High Court of Karnataka  
ಸುದ್ದಿಗಳು

ಮೂರು ವರ್ಷಗಳ ಎಲ್‌ಎಲ್‌ಬಿ ಕೋರ್ಸ್‌ ವಿದ್ಯಾರ್ಥಿಗಳ ಅಂತಿಮ ಸೆಮಿಸ್ಟರ್‌ ಪರೀಕ್ಷೆ ಮುಂದೂಡಿಕೆ: ಕೆಎಸ್‌ಎಲ್‌ಯು

ಕೆಎಸ್‌ಎಲ್‌ಯುನ ಮಧ್ಯಂತರ ಸೆಮಿಸ್ಟರ್‌ ವಿದ್ಯಾರ್ಥಿಗಳಿಗೆ ಆಫ್‌ಲೈನ್‌ ಮೂಲಕ ಪರೀಕ್ಷೆಗಳನ್ನು ನಡೆಸುವ ಭಾರತೀಯ ವಕೀಲರ ಪರಿಷತ್ತಿನ (ಬಿಸಿಐ) ಸುತ್ತೋಲೆಯನ್ನು ಕಳೆದ ವಾರ ಕರ್ನಾಟಕ ಹೈಕೋರ್ಟ್‌ ವಜಾ ಮಾಡಿತ್ತು.

Bar & Bench

ಕೋವಿಡ್‌ ಸಾಂಕ್ರಾಮಿಕತೆಯ ಹಿನ್ನೆಲೆಯಲ್ಲಿ ಮೂರು ವರ್ಷಗಳ ಎಲ್‌ಎಲ್‌ಬಿ ಕೋರ್ಸ್‌ನ ಅಂತಿಮ ಸೆಮಿಸ್ಟರ್‌ ಪರೀಕ್ಷೆಗಳನ್ನು ಮುಂದೂಡಿರುವುದಾಗಿ ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯವು ಗುರುವಾರ ಕರ್ನಾಟಕ ಹೈಕೋರ್ಟ್‌ಗೆ ಮಾಹಿತಿ ನೀಡಿದೆ.

ಪ್ರಸಕ್ತ ವರ್ಷದಲ್ಲಿ ಕೆಎಸ್‌ಎಲ್‌ಯುನಲ್ಲಿ ಮೂರು ವರ್ಷಗಳ ಎಲ್‌ಎಲ್‌ಬಿ ಕೋರ್ಸ್‌ ಕಲಿಯುತ್ತಿರುವ ವಿದ್ಯಾರ್ಥಿಗಳಿಗೆ ಅಂತಿಮ ಸೆಮಿಸ್ಟರ್‌ ಪರೀಕ್ಷೆ ನಡೆಸುವುದನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಮನವಿಗಳ ವಿಚಾರಣೆ ವೇಳೆ ನ್ಯಾಯಮೂರ್ತಿ ಆರ್‌ ದೇವದಾಸ್‌ ಅವರಿದ್ದ ಏಕಸದಸ್ಯ ಪೀಠಕ್ಕೆ ಈ ವಿವರಣೆ ನೀಡಲಾಗಿದೆ.

ಕೆಎಸ್‌ಎಲ್‌ಯುನ ಮಧ್ಯಂತರ ಸೆಮಿಸ್ಟರ್‌ ವಿದ್ಯಾರ್ಥಿಗಳಿಗೆ ಆಫ್‌ಲೈನ್‌ ಮೂಲಕ ಪರೀಕ್ಷೆಗಳನ್ನು ನಡೆಸುವ ಭಾರತೀಯ ವಕೀಲರ ಪರಿಷತ್ತಿನ (ಬಿಸಿಐ) ಸುತ್ತೋಲೆಯನ್ನು ಕಳೆದ ವಾರ ನ್ಯಾಯಾಲಯ ವಜಾ ಮಾಡಿತ್ತು. ಆ ಪ್ರಕರಣದಲ್ಲಿ ತೀರ್ಪು ಪ್ರಕಟಿಸುತ್ತಿದ್ದಂತೆ ಮತ್ತೊಬ್ಬರು ವಕೀಲರು ಮೂರು ವರ್ಷಗಳ ಎಲ್‌ಎಲ್‌ಬಿ ಕೋರ್ಸ್‌ ವಿದ್ಯಾರ್ಥಿಗಳಿಗೂ ಅನ್ವಯಿಸುವಂತೆ ಅದೇ ತೆರನಾದ ಆದೇಶ ಹೊರಡಿಸಲು ಮನವಿ ಮಾಡಿದ್ದರು.

ಇದಕ್ಕೆ ನಿರಾಕರಿಸಿದ್ದ ನ್ಯಾಯಮೂರ್ತಿ ದೇವದಾಸ್‌ ಅವರು “ನೀವು ನನಗೆ ಮುಂಚೆಯೇ ತಿಳಿಸಿದ್ದರೆ ಅದನ್ನು ಪರಿಗಣಿಸುತ್ತಿದ್ದೆ. ಇದಲ್ಲದೇ ಮೂರು ವರ್ಷದ ಕೋರ್ಸ್‌ಗೆ ಸಂಬಂಧಿಸಿದಂತೆ ಅರ್ಜಿದಾರರೇ ಇಲ್ಲ… ಇದು ಪಿಐಎಲ್‌ ಅಲ್ಲ,” ಎಂದು ಹಿಂದೆ ಹೇಳಿದ್ದರು.

ಮೂರು ವರ್ಷಗಳ ಎಲ್‌ಎಲ್‌ಬಿ ಪರೀಕ್ಷೆಗಳನ್ನು ನಡೆಸುವ ತೀರ್ಮಾನವನ್ನು ಪ್ರಶ್ನಿಸಿದ್ದ ಅರ್ಜಿಯ ವಿಚಾರಣೆ ಗುರುವಾರ ಬಂದ ವೇಳೆ ನ್ಯಾಯಮೂರ್ತಿ ದೇವದಾಸ್‌ ಅವರು ಪರೀಕ್ಷೆಗಳ ದಿನಾಂಕವನ್ನು ಯಾವಾಗ ನಿಗದಿ ಮಾಡಲಾಗಿದೆ ಎಂದು ಪ್ರಶ್ನಿಸಿದರು. ಸೋಮವಾರದಿಂದ ಪರೀಕ್ಷೆ ನಡೆಸಲು ಉದ್ದೇಶಿಸಲಾಗಿತ್ತು. ಆದರೆ, ಈಗ ಅದನ್ನು ಮುಂದೂಡಲಾಗಿದೆ ಎಂದು ಕೆಎಸ್‌ಎಲ್‌ಯು ಪರ ವಕೀಲರು ಪೀಠಕ್ಕೆ ತಿಳಿಸಿದರು.

ಪ್ರಕರಣದ ವಿಚಾರಣೆಯನ್ನು ಶುಕ್ರವಾರಕ್ಕೆ ನಿಗದಿಗೊಳಿಸಿದರೆ ಈ ಸಂಬಂಧ ಸುತ್ತೋಲೆಯನ್ನು ಪ್ರಸ್ತುತಪಡಿಸಲಾಗುವುದು ಎಂದರು. ಈ ಹಿನ್ನೆಲೆಯಲ್ಲಿ ಪೀಠವು ವಿಚಾರಣೆಯನ್ನು ಮುಂದೂಡಿತು.

ಸಾಂಕ್ರಾಮಿಕತೆಯ ನಡುವೆ ಪರೀಕ್ಷೆಗಳನ್ನು ನಡೆಸುವುದಕ್ಕೆ ಸಂಬಂಧಿಸಿದಂತೆ ವಿಶ್ವವಿದ್ಯಾಲಯ ಅನುದಾನ ಆಯೋಗವು (ಯುಜಿಸಿ) ಏಪ್ರಿಲ್‌ 27ರಂದು ಮಾರ್ಗಸೂಚಿ ಬಿಡುಗಡೆ ಮಾಡಿತ್ತು. ಹಿಂದಿನ ಸೆಮಿಸ್ಟರ್‌ನಲ್ಲಿ ಪಡೆದ ಅಂಕಗಳು ಹಾಗೂ ಆಂತರಿಕ ಮೌಲ್ಯಮಾಪನವನ್ನು ಆಧರಿಸಿ ವಿದ್ಯಾರ್ಥಿಗಳಿಗೆ ಗ್ರೇಡಿಂಗ್‌ ನೀಡಬಹುದು ಎಂದು ಮಾರ್ಗಸೂಚಿಯಲ್ಲಿ ತಿಳಿಸಲಾಗಿತ್ತು. ಇದರ ಬೆನ್ನಿಗೇ ಭಾರತೀಯ ವಕೀಲರ ಪರಿಷತ್ತು (ಬಿಸಿಐ) ಜೂನ್‌ 9ರಂದು ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿದ್ದು, ಇದರಲ್ಲಿ ವಿಶ್ವವಿದ್ಯಾಲಯ/ ಕಾಲೇಜುಗಳು ತೆರೆದ ಬಳಿಕ ಮಧ್ಯಂತರ ಸೆಮಿಸ್ಟರ್‌ ಪರೀಕ್ಷೆಗಳನ್ನು ನಡೆಸುವಂತೆ ನಿರ್ದೇಶಿಸಿತ್ತು.

ವಿಶ್ವವಿದ್ಯಾಲಯ ತೆರೆದ ಬಳಿಕ ವಿದ್ಯಾರ್ಥಿಗಳು ಮುಂದಿನ ಸೆಮಿಸ್ಟರ್‌ಗೆ ತೆರಳಿರುತ್ತಾರೆ. ಈ ಸಂದರ್ಭದಲ್ಲಿ ಪರೀಕ್ಷೆ ನಡೆಸುವುದು ವಿಶ್ವವಿದ್ಯಾಲಯ ಅನುದಾನ ಆಯೋಗದ (ಯುಜಿಸಿ) ವ್ಯಾಪ್ತಿ ಮೀರಿರುತ್ತದೆ ಎಂದು ವಾದಿಸಲಾಗಿತ್ತು. ಇದೇ ವೇಳೆ, ನವೆಂಬರ್‌ 1ರಂದು ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿರುವ ಬಿಸಿಐ ಮಧ್ಯಂತರ ಸೆಮಿಸ್ಟರ್‌ ಪರೀಕೆ ನಡೆಸಲು ಕಾನೂನು ವಿಶ್ವವಿದ್ಯಾಲಯಗಳಿಗೆ ಅನುಮತಿಸಿದೆ ಎಂದು ಮನವಿಯಲ್ಲಿ ಉಲ್ಲೇಖಿಸಲಾಗಿತ್ತು.

ಮೂರು ವರ್ಷಗಳ ಎಲ್‌ಎಲ್‌ಬಿ ವಿದ್ಯಾರ್ಥಿಗಳಿಗೆ ಮಧ್ಯಂತರ ಸೆಮಿಸ್ಟರ್‌ ಪರೀಕ್ಷೆ ನಡೆಸಲು ಅರ್ಜಿದಾರರು ವಿರೋಧ ವ್ಯಕ್ತಪಡಿಸಿದ್ದು, ಬಿಸಿಐ ಹೊರಡಿಸಿರುವ ಮಾರ್ಗಸೂಚಿಗಳು ಯುಜಿಸಿ ಮಾರ್ಗಸೂಚಿಗಳಿಗೆ ಪೂರಕವಾಗಿಲ್ಲ ಎಂದು ವಾದಿಸಲಾಗಿದೆ. ಕೋವಿಡ್‌ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಆನ್‌ಲೈನ್‌ ಪರೀಕ್ಷೆ ನಡೆಸುವಂತೆ ಈಚೆಗೆ ಆದೇಶಿಸಿದ್ದ ಕರ್ನಾಟಕ ಮತ್ತು ಕೇರಳ ಹೈಕೋರ್ಟ್‌ ತೀರ್ಪುಗಳನ್ನು ಆಧರಿಸಲಾಗಿದೆ. ವಕೀಲರಾದ ವಿ ಜೆ ಜೋಸೆಫ್‌ ಮತ್ತು ಹರೀಶ್‌ ಭಂಡಾರಿ ಅವರು ಅರ್ಜಿದಾರರನ್ನು ಪ್ರತಿನಿಧಿಸಿದ್ದರು.