BBMP
BBMP 
ಸುದ್ದಿಗಳು

ಈಜಿಪುರ-ಕೇಂದ್ರಿಯ ಸದನ ಮೇಲ್ಸೇತುವೆ: ಸಿಂಪ್ಲೆಕ್ಸ್‌ ಜೊತೆ ಸಭೆ ನಡೆಸಲು ಬಿಬಿಎಂಪಿಗೆ ಹೈಕೋರ್ಟ್‌ ನಿರ್ದೇಶನ

Bar & Bench

ಬೆಂಗಳೂರಿನ ಈಜಿಪುರ ಮತ್ತು ಕೋರಮಂಗಲದ ಕೇಂದ್ರೀಯ ಸದನ ನಡುವಿನ ಮೇಲ್ಸೇತುವೆ ನಿರ್ಮಾಣ ಕಾಮಗಾರಿಯನ್ನು ತುರ್ತಾಗಿ ಆರಂಭಿಸುವುದಕ್ಕೆ ಸಂಬಂಧಿಸಿದಂತೆ ಬಾಕಿ ಇರುವ ವಿಚಾರಗಳು ಹಾಗೂ ಅವುಗಳ ಕುರಿತು ಕೈಗೊಳ್ಳಬೇಕಾದ ಕ್ರಮದ ಭಾಗವಾಗಿ ಸಿಂಪ್ಲೆಕ್ಸ್‌ ಇನ್‌ಫ್ರಾಸ್ಟ್ರಕ್ಚರ್‌ ಲಿಮಿಟೆಡ್‌ ಜೊತೆ ಮಾತುಕತೆ ನಡೆಸಿ, ಸಭೆಯ ವರದಿಯನ್ನು ಸಲ್ಲಿಸುವಂತೆ ಕರ್ನಾಟಕ ಹೈಕೋರ್ಟ್‌ ಸೋಮವಾರ ಬಿಬಿಎಂಪಿಯ ಮುಖ್ಯ ಆಯುಕ್ತರಿಗೆ ಆದೇಶಿಸಿದೆ.

ಮೇಲ್ಸೇತುವೆ ಕಾಮಗಾರಿ ವಿಳಂಬ ಪ್ರಶ್ನಿಸಿ ಕೋರಮಂಗಲದ ಆದಿನಾರಾಯಣ ಶೆಟ್ಟಿ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ ಮತ್ತು ನ್ಯಾಯಮೂರ್ತಿ ಎಸ್ ಆರ್ ಕೃಷ್ಣಕುಮಾರ್ ಅವರಿದ್ದ ವಿಭಾಗೀಯ ಪೀಠ ವಿಚಾರಣೆ ನಡೆಸಿತು.

ಸಿಂಪ್ಲೆಕ್ಸ್‌ ಇನ್‌ಫ್ರಾಸ್ಟ್ರಕ್ಚರ್‌ ಪ್ರತಿನಿಧಿಸಿದ್ದ ಹಿರಿಯ ವಕೀಲ ಆದಿತ್ಯ ಸೋಂಧಿ ಅವರು “ಇನ್ನೂ ಹಲವು ಸಮಸ್ಯೆಗಳನ್ನು ಬಿಬಿಎಂಪಿ ಬಗೆಹರಿಸಬೇಕಿದೆ. ಈ ಸಂಬಂಧ ನಿರ್ದೇಶನ ನೀಡಬೇಕು” ಎಂದು ಪೀಠವನ್ನು ಕೋರಿದರು.

ಆಗ ಪೀಠವು “ಬಿಬಿಎಂಪಿ ಪ್ರತಿನಿಧಿಸಿರುವ ಹಿರಿಯ ವಕೀಲ ಉದಯ್‌ ಹೊಳ್ಳ ಅವರು ಹಾಜರಾಗಿಲ್ಲ. ಮೇಲ್ಸೇತುವೆ ನಿರ್ಮಾಣ ಕಾಮಗಾರಿಗೆ ಸಂಬಂಧಿಸಿದಂತೆ ಬಿಬಿಎಂಪಿಯ ಮುಖ್ಯ ಆಯುಕ್ತರು ಮತ್ತೊಮ್ಮೆ ಸಿಂಪ್ಲೆಕ್ಸ್‌ ಜೊತೆ ಮಾತುಕತ ನಡೆಸಬೇಕು. ಸಭೆಯ ಫಲಿತಾಂಶವನ್ನು ಅಧಿಕೃತವಾಗಿ ನ್ಯಾಯಾಲಯಕ್ಕೆ ಸಲ್ಲಿಸಬೇಕು” ಎಂದು ಆದೇಶ ಮಾಡಿ ವಿಚಾರಣೆ ಮುಂದೂಡಿತು.

ಕಳೆದ ವಿಚಾರಣೆಯಲ್ಲಿ ಬಿಬಿಎಂಪಿಯಿಂದ ಸೂಕ್ತ ಸಹಕಾರ ದೊರೆತರೆ ಕೋರಮಂಗಲದ ಕೇಂದ್ರೀಯ ಸದನ ಮತ್ತು ಈಜಿಪುರ ನಡುವಿನ ಮೇಲ್ಸೇತುವೆ ನಿರ್ಮಾಣ ಕಾಮಗಾರಿಯನ್ನು 2022ರ ಡಿಸೆಂಬರ್‌ 31ರೊಳಗೆ ಪೂರ್ಣಗೊಳಿಸುವುದಾಗಿ ಯೋಜನೆಯ ಗುತ್ತಿಗೆ ಪಡೆದಿರುವ ಸಿಂಪ್ಲೆಕ್ಸ್ ಇನ್‌ಫ್ರಾಸ್ಟ್ರಕ್ಚರ್ ಲಿಮಿಟೆಡ್ ಹೈಕೋರ್ಟ್‌ಗೆ ಅಫಿಡವಿಟ್‌ ಸಲ್ಲಿಸಿತ್ತು. ಹೀಗಾಗಿ, ಪಾಲಿಕೆ ಮುಖ್ಯ ಆಯುಕ್ತರು ಸಿಂಪ್ಲೆಕ್ಸ್‌ ಸಂಸ್ಥೆಯೊಂದಿಗೆ ಸಭೆ ನಡೆಸಿ, ಸದ್ಯ ಇರುವ ಸಮಸ್ಯೆಗಳನ್ನು ಬಗೆಹರಿಸಲು ಪ್ರಯತ್ನಿಸಬೇಕು. ಶೀಘ್ರ ಕಾಮಗಾರಿ ಆರಂಭಕ್ಕೆ ಕ್ರಮ ಕೈಗೊಳ್ಳಬೇಕು ಎಂದು ಪೀಠ ನಿರ್ದೇಶಿಸಿತ್ತು.