Supreme Court and ED 
ಸುದ್ದಿಗಳು

ಇ ಡಿ ಸಂವಿಧಾನ ಉಲ್ಲಂಘಿಸಿದೆ, ಹದ್ದು ಮೀರಿದೆ ಎಂದ ಸುಪ್ರೀಂ: ತಮಿಳುನಾಡು ನಿಗಮ ಪ್ರಕರಣದ ತನಿಖೆಗೆ ತಡೆ

ರೂ 1,000 ಕೋಟಿ ಮೌಲ್ಯದ ಹಗರಣದಲ್ಲಿ ಜಾರಿ ನಿರ್ದೇಶನಾಲಯದ ತನಿಖೆ ಮುಂದುವರಿಸಲು ಮದ್ರಾಸ್ ಹೈಕೋರ್ಟ್ ಅನುಮತಿ ನೀಡಿದ್ದನ್ನು ಪ್ರಶ್ನಿಸಿ ತಮಿಳುನಾಡು ಸರ್ಕಾರ ಸುಪ್ರೀಂ ಮೆಟ್ಟಿಲೇರಿತ್ತು.

Bar & Bench

ಮಹತ್ವದ ಬೆಳವಣಿಗೆಯೊಂದರಲ್ಲಿ, ತಮಿಳುನಾಡು ರಾಜ್ಯ ಮಾರುಕಟ್ಟೆ ನಿಗಮದ (ಟಿಎಎಸ್ಎಂಎಸಿ) ಪ್ರಧಾನ ಕಚೇರಿಯ ಮೇಲೆ ಜಾರಿ ನಿರ್ದೇಶನಾಲಯ ನಡೆಸಿದ ದಾಳಿಗೆ ಸುಪ್ರೀಂ ಕೋರ್ಟ್ ಗುರುವಾರ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದು ಹಣ ವರ್ಗಾವಣೆ ಪ್ರಕರಣದಲ್ಲಿ ಅದು ಆರಂಭಿಸಿದ್ದ ತನಿಖೆಗೆ ತಡೆ ನೀಡಿದೆ.

ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಬಿ ಆರ್ ಗವಾಯಿ ಮತ್ತು ನ್ಯಾಯಮೂರ್ತಿ ಆಗಸ್ಟೀನ್ ಜಾರ್ಜ್ ಮಸೀಹ್ ಅವರಿದ್ದ ಪೀಠ, ಜಾರಿ ನಿರ್ದೇಶನಾಲಯ ಎಲ್ಲಾ ಮಿತಿ ಮೀರುತ್ತಿದ್ದು ಸರ್ಕಾರಿ ಸಂಸ್ಥೆ ಹಾಗೂ ವಿರುದ್ಧವೇ ಕ್ರಮ ಕೈಗೊಳ್ಳುವ ಮೂಲಕ ಸಂವಿಧಾನ, ಒಕ್ಕೂಟ ಸಂರಚನೆಯನ್ನು ಉಲ್ಲಂಘಿಸುತ್ತಿದೆ ಎಂದು ಹೇಳಿದೆ.

ನಿಗಮದಲ್ಲಿ ನಡೆದಿದೆ ಎನ್ನಲಾದ 1,000 ಕೋಟಿ ರೂ ಹಗರಣದಲ್ಲಿ ಇ ಡಿ ತನಿಖೆ ಮುಂದುವರೆಸಲು ಅನುಮತಿ ನೀಡಿದ್ದ ಮದ್ರಾಸ್ ಹೈಕೋರ್ಟ್ ಆದೇಶದ ವಿರುದ್ಧ ತಮಿಳುನಾಡು ಸರ್ಕಾರ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ಇ ಡಿಗೆ ನೋಟಿಸ್ ಜಾರಿ ಮಾಡಿದೆ.

"ನಿಗಮದ ವಿರುದ್ಧ ಅಪರಾಧವನ್ನು ಆರೋಪಿಸುವುದು ಹೇಗೆ ಸಾಧ್ಯ? ಇದನ್ನು ವ್ಯಕ್ತಿಗಳ ವಿರುದ್ಧ ಹೂಡಬಹುದು. ನಿಗಮದ ವಿರುದ್ಧ ಕ್ರಿಮಿನಲ್ ಪ್ರಕರಣ ಹೂಡಲು ಸಾಧ್ಯವೇ? ಜಾರಿ ನಿರ್ದೇಶನಾಲಯ ಎಲ್ಲಾ ಮಿತಿಗಳನ್ನು ಮೀರುತ್ತಿದೆ" ಎಂದು ಸಿಜೆಐ ಗವಾಯಿ ಟೀಕಿಸಿದರು.

ಇ ಡಿ ತನಿಖೆಗೆ ಕಾರಣವಾದ ಮೂಲ ಅಪರಾಧ ಯಾವುದು ಎಂದು ವಿವರಿಸಲು ಜಾರಿ ನಿರ್ದೇಶನಾಲಯವನ್ನು ಕೇಳಿದ ಪೀಠ ವಿಚಾರಣೆಗೆ ತಡೆಯಾಜ್ಞೆ ನೀಡಿತು.

"ಪ್ರಕರಣದ ತನಿಖಾ ಪ್ರಕ್ರಿಯೆಗೆ ತಡೆ ನೀಡಲಾಗಿದೆ. ಅಧಿಕಾರಿಗಳ ವಿರುದ್ಧ ಎಫ್‌ಐಆರ್‌ಗಳು ಇರುವಾಗ ಇ ಡಿ ಇಲ್ಲಿಗೇಕೆ ಬಂದಿದೆ? ಇಲ್ಲಿ ಮೂಲ ಅಪರಾಧ (ಅಕ್ರಮ ಹಣಗಳಿಕೆಗೆ ಕಾರಣವಾದ ಮೂಲ ಅಪರಾಧ) ಎಲ್ಲಿದೆ? ನೀವು (ಇ ಡಿ) ಅಫಿಡವಿಟ್‌ ಸಲ್ಲಿಸಿ" ಎಂದು ನ್ಯಾಯಾಲಯ ಕಿಡಿಕಾರಿತು.

ಜಾರಿ ನಿರ್ದೇಶನಾಲಯದ ಪರವಾಗಿ ಹಾಜರಾದ ಹೆಚ್ಚುವರಿ ಸಾಲಿಸಿಟರ್ ಜನರಲ್ ಎಸ್ ವಿ ರಾಜು, ಪ್ರತಿಕ್ರಿಯೆ ಸಲ್ಲಿಸುವುದಾಗಿ ಹೇಳಿದರು.

ಇ ಡಿ ಸಂವಿಧಾನದಲ್ಲಿನ ಒಕ್ಕೂಟ ಸಂರಚನೆಯನ್ನು ಉಲ್ಲಂಘಿಸುತ್ತಿದೆ, ಎಲ್ಲಾ ಮಿತಿ ಮೀರುತ್ತಿದೆ.
ಸುಪ್ರೀಂ ಕೋರ್ಟ್

ನಿಗಮದ ಅಧಿಕಾರಿಗಳು ಮದ್ಯದ ಬಾಟಲಿಗಳ ಬೆಲೆ ಏರಿಕೆ, ಟೆಂಡರ್ ತಿರುಚುವಿಕೆ ಮತ್ತು ಲಂಚ ಸ್ವೀಕಾರದಲ್ಲಿ ತೊಡಗಿದ್ದಾರೆ ಇದರಿಂದ 1000 ಕೋಟಿ ರೂಪಾಯಿ ನಷ್ಟವಾಗಿದೆ ಎಂಬ ಆರೋಪದ ಮೇಲೆ ಮಾರ್ಚ್ 6ರಿಂದ ಮಾರ್ಚ್ 8ರವರೆಗೆ ನಿಗಮದ ಪ್ರಧಾನ ಕಚೇರಿಯಲ್ಲಿ ಜಾರಿ ನಿರ್ದೇಶನಾಲಯ ನಡೆಸಿದ ದಾಳಿಯನ್ನು ಪ್ರಶ್ನಿಸಿರು ಪ್ರಕರಣ ಇದಾಗಿದೆ.