Justice DY Chandrachud
Justice DY Chandrachud 
ಸುದ್ದಿಗಳು

ನ್ಯಾಯಾಲಯ ಕಲಾಪದ ಲೈವ್‌ ಸ್ಟ್ರೀಮಿಂಗ್‌ಗೆ ನಿಯಮ, ಮೂಲಸೌಕರ್ಯ ಅಂತಿಮಗೊಳಿಸಲು ಇ-ಸಮಿತಿ ಸಿದ್ಧತೆ: ನ್ಯಾ. ಚಂದ್ರಚೂಡ್‌

Bar & Bench

ದೇಶಾದ್ಯಂತ ನ್ಯಾಯಾಲಯಗಳ ಕಲಾಪಗಳನ್ನು ಲೈವ್‌ ಸ್ಟ್ರೀಮಿಂಗ್‌ (ನೇರ ಪ್ರಸಾರ) ಮಾಡುವ ಸಂಬಂಧ ನಿಯಮಗಳನ್ನು ಅಂತಿಮಗೊಳಿಸುವುದು ಮತ್ತು ಅದಕ್ಕೆ ಅಗತ್ಯವಾದ ಮೂಲಸೌಕರ್ಯ ಕಲ್ಪಿಸುವ ಪ್ರಕ್ರಿಯೆಯಲ್ಲಿ ಸುಪ್ರೀಂ ಕೋರ್ಟ್‌ ತೊಡಗಿದೆ ಎಂದು ಇ-ಸಮಿತಿಯ ಮುಖ್ಯಸ್ಥ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್‌ ಶುಕ್ರವಾರ ಹೇಳಿದ್ದಾರೆ.

ಈ ಸಂಬಂಧದ ಪ್ರಾಯೋಗಿಕ ಯೋಜನೆಯನ್ನು ಈಗಾಗಲೇ ಗುಜರಾತ್‌ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ವಿಕ್ರಮ್‌ ನಾಥ್‌ ಆರಂಭಿಸಿದ್ದಾರೆ ಎಂದು ನ್ಯಾ. ಚಂದ್ರಚೂಡ್‌ ಹೇಳಿದರು. “ನ್ಯಾಯಾಲಯದ ಕಲಾಪಗಳ ಲೈವ್‌ ಸ್ಟ್ರೀಮಿಂಗ್‌ ಮಾಡಲು ನಿಯಮ, ಮೂಲಸೌಕರ್ಯ ಅಂತಿಮಗೊಳಿಸಲು ಇಂದು ಇ-ಸಮಿತಿ ಸಿದ್ಧತೆ ನಡೆಸಿದೆ. ದೇಶಾದ್ಯಂತ ಇರುವ ನ್ಯಾಯಾಲಯಗಳ ಕಲಾಪಗಳನ್ನು ಲೈವ್‌ ಸ್ಟ್ರೀಮಿಂಗ್‌ ಮಾಡುವ ಸಂಬಂಧ ಮೂಲಸೌಕರ್ಯ ಕಲ್ಪಿಸುವ ಪ್ರಕ್ರಿಯೆಯಲ್ಲಿ ನಾವು ನಿರತವಾಗಿದ್ದೇವೆ” ಎಂದರು.

ತೀರ್ಪುಗಳು ಮತ್ತು ಇ-ಫೈಲಿಂಗ್‌ ಕುರಿತ ನೂತನ ವೆಬ್‌ಸೈಟ್‌ ಅನಾವರಣ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಯಾರಿಗಾದರೂ ಕಲಾಪ ನೋಡುವ ಆಸಕ್ತಿ ಇದ್ದರೆ ಯೂಟ್ಯೂಬ್‌ಗೆ ಹೋಗಿ ಗುಜರಾತ್‌ ಹೈಕೋರ್ಟ್‌ ಕಲಾಪವನ್ನು ವೀಕ್ಷಿಸಬಹುದು ಎಂದರು.

ಲೈವ್‌ ಸ್ಟ್ರೀಮಿಂಗ್‌ಗೆ ಚೌಕಟ್ಟು ರೂಪಿಸುವ ಅಗತ್ಯವಿದೆ. ಲೈವ್‌ ಸ್ಟ್ರೀಮಿಂಗ್‌ ನಿಯಮಗಳನ್ನು ಅಂತಿಮಗೊಳಿಸುವ ಪ್ರಕ್ರಿಯೆಯಲ್ಲಿ ನಾವು ತೊಡಗಿದ್ದೇವೆ ಎಂದು ಅವರು ಹೇಳಿದ್ದು, ಭೌತಿಕ ವಿಚಾರಣೆಗೆ ಬದಲಾಗಿ ವಿಡಿಯೋ ಕಾನ್ಫರೆನ್ಸ್‌ ವಿಚಾರಣೆ ಮುಂದುವರೆಸುವುದಿಲ್ಲ ಎಂಬ ಭರವಸೆಯನ್ನೂ ನೀಡಿದರು.

“ನಾವು ಸಾಮಾನ್ಯ ಜನರಿಗಾಗಿ ಅಸ್ತಿತ್ವದಲ್ಲಿದ್ದು, ಸಾಂಕ್ರಾಮಿಕತೆ ಸೃಷ್ಟಿಸಿರುವ ಸಮಸ್ಯೆಗಳಿಗೆ ಉತ್ತರಿಸುವ ದೃಷ್ಟಿಯಿಂದ ವಿಡಿಯೋ ಕಾನ್ಫರೆನ್ಸ್‌ ವೇದಿಕೆ ಸೃಷ್ಟಿಸಿದ್ದೇವೆಯೇ ವಿನಾ ಮೌಖಿಕ ವಿಚಾರಣೆಗಳನ್ನು ಬದಲಾಯಿಸಲು ಅಲ್ಲ. ಜನರ ಸ್ವಾತಂತ್ರ್ಯ ಮತ್ತು ಹಕ್ಕುಗಳನ್ನು ಮೊಟಕುಗೊಳಿಸುವುದನ್ನು ತಡೆಯಲು ನಾವು ಕಾರ್ಯನಿರ್ವಹಿಸುತ್ತಿದ್ದೇವೆ” ಎಂದು ಹೇಳಿದ್ದಾರೆ.

ಭೌತಿಕ ವಿಚಾರಣೆಗೆ ಬದಲಾಗಿ ವಿಡಿಯೋ ಕಾನ್ಫರೆನ್ಸ್‌ ವಿಚಾರಣೆ ನಡೆಸುವ ಕುರಿತು ಪರಿಷತ್‌ ಆತಂಕಗಳು ತಮಗೂ ಮುಟ್ಟಿವೆ ಎಂದಿರುವ ನ್ಯಾ. ಚಂದ್ರಚೂಡ್‌ ಅವರು “ಪರಿಷತ್‌ ಏಳಿಗೆಗಾಗಿ ಸತತವಾಗಿ ಶ್ರಮಿಸಿದ್ದು, ಮುಕ್ತ ನ್ಯಾಯಾಲಯದ ವ್ಯವಸ್ಥೆಯನ್ನು ಬದಲಿಸುವ ಯಾವುದೇ ಯೋಚನೆ ತನ್ನ ಮನಸ್ಸಿನಲ್ಲಿ ಇಲ್ಲ ಎಂಬ ಭರವಸೆ ನೀಡುತ್ತಿದ್ದೇನೆ” ಎಂದು ತಮ್ಮ ನಿಲುವನ್ನು ಸ್ಪಷ್ಟಪಡಿಸಿದರು.