ಆಡಳಿತ ಮತ್ತು ಆರ್ಥಿಕ ಚಟುವಟಿಕೆಗಳನ್ನು ಹೆಚ್ಚು ಪರಿಣಾಮಕಾರಿಯಾಗಿಸಲು ನ್ಯಾಯವನ್ನು ಸರಳ, ವೇಗ ಮತ್ತು ಹೆಚ್ಚು ಒಳಗೊಳ್ಳುವಂತೆ ಮಾಡುವ ಸುಧಾರಣೆಗಳೊಂದಿಗೆ ಸರ್ಕಾರದ ಸುಧಾರಣಾ ಪ್ರಯತ್ನಗಳು ಕೈಜೋಡಿಸಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರ (ನಾಲ್ಸಾ)ಶುಕ್ರವಾರ ನವದೆಹಲಿಯಲ್ಲಿ ಆಯೋಜಿಸಿದ್ದ ಕಾನೂನು ನೆರವು ವಿತರಣಾ ಕಾರ್ಯವಿಧಾನಗಳ ಸಬಲೀಕರಣ ಕುರಿತ ರಾಷ್ಟ್ರೀಯ ಸಮ್ಮೇಳನ ಮತ್ತು ಕಾನೂನು ಸೇವಾ ದಿನಾಚರಣೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ನ್ಯಾಯ ಸುಲಲಿತವಾಗಿರದೆ ಇದ್ದರೆ ವ್ಯವಹಾರದ ಸುಲಲಿತೆ ಮತ್ತು ಬದುಕಿನ ಸುಲಲಿತತೆ ಅಪೂರ್ಣವಾಗಿ ಉಳಿಯುತ್ತದೆ ಎಂದು ಪ್ರಧಾನಿ ಮೋದಿ ಹೇಳಿದರು. ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಬಿ ಆರ್ ಗವಾಯಿ ನ್ಯಾಯಮೂರ್ತಿಗಳಾದ ಸೂರ್ಯ ಕಾಂತ್, ವಿಕ್ರಮ್ ನಾಥ್, ಕೇಂದ್ರ ಕಾನೂನು ಸಚಿವ ಅರ್ಜುನ್ ರಾಮ್ ಮೇಘವಾಲ್ ಅವರು ಕೂಡ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ದೇಶದಲ್ಲಿ ಆಡಳಿತಾತ್ಮಕ ಸುಧಾರಣೆಗಳು ನಡೆಯುತ್ತಿರುವಾಗ, ನ್ಯಾಯ ವ್ಯವಸ್ಥೆಯ ಸುಧಾರಣೆ ಕೂಡ ಅದೇ ರೀತಿ ನಡೆಯಬೇಕು ಎಂದ ಅವರು ಕಾನೂನು ಸೇವೆಗಳ ಪ್ರಾಧಿಕಾರಗಳು ನ್ಯಾಯಾಂಗ ಮತ್ತು ನಾಗರಿಕರ ನಡುವಿನ ಪ್ರಮುಖ ಸೇತುವೆಯಾಗಿ ಮಾರ್ಪಟ್ಟಿದ್ದು, ಸಂಪನ್ಮೂಲಗಳಿಲ್ಲದವರು ವ್ಯವಸ್ಥೆಯನ್ನು ಸಂಪರ್ಕಿಸುವಂತಾಗಿದೆ ಎಂದರು.
ಕಾನೂನು ನೆರವು ಸಂಸ್ಥೆಗಳು ರಾಷ್ಟ್ರೀಯ ಮಟ್ಟದಿಂದ ತಾಲೂಕು ಮಟ್ಟದವರೆಗೆ – ಸಾಮಾನ್ಯ ಜನರಿಗೆ ನ್ಯಾಯ ದೊರಕಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು.
ಕಾನೂನು ಚೌಕಟ್ಟುಗಳನ್ನು ಸರಳೀಕರಿಸಲು ಮತ್ತು ಅನಗತ್ಯ ನಿಯಂತ್ರಕ ಅಡೆತಡೆಗಳನ್ನು ನಿವಾರಿಸಲು ಸರ್ಕಾರ ಮಾಡುತ್ತಿರುವ ಪ್ರಯತ್ನಗಳತ್ತ ಗಮನ ಸೆಳೆದ ಅವರು ಜನರಿಗೆ ಮತ್ತು ಉದ್ಯಮಗಳಿಗೆ ಆಡಳಿತಾತ್ಮಕ ತೊಂದರೆ ಕಡಿಮೆ ಮಾಡಲು 40,000ಕ್ಕೂ ಹೆಚ್ಚು ಅನಾವಶ್ಯಕ ನಿಯಮಗಳನ್ನು ರದ್ದುಗೊಳಿಸಲಾಗಿದೆ ಎಂದರು.
ಜನ್ ವಿಶ್ವಾಸ್ ಕಾಯ್ದೆಯ ಮೂಲಕ, 3,400 ಕ್ಕೂ ಹೆಚ್ಚು ಕಾನೂನುಗಳಲ್ಲಿ ಅಪರಾಧೀಕರಣದ ಅಂಶಗಳನ್ನು ತೆಗೆದುಹಾಕಲಾಗಿದೆ. ದಶಕಗಳಿಂದ ಉಳಿದಿದ್ದ ಹಳೆಯ ಕಾನೂನುಗಳನ್ನು ತೆಗೆದುಹಾಕಿ ಭಾರತೀಯ ನ್ಯಾಯ ಸಂಹಿತೆಯನ್ನು ಜಾರಿಗೆ ತರಲಾಗಿದೆ ಎಂದರು.
ಇ- ಫೈಲಿಂಗ್, ವೀಡಿಯೊ ಕಾನ್ಫರೆನ್ಸ್ ಹಾಗೂ ಆನ್‌ಲೈನ್ ಸಮನ್ಸ್ ರೀತಿಯ ತಂತ್ರಜ್ಞಾನ ಬಳಕೆ ಹೆಚ್ಚಿದ್ದು ₹7,000 ಕೋಟಿ ಮೌಲ್ಯದ ಇ ಕೋರ್ಟ್ಸ್ ಮೂರನೇ ಹಂತದ ಯೋಜನೆಗೆ ನಿಧಿ ಒದಗಿಸಲಾಗಿದೆ ಎಂದರು.
ಜನರಿಗೆ ಅರ್ಥವಾಗುವ ರೀತಿಯಲ್ಲಿ ನ್ಯಾಯಾಂಗದ ಭಾಷೆ ಇರಬೇಕು ಎಂದ ಅವರು 80,000ಕ್ಕೂ ಹೆಚ್ಚು ನ್ಯಾಯಾಲಯ ತೀರ್ಪುಗಳನ್ನು 18 ಭಾರತೀಯ ಭಾಷೆಗಳಿಗೆ ಅನುವಾದಿಸಿರುವ ಸುಪ್ರೀಂ ಕೋರ್ಟ್ ಕ್ರಮವನ್ನು ಶ್ಲಾಘಿಸಿದರು. ಸಿಜೆಐ ಗವಾಯಿ, ನ್ಯಾಯಮೂರ್ತಿ ಸೂರ್ಯ ಕಾಂತ್ ಮತ್ತಿತರರು ಸಮಾರಂಭದಲ್ಲಿ ಮಾತನಾಡಿದರು