A1
A1
ಸುದ್ದಿಗಳು

ಕ್ರಿಮಿನಲ್ ಪ್ರಕರಣ ಮುಚ್ಚಿಟ್ಟ ಮಾತ್ರಕ್ಕೆ ನೌಕರನನ್ನು ಮನಸೋಇಚ್ಛೆ ವಜಾ ಮಾಡುವಂತಿಲ್ಲ: ಸುಪ್ರೀಂ ಕೋರ್ಟ್

Bar & Bench

ತನ್ನ ವಿರುದ್ಧ ಬಾಕಿ ಇರುವ ಕ್ರಿಮಿನಲ್‌ ಮೊಕದ್ದಮೆ ಕುರಿತ ಮಾಹಿತಿ ಮುಚ್ಚಿಟ್ಟ ಮಾತ್ರಕ್ಕೆ ನೌಕರನನ್ನು ಉದ್ಯೋಗದಾತರು ಸೇವೆಯಿಂದ ಮನಸೋಇಚ್ಛೆಯಾಗಿ ವಜಾಗೊಳಿಸಬಹುದು ಎಂದರ್ಥವಲ್ಲ ಎಂಬುದಾಗಿ ಸುಪ್ರೀಂ ಕೋರ್ಟ್‌ ಇತ್ತೀಚೆಗೆ ಅಭಿಪ್ರಾಯಪಟ್ಟಿದೆ. [ಪವನ್ ಕುಮಾರ್ ಮತ್ತು ಭಾರತ ಒಕ್ಕೂಟ ಇನ್ನಿತರರ ನಡುವಣ ಪ್ರಕರಣ].

ಅವತಾರ್ ಸಿಂಗ್ ಮತ್ತು ಭಾರತ ಒಕ್ಕೂಟ ಇನ್ನಿತರರ ನಡುವಣ ಪ್ರಕರಣದಲ್ಲಿ (2016) ನೀಡಿದ ತೀರ್ಪನ್ನು ಅವಲಂಬಿಸಿ ನ್ಯಾಯಮೂರ್ತಿಗಳಾದ ಅಜಯ್ ರಾಸ್ತೋಗಿ ಮತ್ತು ಸಂಜೀವ್ ಖನ್ನಾ ಅವರಿದ್ದ ವಿಭಾಗೀಯ ಪೀಠ ಈ ತೀರ್ಪು ನೀಡಿತು.

ತನ್ನ ವಿರುದ್ಧದ ಕ್ರಿಮಿನಲ್‌ ಮೊಕದ್ದಮೆಯ ವಿವರಗಳನ್ನು ನೀಡಿಲ್ಲ ಎಂಬ ಕಾರಣಕ್ಕೆ ರೈಲ್ವೆ ಅಧಿಕಾರಿಗಳು ಆತನ ವಿರುದ್ಧ ಹೊರಡಿಸಿದ್ದ ವಜಾ ಆದೇಶವನ್ನು ಎತ್ತಿ ಹಿಡಿದ ದೆಹಲಿ ಹೈಕೋರ್ಟ್‌ನ ತೀರ್ಪನ್ನು ಪ್ರಶ್ನಿಸಿ ಮೇಲ್ಮನವಿದಾರನಾಗಿರುವ ನೌಕರ ಪವನ್‌ ಕುಮಾರ್‌ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ಸುಪ್ರೀಂಕೋರ್ಟ್‌ನಲ್ಲಿ ನಡೆಯಿತು.

ಪ್ರಕರಣವನ್ನು ಕೇವಲ ಮುಚ್ಚಿಟ್ಟ ಅಥವಾ ಅದರ ಬಗ್ಗೆ ಸುಳ್ಳು ಮಾಹಿತಿ ನೀಡಿದ ಮಾತ್ರಕ್ಕೆ ಪ್ರಕರಣದಲ್ಲಿ ಶಿಕ್ಷೆ ವಿಧಿಸಲಾಗಿದೆಯೇ ಅಥವಾ ಖುಲಾಸೆಗೊಳಿಸಲಾಗಿದೆಯೇ ಎಂಬುದನ್ನು ಲೆಕ್ಕಿಸದೆ ಉದ್ಯೋಗಿ ಅಥವಾ ಹೊಸದಾಗಿ ನೇಮಕವಾದವರನ್ನು ಏಕಾಏಕಿ ಸೇವೆಯಿಂದ ವಜಾಗೊಳಿಸಬಾರದು ಇಲ್ಲವೇ ತೆಗೆದುಹಾಕಬಾರದು. ತನ್ನ ವಿರುದ್ಧ ಬಾಕಿ ಇರುವ ಕ್ರಿಮಿನಲ್‌ ಮೊಕದ್ದಮೆ ಕುರಿತ ಮಾಹಿತಿ ಮುಚ್ಚಿಟ್ಟ ಅಥವಾ ಸುಳ್ಳು ಮಾಹಿತಿ ನೀಡಿದ ಮಾತ್ರಕ್ಕೆ ನೌಕರನನ್ನು ಉದ್ಯೋಗದಾತರು ಸೇವೆಯಿಂದ ಮನಸೋಇಚ್ಛೆಯಾಗಿ ವಜಾಗೊಳಿಸಬಹುದು ಇಲ್ಲವೇ ಕೆಲಸದಿಂದ ತೆಗೆದುಹಾಕಬಹುದು ಎಂದರ್ಥವಲ್ಲ ಎಂಬುದಾಗಿ ನ್ಯಾಯಾಲಯ ತಿಳಿಸಿತು.

ಅಂತಹ ಉದ್ಯೋಗಿಗೆ ಸೇವೆಯಲ್ಲಿ ಉಳಿಯಲು ಯಾವುದೇ ಮುಕ್ತ ಹಕ್ಕು ಇಲ್ಲದಿದ್ದರೂ ಏಕಪಕ್ಷೀಯವಾಗಿ ವ್ಯವಹರಿಸದಂತೆ ತಿಳಿಸುವ ಹಕ್ಕು ಅವರಿಗೆ ಇದೆ ಎಂದು ಕೂಡ ಪೀಠ ಸ್ಪಷ್ಟಪಡಿಸಿತು. ಈ ಹಿನ್ನೆಲೆಯಲ್ಲಿ ಸಂಬಂಧಪಟ್ಟ ಅಧಿಕಾರಿಗಳು ಪವನ್‌ ಕುಮಾರ್‌ ಅವರನ್ನು ಸೇವೆಗೆ ಸೇರಿಸಿಕೊಳ್ಳಬೇಕು ಎಂದು ಅದು ನಿರ್ದೇಶಿಸಿತು.

ತೀರ್ಪಿನ ಪ್ರತಿಯನ್ನು ಇಲ್ಲಿ ಓದಿ:

Pawan_Kumar_v__Union_of_India_and_Another.pdf
Preview