ದೇಶದಲ್ಲಿ ಮೊದಲ ಬಾರಿಗೆ ಇಂದಿನಿಂದ ಮುಖ್ಯ ನ್ಯಾಯಮೂರ್ತಿ ವಿಕ್ರಮ್ ನಾಥ್ ನೇತೃತ್ವದ ಪೀಠದಿಂದ ವಿಚಾರಣಾ ಕಲಾಪಗಳ ನೇರ ಪ್ರಸಾರವನ್ನು (ಲೈವ್ ಸ್ಟ್ರೀಮಿಂಗ್) ಗುಜರಾತ್ ಹೈಕೋರ್ಟ್ ಆರಂಭಿಸಿದೆ.
ವಿಡಿಯೋ ಕಾನ್ಫರೆನ್ಸ್‌ನಲ್ಲಿ ನಡೆಯುವ ನ್ಯಾಯಾಲಯದ ಕಲಾಪಗಳನ್ನು ಸಾರ್ವಜನಿಕರು ವೀಕ್ಷಿಸಬೇಕು ಎಂದು ತೀರ್ಪು ನೀಡಿರುವ ಸುಪ್ರೀಂ ಕೋರ್ಟ್ ಆದೇಶವನ್ನು ಈ ಕುರಿತು ಹೊರಡಿಸಲಾದ ಗುಜರಾತ್ ಹೈಕೋರ್ಟ್ ಮಾಧ್ಯಮ ಹೇಳಿಕೆಯಲ್ಲಿ ಉಲ್ಲೇಖಿಸಲಾಗಿದೆ. ಮುಕ್ತ ನ್ಯಾಯಾಲಯ ಮತ್ತು ನ್ಯಾಯದಾನದ ತತ್ವಗಳನ್ನು ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ನ್ಯಾಯಾಲಯದ ಕಲಾಪಗಳನ್ನು ಲೈವ್ ಸ್ಟ್ರೀಮಿಂಗ್ ಮಾಡಲು ಸೂಚಿಸುವಂತೆ ಕೋರಿ ನಿರ್ಮಾ ವಿಶ್ವವಿದ್ಯಾಲಯದ ಕಾನೂನು ಶಾಲೆಯ ವಿದ್ಯಾರ್ಥಿ ಪೃಥ್ವಿರಾಜ್ ಸಿನ್ಹಾ ಜಲಾ ಅವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ಪ್ರಸ್ತಾಪವನ್ನೂ ಹೇಳಿಕೆಯಲ್ಲಿ ಮಾಡಲಾಗಿದೆ.