ಚುರುಕುಗೊಂಡ ಬೆಂಗಳೂರು ವಕೀಲರ ಸಂಘದ ಚುನಾವಣಾ ಪ್ರಚಾರ; 32 ಸ್ಥಾನಗಳಿಗೆ 134 ಆಕಾಂಕ್ಷಿಗಳು

ಅಧ್ಯಕ್ಷ ಸ್ಥಾನಕ್ಕೆ ನಾಲ್ವರು ಸ್ಪರ್ಧೆಯಲ್ಲಿದ್ದು, ಪ್ರಧಾನ ಕಾರ್ಯದರ್ಶಿ ಹುದ್ದೆಗೆ 8 ಮಂದಿ ಹಾಗೂ ಖಜಾಂಚಿ ಸ್ಥಾನಕ್ಕೆ 10 ಮಂದಿ ಸ್ಪರ್ಧಿಸಿದ್ದಾರೆ. ಸದಸ್ಯ ಸ್ಥಾನಗಳಿಗಾಗಿ 112 ಆಕಾಂಕ್ಷಿಗಳು ಕಣದಲ್ಲಿದ್ದಾರೆ.
Election to AAB
Election to AAB

ಪ್ರತಿಷ್ಠಿತ ಬೆಂಗಳೂರು ವಕೀಲರ ಸಂಘದ (ಎಎಬಿ) 2021-24ನೇ ಸಾಲಿನ ನೂತನ ಆಡಳಿತ ಮಂಡಳಿ ಆಯ್ಕೆಗೆ ಇದೇ ಡಿಸೆಂಬರ್‌ 19ರಂದು ಕರ್ನಾಟಕ ಹೈಕೋರ್ಟ್‌ ನಿರ್ದೇಶನದ ಹಿನ್ನೆಲೆಯಲ್ಲಿ ಚುನಾವಣೆ ನಡೆಯಲಿದ್ದು, ದಿನೇದಿನೇ ಪ್ರಚಾರ ತುರುಸುಗೊಳ್ಳುತ್ತಿದೆ.

ಬೆಂಗಳೂರಿನ ಸಿಟಿ ಸಿವಿಲ್‌ ನ್ಯಾಯಾಲಯದಲ್ಲಿ ಬೆಳಿಗ್ಗೆ 10 ರಿಂದ 4 ಗಂಟೆಯವರೆಗೆ ಮತದಾನ ನಡೆಯಲಿದ್ದು, ಐದು ಗಂಟೆಗೆ ಮತ ಎಣಿಕೆ ಆರಂಭವಾಗಲಿದೆ. ಹಿಂದೆಲ್ಲಾ ಮತದಾನಕ್ಕೆ ಬಿಇಎಲ್‌ ಸಂಸ್ಥೆಯು ವಿದ್ಯುನ್ಮಾನ ಮತಯಂತ್ರಗಳನ್ನು ನೀಡುತ್ತಿತ್ತು. ಈ ಬಾರಿ ರಾಜ್ಯ ಚುನಾವಣಾ ಆಯೋಗವು ಇವಿಎಂಗಳನ್ನು ಪೂರೈಸುತ್ತಿದೆ. ಸ್ಮಾರ್ಟ್‌ ಕಾರ್ಡ್‌ ಹೊಂದಿರುವ ವಕೀಲರು ಕೋವಿಡ್‌ ಶಿಷ್ಟಾಚಾರಗಳ ಅನ್ವಯ ಮತದಾನ ಮಾಡಲು ಅವಕಾಶ ಮಾಡಿಕೊಡಲಾಗಿದೆ.

ಅಧ್ಯಕ್ಷ, ಪ್ರಧಾನ ಕಾರ್ಯದರ್ಶಿ, ಖಜಾಂಚಿ ಮತ್ತು ನಾಲ್ಕು ವಿಭಾಗಗಳ ಸದಸ್ಯತ್ವ ಸೇರಿದಂತೆ ಒಟ್ಟು 32 ಸ್ಥಾನಗಳಿಗೆ ಚುನಾವಣೆ ನಡೆಯಲಿದೆ. ಅಧ್ಯಕ್ಷ ಸ್ಥಾನಕ್ಕೆ 4, ಪ್ರಧಾನ ಕಾರ್ಯದರ್ಶಿ ಹುದ್ದೆಗೆ 8 ಮಂದಿ ಹಾಗೂ ಖಜಾಂಚಿ ಸ್ಥಾನಕ್ಕೆ 10 ಮಂದಿ ಸೇರಿದಂತೆ 134 ಮಂದಿ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. ಇವರೆಲ್ಲರ ಚುನಾವಣಾ ಭವಿಷ್ಯವನ್ನು 16,568 ವಕೀಲ ಮತದಾರರು ನಿರ್ಧರಿಸಲಿದ್ದಾರೆ.

ಅಧ್ಯಕ್ಷ ಸ್ಥಾನಕ್ಕೆ ಪೈಪೋಟಿ

ಹಾಲಿ ಎಎಬಿ ಅಧ್ಯಕ್ಷ ಎ ಪಿ ರಂಗನಾಥ್‌, ಮಾಜಿ ಅಧ್ಯಕ್ಷ ಎಚ್‌ ಸಿ ಶಿವರಾಮು, ಬಿಜೆಪಿಯ ವಕ್ತಾರ ಹಾಗೂ ಹಿರಿಯ ವಕೀಲ ವಿವೇಕ್‌ ಸುಬ್ಬಾರೆಡ್ಡಿ ಮತ್ತು ಕೆ ರಾಜಣ್ಣ ಅವರು ಅಧ್ಯಕ್ಷ ಸ್ಥಾನದ ಆಕಾಂಕ್ಷಿಗಳಾಗಿದ್ದಾರೆ.

ಹಾಲಿ ಪ್ರಧಾನ ಕಾರ್ಯದರ್ಶಿ ಎ ಎನ್‌ ಗಂಗಾಧರಯ್ಯ, ಹಾಲಿ ಖಜಾಂಚಿ ಶಿವಮೂರ್ತಿ, ದುರ್ಗಾ ಪ್ರಸಾದ್‌ ಎಚ್‌ ಆರ್‌, ಪ್ರವೀಣ್‌ ಗೌಡ ಎಚ್‌ ವಿ, ರಾಮಲಿಂಗ ಪಿ, ರವಿ ಟಿ ಜಿ, ಶ್ರೀನಿವಾಸ ಮೂರ್ತಿ ಡಿ ಹಾಗೂ ವಿಶ್ವನಾಥ್‌ ಕೆ ಪಿ ಸೇರಿದಂತೆ 8 ಮಂದಿ ಪ್ರಧಾನ ಕಾರ್ಯದರ್ಶಿ ಹುದ್ದೆಗೆ ಪೈಪೋಟಿ ನಡೆಸಿದ್ದಾರೆ.

ಖಜಾಂಚಿ ಹುದ್ದೆಗೆ ಭದ್ರಾವತಿ ಸತೀಶ, ಚಂದ್ರಶೇಖರ್‌ ಎಂ ಎಚ್‌, ಗಿರೀಶ್‌ ಕುಮಾರ್‌ ಸಿ ಎಸ್‌, ಹರೀಶ ಎಂ ಟಿ, ಕುಮಾರ್‌ ಗೌಡ ಎಚ್‌ ಎನ್‌ ಸಿ, ಮಂಜುನಾಥ್‌ ಬಿ ಗೌಡ, ರಾಜಶೇಖರ್‌, ರಮೇಶ್‌ ಆರ್‌, ಸಂತೋಷ್‌ ಟಿ ಸಿ ಹಾಗೂ ವೇದಮೂರ್ತಿ ಎ ಸೇರಿದಂತೆ 10 ಮಂದಿ ಸ್ಪರ್ಧಿಸಿದ್ದಾರೆ.

ನಾಲ್ಕು ಘಟಕಗಳಿಂದ 29 ಸದಸ್ಯರ ಆಯ್ಕೆ

ಹೈಕೋರ್ಟ್‌, ಸಿಟಿ ಸಿವಿಲ್‌ ಕೋರ್ಟ್‌, ಮೆಯೊ ಹಾಲ್‌ ಕೋರ್ಟ್‌ ಮತ್ತು ಮ್ಯಾಜಿಸ್ಟ್ರೇಟ್‌ ಕೋರ್ಟ್‌ ಈ ನಾಲ್ಕು ಘಟಕಗಳಲ್ಲಿ ಸದಸ್ಯತ್ವ ಪಡೆದಿರುವ ವಕೀಲರು ನಿರ್ದಿಷ್ಟ ಘಟಕದ ಸದಸ್ಯರನ್ನು ಆಯ್ಕೆ ಮಾಡಲಿದ್ದಾರೆ. ಅಧ್ಯಕ್ಷ, ಪ್ರಧಾನ ಕಾರ್ಯದರ್ಶಿ ಮತ್ತು ಖಜಾಂಚಿ ಸ್ಥಾನದ ಆಕಾಂಕ್ಷಿಗಳಿಗೆ ಎಲ್ಲಾ ಘಟಕದ ಸದಸ್ಯರು ಮತದಾನ ಮಾಡಲಿದ್ದಾರೆ.

ಬೆಂಗಳೂರು ವಕೀಲ ಸಂಘದ ಆಡಳಿತ ಮಂಡಳಿಗೆ ಹೈಕೋರ್ಟ್‌ ಘಟಕದಿಂದ ಏಳು ಮಂದಿ ಸದಸ್ಯರು ಆಯ್ಕೆಯಾಗಲಿದ್ದಾರೆ. ಈ ಬಾರಿ ಏಳು ಸ್ಥಾನಕ್ಕೆ 27 ಮಂದಿ ಕಣದಲ್ಲಿದ್ದಾರೆ. ಸಿಟಿ ಸಿವಿಲ್‌ ಕೋರ್ಟ್‌ನ 12 ಸದಸ್ಯರು ಆಡಳಿತ ಮಂಡಳಿ ಪ್ರವೇಶಿಸಲಿದ್ದು, ಇದಕ್ಕಾಗಿ 54 ಮಂದಿ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. ಮ್ಯಾಜಿಸ್ಟ್ರೇಟ್‌ ಮತ್ತು ಮೆಯೊ ಹಾಲ್‌ ಕೋರ್ಟ್‌ನಿಂದ ತಲಾ 5 ಸದಸ್ಯರು ಆಡಳಿತ ಮಂಡಳಿ ಪ್ರತಿನಿಧಿಸಲಿದ್ದು, ಇದಕ್ಕೆ ಕ್ರಮವಾಗಿ 16 ಮತ್ತು 15 ಮಂದಿ ಕಣದಲ್ಲಿದ್ದಾರೆ.

ವಕೀಲರ ಸಂಘದ ಬೈಲಾದ ಪ್ರಕಾರ ಒಂದು ಸ್ಥಾನಕ್ಕೆ ಒಬ್ಬರು ಮಾತ್ರ ಸ್ಪರ್ಧಿಸಬಹುದಾಗಿದ್ದು, ಸತತ ಎರಡು ಬಾರಿ ಆಯ್ಕೆಯಾಗಿರುವವರು ಮತ್ತೆ ಕಣಕ್ಕಿಳಿಯುವಂತಿಲ್ಲ. ಇನ್ನು, ಅಧ್ಯಕ್ಷ ಸ್ಥಾನದ ಆಕಾಂಕ್ಷಿಗಳು 12 ವರ್ಷ ಅಥವಾ ಅದಕ್ಕಿಂತ ಹೆಚ್ಚು ಕಾಲ ಸಂಘದ ಸದಸ್ಯರಾಗಿರಬೇಕು ಮತ್ತು ₹1 ಲಕ್ಷ ಡಿ ಡಿ ಮೂಲಕ ಠೇವಣಿ ಸಲ್ಲಿಸಬೇಕು. ಪ್ರಧಾನ ಕಾರ್ಯದರ್ಶಿ ಹುದ್ದೆಯ ಆಕಾಂಕ್ಷಿಗಳು 10 ವರ್ಷ ಸಂಘದ ಸದಸ್ಯರಾಗಿರಬೇಕು ಮತ್ತು ₹75 ಸಾವಿರ ಡಿ ಡಿ ಸಲ್ಲಿಸಬೇಕು. ಖಜಾಂಚಿ ಹುದ್ದೆಯ ಮೇಲೆ ಕಣ್ಣಿಟ್ಟಿರುವವರು 8 ವರ್ಷ ಸದಸ್ಯತ್ವದ ಜೊತೆಗೆ ₹50 ಸಾವಿರ ಡಿ ಡಿ ಸಲ್ಲಿಸಬೇಕು. ಸದಸ್ಯ ಸ್ಥಾನದ ಆಕಾಂಕ್ಷಿಗಳು ಎರಡು ವರ್ಷ ಸಂಘದ ಸದಸ್ಯತ್ವದ ಜೊತೆಗೆ ₹25 ಸಾವಿರ ಡಿ ಡಿಯನ್ನು ಸಲ್ಲಿಸಬೇಕಿದೆ. ನಿರ್ದಿಷ್ಟ ಕಾಲಮಿತಿಯ ಒಳಗೆ ನಾಮಪತ್ರ ಹಿಂತೆಗೆದುಕೊಳ್ಳದ ಹೊರತು ಠೇವಣಿ ಮೊತ್ತವನ್ನು ಸಂಘದ ಬೈಲಾ ಸಂಖ್ಯೆ 40 (3)ರ ಪ್ರಕಾರ ಹಿಂದಿರುಗಿಸಲಾಗುವುದಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ. ಸದ್ಯದ ಲೆಕ್ಕಾಚಾರದ ಪ್ರಕಾರ ಠೇವಣಿಯಿಂದ ₹43 ಲಕ್ಷ ಸಂಗ್ರಹವಾಗಿದೆ.

Also Read
ಬೆಂಗಳೂರು ವಕೀಲರ ಸಂಘಕ್ಕೆ ನಗರ ಜಿಲ್ಲಾಧಿಕಾರಿ ಮಂಜುನಾಥ್‌ರನ್ನು ಆಡಳಿತಾಧಿಕಾರಿಯನ್ನಾಗಿ ನೇಮಿಸಿದ ರಾಜ್ಯ ಸರ್ಕಾರ

ಡಿಸೆಂಬರ್‌ 17ಕ್ಕೆ ಪ್ರಚಾರ ಅಂತ್ಯ

ವಿವಿಧ ಹುದ್ದೆ ಮತ್ತು ಸ್ಥಾನಗಳ ಮೇಲೆ ಕಣ್ಣಿಟ್ಟಿರುವ ಅಭ್ಯರ್ಥಿಗಳು ಖುದ್ದಾಗಿ ವಕೀಲರು, ನಿವೃತ್ತ ನ್ಯಾಯಮೂರ್ತಿಗಳು, ರಾಜಕಾರಣಿಗಳ ಮೂಲಕ ಮತಬೇಟೆ ಶುರುವಿಟ್ಟುಕೊಂಡಿದ್ದಾರೆ. ಸಹೋದ್ಯೋಗಿ ವಕೀಲರನ್ನು ಭೇಟಿ ಮಾಡಿ ಮತಯಾಚಿಸುತ್ತಿದ್ದಾರೆ. ಔತಣ ಮೋಜಿನ ಕೂಟಗಳನ್ನೂ ಆಯೋಜಿಸುವ ಮೂಲಕ ಮತದಾರರನ್ನು ಹಿಡಿದಿಟ್ಟುಕೊಳ್ಳುವ ಪ್ರಯತ್ನವನ್ನು ನಿರಂತರವಾಗಿ ಮಾಡುತ್ತಿದ್ದಾರೆ. ಕೋವಿಡ್‌ ಹಿನ್ನೆಲೆಯಲ್ಲಿ ನ್ಯಾಯಾಲಯದಲ್ಲಿ ಶಿಷ್ಟಾಚಾರ ಕ್ರಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುತ್ತಿರುವುದರಿಂದ ಹೆಚ್ಚಿನ ಸಂಖ್ಯೆಯಲ್ಲಿ ವಕೀಲರು ನೆರೆಯಲು ಅವಕಾಶವಾಗುತ್ತಿಲ್ಲ. ಹೀಗಾಗಿ, ಸಾಮಾಜಿಕ ಜಾಲತಾಣಗಳಲ್ಲಿ ಮತಬೇಟೆ ಜೋರಾಗಿ ನಡೆದಿದೆ. ಡಿಸೆಂಬರ್‌ 17ಕ್ಕೆ ಪ್ರಚಾರಕ್ಕೆ ತೆರೆ ಬೀಳಲಿದೆ.

ವಿವಿಧ ಕಾರಣಗಳಿಗಾಗಿ ಕರಪತ್ರ, ಭಿತ್ತಿಪತ್ರಗಳನ್ನು ನ್ಯಾಯಾಲಯ ಅಥವಾ ವಕೀಲ ಸಂಘದ ಗೋಡೆಗಳಲ್ಲಿ ಅಂಟಿಸುವುದು ಮತ್ತು ಮುದ್ರಿತ ಪ್ರತಿಗಳನ್ನು ಹಂಚುವುದಕ್ಕೆ ನಿರ್ಬಂಧ ವಿಧಿಸಲಾಗಿದೆ. ಡಿಜಿಟಲ್‌ ಪ್ರಚಾರಕ್ಕೆ ಅವಕಾಶ ಮಾಡಿಕೊಡಲಾಗಿದೆ. “ಶಿಸ್ತು, ಸಂಯಮವನ್ನು ಕಾಪಾಡುವ ದೃಷ್ಟಿಯಿಂದ ಹಲವು ನಿರ್ಬಂಧಗಳನ್ನು ವಿಧಿಸಲಾಗಿದೆ. ಹೀಗಾಗಿ, ಹೈಕೋರ್ಟ್‌, ಮೆಯೊಹಾಲ್‌, ಸಿಟಿ ಸಿವಿಲ್‌ ಕೋರ್ಟ್‌ ಮತ್ತು ಮ್ಯಾಜಿಸ್ಟ್ರೇಟ್‌ ನ್ಯಾಯಾಲಯದ ವ್ಯಾಪ್ತಿಯಲ್ಲಿ ಸಭೆ-ಸಮಾರಂಭ, ಉಪಾಹಾರ, ಔತಣ ಕೂಟ, ಪೂಜೆ-ಪುನಸ್ಕಾರ ಆಯೋಜಿಸುವುದು, ಹಣ, ಉಡುಗೊರೆ ಆಮಿಷವೊಡ್ಡುವ ಮೂಲಕ ಮತದಾರರನ್ನು ಸೆಳೆಯುವುದು ಕಂಡು ಬಂದರೆ ಅಂಥವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮಕೈಗೊಳ್ಳಲಾಗುವುದು. ನ್ಯಾಯಾಲಯದ ನಿರ್ದೇಶನಗಳನ್ನು ಚಾಚುತಪ್ಪದೇ ಪಾಲಿಸಲಾಗುತ್ತಿದ್ದು, ಸಿಸಿಟಿವಿ ಕ್ಯಾಮೆರಾ ಕಣ್ಗಾವಲಿನಲ್ಲಿ ಚುನಾವಣೆ ನಡೆಯಲಿದೆ ” ಎಂದು ಮುಖ್ಯ ಚುನಾವಣಾಧಿಕಾರಿಯೂ ಆದ ಹಿರಿಯ ವಕೀಲ ಕೆ ಎನ್‌ ಫಣೀಂದ್ರ ಅವರುಬಾರ್‌ ಅಂಡ್‌ ಬೆಂಚ್‌”ಗೆ ತಿಳಿಸಿದರು.

Also Read
ಬೆಂಗಳೂರು ವಕೀಲರ ಸಂಘದ ಕಾರ್ಯಕಾರಿ ಸಮಿತಿಗೆ ಡಿ. 22ರ ಒಳಗೆ ಚುನಾವಣೆ ನಡೆಸಲು ಕರ್ನಾಟಕ ಹೈಕೋರ್ಟ್‌ ಗಡುವು

ಎಚ್‌ಪಿಸಿಗೆ ಹಿರಿಯ ವಕೀಲ ಸತ್ಯನಾರಾಯಣ ಗುಪ್ತ ನೇತೃತ್ವ

ನ್ಯಾಯಾಲಯ ನೇಮಕ ಮಾಡಿರುವ ಹಿರಿಯ ವಕೀಲ ಎನ್‌ ಎಸ್‌ ಸತ್ಯನಾರಾಯಣ ಗುಪ್ತ ನೇತೃತ್ವದ ಉನ್ನತಾಧಿಕಾರ ಸಮಿತಿಯು (ಎಚ್‌ಪಿಸಿ) ಚುನಾವಣೆ ನಡೆಸಲಿದ್ದು, ಒಟ್ಟು ಎಂಟು ಮಂದಿ ವಕೀಲ ಸದಸ್ಯರು ಎಚ್‌ಪಿಸಿಯಲ್ಲಿದ್ದಾರೆ. ಹಿರಿಯ ವಕೀಲ ಕೆ ಎನ್‌ ಫಣೀಂದ್ರ ಅವರು ಮುಖ್ಯ ಚುನಾವಣಾಧಿಕಾರಿಯಾಗಿ ನೇಮಕಗೊಂಡಿದ್ದಾರೆ. ವಕೀಲರಾದ ಜಿ ಚಂದ್ರಶೇಖರಯ್ಯ, ಕೆ ಎನ್‌ ಪುಟ್ಟೇಗೌಡ, ಎ ಜಿ ಶಿವಣ್ಣ, ಟಿ ಎನ್‌ ಶಿವ ರೆಡ್ಡಿ, ಎಸ್‌ ಎನ್‌ ಪ್ರಶಾಂತ್‌ ಚಂದ್ರ, ಪರಿಶಿಷ್ಟ ಜಾತಿ ಮತ್ತು ಪಂಗಡ ವಿಭಾಗದಿಂದ ವಕೀಲ ಎಂ ಆರ್‌ ವೇಣುಗೋಪಾಲ್‌, ಮಹಿಳಾ ವಿಭಾಗದಲ್ಲಿ ವಕೀಲೆ ಅನು ಚೆಂಗಪ್ಪ ಎಚ್‌ಪಿಸಿ ಸದಸ್ಯರಾಗಿದ್ದು, ಚುನಾವಣಾಧಿಕಾರಿಗಳಾಗಿಯೂ ಕಾರ್ಯನಿರ್ವಹಿಸಲಿದ್ದಾರೆ.

Related Stories

No stories found.
Kannada Bar & Bench
kannada.barandbench.com