ದೇಶದ ಕೋವಿಡ್ ಸ್ಥಿತಿಗೆ ಕೇಂದ್ರ ಚುನಾವಣಾ ಆಯೋಗವೇ ಕಾರಣ, ಚುನಾವಣಾ ಸಮಾವೇಶಗಳ ವೇಳೆ ಕೋವಿಡ್ ಮಾರ್ಗಸೂಚಿ ಪಾಲಿಸದ ಕಾರಣಕ್ಕೆ ಆಯೋಗದ ವಿರುದ್ಧ ಕೊಲೆ ಪ್ರಕರಣ ದಾಖಲಿಸಬೇಕು ಎಂದು ಮದ್ರಾಸ್ ಹೈಕೋರ್ಟ್ ಇತ್ತೀಚೆಗೆ ವ್ಯಕ್ತಪಡಿಸಿದ್ದ ಅಭಿಪ್ರಾಯದ ವಿರುದ್ಧ ಕೇಂದ್ರ ಚುನಾವಣಾ ಆಯೋಗ ಸುಪ್ರೀಂಕೋರ್ಟ್ ಮೊರೆ ಹೋಗಿದೆ.
ನ್ಯಾಯಾಲಯದ ಅಭಿಪ್ರಾಯಗಳನ್ನು ಅದರ ಆದೇಶ ಅಥವಾ ತೀರ್ಪಿನಲ್ಲಿ ದಾಖಲಿಸಲಾಗಿದೆಯೇ ಎಂಬುದಕ್ಕೆ ಬದ್ಧವಾಗಿರುವಂತೆ ಮತ್ತು ತಮಿಳುನಾಡಿನಲ್ಲಿ ಮತ ಎಣಿಕೆ ವೇಳೆ ಕೋವಿಡ್ ಮಾರ್ಗಸೂಚಿ ಅನ್ವಯಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ನ್ಯಾಯಾಲಯದ ವಿಚಾರಣೆ ವೇಳೆ ನಡೆದ ಮೌಖಿಕ ಅವಲೋಕನಗಳನ್ನು ವರದಿ ಮಾಡದಂತೆ ಮಾಧ್ಯಮ ಸಂಸ್ಥೆಗಳಿಗೆ ನಿರ್ದೇಶನ ನೀಡಬೇಕೆಂದು ಅರ್ಜಿಯಲ್ಲಿ ಕೋರಲಾಗಿದೆ.
ಮುಕ್ತ ಸಾಂವಿಧಾನಿಕ ಸಂಸ್ಥೆಯಾಗಿರುವ ಮದ್ರಾಸ್ ಹೈಕೋರ್ಟ್ "ಯಾವುದೇ ಆಧಾರವಿಲ್ಲದೆ ಮತ್ತೊಂದು ಸ್ವತಂತ್ರ ಸಾಂವಿಧಾನಿಕ ಪ್ರಾಧಿಕಾರದ ಮೇಲೆ ಹತ್ಯೆಯ ಗಂಭೀರ ಆರೋಪಗಳನ್ನು ಮಾಡಿದೆ, ಅದು ಅಂತಿಮವಾಗಿ ಎರಡೂ ಸಂಸ್ಥೆಗಳಿಗೆ ಧಕ್ಕೆ ತಂದಿದೆ" ಎಂದು ಮನವಿಯಲ್ಲಿ ಆಕ್ಷೇಪಿಸಲಾಗಿದೆ.
ಕೇಂದ್ರ ಚುನಾವಣಾ ಆಯೋಗದ ವಿರುದ್ಧ ಹೈಕೋರ್ಟ್‌ನ ವಿಭಾಗೀಯ ಪೀಠ ನೀಡಿದ ಹೇಳಿಕೆಯಿಂದಾಗಿ, "ಅಪಾಯಕಾರಿ ಪ್ರವೃತ್ತಿ ಪ್ರಾರಂಭವಾದಂತೆ ಕಂಡುಬಂದಿದ್ದು ಆರೋಪಗಳನ್ನು ಆಧರಿಸಿ ಉಪ ಚುನಾವಣಾ ಆಯುಕ್ತರ ವಿರುದ್ಧ ಕ್ರಿಮಿನಲ್ ದೂರು ನೀಡಲಾಗಿದೆ" ಎಂದಿರುವ ಆಯೋಗ ಭಾರತದ ಚುನಾವಣಾ ಆಯೋಗದ ವಿರುದ್ಧ ಗಂಭೀರ ಆರೋಪದ ಮೌಖಿಕ ಅವಲೋಕನಗಳನ್ನು ಮಾಡಬಾರದು" ಎಂಬುದಾಗಿ ತಿಳಿಸಿದೆ.
ಕೋವಿಡ್ ಪ್ರಕರಣಗಳ ಹೆಚ್ಚಳಕ್ಕೆ ಆಯೋಗವನ್ನು ದೂಷಿಸಿ ನ್ಯಾಯಾಲಯ ನೀಡಿದ್ದ ಮೌಖಿಕ ಹೇಳಿಕೆ ಪ್ರಕಟಿಸಬಾರದು ಎಂದು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಮದ್ರಾಸ್ ಹೈಕೋರ್ಟ್ ತಿರಸ್ಕರಿಸಿದೆ ಎಂದು ಕೂಡ ಅರ್ಜಿಯಲ್ಲಿ ವಿವರಿಸಲಾಗಿದೆ.
"ಪ್ರಸ್ತುತ ಚುನಾವಣೆಗೆ ಸಂಬಂಧ ಇಲ್ಲದಿದ್ದರೂ ಹೇಳಿಕೆಯಿಂದಾಗಿ ದೇಶದ ಮೂಲೆ ಮೂಲೆಗಳಲ್ಲಿ ವರ್ಷಗಳಿಂದ ರೂಪುಗೊಂಡಿದ್ದ ಆಯೋಗದ ಪ್ರತಿಷ್ಠೆಗೆ ಧಕ್ಕೆ ಒದಗಿದ್ದು ಕೋವಿಡ್ ಬಾಧಿತರು ತಮ್ಮ ಕುಟುಂಬ/ ಪ್ರದೇಶದಲ್ಲಿ ಸೋಂಕು ಹರಡಿದ್ದರೆ ಇನ್ನಾವುದೇ ಹಾನಿಯಾಗಿದ್ದರೆ ಅದಕ್ಕೆ ಆಯೋಗವೇ ಕಾರಣವಿರಬಹುದು ಎಂದು ಯೋಚಿಸುವಂತಾಗಿದೆ" ಎಂಬುದಾಗಿ ದೂರಿನಲ್ಲಿ ತಿಳಿಸಲಾಗಿದೆ.