ಹುಬ್ಬಳ್ಳಿಯಲ್ಲಿ ಐದು ವರ್ಷದ ಬಾಲಕಿ ಮೇಲೆ ಅತ್ಯಾಚಾರ ಎಸಗಿ ಹತ್ಯೆಗೈದ ಆರೋಪದಲ್ಲಿ ಬಿಹಾರ ಮೂಲದ ವಲಸೆ ಕಾರ್ಮಿಕ ರಿತೇಶ್ ಕುಮಾರ್ ಮೇಲಿನ ಪೊಲೀಸ್ ಎನ್‌ಕೌಂಟರ್ ಪ್ರಶ್ನಿಸಿ ಸಲ್ಲಿಸಲಾಗಿರುವ ಅರ್ಜಿಯ ವಿಚಾರಣೆಯನ್ನು ಕರ್ನಾಟಕ ಹೈಕೋರ್ಟ್ ಜೂನ್ 5ಕ್ಕೆ ಮುಂದೂಡಿದೆ.
ಬಾಲಕಿಯ ಮೇಲಿನ ಅತ್ಯಾಚಾರ ಪ್ರಕರಣ ಆರೋಪಿ ಹಾಗೂ ಪೋಲಿಸ್ ಎನ್‌ಕೌಂಟರ್‌ನಲ್ಲಿ ಮೃತಪಟ್ಟಿರುವ ರಿತೇಶ್ ಕುಮಾರ್ ಮೃತದೇಹ ಇಡೀ ಪ್ರಕರಣಕ್ಕೆ ಪ್ರಮುಖ ಸಾಕ್ಷಿಯಾಗಿದ್ದು, ಮೃತದೇಹ ದಹನ ಮಾಡದಂತೆ ಹಾಗೂ ಶವವನ್ನು ಸಂರಕ್ಷಿಸಿ ಇಡುವಂತೆ ನಿರ್ದೇಶನ ನೀಡಬೇಕು ಹಾಗೂ ಪ್ರಕರಣವನ್ನು ಸ್ವತಂತ್ರ ತನಿಖಾ ಸಂಸ್ಥೆಗೆ ವಹಿಸಬೇಕು ಎಂದು ಕೋರಿ ಪಿಯುಸಿಎಲ್ ಸಂಘಟನೆ ಸಲ್ಲಿಸಿದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ಎನ್ ವಿ ಅಂಜಾರಿಯಾ ಮತ್ತು ನ್ಯಾಯಮೂರ್ತಿ ಕೆ ವಿ ಅರವಿಂದ್ ಅವರ ವಿಭಾಗೀಯ ಪೀಠ ನಡೆಸಿತು.
ಸರ್ಕಾರದ ವಕೀಲೆ ನಿಲೋಫರ್ ಅಕ್ಬರ್ ಪ್ರಕರಣಕ್ಕೆ ಸಂಬಂಧಿಸಿದ ಎಫ್‌ಐಆರ್‌ನ ಇಂಗ್ಲಿಷ್ ಅನುವಾದದ ಪ್ರತಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದರು. ಅಲ್ಲದೇ ಎರಡನೇ ಎಫ್‌ಐಆರ್‌ನಲ್ಲಿ ಬಿಎನ್‌ಎಸ್ ಸೆಕ್ಷನ್ 109 ಹಾಕಲಾಗಿದೆ. ಸರ್ಕಾರ ಕೈಗೊಂಡ ಕ್ರಮಗಳಿಗೆ ಅರ್ಜಿದಾರರ ಪರ ವಕೀಲರು ಪ್ರತಿಕ್ರಿಯೆ ಸಲ್ಲಿಸಿದ್ದಾರೆ. ಅದನ್ನೂ ನೋಡಬೇಕಾಗಿದೆ ಎಂದು ನ್ಯಾಯಾಲಯಕ್ಕೆ ತಿಳಿಸಿದರು. ಈ ಮಧ್ಯೆ, ಅರ್ಜಿದಾರರ ಪರ ವಕೀಲರು ಸಹ ಸಮಯ ಕೇಳಿದ್ದರಿಂದ ಪೀಠ ವಿಚಾರಣೆಯನ್ನು ಜೂನ್ 5ಕ್ಕೆ ಮುಂದೂಡಿತು.