ಶಿವಸೇನೆ ಪಕ್ಷದ ಹೆಸರು ಮತ್ತು ಚುನಾವಣಾ ಚಿಹ್ನೆಯಾದ ಬಿಲ್ಲು ಮತ್ತು ಬಾಣದ ಗುರುತನ್ನು ಸ್ಥಗಿತಗೊಳಿಸುವ ಚುನಾವಣಾ ಆಯೋಗದ (ಇಸಿ) ನಿರ್ಧಾರದಿಂದಾಗಿ ತನ್ನ ಕಾರ್ಯಚಟುವಟಿಕೆ ನಿಂತು ಹೋಗಿದೆ ಎಂದು ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನೆ ಬಣ ಸೋಮವಾರ ದೆಹಲಿ ಹೈಕೋರ್ಟ್‌ಗೆ ತಿಳಿಸಿದೆ.
ಚುನಾವಣಾ ಆಯೋಗವು ಯಾವುದೇ ಪ್ರಾಥಮಿಕ ಪ್ರಕರಣವಿಲ್ಲದೆ ಮತ್ತು ಪ್ರಕರಣದ ವಿಚಾರಣಾರ್ಹತೆ ಬಗ್ಗೆ ಯಾವುದೇ ಚರ್ಚೆ ನಡೆಸದೆ ಆದೇಶ ನೀಡಿದೆ ಎಂದು ಉದ್ಧವ್ ಠಾಕ್ರೆ ಬಣದ ಪರ ವಾದ ಮಂಡಿಸಿದ ಹಿರಿಯ ನ್ಯಾಯವಾದಿಗಳಾದ ಕಪಿಲ್ ಸಿಬಲ್ ಮತ್ತು ದೇವದತ್ತ ಕಾಮತ್ ತಿಳಿಸಿದರು.
ಚುನಾವಣಾ ಆಯೋಗದ ಆದೇಶಕ್ಕೆ ತಡೆ ಕೋರಿ ಉದ್ಧವ್ ಸಲ್ಲಿಸಿರುವ ಮನವಿಯ ವಿಚಾರಣೆಯನ್ನು ನ್ಯಾ. ಸಂಜೀವ್ ನರುಲಾ ಅವರು ನಡೆಸಿದರು.
"ರಾಜಕೀಯ ಪಕ್ಷವಾಗಿ ಶಿವಸೇನೆಯ ಹಕ್ಕುಗಳ ಮೇಲೆ ಹಲವು ಪರಿಣಾಮ ಉಂಟು ಮಾಡುವ ಆದೇಶವನ್ನು ಅರೆ ನ್ಯಾಯಿಕ ಪ್ರಾಧಿಕಾರವೊಂದು ನೀಡುವಾಗ ಮೇಲ್ನೋಟಕ್ಕೆ ಪ್ರಕರಣವಿದೆಯೇ ಎನ್ನುವುದನ್ನು ಗಣನೆಗೆ ತೆಗೆದುಕೊಳ್ಳಬೇಕು. ಹಾಗೆ ಮಾಡಿರದೆ ಹೋದಲ್ಲಿ ಅಂತಹ ಆದೇಶ ರದ್ದುಗೊಳಿಸುವಂತೆ ಕೋರಲು ಅಷ್ಟು ಸಾಕು" ಎಂದು ಕಾಮತ್ ವಾದಿಸಿದರು.
ಏಕನಾಥ್ ಶಿಂಧೆ ಬಣದ ಪರ ವಾದ ಮಂಡಿಸಿದ ಹಿರಿಯ ವಕೀಲ ನೀರಜ್ ಕಿಶನ್ ಕೌಲ್, ದೆಹಲಿ ಹೈಕೋರ್ಟ್ ಎದುರು ತಾನು ಮಂಡಿಸಿದ ಪ್ರತಿಯೊಂದು ವಾದವನ್ನು ಸುಪ್ರೀಂ ಕೋರ್ಟ್‌ನಲ್ಲಿಯೂ ಮಂಡಿಸಲಾಗಿದ್ದು ಆಯೋಗದ ಪ್ರಕ್ರಿಯೆಗಳಿಗೆ ತಡೆ ನೀಡಲು ಸುಪ್ರೀಂ ಕೋರ್ಟ್ ನಿರಾಕರಿಸಿದೆ ಎಂದು ವಾದಿಸಿದರು.