AAB

 
ಸುದ್ದಿಗಳು

ಬೆಂಗಳೂರು ವಕೀಲರ ಸಂಘಕ್ಕೆ ಚುನಾವಣೆ: ಮತದಾನ ಪ್ರಕ್ರಿಯೆ ಆರಂಭ

ಕೋವಿಡ್ ಶಿಷ್ಟಾಚಾರಗಳ ಪ್ರಕಾರ ಮತದಾನ ನಡೆಯುತ್ತಿದೆ. ಹೈಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ಮತದಾನದ ಅವಧಿಯನ್ನು ಒಂದು ಗಂಟೆಯಷ್ಟು ಅಧಿಕ ಕಾಲ ವಿಸ್ತರಿಸಲಾಗಿದೆ.

Bar & Bench

ಬೆಂಗಳೂರು ವಕೀಲರ ಸಂಘದ ಚುನಾವಣೆಗಾಗಿ ನಗರದ ಸಿಟಿ ಸಿವಿಲ್‌ ನ್ಯಾಯಾಲಯದ ಆವರಣದಲ್ಲಿ ಇಂದು ಬೆಳಿಗ್ಗೆ 10ರಿಂದ ಮತದಾನ ಪ್ರಕ್ರಿಯೆ ಆರಂಭವಾಗಿದ್ದು ಸಂಜೆ 5ರವರೆಗೆ ಮತದಾನ ನಡೆಯಲಿದೆ. ಬಳಿಕ ಇಂದೇ ಮತಎಣಿಕೆ ನಡೆಸಿ ಗೆಲುವು ಸಾಧಿಸಿದ ಅಭ್ಯರ್ಥಿಗಳನ್ನು ಮುಖ್ಯ ಚುನಾವಣಾಧಿಕಾರಿಗಳು ಪ್ರಕಟಿಸಲಿದ್ದಾರೆ.

ಒಟ್ಟು 16,568 ವಕೀಲ ಮತದಾರರಿಗೆ ಮತ ಚಲಾಯಿಸುವ ಹಕ್ಕು ಇದೆ. ಚುನಾವಣೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ನ್ಯಾಯಾಲಯ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಬಂದೋಬಸ್ತ್‌ ಮಾಡಲಾಗಿದೆ. ಅಲ್ಲದೆ ಮತದಾನಕ್ಕೆ ಅಡಚಣೆ ಉಂಟಾಗಬಾರದು ಎಂಬ ಕಾರಣಕ್ಕೆ ಇಂದು ಬೆಳಿಗ್ಗೆ 6 ಗಂಟೆಯಿಂದ ರಾತ್ರಿ 12ರವರೆಗೆ ನ್ಯಾಯಾಲಯದ ಮುಂಭಾಗದ ರಸ್ತೆಯಲ್ಲಿ ಸಾರ್ವಜನಿಕರ ವಾಹನಗಳ ಸಂಚಾರಕ್ಕೆ ನಿರ್ಬಂಧ ಹೇರಲಾಗಿದೆ.

ಬಿಇಎಲ್‌ ಕಂಪೆನಿ ಪೂರೈಸುತ್ತಿದ್ದ ಮತಯಂತ್ರಗಳ ಬದಲು ಈ ಬಾರಿ ರಾಜ್ಯ ಚುನಾವಣಾ ಆಯೋಗದ ಇವಿಎಂಗಳನ್ನು ಮತದಾನ ಪ್ರಕ್ರಿಯೆಗೆ ಬಳಸಿಕೊಳ್ಳಲಾಗಿದೆ. ಕೋವಿಡ್‌ ಶಿಷ್ಟಾಚಾರಗಳ ಪ್ರಕಾರ ಮತದಾನ ನಡೆಯುತ್ತಿದೆ. ಜೊತೆಗೆ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದ್ದು ಆರು ರಿಟರ್ನಿಂಗ್‌ ಅಧಿಕಾರಿಗಳನ್ನು ಹೊಂದಿದ ಚುನಾವಣಾ ಸಮಿತಿ ಮತದಾನ ಪ್ರಕ್ರಿಯೆ ನೋಡಿಕೊಳ್ಳುತ್ತಿದೆ. ಮುಖ್ಯ ಚುನಾವಣಾಧಿಕಾರಿಯಾಗಿ ಹಿರಿಯ ವಕೀಲ ಕೆ ಎನ್‌ ಫಣೀಂದ್ರ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

ಹೈಕೋರ್ಟ್‌ ಆದೇಶದ ಹಿನ್ನೆಲೆಯಲ್ಲಿ ಮತದಾನದ ಅವಧಿಯನ್ನು ಒಂದು ಗಂಟೆಯಷ್ಟು ಅಧಿಕ ಕಾಲ ವಿಸ್ತರಿಸಲಾಗಿದೆ. ಬೆಳಿಗ್ಗೆ 10ರಿಂದ ಸಂಜೆ 5ರವರೆಗೆ ಮತದಾನಕ್ಕೆ ಅವಕಾಶ ಮಾಡಿಕೊಡಲಾಗಿದ್ದು ಆ ಬಳಿಕ ಮತಎಣಿಕೆ ಕಾರ್ಯ ನಡೆಯಲಿದ್ದು ಇಂದೇ ಫಲಿತಾಂಶ ಹೊರಬೀಳುವ ಸಾಧ್ಯತೆಗಳಿವೆ.

ಹಾಲಿ ಅಧ್ಯಕ್ಷ ಎ.ಪಿ. ರಂಗನಾಥ್‌, ಮಾಜಿ ಅಧ್ಯಕ್ಷ ಎಚ್‌ ಸಿ ಶಿವರಾಮು, ವಿವೇಕ್‌ ಸುಬ್ಬಾರೆಡ್ಡಿ ಹಾಗೂ ರಾಜ್ಯ ವಕೀಲರ ಪರಿಷತ್‌ ಸದಸ್ಯ ಆರ್‌ ರಾಜಣ್ಣ ಅವರು ಸಂಘದ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದಾರೆ.

ಹಾಲಿ ಪ್ರಧಾನ ಕಾರ್ಯದರ್ಶಿ ಎ ಎನ್‌ ಗಂಗಾಧರಯ್ಯ, ಹಾಲಿ ಖಜಾಂಚಿ ಶಿವಮೂರ್ತಿ, ದುರ್ಗಾ ಪ್ರಸಾದ್‌ ಎಚ್‌ ಆರ್‌, ಪ್ರವೀಣ್‌ ಗೌಡ ಎಚ್‌ ವಿ, ರಾಮಲಿಂಗ ಪಿ, ರವಿ ಟಿ ಜಿ, ಶ್ರೀನಿವಾಸ ಮೂರ್ತಿ ಡಿ ಹಾಗೂ ವಿಶ್ವನಾಥ್‌ ಕೆ ಪಿ ಸೇರಿದಂತೆ 8 ಮಂದಿ ಪ್ರಧಾನ ಕಾರ್ಯದರ್ಶಿ ಹುದ್ದೆಗೆ ಪೈಪೋಟಿ ನಡೆಸಿದ್ದಾರೆ.

ಖಜಾಂಚಿ ಹುದ್ದೆಗೆ ಭದ್ರಾವತಿ ಸತೀಶ, ಚಂದ್ರಶೇಖರ್‌ ಎಂ ಎಚ್‌, ಗಿರೀಶ್‌ ಕುಮಾರ್‌ ಸಿ ಎಸ್‌, ಹರೀಶ ಎಂ ಟಿ, ಕುಮಾರ್‌ ಗೌಡ ಎಚ್‌ ಎನ್‌ ಸಿ, ಮಂಜುನಾಥ್‌ ಬಿ ಗೌಡ, ರಾಜಶೇಖರ್‌, ರಮೇಶ್‌ ಆರ್‌, ಸಂತೋಷ್‌ ಟಿ ಸಿ ಹಾಗೂ ವೇದಮೂರ್ತಿ ಎ ಸೇರಿದಂತೆ 10 ಮಂದಿ ಸ್ಪರ್ಧಿಸಿದ್ದಾರೆ.

ಹೈಕೋರ್ಟ್‌, ಸಿಟಿ ಸಿವಿಲ್‌ ಕೋರ್ಟ್‌, ಮೆಯೊ ಹಾಲ್‌ ಕೋರ್ಟ್‌ ಮತ್ತು ಮ್ಯಾಜಿಸ್ಟ್ರೇಟ್‌ ಕೋರ್ಟ್‌ ಈ ನಾಲ್ಕು ಘಟಕಗಳಲ್ಲಿ ಸದಸ್ಯತ್ವ ಪಡೆದಿರುವ ವಕೀಲರು ನಿರ್ದಿಷ್ಟ ಘಟಕದ ಸದಸ್ಯರನ್ನು ಆಯ್ಕೆ ಮಾಡಲಿದ್ದಾರೆ. ಅಧ್ಯಕ್ಷ, ಪ್ರಧಾನ ಕಾರ್ಯದರ್ಶಿ ಮತ್ತು ಖಜಾಂಚಿ ಸ್ಥಾನದ ಆಕಾಂಕ್ಷಿಗಳಿಗೆ ಎಲ್ಲಾ ಘಟಕದ ಸದಸ್ಯರು ಮತದಾನ ಮಾಡಲಿದ್ದಾರೆ.