಿದಂತೆ ದಿ ವೈರ್‌ಗೆ ನಿರ್ದೇಶನ ನೀಡುವಂತೆ ಕೋರಿ ಕುಮಾರ್ ನ್ಯಾಯಾಲಯದ ಮೊರೆ ಹೋಗಿದ್ದರು.

'ಭೂಮಿಗೆ ಅತಿ ಮೌಲ್ಯಮಾಪನ ನಿಗದಿಪಡಿಸಿದ ಪ್ರಕರಣದಲ್ಲಿನ ಫಲಾನುಭವಿ ಕುಟುಂಬದೊಂದಿಗೆ ದೆಹಲಿ ಮುಖ್ಯ ಕಾರ್ಯದರ್ಶಿಯ ಪುತ್ರನ ಸಂಪರ್ಕವು ಪ್ರಶ್ನೆಗಳನ್ನು ಹುಟ್ಟುಹಾಕುತ್ತದೆ' ಎಂಬ ಶೀರ್ಷಿಕೆ ಇದ್ದ ವರದಿಯನ್ನು ದಿ ವೈರ್ ನವೆಂಬರ್ 9, 2023 ರಂದು ಪ್ರಕಟಿಸಿತ್ತು.

ದ್ವಾರಕಾ ಎಕ್ಸ್‌ಪ್ರೆಸ್‌ ವೇಗಾಗಿ ಎನ್ಎಚ್ಎಐ ಭೂಮಿ ಸ್ವಾಧೀನಪಡಿಸಿಕೊಳ್ಳುವಾಗ ಹೆಚ್ಚಿಸಲಾದ ಪರಿಹಾರದಿಂದ ಲಾಭ ಪಡೆದ ಕುಟುಂಬವೊಂದರ ಜೊತೆಗೆ ನರೇಶ್‌ ಅವರ ಪುತ್ರ ಕರಣ್‌ ಚೌಹಾಣ್‌ ಸಂಪರ್ಕ ಹೊಂದಿದ್ದರು ಎಂದು ದಿ ವೈರ್ ವರದಿ ಮಾಡಿತ್ತು.

ವರದಿ ಪ್ರಶ್ನಿಸಿ ಕುಮಾರ್ ಅವರು ದಿ ವೈರ್ ಮತ್ತು ವರದಿಗಾರ ಮೀತು ಜೈನ್ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಿದ್ದರು.

ಮಂಗಳವಾರ ಪ್ರಕರಣ ಆಲಿಸಿದ್ದ ಪೀಠವು, ಕುಮಾರ್ ಅವರ ಮೇಲೆ ಅನುಮಾನ ವ್ಯಕ್ತಪಡಿಸಿರುವ ವರದಿಗೆ ಸ್ವಲ್ಪವಾದರೂ ಆಧಾರ ಇರಬೇಕಿತ್ತು ಎಂದು ದಿ ವೈರ್‌ಗೆ ಬುದ್ಧಿವಾದ ಹೇಳಿತ್ತು.