ಅತ್ಯಾಚಾರ ಆರೋಪಿ ಎನ್‌ಕೌಂಟರ್: ರಿತೇಶ್‌ ಕುಮಾರ್‌ ಮೃತದೇಹ ಸಮಾಧಿಗೆ ಹೈಕೋರ್ಟ್‌ ಅನುಮತಿ

ಬಾಲಕಿಯ ಅತ್ಯಾಚಾರದ ನಂತರ ಪೋಕ್ಸೊ ಕಾಯಿದೆ ಅಡಿ ಹಾಗೂ ಎನ್‌ಕೌಂಟರ್‌ಗೆ ಸಂಬಂಧಿಸಿದಂತೆ ದಾಖಲಾಗಿರುವ ಎರಡೂ ಎಫ್‌ಐಆರ್‌ಗಳ ಇಂಗ್ಲಿಷ್ ಅನುವಾದದ ಪ್ರತಿಯನ್ನು ಸಲ್ಲಿಸುವಂತೆ ಸರ್ಕಾರಕ್ಕೆ ನಿರ್ದೇಶಿಸಿರುವ ನ್ಯಾಯಾಲಯ.
ಅತ್ಯಾಚಾರ ಆರೋಪಿ ಎನ್‌ಕೌಂಟರ್: ರಿತೇಶ್‌ ಕುಮಾರ್‌ ಮೃತದೇಹ ಸಮಾಧಿಗೆ ಹೈಕೋರ್ಟ್‌ ಅನುಮತಿ
Published on

ಹುಬ್ಬಳ್ಳಿಯಲ್ಲಿ ಐದು ವರ್ಷದ ಬಾಲಕಿ ಮೇಲೆ ಅತ್ಯಾಚಾರ ಎಸಗಿ ಹತ್ಯೆಗೈದ ನಂತರ ಪೊಲೀಸ್ ಎನ್‌ಕೌಂಟರ್‌ಗೆ ಬಲಿಯಾಗಿರುವ ಬಿಹಾರ ಮೂಲದ ರಿತೇಶ್ ಕುಮಾರ್ ಮೃತದೇಹವನ್ನು ಸಮಾಧಿ ಮಾಡಲು ಕರ್ನಾಟಕ ಹೈಕೋರ್ಟ್ ಸೋಮವಾರ ಅನುಮತಿಸಿದೆ. ಈ ಸಂಬಂಧ ಶುಕ್ರವಾರ (ಮೇ 2) ಸಮಗ್ರ ಆದೇಶ ಹೊರಡಿಸಲಾಗುವುದು ಎಂದು ಹೇಳಿದೆ.

ಬಾಲಕಿಯ ಮೇಲಿನ ಅತ್ಯಾಚಾರ ಪ್ರಕರಣ ಆರೋಪಿ ಹಾಗೂ ಪೋಲಿಸ್ ಎನ್‌ಕೌಂಟರ್‌ನಲ್ಲಿ ಮೃತಪಟ್ಟಿರುವ ರಿತೇಶ್ ಕುಮಾರ್ ಮೃತದೇಹ ಇಡೀ ಪ್ರಕರಣಕ್ಕೆ ಪ್ರಮುಖ ಸಾಕ್ಷಿಯಾಗಿದ್ದು, ಮೃತದೇಹ ದಹನ ಮಾಡದಂತೆ ಹಾಗೂ ಶವವನ್ನು ಸಂರಕ್ಷಿಸಿ ಇಡುವಂತೆ ನಿರ್ದೇಶನ ನೀಡಬೇಕು ಎಂದು ಕೋರಿ ಪೀಪಲ್‌ ಫಾರ್‌ ಸಿವಿಲ್‌ ಲಿಬರ್ಟೀಸ್‌ ಸಂಘಟನೆ ಸಲ್ಲಿಸಿದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ಎನ್ ವಿ ಅಂಜಾರಿಯಾ ಮತ್ತು ನ್ಯಾಯಮೂರ್ತಿ ಕೆ ವಿ ಅರವಿಂದ್ ಅವರ ವಿಭಾಗೀಯ ಪೀಠ ವಿಚಾರಣೆ ನಡೆಸಿತು.

ಅಡ್ವೋಕೇಟ್ ಜನರಲ್ ಕೆ ಶಶಿಕಿರಣ್ ಶೆಟ್ಟಿ ಅವರು “ಏಪ್ರಿಲ್ 15ರಂದು ಮೃತದೇಹದ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ. ಮೃತನ ದೇಹದ ಭಾಗಗಳ ಮಾದರಿಯನ್ನು ಸಂಗ್ರಹಿಸಿ, ಸಂರಕ್ಷಣೆ ಮಾಡಲಾಗಿದೆ. ಏಪ್ರಿಲ್‌ 14ರಿಂದ ಮೃತನ ಶವವನ್ನು ಸಂರಕ್ಷಣೆ ಮಾಡಲಾಗಿದೆ. ಎಲ್ಲಾ ಪ್ರಯತ್ನಗಳ ಹೊರತಾಗಿಯೂ ಸದ್ಯ ಶವ ಕೊಳೆತಿರುವ ಪ್ರಮಾಣ ಹೆಚ್ಚಾಗಿದೆ. ಹೀಗಾಗಿ, ಶವವನ್ನು ಸಮಾಧಿ ಮಾಡಬೇಕಿದೆ. ಮುಂದೆ ತನಿಖೆಗೆ ಅಗತ್ಯಬಿದ್ದಲ್ಲಿ ಶವವನ್ನು ಹೊರತೆಗೆಯಬಹುದಾಗಿದೆ. ಶವವನ್ನು ಮತ್ತಷ್ಟು ಕೊಳೆಯುವುದನ್ನು ತಡೆಯಲು ಸಮಾಧಿ ಮಾಡುವುದು ಸದ್ಯ ಅಗತ್ಯ. ಇದಕ್ಕೆ ಅನುಮತಿಸಬೇಕು” ಎಂದು ಮನವಿ ಮಾಡಿದರು. ಇದಕ್ಕೆ ನ್ಯಾಯಾಲಯವು ಒಪ್ಪಿದ್ದು, ವಿಸ್ತೃತ ಆದೇಶ ಮಾಡುವುದಾಗಿ ಹೇಳಿದೆ.

Also Read
ಹುಬ್ಬಳ್ಳಿ ಅತ್ಯಾಚಾರ ಆರೋಪಿ ಎನ್‌ಕೌಂಟರ್ ಪ್ರಕರಣ: ಹೈಕೋರ್ಟ್‌ಗೆ ಸ್ಥಿತಿಗತಿ ವರದಿ ಸಲ್ಲಿಸಿದ ರಾಜ್ಯ ಸರ್ಕಾರ

ಘಟನೆ ನಂತರ ಪೋಕ್ಸೊ ಕಾಯಿದೆ ಹಾಗೂ ಎನ್‌ಕೌಂಟರ್‌ಗೆ ಸಂಬಂಧಿಸಿದಂತೆ ದಾಖಲಾಗಿರುವ ಎರಡೂ ಎಫ್‌ಐಆರ್‌ಗಳ ಇಂಗ್ಲಿಷ್ ಅನುವಾದದ ಪ್ರತಿಯನ್ನು ಸಲ್ಲಿಸುವಂತೆ ಸರ್ಕಾರಕ್ಕೆ ನಿರ್ದೇಶಿಸಿರುವ ನ್ಯಾಯಾಲಯವು ಪ್ರಕರಣವನ್ನು ಸ್ವತಂತ್ರ ತನಿಖಾ ಸಂಸ್ಥೆಗೆ ವಹಿಸುವುದೂ ಒಳಗೊಂಡು ಅರ್ಜಿದಾರರ ಮನವಿ ಸೇರಿದಂತೆ ಇಡೀ ಪ್ರಕರಣದ ಬಗ್ಗೆ ಸಮಗ್ರ ಆದೇಶ ಹೊರಡಿಸಲಾಗುವುದು ಎಂದು ಹೇಳಿ ವಿಚಾರಣೆಯನ್ನು ಮೇ 2ಕ್ಕೆ ಮುಂದೂಡಿತು.

Kannada Bar & Bench
kannada.barandbench.com