CJ Ritu Raj Awasthi and Justice Suraj Govindraj, Karnataka HC

 
ಸುದ್ದಿಗಳು

ಮೆಗ್ಗಾನ್‌ ಆಸ್ಪತ್ರೆ ಜಾಗದಲ್ಲಿ ಒತ್ತುವರಿ: ವಸ್ತುಸ್ಥಿತಿ ವರದಿ ಸಲ್ಲಿಸಲು ಸರ್ಕಾರಕ್ಕೆ ಕಾಲಾವಕಾಶ ನೀಡಿದ ಹೈಕೋರ್ಟ್‌

ಮೆಗ್ಗಾನ್ ಆಸ್ಪತ್ರೆಗೆ ಸೇರಿದ ಜಾಗ, ಅಲ್ಲಿ ನಡೆದಿರುವ ಒತ್ತುವರಿ ಗುರುತಿಸಲು ಸರ್ಕಾರ ಹಾಗೂ ಆಸ್ಪತ್ರೆ ಜಂಟಿ ಸರ್ವೇ ನಡೆಸುತ್ತಿದೆ. ಭಾರಿ ಪ್ರಮಾಣದಲ್ಲಿ ಒತ್ತುವರಿಯಾಗಿದ್ದು, ಸರ್ವೇ ನಡೆಸಲು ಕಾಲಾವಕಾಶ ಬೇಕು ಎಂದು ಸರ್ಕಾರದ ವಕೀಲರು ಹೇಳಿದರು.

Bar & Bench

ಶಿವಮೊಗ್ಗದ ಮೆಗ್ಗಾನ್ ಸರ್ಕಾರಿ ಜಿಲ್ಲಾ ಆಸ್ಪತ್ರೆಗೆ ಸೇರಿದ ಜಾಗದಲ್ಲಿನ ಒತ್ತುವರಿ ತೆರವಿಗೆ ಸಂಬಂಧಿಸಿದಂತೆ ನೀಡಿರುವ ಮಧ್ಯಂತರ ನಿರ್ದೇಶನ ಪಾಲನೆ ಕುರಿತ ವಸ್ತುಸ್ಥಿತಿ ವರದಿ ಸಲ್ಲಿಸಲು ಸರ್ಕಾರಕ್ಕೆ ಕರ್ನಾಟಕ ಹೈಕೋರ್ಟ್ ಮೂರು ವಾರಗಳ ಕಾಲಾವಕಾಶ ನೀಡಿದೆ.

ಶಿವಮೊಗ್ಗದ ಜಯನಗರ ನಿವಾಸಿ ಜಿ ರಾಮು ಮತ್ತು ವಿನೋಭಾ ನಗರ ನಿವಾಸಿ ಮೋಹನ್ ಕುಮಾರ್ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ ಮತ್ತು ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರಿದ್ದ ಪೀಠ ಈಚೆಗೆ ವಿಚಾರಣೆ ನಡೆಸಿತು.

ಸರ್ಕಾರದ ಪರ ವಕೀಲರು “ಮೆಗ್ಗಾನ್ ಆಸ್ಪತ್ರೆಗೆ ಸೇರಿದ ಜಾಗ ಹಾಗೂ ಅಲ್ಲಿ ನಡೆದಿರುವ ಒತ್ತುವರಿ ಗುರುತಿಸಲು ಸರ್ಕಾರ ಹಾಗೂ ಆಸ್ಪತ್ರೆ ಜಂಟಿ ಸರ್ವೇ ನಡೆಸುತ್ತಿವೆ. ಜಾಗವು ಭಾರಿ ಪ್ರಮಾಣದಲ್ಲಿ ಒತ್ತುವರಿಯಾಗಿದ್ದು, ಸರ್ವೇ ನಡೆಸಲು ಮತ್ತಷ್ಟು ಕಾಲಾವಕಾಶದ ಅಗತ್ಯವಿದೆ” ಎಂದರು. ಮೆಗ್ಗಾನ್ ಆಸ್ಪತ್ರೆ ಪರ ವಕೀಲರು, ಅರ್ಜಿಗೆ ಆಕ್ಷೇಪಣೆ ಸಲ್ಲಿಸಲು ಕಾಲಾವಕಾಶ ನೀಡುವಂತೆ ಮನವಿ ಮಾಡಿದರು.

ಅದನ್ನು ಪರಿಗಣಿಸಿದ ಪೀಠವು ಮೆಗ್ಗಾನ್ ಆಸ್ಪತ್ರೆಗೆ ಸೇರಿದ ಜಾಗ ಯಾವುದೇ ರೀತಿಯಲ್ಲಿ ಒತ್ತುವರಿಯಾಗದಂತೆ ನೋಡಿಕೊಳ್ಳಬೇಕು ಎಂದು ಸರ್ಕಾರಕ್ಕೆ ನಿರ್ದೇಶಿಸಿ 2021ರ ಸೆಪ್ಟೆಂಬರ್‌ 6ರಂದು ನೀಡಿದ್ದ ಮಧ್ಯಂತರ ನಿರ್ದೇಶನ ಪಾಲನೆ ಕುರಿತ ವಸ್ತುಸ್ಥಿತಿ ವರದಿಯನ್ನು ಸರ್ಕಾರ ಮೂರು ವಾರಗಳಲ್ಲಿ ಸಲ್ಲಿಸಬೇಕು ಎಂದು ನಿರ್ದೇಶಿಸಿತು. ಜತೆಗೆ, ಅರ್ಜಿಗೆ ಮೂರು ವಾರಗಳಲ್ಲಿ ಆಕ್ಷೇಪಣೆ ಸಲ್ಲಿಸುವಂತೆ ಆಸ್ಪತ್ರೆ ಪರ ವಕೀಲರಿಗೆ ಸೂಚಿಸಿ ವಿಚಾರಣೆಯನ್ನು ಮಾರ್ಚ್‌ 29ಕ್ಕೆ ಮುಂದೂಡಿತು.

ಆಸ್ಪತ್ರೆ ಇರುವ ಜಾಗ ತುಂಬ ಹಳೆಯದಾಗಿದ್ದು, ಹಲವು ದಶಕಗಳಿಂದ ಅಲ್ಲಿ ಒತ್ತುವರಿ ನಡೆದಿದೆ. ಜಾಗದ ಜಂಟಿ ಸಮೀಕ್ಷೆಗೆ ಸೂಕ್ತ ಸಹಕಾರ ದೊರೆಯುತ್ತಿಲ್ಲ ಎಂದು ಸರ್ಕಾರದ ಪರ ವಕೀಲರು ಪೀಠಕ್ಕೆ ತಿಳಿಸಿದರು. ಅದಕ್ಕೆ ಸಿಜೆ, ಯಾರು ತಾನೇ ತಾವು ಮಾಡಿರುವ ಒತ್ತುವರಿಯನ್ನು ತೆರವು ಮಾಡಿ ಎಂದು ಹೇಳುತ್ತಾರೆ ಎಂದು ಪ್ರಶ್ನಿಸಿದರು. ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಮಧ್ಯಪ್ರವೇಶಿಸಿ, ರಾಜ್ಯದ ಅತಿ ಹಳೆಯ ಆಸ್ಪತ್ರೆಗಳಲ್ಲಿ ಇದೂ ಒಂದಾಗಿದೆ. ಮೈಸೂರು ಮಹಾರಾಜರೂ ಸಹ 70 ಎಕರೆ ಭೂಮಿ ಮಂಜೂರು ಮಾಡಿದ್ದಾರೆ ಎಂದರು. ಆಗ ಮುಖ್ಯ ನ್ಯಾಯಮೂರ್ತಿಗಳು, ಒಂದು ವೇಳೆ ಒತ್ತುವರಿ ತೆರವುಗೊಳಿಸಲು ಸರ್ಕಾರಕ್ಕೆ ಸಾಧ್ಯವಾಗದಿದ್ದರೆ, ಆಸ್ಪತ್ರೆಯನ್ನೇ ತೆರವು ಮಾಡಿಬಿಡಿ ಎಂದು ಲಘು ಧಾಟಿಯಲ್ಲಿ ಹೇಳಿದರು.

ಶಿವಮೊಗ್ಗದ ಮೆಗ್ಗಾನ್ ಜಿಲ್ಲಾ ಆಸ್ಪತ್ರೆ ಬ್ರಿಟಿಷರ ಕಾಲದಲ್ಲಿ ನಿರ್ಮಾಣವಾಗಿದೆ. ಆಸ್ಪತ್ರೆಗೆ ಸೇರಿದ 172 ಎಕರೆ ಜಾಗದಲ್ಲಿ 70 ಎಕರೆ ಭೂಮಿ ಮೈಸೂರು ಮಹಾರಾಜರಿಂದ ಬಳುವಳಿಯಾಗಿ ಬಂದಿದೆ. ಆಸ್ಪತ್ರೆಗೆ ಸೇರಿದ ಸಾವಿರಾರು ಕೋಟಿ ರೂಪಾಯಿ ಮೌಲ್ಯದ ಜಾಗವನ್ನು ಕೆಲ ಖಾಸಗಿ ವ್ಯಕ್ತಿಗಳು ಒತ್ತುವರಿ ಮಾಡಿಕೊಂಡು, ಅನಧಿಕೃತ ಕಟ್ಟಡಗಳನ್ನು ನಿರ್ಮಾಣ ಮಾಡಿದ್ದಾರೆ. ಆದ್ದರಿಂದ, ಒತ್ತುವರಿ ತೆರವುಗೊಳಿಸಲು ಸಂಬಂಧಪಟ್ಟ ಪ್ರಾಧಿಕಾರಗಳಿಗೆ ನಿರ್ದೇಶಿಸಬೇಕು ಎಂದು ಅರ್ಜಿದಾರರು ಕೋರಿದ್ದಾರೆ.