Supreme Court and electoral bonds 
ಸುದ್ದಿಗಳು

ಚುನಾವಣಾ ಬಾಂಡ್: ಅನಾಮಧೇಯ ದೇಣಿಗೆ ದಾನಿಗಳಿಗೆ ಅಡ್ಡಿಯಾಗುವುದನ್ನು ತಪ್ಪಿಸಲು ಪರಿಶೀಲನೆ ಮಾಡಲಾಗುವುದು ಎಂದ ಸುಪ್ರೀಂ

ವಿವಾದಾತ್ಮಕ ಚುನಾವಣಾ ಬಾಂಡ್‌ಗಳ ಸಿಂಧುತ್ವ ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಗಳ ಎರಡನೇ ದಿನದ ವಿಚಾರಣೆಯನ್ನು ಸಿಜೆಐ ನೇತೃತ್ವದ ಪೀಠ ಇಂದು ನಡೆಸಿದೆ.

Bar & Bench

ಚುನಾವಣಾ ಬಾಂಡ್‌ ಯೋಜನೆಯಡಿ ವ್ಯಕ್ತಿ ಅಥವಾ ಸಂಸ್ಥೆಯೊಂದು ರಾಜಕೀಯ ಪಕ್ಷಗಳಿಗೆ ದೇಣಿಗೆ ನೀಡಿದಾಗ ಅವರ ಹೆಸರನ್ನು ಅನಾಮಿಕವಾಗಿರಿಸುವುದರ ಹಿಂದಿನ ಉದ್ದೇಶ ಬಹುಶಃ ಅವರು ದೇಣಿಗೆ ನಿಡದೆ ಇರುವ ಪಕ್ಷಗಳಿಂದ ಎದುರಾಗುವ ಪರಿಣಾಮಗಳನ್ನು ನಿಯಂತ್ರಿಸುವುದಾಗಿರಬಹುದು ಎಂದು ಸುಪ್ರೀಂ ಕೋರ್ಟ್‌ ಸೋಮವಾರ ಅಭಿಪ್ರಾಯಪಟ್ಟಿದೆ[ಅಸೋಸಿಯೇಷನ್‌ ಫಾರ್‌ ಡೆಮಾಕ್ರಟಿಕ್‌ ರಿಫಾರ್ಮ್ಸ್‌ ಇನ್ನಿತರರು ಮತ್ತು ಸಂಪುಟ ಕಾರ್ಯದರ್ಶಿ ಭಾರತ ಒಕ್ಕೂಟ ಮತ್ತಿತರರ ನಡುವಣ ಪ್ರಕರಣ].

ಯೋಜನೆಯಡಿ ಯಾಕೆ ಅನಾಮಧೇಯವಾಗಿ ದೇಣಿಗೆ ನೀಡಲಾಗುತ್ತದೆ ಎಂಬ ಅಂಶವನ್ನು ಪರಿಶೀಲಿಸುವುದಾಗಿ ಭಾರತದ ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್, ನ್ಯಾಯಮೂರ್ತಿಗಳಾದ ಸಂಜೀವ್ ಖನ್ನಾಬಿ ಆರ್ ಗವಾಯಿ, ಜೆ ಬಿ ಪರ್ದಿವಾಲಾ ಹಾಗೂ ಮನೋಜ್ ಮಿಶ್ರಾ ಅವರನ್ನೊಳಗೊಂಡ ಪೀಠ ಪ್ರಕರಣದ ವಿಚಾರಣೆ ವೇಳೆ ಹೇಳಿತು.

ರಾಜಕೀಯ ಪಕ್ಷಗಳಿಗೆ ಅನಾಮಧೇಯ ದೇಣಿಗೆ ನೀಡಲು ಅನುಕೂಲವಾಗುವ ಯೋಜನೆಯ ಕಾನೂನು ಮಾನ್ಯತೆ ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಗಳ ವಿಚಾರಣೆ ವೇಳೆ ನ್ಯಾಯಾಲಯ ಈ ವಿಚಾರ ತಿಳಿಸಿದೆ.

ವಿಚಾರಣೆಯ ಸಂದರ್ಭದಲ್ಲಿ, ಪ್ರಮುಖವಾಗಿ ಅರ್ಜಿ ಸಲ್ಲಿಸಿರುವ ಸರ್ಕಾರೇತರ ಸಂಸ್ಥೆ ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ (ಎಡಿಆರ್) ಪರ ವಾದ ಮಂಡಿಸಿದ ವಕೀಲ ಪ್ರಶಾಂತ್ ಭೂಷಣ್, ಈ ಯೋಜನೆಯಿಂದ ಯಾವ ರಾಜಕೀಯ ಪಕ್ಷಕ್ಕೆ ಯಾವ ಕಂಪನಿ ದೇಣಿಗೆ ನೀಡಿದೆ ಎಂಬುದನ್ನು ತಿಳಿಯಲು ಸಾಮಾನ್ಯ ಜನರಿಗೆ ಅಸಾಧ್ಯವಾಗುತ್ತದೆ ಎಂದು ವಾದಿಸಿದರು.

ಆಗ ಸಿಜೆಐ ಚಂದ್ರಚೂಡ್, ವ್ಯಾಪಾರ, ವಹಿವಾಟು ನಡೆಸುವ ವ್ಯಕ್ತಿ ತನ್ನ ರಾಜ್ಯದ ಆಡಳಿತ ಪಕ್ಷಕ್ಕಿಂತ ಭಿನ್ನವಾದ ಪಕ್ಷಕ್ಕೆ ದೇಣಿಗೆ ನೀಡಿದ್ದರೆ ಅದರಿಂದುಟಾಗಬಹುದಾದ ಪರಿಣಾಮಗಳನ್ನು ತಪ್ಪಿಸಲು ಆ ವ್ಯಕ್ತಿಯ ಹೆಸರು ಅನಾಮಧೇಯವಾಗಿರಲಿ ಎಂಬ ಕಾರಣಕ್ಕೆ ಈ ವಿಧಾನ ಅಳವಡಿಸಿಕೊಂಡಿರಬಹುದು ಎಂಬುದಾಗಿ ತಿಳಿಸಿದರು. ಅರ್ಜಿ ಸಲ್ಲಿಕೆಯಾದ ಆರು ವರ್ಷಗಳ ಬಳಿಕ ಸೋಮವಾರದಿಂದ ಪ್ರಕರಣದ ವಿಚಾರಣೆ ಆರಂಭವಾಗಿದೆ.

ತಮ್ಮ ವಾದದ ವೇಳೆ ಪ್ರಶಾಂತ್‌ ಭೂಷಣ್‌ ಅವರು, "ಈ ಯೋಜನೆಯಡಿ ರಾಜಕೀಯ ಪಕ್ಷಗಳು ತಮಗೆ ದೇಣಿಗೆ ನೀಡಿರುವವರ ಹೆಸರನ್ನು ಬಹಿರಂಗಪಡಿಸದಿರುವ ವಿನಾಯಿತಿ ಇದೆ. ಆದರೆ, ಈ ಬಾಂಡ್‌ಗಳನ್ನು ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ (ಎಸ್‌ಬಿಐ) ಮೂಲಕ ವಿತರಣೆ ಮಾಡಲಾಗುವುದರಿಂದ ಕೇಂದ್ರ ಸರ್ಕಾರಕ್ಕೆ ಯಾರು ಯಾವ ಪಕ್ಷಕ್ಕೆ ದೇಣಿಗೆ ನೀಡಿದ್ದಾರೆ ಎನ್ನುವ ಮಾಹಿತಿ ತಿಳಿಯಲು ಸಾಧ್ಯವಿದೆ. ಎಸ್‌ಬಿಐ ಮೇಲೆ ಒತ್ತಡ ಹಾಕುವ ಮೂಲಕ ಕೇಂದ್ರ ಈ ಮಾಹಿತಿ ಪಡೆಯಬಹುದು" ಎಂದು ಚುನಾವಣಾ ಬಾಂಡ್‌ಗಳ ಕುರಿತು ಆತಂಕ ವ್ಯಕ್ತಪಡಿಸಿದರು.

ಲಂಚವನ್ನು (ಕಿಕ್‌ಬ್ಯಾಕ್‌) ಚುನಾವಣಾ ಬಾಂಡ್‌ಗಳು ಕಾನೂನುಬದ್ಧಗೊಳಿಸುತ್ತವೆ. ಜನಪ್ರತಿನಿಧಿಗಳ ಬಗ್ಗೆ ಅರಿಯುವ ಹಕ್ಕು ಪ್ರಜೆಗಳಿಗೆ ಇದೆ. ಆಡಳಿತ ಪಕ್ಷಗಳಿಗೆ ಯಥೇಚ್ಛ ದೇಣಿಗೆ ಸಂದಾಯವಾಗುತ್ತದೆ. ವೇದಾಂತ ಕಂಪೆನಿ ಬಗ್ಗೆ ದೊಡ್ಡ ಮಟ್ಟದ ಚರ್ಚೆ ನಡೆಯುತ್ತಿರುವಾಗ ಅದು ದೇಣಿಗೆ ಸಲ್ಲಿಸಿರುವುದು ಏಕೆ ಎಂದು ಅರ್ಜಿದಾರರ ಪರ ವಕೀಲ ಪ್ರಶಾಂತ್‌ ಭೂಷಣ್‌ ಪ್ರಶ್ನಿಸಿದರು.  

ಹಿರಿಯ ವಕೀಲ ಕಪಿಲ್‌ ಸಿಬಲ್ ವಾದ ಮಂಡಿಸಿ, ಬಂಡವಾಳ ಮತ್ತು ಪ್ರಭಾವ ಒಂದರ ಜೊತೆಗೊಂದು ಒಗ್ಗೂಡಿ ಹೋಗುತ್ತವೆ ಎನ್ನುವುದನ್ನು ನಾವು ಗಮನಿಸಬೇಕು. ಈ ನಿಟ್ಟಿನಲ್ಲಿ ಚುನಾವಣಾ ಪ್ರಕ್ರಿಯೆಯಲ್ಲಿ ಭಾಗವಹಿಸುವ ಎಲ್ಲರಿಗೂ ಸಮಾನ ಅವಕಾಶವನ್ನು ಕಲ್ಪಿಸುವಂತಹ ಪ್ರಕ್ರಿಯೆಯನ್ನು ರೂಪಿಸಬೇಕು ಎಂದರು.

ಮುಂದುವರೆದು, ಚುನಾವಣಾ ಬಾಂಡ್‌ ಯೋಜನೆಯಡಿ ಷೇರುದಾರರ ಹಣವನ್ನು ಅವರ ಸಮ್ಮತಿಯನ್ನು ಪಡೆಯದೆ ಸಂಸ್ಥೆಗಳು ದೇಣಿಗೆ ನೀಡಬಹುದಾಗಿದೆ. ಷೇರುದಾರನಿಗೆ ಆತನ ಹಣವನ್ನು ಹೇಗೆ ಬಳಸಲಾಗುತ್ತಿದೆ ಎನ್ನುವ ಮಾಹಿತಿಯನ್ನು ನೀಡಲಾಗುವುದಿಲ್ಲ. ಇದು ಗಂಬೀರ ವಿಷಯವಾಗಿದ್ದು, ಯಾವುದೇ ಹೂಡಿಕೆದಾರ ತಾನು ಸಂಸ್ಥೆಯೊಂದರಲ್ಲಿ ಯಾವುದೇ ಪಕ್ಷಕ್ಕೆ ದೇಣಿಗೆ ನೀಡಲು ಹಣ ಹೂಡಿಕೆ ಮಾಡುವುದಿಲ್ಲ ಎಂದು ವಾದಿಸಿದರು.

ಸಿಪಿಎಂ ಪಕ್ಷದ ಪರವಾಗಿ ವಕೀಲ ಶದಾನ್‌ ಫರಾಸತ್‌ ವಾದ ಮಂಡಿಸಿದರು. ಇಂದು ಪ್ರಕರಣದ ವಿಚಾರಣೆ ಮುಂದುವರೆದಿದೆ.