ಇ ಡಿ ವರ್ಸಸ್ ಮಾರುಕಟ್ಟೆ ನಿಗಮ ಪ್ರಕರಣ: ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿದ್ದ ವರ್ಗಾವಣೆ ಅರ್ಜಿ ಹಿಂಪಡೆದ ತಮಿಳುನಾಡು

ನ್ಯಾಯಿಕ ಸ್ಥಿರತೆಗಾಗಿ ಮತ್ತು ವ್ಯತಿರಿಕ್ತ ತೀರ್ಪುಗಳನ್ನು ತಪ್ಪಿಸುವುದಕ್ಕಾಗಿ ಪ್ರಕರಣವನ್ನು ಸುಪ್ರೀಂ ಕೋರ್ಟ್ ವಿಚಾರಣೆ ನಡೆಸಬೇಕೆಂದು ಸರ್ಕಾರ ಈ ಹಿಂದೆ ಕೋರಿತ್ತು.
ED, Tamil Nadu map and Supreme court.
ED, Tamil Nadu map and Supreme court.
Published on

ತಮಿಳುನಾಡು ರಾಜ್ಯ ಮಾರುಕಟ್ಟೆ ನಿಗಮದ (ಟಿಎಎಸ್‌ಎಂಎಸಿ) ಕಚೇರಿಯ ಮೇಲೆ ಜಾರಿ ನಿರ್ದೇಶನಾಲಯ ನಡೆಸಿದ್ದ ದಾಳಿಗೆ ಸಂಬಂಧಿಸಿದ ಪ್ರಕರಣದ ವಿಚಾರಣೆಯನ್ನು ಮದ್ರಾಸ್‌ ಹೈಕೋರ್ಟ್‌ನಿಂದ ಸುಪ್ರೀಂ ಕೋರ್ಟ್‌ಗೆ ವರ್ಗಾಯಿಸಬೇಕೆಂದು ಕೋರಿ ಸುಪ್ರೀಂ ಕೋರ್ಟ್‌ನಲ್ಲಿ ಸಲ್ಲಿಸಿದ್ದ ವರ್ಗಾವಣೆ ಅರ್ಜಿಯನ್ನು ತಮಿಳುನಾಡು ಸರ್ಕಾರ ಮಂಗಳವಾರ ಹಿಂಪಡೆದಿದೆ.

ಎಲೆಕ್ಟ್ರಾನಿಕ್‌ ಗ್ಯಾಜೆಟ್‌ಗಳ ಶೋಧ ಮತ್ತು ಮುಟ್ಟುಗೋಲಿಗೆ ಸಂಬಂಧಿಸಿದಂತೆ ಅರ್ಜಿ ಪ್ರಸ್ತಾಪಿಸಿರುವ ವಿಚಾರಗಳನ್ನು ಮದ್ರಾಸ್‌ ಹೈಕೋರ್ಟ್‌ ವಿಚಾರಣೆ ನಡೆಸಬಹುದು ಎಂದು ಸಿಜೆಐ ಸಂಜೀವ್ ಖನ್ನಾ ಮತ್ತು ನ್ಯಾಯಮೂರ್ತಿ ಪಿವಿ ಸಂಜಯ್ ಕುಮಾರ್ ಅವರಿದ್ದ ಪೀಠ ತಿಳಿಸಿತು. ಈ ಹಿನ್ನೆಲೆಯಲ್ಲಿ ತಮಿಳುನಾಡು ಸರ್ಕಾರದ ಪರವಾಗಿ ಹಾಜರಿದ್ದ ಹಿರಿಯ ವಕೀಲ ಮುಕುಲ್ ರೋಹಟಗಿ ಅರ್ಜಿ ಹಿಂಪಡೆಯಲು ನಿರ್ಧರಿಸಿದರು.

Also Read
ಮದ್ರಾಸ್ ಹೈಕೋರ್ಟ್‌ನಿಂದ ತಮಿಳುನಾಡು ಮಾರುಕಟ್ಟೆ ನಿಗಮ ಪ್ರಕರಣ ವರ್ಗಾವಣೆ ಕೋರಿ ಸುಪ್ರೀಂ ಮೆಟ್ಟಿಲೇರಿದ ರಾಜ್ಯ ಸರ್ಕಾರ

“ಶೋಧ ಮತ್ತು ಮುಟ್ಟುಗೋಲಿಗೆ ಸಂಬಂಧಿಸಿದ ವಿಷಯವನ್ನು 1956ರ ತೀರ್ಪು ಇತ್ಯರ್ಥಪಡಿಸಿದೆ. ಅದು ಮದ್ರಾಸ್‌ ಹೈಕೋರ್ಟ್‌ನಲ್ಲಿಯೇ ನಿರ್ಧಾರವಾಗಲಿ. ನಂತರ ತಮಿಳುನಾಡು ಸರ್ಕಾರ ಸುಪ್ರೀಂ ಕೋರ್ಟ್‌ಗೆ ಬರಬಹುದು. ಪತ್ರಕರ್ತರ ಎಲೆಕ್ಟ್ರಾನಿಕ್‌ ಗ್ಯಾಜೆಟ್‌ ಮುಟ್ಟುಗೋಲು ವಿಚಾರ ಭಿನ್ನವಾದದ್ದು. ಅಲ್ಲಿ ಗೌಪ್ಯತೆಯ ಮಿತಿ ಹೆಚ್ಚು. ಮದ್ರಾಸ್‌ ಹೈಕೋರ್ಟ್‌ ಈ ವಿಚಾರ ಕುರಿತು ವಿಚಾರಣೆ ನಡೆಸಲಿ” ಎಂದು ನ್ಯಾಯಾಲಯ ಹೇಳಿತು.

Also Read
ತಮಿಳುನಾಡು ಮಾರುಕಟ್ಟೆ ನಿಗಮ ಪ್ರಕರಣ: ಇ ಡಿ ನಡೆ ಟೀಕಿಸಿದ್ದ ಮದ್ರಾಸ್ ಹೈಕೋರ್ಟ್ ಪೀಠ ವಿಚಾರಣೆಯಿಂದ ಹಿಂದಕ್ಕೆ

ಇ ಡಿ ಪರವಾಗಿ ಹಾಜರಾದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ತಮಿಳುನಾಡು ಮನವಿಯು ಫೋರಂ ಶಾಪಿಂಗ್ (ತಮಗೆ ಅನುಕೂಲಕರ ತೀರ್ಪು ಪಡೆಯುವುದಕ್ಕಾಗಿ ನಿರ್ದಿಷ್ಟ ನ್ಯಾಯಮೂರ್ತಿಗಳ ಮುಂದೆ ಪ್ರಕರಣವನ್ನು ಪಟ್ಟಿ ಮಾಡುವುದು) ಆಗಿದೆ ಎಂದು ಹೇಳಿದರು.

ರೋಹಟ್ಗಿ ಅವರು ಅರ್ಜಿಯನ್ನು ಹಿಂಪಡೆಯುತ್ತಿರುವುದಾಗಿ ತಿಳಿಸಿದರು. ಅದಕ್ಕೆ ನ್ಯಾಯಾಲಯ ಸಮ್ಮತಿ ಸೂಚಿಸಿತು. 

Kannada Bar & Bench
kannada.barandbench.com