Enforcement Directorate 
ಸುದ್ದಿಗಳು

ವಕೀಲರಿಗೆ ಸಮನ್ಸ್ ನೀಡುವ ಮುನ್ನ ನಿರ್ದೇಶಕರ ಅನುಮತಿ ಪಡೆಯುವಂತೆ ಅಧಿಕಾರಿಗಳಿಗೆ ಇ ಡಿ ಸುತ್ತೋಲೆ

ತನಿಖಾ ಸಂಸ್ಥೆ ಇತ್ತೀಚೆಗೆ ಹಿರಿಯ ವಕೀಲರಾದ ಅರವಿಂದ್ ದಾತಾರ್ ಮತ್ತು ಪ್ರತಾಪ್ ವೇಣುಗೋಪಾಲ್ ಅವರಿಗೆ ಸಮನ್ಸ್ ಜಾರಿ ಮಾಡಿತ್ತು.

Bar & Bench

ಇಬ್ಬರು ಹಿರಿಯ ನ್ಯಾಯವಾದಿಗಳಿಗೆ ಜಾರಿ ನಿರ್ದೇಶನಾಲಯ (ಇ ಡಿ) ಸಮನ್ಸ್‌ ಜಾರಿ ಮಾಡಿದ ಬಗ್ಗೆ ವ್ಯಾಪಕ ಆಕ್ರೋಶ ವ್ಯಕ್ತವಾದ ಬೆನ್ನಲ್ಲೇ ಭಾರತೀಯ ಸಾಕ್ಷ್ಯ ಅಧಿನಿಯಮ- 2023ರ ಸೆಕ್ಷನ್ 132ನ್ನು ಉಲ್ಲಂಘಿಸಿ ಸಮನ್ಸ್‌ ಜಾರಿ ಮಾಡದಂತೆ ಕೇಂದ್ರ ತನಿಖಾ ಸಂಸ್ಥೆ ತನ್ನ ಅಧಿಕಾರಿಗಳಿಗೆ ಸುತ್ತೋಲೆ ಹೊರಡಿಸಿದೆ.

ವಕೀಲ- ದಾವೆದಾರರ ಸವಲತ್ತುಗಳನ್ನು ರಕ್ಷಿಸುವ ಈ ಸೆಕ್ಷನ್‌ ವಕೀಲರು ಸೇವೆ ಸಲ್ಲಿಸುವ ಸಮಯದಲ್ಲಿ ಕಕ್ಷಿದಾರರೊಂದಿಗೆ ನಡೆಸಿದ ಯಾವುದೇ ಸಂವಹನವನ್ನು ಬಹಿರಂಗಪಡಿಸಬೇಕಿಲ್ಲ ಎಂಬ ವಿನಾಯಿತಿ ಒದಗಿಸುತ್ತದೆ.

ವಕೀಲರಿಗೆ ಸಮನ್ಸ್‌ ನೀಡಬೇಕು ಎನ್ನುವುದಾದರೆ ನಿರ್ದೇಶಕರ ಅನುಮತಿ ಪಡೆದೇ ಜಾರಿ ಮಾಡಬೇಕು ಎಂದು ಇ ಡಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.

[ಸುತ್ತೋಲೆಯ ಪ್ರತಿ]

ED_circular.pdf
Preview

ರಿಲಿಗೇರ್ ಎಂಟರ್‌ಪ್ರೈಸಸ್‌ನ ಮಾಜಿ ಅಧ್ಯಕ್ಷೆ ರಶ್ಮಿ ಸಳುಜಾ ಅವರಿಗೆ ಕೇರ್ ಹೆಲ್ತ್ ಇನ್ಶುರೆನ್ಸ್ ಲಿಮಿಟೆಡ್‌ (ಸಿಎಚ್‌ಐಎಲ್‌) ನೀಡಿದ್ದ ನೌಕರರ ಷೇರು ಆಯ್ಕೆ ಯೋಜನೆ (ಇಎಸ್ಒಪಿ) ಕುರಿತಂತೆ ಕಾನೂನು ಅಭಿಪ್ರಾಯ ನೀಡಿದ್ದಕ್ಕೆ ಸಂಬಂಧಿಸಿದಂತೆ ಇ ಡಿ ಕೆಲ ದಿನಗಳ ಹಿಂದೆ ಹಿರಿಯ ವಕೀಲರಾದ ಅರವಿಂದ್ ದಾತಾರ್ ಮತ್ತು ಪ್ರತಾಪ್ ವೇಣುಗೋಪಾಲ್ ಅವರಿಗೆ ಸಮನ್ಸ್ ಜಾರಿ ಮಾಡಿತ್ತು

ಸಮನ್ಸ್‌ ನೀಡಿದ್ದಕ್ಕೆ ದೇಶಾದ್ಯಂತ ಬಲವಾದ ವಿರೋಧ ವ್ಯಕ್ತವಾಗುತ್ತಿದ್ದಂತೆ ಇ ಡಿ ಅದನ್ನು ಹಿಂಪಡೆದಿತ್ತು. ಸರ್ವೋಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿ ಬಿ ಆರ್ ಗವಾಯಿ ಅವರಿಗೆ ಪತ್ರ ಬರೆದಿರುವ ಸುಪ್ರೀಂ ಕೋರ್ಟ್ ವಕೀಲರ ಸಂಘ ಮತ್ತು ಸುಪ್ರೀಂ ಕೋರ್ಟ್ ಅಡ್ವೊಕೇಟ್ಸ್-ಆನ್-ರೆಕಾರ್ಡ್ ಸಂಘ ಘಟನೆಯನ್ನು ಖಂಡಿಸಿವೆ. ಅಲ್ಲದೆ ವಿವಿಧ ವಕೀಲರು, ಇ ಡಿ ಭವಿಷ್ಯದಲ್ಲಿ ನ್ಯಾಯಾಧೀಶರಿಗೂ ನೋಟಿಸ್‌ ನೀಡಿದರೆ ಅಚ್ಚರಿ ಇಲ್ಲ ಎಂದು ಖಂಡಿಸಿದ್ದರು.

ಸಿಎಚ್‌ಐಎಲ್‌ನ ಸ್ವತಂತ್ರ ನಿರ್ದೇಶಕರಾಗಿರುವುದರಿಂದ ವೇಣುಗೋಪಾಲ್ ಅವರಿಗೆ ನೀಡಲಾಗಿದ್ದ ಸಮನ್ಸ್‌ ಹಿಂಪಡೆಯಲಾಗಿದ್ದು ಈ ವಿಚಾರ ಅವರಿಗೆ ತಿಳಿಸಲಾಗಿದೆ ಎಂದು ಶುಕ್ರವಾರ ಸಂಜೆ ಬಿಡುಗಡೆ ಮಾಡಿರುವ ಪತ್ರಿಕಾ ಪ್ರಕಟಣೆಯಲ್ಲಿ ಸ್ಪಷ್ಟಪಡಿಸಿರುವ ಇ ಡಿ, ಸಿಎಚ್‌ಐಎಲ್‌ ನಿರ್ದೇಶಕರೂ ಆಗಿರುವ ಅವರಿಂದ ಯಾವುದೇ ದಾಖಲೆ ಅಗತ್ಯವಿದ್ದರೆ ಅದನ್ನು ಇಮೇಲ್‌ ಮೂಲಕ ಸಲ್ಲಿಸುವಂತೆ ಮನವಿ ಮಾಡಲಾಗುವುದು ಎಂದಿದೆ.

 [ಪತ್ರಿಕಾ ಪ್ರಕಟಣೆಯ ಪ್ರತಿ]

Press_Release_Summons_to_Legal_Practitioners.pdf
Preview