ಸುದ್ದಿಗಳು

ಇ-ಪ್ರೊಕ್ಯೂರ್‌ಮೆಂಟ್‌ ಪೋರ್ಟಲ್‌ ಹ್ಯಾಕಿಂಗ್: ಶ್ರೀಕಿ ಸೇರಿ 18 ಮಂದಿ ವಿರುದ್ಧ ಆರೋಪ ಪಟ್ಟಿ ಸಲ್ಲಿಸಿದ ಇ ಡಿ

ರಾಜ್ಯ ಸರ್ಕಾರದ ಪೋರ್ಟಲ್‌ ಹ್ಯಾಕ್‌ ಮಾಡಿದ ಬಳಿಕ ಆರೋಪಿ ಶ್ರೀಕಿಯು ಅದನ್ನು ಬಿಟ್‌ ಕಾಯಿನ್‌ ಆಗಿ ಪರಿವರ್ತಿಸಿ, ಮಾದಕ ವಸ್ತು ಖರೀದಿಗೆ ಬಳಕೆ ಮಾಡಿದ್ದಾನೆ ಎಂದು ಆರೋಪಿಸಲಾಗಿತ್ತು.

Bar & Bench

ರಾಜ್ಯ ಸರ್ಕಾರದ ಇ-ಪ್ರೊಕ್ಯೂರ್‌ಮೆಂಟ್‌ ಪೋರ್ಟಲ್‌ ಅನ್ನು 2019ರಲ್ಲಿ ಹ್ಯಾಕ್‌ ಮಾಡಿ ಅದರಲ್ಲಿ 11.5 ಕೋಟಿ ರೂಪಾಯಿ ಕಳವು ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಟ್‌ ಕಾಯಿನ್‌ ಹಗರಣದ ಪ್ರಮುಖ ಆರೋಪಿ ಶ್ರೀಕೃಷ್ಣ ಅಲಿಯಾಸ್‌ ಶ್ರೀಕಿ ಸೇರಿದಂತೆ 18 ಮಂದಿ ಇತರರ ವಿರುದ್ಧ ಜಾರಿ ನಿರ್ದೇಶನಾಲಯವು ಸೋಮವಾರ ವಿಶೇಷ ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸಿದೆ ಎಂದು ಸುದ್ದಿ ಸಂಸ್ಥೆ ಯುಎನ್‌ಐ ವರದಿ ಮಾಡಿದೆ.

ಅಕ್ರಮ ಹಣ ವರ್ಗಾವಣೆ ಕಾಯಿದೆ ಅಡಿಯ ವಿವಿಧ ಸೆಕ್ಷನ್‌ಗಳ ಅಪರಾಧಕ್ಕೆ ಸಂಬಂಧಿಸಿದಂತೆ ಶ್ರೀಕಿ, ವಿನೀತ್‌ ಕುಮಾರ್‌, ಸುಶೀಲ್‌ ಚಂದ್ರ ಮತ್ತು ಹರ್ವೀಂದರ್‌ ಸಿಂಗ್‌ ವಿರುದ್ಧ ಆರೋಪ ಪಟ್ಟಿ ಸಲ್ಲಿಸಲಾಗಿದೆ ಎಂದು ಹೇಳಲಾಗಿದೆ.

ರಾಜ್ಯ ಸರ್ಕಾರದ ಪೋರ್ಟಲ್‌ ಹ್ಯಾಕ್‌ ಮಾಡಿದ ಬಳಿಕ ಆರೋಪಿ ಶ್ರೀಕಿಯು ಅದನ್ನು ಬಿಟ್‌ ಕಾಯಿನ್‌ ಆಗಿ ಪರಿವರ್ತಿಸಿ, ಮಾದಕ ವಸ್ತು ಖರೀದಿಗೆ ಬಳಕೆ ಮಾಡಿದ್ದಾನೆ ಎಂದು ಆರೋಪಿಸಲಾಗಿತ್ತು. ಬಿಜೆಪಿ ನೇತೃತ್ವದ ರಾಜ್ಯ ಸರ್ಕಾರವು ಶ್ರೀಕಿ ಮತ್ತು ಇತರರ ವಿರುದ್ಧ ಪ್ರಕರಣ ದಾಖಲಿಸಿತ್ತು ಎಂದು ಯುಎನ್‌ಐ ವರದಿ ಮಾಡಿದೆ.

ಈಚೆಗೆ ರಾಜ್ಯ ಸರ್ಕಾರವು ಆರ್ಥಿಕ ಅಪರಾಧಗಳ ಹೆಚ್ಚುವರಿ ಪೊಲೀಸ್‌ ಮಹಾನಿರ್ದೇಶಕ ಮನೀಶ್‌ ಖರ್ಬೀಕರ್‌ ನೇತೃತ್ವದಲ್ಲಿ ಬಿಟ್‌ಕಾಯಿನ್‌ ಹಗರಣಕ್ಕೆ ಸಂಬಂಧಿಸಿದಂತೆ ವಿಶೇಷ ತನಿಖಾ ತಂಡವನ್ನು ರಚಿಸಿದೆ. ಇದರಲ್ಲಿ ಶ್ರೀಕಿ ಪ್ರಮುಖ ಆರೋಪಿಯಾಗಿದ್ದಾನೆ. ಪ್ರಮುಖ ರಾಜಕಾರಣಿಗಳು, ಅಧಿಕಾರಿಗಳು ಹಾಗೂ ಉದ್ಯಮಿಗಳು ಹಗರಣದಲ್ಲಿ ಭಾಗಿಯಾಗಿದ್ದಾರೆ ಎನ್ನಲಾಗಿದೆ.