Nawab Malik, Bombay High Court 
ಸುದ್ದಿಗಳು

ಒತ್ತಡ ಇದೆಯೆಂದು ಜಾಮೀನು ನೀಡಲಾಗದು: ಬಾಂಬೆ ಹೈಕೋರ್ಟ್‌ನಲ್ಲಿ ನವಾಬ್ ಮಲೀಕ್ ಸಲ್ಲಿಸಿದ್ದ ಮನವಿಗೆ ಇ ಡಿ ವಿರೋಧ

ವೈದ್ಯಕೀಯ ನೆಲೆಯಲ್ಲಿ ಜಾಮೀನು ನೀಡುವ ಸೀಮಿತ ಅಂಶದ ಮೇಲೆ ಮಲಿಕ್ ಸಲ್ಲಿಸಿದ್ದ ಅರ್ಜಿಯ ತೀರ್ಪು ಕಾಯ್ದಿರಿಸಲಾಗಿದ್ದು ಅರ್ಹತೆ ಆಧಾರದ ಮೇಲೆ ನಿಯಮಿತ ಜಾಮೀನು ಕೋರಿ ಸಲ್ಲಿಸಲಾದ ಅರ್ಜಿಗೆ ಸಂಬಂಧಿಸಿದಂತೆ ಇನ್ನಷ್ಟೇ ವಾದ ಮಂಡನೆಯಾಗಬೇಕಿದೆ.

Bar & Bench

ವೈದ್ಯಕೀಯ ಜಾಮೀನು ನೀಡಲು ಮಾನಸಿಕ ಒತ್ತಡ ಆಧಾರವಾಗಬಾರದು ಎಂದು ಜಾರಿ ನಿರ್ದೇಶನಾಲಯ ನಿರ್ದೇಶನಾಲಯ (ಇ ಡಿ) ಶುಕ್ರವಾರ ಬಾಂಬೆ ಹೈಕೋರ್ಟ್‌ಗೆ ತಿಳಿಸಿದ್ದು, ಜಾಮೀನು ಕೋರಿ ಮಹಾರಾಷ್ಟ್ರದ ಮಾಜಿ ಸಚಿವ ಮತ್ತು ಎನ್‌ಸಿಪಿ ನಾಯಕ ನವಾಬ್ ಮಲಿಕ್ ಮಾಡಿದ್ದ ಮನವಿಗೆ ವಿರೋಧ ವ್ಯಕ್ತಪಡಿಸಿದೆ.

ಪ್ರತಿಯೊಬ್ಬರಿಗೂ ಒತ್ತಡ ಇದ್ದು ಅದು ಜಾಮೀನು ಪಡೆಯಲು ನೆಪವಾಗಬಾರದು ಎಂದು ಇ ಡಿ ಪರವಾಗಿ ಹಾಜರಾದ ಹೆಚ್ಚುವರಿ ಸಾಲಿಸಿಟರ್ ಜನರಲ್ (ಎಎಸ್‌ಜಿ) ಅನಿಲ್ ಸಿಂಗ್ ತಿಳಿಸಿದರು.  ಒತ್ತಡ ರಹಿತ ವಾತಾವರಣದಲ್ಲಿ ಬದುಕುವ ಹಕ್ಕಿದ್ದು ತನ್ನ ವೈದ್ಯಕೀಯ ಸ್ಥಿತಿ ಪರಿಗಣಿಸಿ ಜಾಮೀನು ನೀಡಬೇಕು ಎಂಬ ಮಲಿಕ್ ಅವರ ವಾದಕ್ಕೆ ಎಎಸ್‌ಜಿ ಪ್ರತಿಕ್ರಿಯಿಸಿದರು.

"ಒತ್ತಡವಿದೆ ಎಂಬ ಸಾಮಾನ್ಯ ವಾದ ಮಂಡಿಸಿ ನನಗೆ ಜಾಮೀನು ನೀಡಿ ಎನ್ನುವುದಕ್ಕೆ, ಅದು (ಒತ್ತಡ) ಆಧಾರವಾಗಬಾರದು. ಪ್ರತಿಯೊಬ್ಬರಿಗೂ ಒತ್ತಡ ಇರುತ್ತದೆ. ತಮ್ಮ ಜೀವನದಲ್ಲಿ ಒತ್ತಡವಿಲ್ಲದೆ ಬದುಕುವವರು ಯಾರಿದ್ದಾರೆ" ಎಂದು ಎಎಸ್‌ಜಿ ಅವರು ನ್ಯಾ. ಅನುಜಾ ಪ್ರಭುದೇಸಾಯಿ ಅವರಿದ್ದ ಪೀಠದೆದುರು ಪ್ರಶ್ನಿಸಿದರು.

ಅರ್ಹತೆ ಹಾಗೂ ವೈದ್ಯಕೀಯ ಹೀಗೆ ಎರಡೂ ಆಧಾರದಲ್ಲಿ ಜಾಮೀನು ಕೋರಿ ಮಲಿಕ್‌ ಪ್ರತ್ಯೇಕ ಅರ್ಜಿ ಸಲ್ಲಿಸಿದ್ದರು. ನ್ಯಾಯಾಲಯ ಇಂದು ವೈದ್ಯಕೀಯ ಆಧಾರದಲ್ಲಿ ಕೋರಿದ್ದ ಅರ್ಜಿಯನ್ನು ಆ ಸೀಮಿತ ಮನವಿಗೆ ಸಂಬಂಧಿಸಿದಂತೆ ಆಲಿಸಿ ಕಾಯ್ದಿರಿಸಿತು. ಮುಂದಿನ ವಾರ ಈ ಅರ್ಜಿಯ ತೀರ್ಪು ನೀಡುವುದಾಗಿ ನ್ಯಾಯಮೂರ್ತಿಗಳು ತಿಳಿಸಿದರು.

ಮಾರುಕಟ್ಟೆ ಮೌಲ್ಯಕ್ಕಿಂತ ಕಡಿಮೆ ದರದಲ್ಲಿ ಆಸ್ತಿ ಖರೀದಿಸಿದ ಆರೋಪದ ಮೇಲೆ ಮಲಿಕ್‌ ಅವರನ್ನು ಇ ಡಿ ಬಂಧಿಸಿತ್ತು. ಮೇ 2022ರಲ್ಲಿ ಪಿಎಂಎಲ್‌ಎ ವಿಶೇಷ ನ್ಯಾಯಾಲಯ ಆರೋಪಪಟ್ಟಿಯನ್ನು ಸ್ವೀಕರಿಸಿದ ನಂತರ, ಮಲಿಕ್ ಸಾಮಾನ್ಯ ಜಾಮೀನಿಗೆ ಅರ್ಜಿ ಸಲ್ಲಿಸಿದ್ದರು. ನವೆಂಬರ್ 30, 2022ರಂದು ಮುಂಬೈ ವಿಶೇಷ ನ್ಯಾಯಾಲಯ ಜಾಮೀನು ಅರ್ಜಿ ತಿರಸ್ಕರಿಸಿದ ನಂತರ ಮಲಿಕ್ ಹೈಕೋರ್ಟ್ ಮೆಟ್ಟಿಲೇರಿದ್ದರು.