ದ್ವಾರಕಾ ಎಕ್ಸ್ ಪ್ರೆಸ್ ವೇ ಯೋಜನೆಗಾಗಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ (ಎನ್ಎಚ್ಎಐ) ಭೂಸ್ವಾಧೀನಕ್ಕೆ ಸಂಬಂಧಿಸಿದಂತೆ ತಮ್ಮ ವಿರುದ್ಧ ಅಪಪ್ರಚಾರ ಮಾಡುವ ವರದಿಯನ್ನು ತೆಗೆದುಹಾಕುವಂತೆ ಆನ್ ಲೈನ್ ಸುದ್ದಿ ಪೋರ್ಟಲ್ 'ದಿ ವೈರ್' ಗೆ ನಿರ್ದೇಶನ ನೀಡಲು ಕೋರಿ ದೆಹಲಿ ಮುಖ್ಯ ಕಾರ್ಯದರ್ಶಿ ನರೇಶ್ ಕುಮಾರ್ ಅವರು ಸೋಮವಾರ ದೆಹಲಿ ಹೈಕೋರ್ಟ್ ಅನ್ನು ಎಡತಾಕಿದ್ದಾರೆ.
ದ್ವಾರಕಾ ಎಕ್ಸ್‌ಪ್ರೆಸ್ ವೇಗಾಗಿ ಎನ್ಎಚ್ಎಐ ಭೂಮಿಯನ್ನು ಸ್ವಾಧೀನಪಡಿಸಿಕೊಂಡಾಗ ಹೆಚ್ಚಿಸಿದ ಪರಿಹಾರದಿಂದ ಲಾಭ ಪಡೆದ ಕುಟುಂಬದೊಂದಿಗೆ ನರೇಶ್ ಕುಮಾರ್ ಅವರ ಪುತ್ರ ಕರಣ್ ಚೌಹಾಣ್ ಅವರು ಸಂಪರ್ಕ ಹೊಂದಿದ್ದರು ಎಂದು 'ದಿ ವೈರ್' ವರದಿ ಮಾಡಿತ್ತು.
ಲೇಖನವನ್ನು ತೆಗೆದುಹಾಕುವಂತೆ ಪ್ರಾರ್ಥಿಸುವುದರ ಜೊತೆಗೆ, 'ದಿ ವೈರ್' ಮತ್ತು ವರದಿಗಾರ ಮೀತು ಜೈನ್ ಅವರನ್ನು ಯಾವುದೇ ಮಾನಹಾನಿಕರ ಲೇಖನಗಳನ್ನು ಪ್ರಕಟಿಸದಂತೆ ನಿರ್ಬಂಧಿಸಲು ನಿರ್ದೇಶನಗಳನ್ನು ನರೇಶ್ ಕುಮಾರ್ ಕೋರಿದ್ದಾರೆ.
ನ್ಯಾಯಮೂರ್ತಿ ಮನೋಜ್ ಕುಮಾರ್ ಓಹ್ರಿ ಅವರು ಇಂದು ಪ್ರಕರಣವನ್ನು ಆಲಿಸಿದರು. ಹಿರಿಯ ವಕೀಲ ಮಣಿಂದರ್ ಸಿಂಗ್ ಮಂಡಿಸಿದ ವಾದಗಳನ್ನು ಪರಿಗಣಿಸಿದ ನ್ಯಾಯಾಲಯವು ಮುಂದಿನ ವಿಚಾರಣೆಯನ್ನು ಮಂಗಳವಾರಕ್ಕೆ ನಿಗದಿಪಡಿಸಿತು.
'ಭೂ ಅತಿ ಮೌಲ್ಯಮಾಪನ ಪ್ರಕರಣದಲ್ಲಿನ ಫಲಾನುಭವಿ ಕುಟುಂಬದೊಂದಿಗೆ ದೆಹಲಿ ಮುಖ್ಯ ಕಾರ್ಯದರ್ಶಿಯ ಪುತ್ರನ ಸಂಪರ್ಕವು ಪ್ರಶ್ನೆಗಳನ್ನು ಹುಟ್ಟುಹಾಕುತ್ತದೆ' ಎಂಬ ಶೀರ್ಷಿಕೆಯ ವರದಿಯನ್ನು 'ದಿ ವೈರ್' ನವೆಂಬರ್ 9, 2023 ರಂದು ಪ್ರಕಟಿಸಿತ್ತು.
ದ್ವಾರಕಾ ಎಕ್ಸ್‌ಪ್ರೆಸ್ ವೇಗಾಗಿ ದೆಹಲಿಯ ಬಮ್ನೋಲಿ ಗ್ರಾಮದಲ್ಲಿ 19 ಎಕರೆ ಭೂಮಿಯನ್ನು ಎನ್ಎಚ್ಎಐ ಸ್ವಾಧೀನಪಡಿಸಿಕೊಂಡಾಗ ಹೆಚ್ಚಿಸಿದ ಪರಿಹಾರದ ಪ್ರಯೋಜನಗಳನ್ನು ಪಡೆದ ಕುಟುಂಬದೊಂದಿಗೆ ಚೌಹಾಣ್ ಸಂಪರ್ಕ ಹೊಂದಿದ್ದಾರೆ ಎಂದು ವರದಿಯಲ್ಲಿ ಆರೋಪಿಸಲಾಗಿದೆ.
ನವೆಂಬರ್ 13 ರಂದು ವಕೀಲ ಬನಿ ದೀಕ್ಷಿತ್ ಮೂಲಕ ದಿ ವೈರ್ ಮತ್ತು ಮೀತು ಜೈನ್ ಅವರಿಗೆ ಲೀಗಲ್ ನೋಟಿಸ್ ಕಳುಹಿಸಿರುವ ಕುಮಾರ್, 48 ಗಂಟೆಗಳ ಒಳಗೆ ಲೇಖನವನ್ನು ತೆಗೆದುಹಾಕುವಂತೆ ಸೂಚಿಸಿದ್ದರು. ಆದರೆ, ವೈರ್ ಇದನ್ನು ಪಾಲಿಸದೆ ಇರುವುದರಿಂದ ಅದರ ವಿರುದ್ಧ ಮಾನಹಾನಿ ಮೊಕದ್ದಮೆ ಹೂಡಲಾಗಿದೆ.