ದ್ವಾರಕಾ ಎಕ್ಸ್‌ಪ್ರೆಸ್ ವೇ ಯೋಜನೆಗಾಗಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್ಎಚ್ಎಐ) ಭೂಸ್ವಾಧೀನಕ್ಕೆ ಸಂಬಂಧಿಸಿದಂತೆ ದೆಹಲಿ ಮುಖ್ಯ ಕಾರ್ಯದರ್ಶಿ ನರೇಶ್ ಕುಮಾರ್ ಅವರ ಮೇಲೆ ಅನುಮಾನ ವ್ಯಕ್ತಪಡಿಸಿರುವ ವರದಿಗೆ ಸ್ವಲ್ಪವಾದರೂ ಆಧಾರ ಇರಬೇಕಿತ್ತು ಎಂದು ದೆಹಲಿ ಹೈಕೋರ್ಟ್ ಮಂಗಳವಾರ ಆನ್‌ಲೈನ್ ಸುದ್ದಿತಾಣ ʼದಿ ವೈರ್ʼ ಗೆ ಬುದ್ಧಿವಾದ ಹೇಳಿದೆ.
ವರದಿಯಲ್ಲಿ ಮಾಡಲಾಗಿರುವ ಆರೋಪಗಳಲ್ಲಿ ಸ್ವಲ್ಪವಾದರೂ ಸತ್ಯಾಂಶ ಇರಬೇಕು ಎಂದು ನ್ಯಾ. ಸಚಿನ್ ದತ್ತಾ ಹೇಳಿದರು.
"ಆಧಾರ ಎಲ್ಲಿದೆ ಎಂದು ನನಗೆ ತೋರಿಸಿ. ನೀವು ಈ ಆರೋಪ ಮಾಡಿರುವುದಕ್ಕೆ ಸಾಕ್ಷ್ಯ ಏನು?...ನಿಮ್ಮ ಆರೋಪದಲ್ಲಿ ಸ್ವಲ್ಪವಾದರೂ ಸತ್ಯಾಂಶ ಇದೆ ಎಂಬುದನ್ನು ನನಗೆ ತೋರಿಸಿ. ಪತ್ರಿಕಾ ಸದಸ್ಯರಾಗಿ, ರೋಚಕವಾಗಿ ಸುದ್ದಿ ಮಾಡುವುದರ ವಿರುದ್ಧ ಯಾವುದೇ ಕಾನೂನು ಇಲ್ಲವೇ? ನೀವು ಉತ್ಪ್ರೇಕ್ಷೆಯಲ್ಲಿ ತೊಡಗಬಹುದೇ? ಸ್ವಲ್ಪವಾದರೂ ಸತ್ಯಾಂಶ ಇರಬೇಕು" ಎಂದು ನ್ಯಾಯಾಲಯ ಬೇಸರ ವ್ಯಕ್ತಪಡಿಸಿತು.
ಕುಮಾರ್ ಅವರಿಗೆ ಮಧ್ಯಂತರ ಪರಿಹಾರ ನೀಡಬೇಕೇ ಎಂಬ ಕುರಿತಂತೆ ನ್ಯಾಯಾಲಯ ತೀರ್ಪನ್ನು ಕಾಯ್ದಿರಿಸಿದೆ. ಕುಮಾರ್ ಪರ ಹಿರಿಯ ವಕೀಲ ಮಣಿಂದರ್ ಸಿಂಗ್ ವಾದ ಮಂಡಿಸಿದರು. ದಿ ವೈರ್ ಜಾಲತಾಣವನ್ನು ವಕೀಲ ಸರೀಮ್ ನವೀದ್ ಪ್ರತಿನಿಧಿಸಿದ್ದರು.
ದ್ವಾರಕಾ ಎಕ್ಸ್ ಪ್ರೆಸ್ ವೇ ಯೋಜನೆಗಾಗಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ (ಎನ್ಎಚ್ಎಐ) ಭೂಸ್ವಾಧೀನಕ್ಕೆ ಸಂಬಂಧಿಸಿದಂತೆ ತಮ್ಮ ವಿರುದ್ಧ ಅಪಪ್ರಚಾರ ಮಾಡುವ ಸಲುವಾಗಿ ಈ ವಿವಾದವನ್ನು ʼದಿ ವೈರ್ʼ ಸೃಷ್ಟಿಸಿದೆ ಎಂದು ದೂರಿ ಕುಮಾರ್ ನ್ಯಾಯಾಲಯದ ಮೆಟ್ಟಿಲೇರಿದ್ದರು.
'ಭೂ ಅತಿ ಮೌಲ್ಯಮಾಪನ ಪ್ರಕರಣದಲ್ಲಿನ ಫಲಾನುಭವಿ ಕುಟುಂಬದೊಂದಿಗೆ ದೆಹಲಿ ಮುಖ್ಯ ಕಾರ್ಯದರ್ಶಿಯ ಪುತ್ರನ ಸಂಪರ್ಕವು ಪ್ರಶ್ನೆಗಳನ್ನು ಹುಟ್ಟುಹಾಕುತ್ತದೆ' ಎಂಬ ಶೀರ್ಷಿಕೆ ಇದ್ದ ವರದಿಯನ್ನು 'ದಿ ವೈರ್' ನವೆಂಬರ್ 9, 2023 ರಂದು ಪ್ರಕಟಿಸಿತ್ತು.
ದ್ವಾರಕಾ ಎಕ್ಸ್‌ಪ್ರೆಸ್ ವೇಗಾಗಿ ದೆಹಲಿಯ ಬಮ್ನೋಲಿ ಗ್ರಾಮದಲ್ಲಿ 19 ಎಕರೆ ಭೂಮಿಯನ್ನು ಎನ್ಎಚ್ಎಐ ಸ್ವಾಧೀನಪಡಿಸಿಕೊಂಡಾಗ ಹೆಚ್ಚಿಸಿದ ಪರಿಹಾರದ ಪ್ರಯೋಜನಗಳನ್ನು ಪಡೆದ ಕುಟುಂಬದೊಂದಿಗೆ ಚೌಹಾಣ್ ಸಂಪರ್ಕ ಹೊಂದಿದ್ದಾರೆ ಎಂದು ವರದಿಯಲ್ಲಿ ಆರೋಪಿಸಲಾಗಿತ್ತು.
ವರದಿ ಪ್ರಶ್ನಿಸಿ ಕುಮಾರ್ ಅವರು ʼದಿ ವೈರ್ʼ ಮತ್ತು ವರದಿಗಾರ ಮೀತು ಜೈನ್ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಿದ್ದರು.