Enforcement Directorate Delhi 
ಸುದ್ದಿಗಳು

ಇ ಡಿ ತನ್ನಿಷ್ಟದಂತೆ ಜನರನ್ನು ಬಂಧಿಸುವಂತಿಲ್ಲ; ಪಿಎಂಎಲ್ಎ ಸೆಕ್ಷನ್ 50 ಬಂಧಿಸುವ ಅಧಿಕಾರ ನೀಡಿಲ್ಲ: ದೆಹಲಿ ಹೈಕೋರ್ಟ್

Bar & Bench

ಅಕ್ರಮ ಹಣ ವರ್ಗಾವಣೆ ತಡೆ ಕಾಯಿದೆಯ (ಪಿಎಂಎಲ್‌ಎ) ಸೆಕ್ಷನ್ 19ರ ಅಡಿ ಯಾವುದೇ ವ್ಯಕ್ತಿಯನ್ನು ಬಂಧಿಸುವುದಕ್ಕಾಗಿ ಜಾರಿ ನಿರ್ದೇಶನಾಲಯ (ಇಡಿ) ತನಗೆ ನೀಡಿರುವ ಅಧಿಕಾರವನ್ನು ಮೀರುವಂತಿಲ್ಲ. ಅಲ್ಲದೆ, ತನಗಿಷ್ಟಬಂದಂತೆ, ಮನಸ್ಸಿಗೆ ತೋಚಿದಂತೆ ಯಾವುದೇ ವ್ಯಕ್ತಿಯನ್ನು ಅದು ಬಂಧಿಸುವಂತಿಲ್ಲ ಎಂದು ದೆಹಲಿ ಹೈಕೋರ್ಟ್ ಗುರುವಾರ ಹೇಳಿದೆ. [ಆಶಿಶ್ ಮಿತ್ತಲ್ ಮತ್ತು ಜಾರಿ ನಿರ್ದೇಶನಾಲಯ ಇನ್ನಿತರರ ನಡುವಣ ಪ್ರಕರಣ].

ಒಬ್ಬ ವ್ಯಕ್ತಿಯನ್ನು ಬಂಧಿಸುವ ಮೊದಲು ಇ ಡಿ ಮೂರು ಹಂತದ ಅಗತ್ಯತೆಗಳ ಪಾಲನೆ ಮಾಡಬೇಕು ಎಂದು ನ್ಯಾಯಮೂರ್ತಿ ಅನೂಪ್ ಜೈರಾಮ್ ಭಂಭಾನಿ ಹೇಳಿದರು.

“ಮೊದಲನೆಯದಾಗಿ ಬಂಧನಕ್ಕೊಳಗಾದ ವ್ಯಕ್ತಿ ಪಿಎಂಎಲ್‌ ಕಾಯಿದೆ ಅಡಿ ತಪ್ಪಿತಸ್ಥನೇ ಹೊರತು ಬೇರಾವುದೇ ಕಾನೂನಿನಡಿ ಅಲ್ಲ ಎಂದು ಇ ಡಿ ನಿರ್ದೇಶಕರಿಗೆ ಸಮಂಜಸ ವಿಶ್ವಾಸ ಇರಬೇಕು; ಎರಡನೆಯದಾಗಿ ಅಂತಹ ವಿಶ್ವಾಸಕ್ಕೆ ಕಾರಣಗಳನ್ನು ಬರವಣಿಗೆಯಲ್ಲಿ ದಾಖಲಿಸಬೇಕು; ಮೂರನೆಯದಾಗಿ ಅಂತಹ ವಿಶ್ವಾಸವು ನಿರ್ದೇಶಕರ ಸ್ವಾಧೀನದಲ್ಲಿರುವ ಸಾಕ್ಷ್ಯಗಳನ್ನು ಆಧರಿಸಿರಬೇಕು” ಎಂದು ನ್ಯಾಯಾಲಯ ತಿಳಿಸಿತು.

ಪಿಎಂಎಲ್‌ಎಯ ಸೆಕ್ಷನ್ 50 ರ ಅಡಿಯಲ್ಲಿ ಇ ಡಿಗೆ ಸಮನ್ಸ್ ನೀಡಲಷ್ಟೇ ಅಧಿಕಾರ ಇದ್ದು ಅದು ಬಂಧಿಸುವ ಅಧಿಕಾರವನ್ನು ಒಳಗೊಂಡಿಲ್ಲ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.

ಜಾರಿ ಪ್ರಕರಣದ ಮಾಹಿತಿ ವರದಿ (ಇಸಿಐಆರ್) ಅಥವಾ ಪ್ರಾಸಿಕ್ಯೂಷನ್ ದೂರಿನಲ್ಲಿ ಆರೋಪಿ ಎಂದು ಹೆಸರಿಸದಿದ್ದರೂ ಜಾರಿ ನಿರ್ದೇಶನಾಲಯದಿಂದ ಬಂಧಿತನಾಗುವ ವ್ಯಕ್ತಿ ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸಬಹುದು ಎಂದು ನ್ಯಾಯಮೂರ್ತಿ ಭಂಭಾನಿ ಹೇಳಿದರು.

(ತಮಿಳುನಾಡು ಸಚಿವ ಡಿಎಂಕೆ ನಾಯಕ) ವಿ ಸೆಂಥಿಲ್ ಬಾಲಾಜಿ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ನ ತೀರ್ಪನ್ನು ಉಲ್ಲೇಖಿಸಿದ ಹೈಕೋರ್ಟ್ ಪಿಎಂಎಲ್‌ಎ ಸೆಕ್ಷನ್ 19 (1) ನ್ನು ಪಾಲಿಸದಿರುವುದು ಬಂಧನಕ್ಕೆ ನೀಡಲಾದ ಸಮಜಾಯಿಷಿಯನ್ನು ದುರ್ಬಲಗೊಳಿಸುತ್ತದೆ ಮತ್ತು 19 (2)ರ ಅನುಪಾಲನೆಯು ಅತ್ಯಗತ್ಯವಾಗಿದ್ದು ಇದಕ್ಕೆ ಯಾವುದೇ ವಿನಾಯಿತಿ ಇಲ್ಲ ಎಂದಿದೆ.

ಎಜುಕಾಂಪ್ ಪ್ರಕರಣದಲ್ಲಿ ಇಸಿಐಆರ್ ಅನ್ನು ರದ್ದುಗೊಳಿಸುವಂತೆ ಕೋರಿ ಆಶಿಶ್ ಮಿತ್ತಲ್ ಎಂಬುವವರು ಸಲ್ಲಿಸಿದ್ದ ಮನವಿಯ ವಿಚಾರಣೆ ನಡೆಸಿದ ನ್ಯಾಯಾಲಯ ಈ ಅವಲೋಕನಗಳನ್ನು ಮಾಡಿತು.