H D Revanna and Karnataka HC 
ಸುದ್ದಿಗಳು

ಚುನಾವಣಾ ಅಕ್ರಮ ಪ್ರಕರಣ: ಜೆಡಿಎಸ್‌ ಶಾಸಕ ರೇವಣ್ಣಗೆ ವಿಧಾನಸಭೆ ಕಾರ್ಯದರ್ಶಿ ಮೂಲಕ ಸಮನ್ಸ್‌ ಜಾರಿ ಮಾಡಿದ ಹೈಕೋರ್ಟ್‌

ಪ್ರತಿವಾದಿ ರೇವಣ್ಣ ಸಮನ್ಸ್ ಸ್ವೀಕರಿಸಿರಲಿಲ್ಲ. ಈ ಹಿನ್ನೆಲೆಯಲ್ಲಿ ವಿಧಾನಸಭೆ ಕಾರ್ಯದರ್ಶಿಗಳ ಮೂಲಕ ಮತ್ತೊಂದು ಬಾರಿ ಸಮನ್ಸ್ ಜಾರಿ ಮಾಡಿ, ವಿಚಾರಣೆಯನ್ನು ಸೆಪ್ಟೆಂಬರ್ 25ಕ್ಕೆ ಮುಂದೂಡಿದ ನ್ಯಾಯಾಲಯ.

Bar & Bench

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಅಕ್ರಮ ನಡೆಸಿ ಹೊಳೆನರಸೀಪುರ ಶಾಸಕರಾಗಿ ಎಚ್ ಡಿ ರೇವಣ್ಣ ಆಯ್ಕೆಯಾಗಿದ್ದು, ಅವರ ಶಾಸಕ ಸ್ಥಾನವನ್ನು ಅನರ್ಹಗೊಳಿಸಬೇಕು ಎಂದು ಕೋರಿ ಸಲ್ಲಿಕೆಯಾಗಿರುವ ಅರ್ಜಿಯ ಸಂಬಂಧ ಕರ್ನಾಟಕ ಹೈಕೋರ್ಟ್ ಸೋಮವಾರ ಅವರಿಗೆ ಸಮನ್ಸ್ ಜಾರಿ ಮಾಡಿದೆ.

ಹೊಳೆನರಸೀಪುರದ ಪರಾಜಿತ ಅಭ್ಯರ್ಥಿ ಹಾಗೂ ವಕೀಲ ದೇವರಾಜೇಗೌಡ ಸಲ್ಲಿಸಿರುವ ಚುನಾವಣಾ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಜ್ಯೋತಿ ಮೂಲಿಮನಿ ಅವರ ನೇತೃತ್ವದ ಏಕಸದಸ್ಯ ಪೀಠವು ರೇವಣ್ಣ ಅವರಿಗೆ ಸಮನ್ಸ್ ಜಾರಿ ಮಾಡಿದೆ. ಈ ಹಿಂದೆ ವಿಚಾರಣೆ ನಡೆಸಿದ್ದ ಪೀಠವು ರೇವಣ್ಣ ಅವರಿಗೆ ಸಮನ್ಸ್ ಜಾರಿ ಮಾಡಿತ್ತು. ಆದರೆ, ಪ್ರತಿವಾದಿ ರೇವಣ್ಣ ಸಮನ್ಸ್ ಸ್ವೀಕರಿಸಿರಲಿಲ್ಲ. ಈ ಹಿನ್ನೆಲೆಯಲ್ಲಿ ವಿಧಾನಸಭೆ ಕಾರ್ಯದರ್ಶಿಗಳ ಮೂಲಕ ಮತ್ತೊಂದು ಬಾರಿ ಸಮನ್ಸ್ ಜಾರಿ ಮಾಡಿ, ವಿಚಾರಣೆಯನ್ನು ಸೆಪ್ಟೆಂಬರ್ 25ಕ್ಕೆ ಮುಂದೂಡಿದೆ.

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಎಚ್ ಡಿ ರೇವಣ್ಣ ಭಾರಿ ಅಕ್ರಮ ಎಸಗಿ ಜಯಗಳಿಸಿದ್ದಾರೆ. ಜೊತೆಗೆ ಅವರು ಮತಗಳಿಕೆಯಲ್ಲಿ 2ನೇ ಸ್ಥಾನದಲ್ಲಿದ್ದ ಶ್ರೇಯಸ್ ಪಟೇಲ್ ಕೂಡ ಮತದಾರರಿಗೆ ಆಮಿಷ ಒಡ್ಡಿದ್ದಾರೆ. ಹೀಗಾಗಿ ಇವರಿಬ್ಬರ ಮತಗಳಿಕೆಯನ್ನು ಅಸಿಂಧುಗೊಳಿಸಬೇಕು ಎಂದು ದೇವರಾಜೇಗೌಡ ಕೋರಿದ್ದಾರೆ.

ಚುನಾವಣೆಯಲ್ಲಿ ಎಚ್ ಡಿ ರೇವಣ್ಣ 88,103 ಮತ ಗಳಿಸಿದ್ದು, ಎರಡನೇ ಅಭ್ಯರ್ಥಿ ಶ್ರೇಯಸ್ ಎಂ. ಪಟೇಲ್ 84,951 ಹಾಗೂ ಅರ್ಜಿದಾರರು 4,850 ಮತ ಪಡೆದಿದ್ದಾರೆ. ಉಳಿದ ಅಭ್ಯರ್ಥಿಗಳು ಠೇವಣಿ ಕಳೆದುಕೊಂಡಿದ್ದಾರೆ. ಅಕ್ರಮ ಎಸಗಿ ಗಳಿಸಿದ ಮತಗಳನ್ನು ಸಿಂಧು ಎಂದು ಪರಿಗಣಿಸಲು ಪ್ರಜಾಪ್ರತಿ ನಿಧಿ ಕಾಯಿದೆ, ನೀತಿ ಸಂಹಿತೆ ಮತ್ತು ನಿಯಮ 1961 ಹಾಗೂ 2006ರ ಮಾರ್ಗಸೂಚಿಯಲ್ಲಿ ಅವಕಾಶವಿಲ್ಲ. ಹೀಗಾಗಿ, ಅವರ ಆಯ್ಕೆಯನ್ನು ಅಸಿಂಧುಗೊಳಿಸಬೇಕು ಮತ್ತು ಅರ್ಜಿದಾರರನ್ನು ಆಯ್ಕೆಯಾಗಿದ್ದಾರೆ ಎಂದು ಘೋಷಿಸಬೇಕು ಎಂದು ಅರ್ಜಿಯಲ್ಲಿ ಕೋರಲಾಗಿದೆ.

ರೇವಣ್ಣ ಅವರ ಬೆಂಬಲಿಗರು ತಮ್ಮ ಮೇಲೆ ಹಲ್ಲೆ ನಡೆಸಿದ್ದಾರೆ.  ರೇವಣ್ಣ ಅವರ ಬೆಂಬಲಿಗರು ಅಣ್ಣೆಹಳ್ಳಿಯಲ್ಲಿ ಮತದಾರರಿಗೆ 2 ಕೋಳಿ ಮತ್ತು 2,000 ರೂಪಾಯಿ ನಗದು ಹಂಚಿದ್ದಾರೆ. ಶಾಂತಿಗ್ರಾಮದ ಬಳಿ ಜನರಿಗೆ ಆಮಿಷವೊಡ್ಡುತ್ತಿದ್ದುದನ್ನು ತಡೆಯಲು ಹೋದಾಗ ರೇವಣ್ಣ ಅವರ ಬೆಂಬಲಿಗರು ತಮ್ಮ ಮೇಲೆ ಹಲ್ಲೆ ನಡೆಸಿದ್ದಾರೆ. ಈ ಬಗ್ಗೆ ಮಿಥುನ್, ಮೋಹನ್, ಮಂಜು ಮತ್ತು ಶಂಕರ್ ಸೇರಿ 30 ಮಂದಿ ವಿರುದ್ಧ ಚನ್ನರಾಯಪಟ್ಟಣ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ.

ಭವಾನಿ ರೇವಣ್ಣ ಅವರ ಆಸ್ತಿಯ ವಿವರಗಳೂ ಸಹ ಸುಳ್ಳಿನಿಂದ ಕೂಡಿವೆ. ಜೊತೆಗೆ ರೇವಣ್ಣ ಅವರು ಸಲ್ಲಿಸಿರುವ ನಾಮಪತ್ರವೇ ದೋಷಪೂರಿತವಾಗಿದೆ. ಅವರು ತಮ್ಮ ಆಸ್ತಿ ವಿವರಗಳ ಬಗ್ಗೆ ಸಂಪೂರ್ಣ ಮಾಹಿತಿ ನೀಡಿಲ್ಲ. ಆದರೂ ಅವರ ನಾಮಪತ್ರವನ್ನು ಚುನಾವಣಾಧಿಕಾರಿ ಸಿಂಧು ಎಂದು ಘೋಷಿಸಿದ್ದಾರೆ. ಭವಾನಿ ರೇವಣ್ಣ ಅವರ ಆಸ್ತಿಯ ವಿವರಗಳೂ ಸಹ ಸುಳ್ಳಿನಿಂದ ಕೂಡಿವೆ ಎಂದು ಅರ್ಜಿಯಲ್ಲಿ ಉಲ್ಲೇಖಿಸಿದ್ದಾರೆ.