ಕೇಂದ್ರ ಸಚಿವ, ನಟ ಹಾಗೂ ಕೇರಳದ ಏಕೈಕ ಬಿಜೆಪಿ ಸಂಸದ ಸುರೇಶ್ ಗೋಪಿ ಅವರು ಕಳೆದ ಲೋಕಸಭಾ ಚುನಾವಣೆ ವೇಳೆ ತ್ರಿಶೂರ್ ಕ್ಷೇತ್ರದಿಂದ ಸಂಸದರಾಗಿ ಆಯ್ಕೆಯಾಗಿದ್ದನ್ನು ಪ್ರಶ್ನಿಸಿರುವ ಅರ್ಜಿ ಬಾಕಿ ಇರುವಂತೆಯೇ ತ್ರಿಶೂರ್ ಚುನಾವಣೆಗೆ ಸಂಬಂಧಿಸಿದ ಇವಿಎಂಗಳನ್ನು ಮರಳಿಸುವಂತೆ ಕೋರಿ ಭಾರತೀಯ ಚುನಾವಣಾ ಆಯೋಗ (ಇಸಿಐ) ಕೇರಳ ಕೇರಳ ಹೈಕೋರ್ಟ್ ಮೊರೆ ಹೋಗಿದೆ. [ಬಿನೋಯ್ ಎಎಸ್ ಮತ್ತು ಸುರೇಶ್ ಗೋಪಿ ನಡುವಣ ಪ್ರಕರಣ]
ದೇಶದಲ್ಲಿ ಮುಂದೆ ನಡೆಯಲಿರುವ ಚುನಾವಣೆಗಳಿಗೆ ಸಾಕಷ್ಟು ಇವಿಎಂಗಳ ಅಗತ್ಯವಿದೆ ಎಂದು ಇಸಿಐ ತನ್ನ ಅಫಿಡವಿಟ್‌ನಲ್ಲಿ ತಿಳಿಸಿದೆ. ಗೋಪಿ ವಿರುದ್ಧದ ಚುನಾವಣಾ ಅರ್ಜಿಗೆ ಸಂಬಂಧಿಸಿದಂತೆ ತೀರ್ಪು ನೀಡಲು ಈ ಇವಿಎಂಗಳ ಅಗತ್ಯವಿಲ್ಲ ಎಂದು ಅದು ವಾದಿಸಿದೆ.
ಗೋಪಿ ಅವರ ಗೆಲುವು ಪ್ರಕಟಿಸಿದ ಚುನಾವಣಾ ಫಲಿತಾಂಶ ಪ್ರಶ್ನಿಸಿ ಅಖಿಲ ಭಾರತ ಯುವ ಒಕ್ಕೂಟದ (ಎಐವೈಎಫ್) ನಾಯಕ ಮತ್ತು ತ್ರಿಶೂರ್ ಕ್ಷೇತ್ರದ ಮತದಾರನಾಗಿರುವ ಬಿನೋಯ್ ಎ ಎಸ್ ಅವರು ಅರ್ಜಿ ಸಲ್ಲಿಸಿದ್ದರು. ಆ ಪ್ರಕರಣದ ವಿಚಾರಣೆ ನ್ಯಾಯಾಲಯದಲ್ಲಿ ಬಾಕಿ ಇರುವಂತೆಯೇ ಇಸಿಐ ಅರ್ಜಿ ಸಲ್ಲಿಸಿದ್ದು ತ್ರಿಶೂರ್ ಇವಿಎಂಗಳನ್ನು ಜಿಲ್ಲಾ ಚುನಾವಣಾಧಿಕಾರಿ ಸುಪರ್ದಿಯಿಂದ ತನಗೆ ಒಪ್ಪಿಸುವಂತೆ ಅದು ಕೋರಿದೆ.
ಚುನಾವಣಾ ಪ್ರಚಾರದ ಸಮಯದಲ್ಲಿ, ಗೋಪಿ, ಅವರ ಚುನಾವಣಾ ಏಜೆಂಟ್ ಮತ್ತು ಸಹಚರರು ಪ್ರಜಾಪ್ರತಿನಿಧಿ ಕಾಯ್ದೆ, 1951 ರ ಸೆಕ್ಷನ್ 123 ಅಡಿಯಲ್ಲಿ ವ್ಯಾಖ್ಯಾನಿಸಿದಂತೆ ವಿವಿಧ ಭ್ರಷ್ಟ ಚಟುವಟಿಕೆಗಳಲ್ಲಿ ತೊಡಗಿದ್ದರು ಎಂದು ಬಿನೊಯ್ ದೂರಿದ್ದರು.
ಇಸಿಐಯನ್ನು ಇದೇ ಪ್ರಕರಣದ ಹೆಚ್ಚುವರಿ ಪಕ್ಷಕಾರನನ್ನಾಗಿ ಮಾಡಿ ನ್ಯಾಯಮೂರ್ತಿ ಕೌಸರ್ ಎಡಪ್ಪಾಗತ್ ಅವರು ಸೋಮವಾರ (ನವೆಂಬರ್ 26) ಆದೇಶಿಸಿದರು. ಪ್ರಕರಣದ ಮುಂದಿನ ವಿಚಾರಣೆ ಡಿಸೆಂಬರ್ 4 ರಂದು ನಡೆಯಲಿದೆ.