![[ಬಿಟಿಸಿ ಹಗರಣ] ರಾಹುಲ್, ಮಲ್ಯ ಖಾತೆಗಳು, ಎನ್‌ಡಿಟಿವಿ, ಇ-ಪ್ರೊಕ್ಯೂರ್‌ಮೆಂಟ್ ತಾಣಗಳ ಹ್ಯಾಕ್ ಮಾಡಿದ್ದ ಶ್ರೀಕಿ](https://gumlet.assettype.com/barandbench-kannada%2F2021-11%2Fe96ca43c-8a4e-4a5c-9448-1f985757fff4%2FWhatsApp_Image_2021_11_13_at_5_06_09_PM.jpeg?auto=format%2Ccompress&fit=max)
ರಾಷ್ಟ್ರಮಟ್ಟದಲ್ಲಿ ಸಂಚಲನ ಸೃಷ್ಟಿಸಿರುವ ಬಿಟ್‌ಕಾಯಿನ್ ಹಗರಣದ ಪ್ರಮುಖ ರೂವಾರಿ ಬೆಂಗಳೂರಿನ ಶ್ರೀ ಕೃಷ್ಣ ಅಲಿಯಾಸ್ ಶ್ರೀಕಿ ಸ್ವಯಂಪ್ರೇರಿತವಾಗಿ ನೀಡಿರುವ ಹೇಳಿಕೆಯನ್ನು ಸಿಸಿಬಿ ಪೊಲೀಸರು ಬೆಂಗಳೂರಿನ ಮೊದಲನೇ ಹೆಚ್ಚುವರಿ ಮುಖ್ಯ ಮ್ಯಾಜಿಸ್ಟ್ರೇಟ್ ನ್ಯಾಯಾಲಯಕ್ಕೆ ಸಲ್ಲಿಸಿದ್ದಾರೆ.
ಶ್ರೀಕಿ ನೀಡಿರುವ ಹೇಳಿಕೆಯಲ್ಲಿ ತನ್ನ ಶಿಕ್ಷಣ, ಹ್ಯಾಕಿಂಗ್, ಬಿಟ್‌ಕಾಯಿನ್ ಜಾಲದಲ್ಲಿ ನುಸುಳಿದ್ದು, ಅಂತಾರಾಷ್ಟ್ರೀಯ ಹ್ಯಾಕರ್‌ಗಳ ಸಂಪರ್ಕ, ಈ ಪ್ರಕ್ರಿಯೆಯಲ್ಲಿ ಯಾವೆಲ್ಲಾ ವೆಬ್‌ಸೈಟ್‌ಗಳನ್ನು ಹ್ಯಾಕ್ ಮಾಡಲಾಗಿದೆ. ತನ್ನ ಐಷಾರಾಮಿ ಬದುಕು ಕುರಿತಂತೆ ಹಲವಾರು ವಿಚಾರಗಳ ಬಗ್ಗೆ ಉಲ್ಲೇಖಿಸಿದ್ದಾನೆ. ಶ್ರೀಕಿ ಹೇಳಿಕೆಯಲ್ಲಿ ವಿವರಿಸಿರುವ ಪ್ರಮುಖ ಅಂಶಗಳು ಇಲ್ಲಿವೆ:
ಹತ್ತನೇ ತರಗತಿಯಲ್ಲಿರುವಾಗಲೇ ಆಸ್ಟ್ರೇಲಿಯಾದ ಸಿಡ್ನಿಯಲ್ಲಿರುವ ಸ್ನೇಹಿತ ಶೇನ್ ಡಫಿ ಅಲಿಯಾಸ್ ಶೇನ್ ಸಿಗೆಕ್ಸ್3/ ಸಿಗೆಕ್ಸ್ ಜೊತೆಗೂಡಿ ವಿವಿಧ ವೆಬ್‌ತಾಣಗಳ ದತ್ತಾಂಶವನ್ನು ಡಂಪಿಂಗ್ ಮಾಡಿ ಪೇಪಾಲ್ ಖಾತೆಗಳನ್ನು ಪರಿಶೀಲಿಸಲು ಸ್ಕ್ರಿಪ್ಟ್ ಬರೆದಿದ್ದವು. ಪೇ ಪಾಲ್ ಖಾತೆಯ ಬಳಕೆದಾರರ ಹೆಸರು ಮತ್ತು ಪಾಸ್‌ವರ್ಡ್ ಶೇನ್ ಡಫಿಗೆ ಸಿಕ್ಕಿತ್ತು.
ಕ್ರಿಪ್ಟೊಕರೆನ್ಸಿ ಕ್ಷೇತ್ರದಲ್ಲಿ ಆಡುಭಾಷೆಯಲ್ಲಿ ಬಿಟಿಸಿ ಎಂದೇ ಪ್ರಸಿದ್ಧವಾಗಿದ್ದ ಬಿಟ್‌ಕಾಯಿನ್ ಬಗ್ಗೆ ನನಗೆ ತಿಳಿದಾಗ ಅದರ ಬೆಲೆಯು 100 ಡಾಲರ್ ಇತ್ತು.
ಬಿಟ್‌ಕಾಯಿನ್ ಅನಾಮಧೇಯ ರೀತಿಯಲ್ಲಿ ಇರುವುದರಿಂದ ರಾಸ್ ಉಲ್ಬ್ರಿಚ್ ಎಂಬಾತ ಮೊದಲ ಡಾರ್ಕ್‌ನೆಟ್ ಮಾರುಕಟ್ಟೆ ಸೃಷ್ಟಿಸಿದ್ದು, ಈ ಮೂಲಕ ಆರಂಭದಲ್ಲಿ ತಾನು ತನ್ನ ವೈಯಕ್ತಿಕ ಬಳಕೆಗೆ ಮಾದಕ ವಸ್ತುಗಳನ್ನು ಬಿಟ್‌ಕಾಯಿನ್ ಬಳಸುವ ಮೂಲಕ ಭಾರತಕ್ಕೆ ಆಮದು ಮಾಡಿಕೊಳ್ಳುತ್ತಿದ್ದೆ. ಈ ಮಾರುಕಟ್ಟೆಯನ್ನು ಸಿಲ್ಕ್ ರೋಡ್ 1.0 ಎಂದು ಕರೆಯಲಾಗುತ್ತಿತ್ತು.
ಎರಡು ವರ್ಷಗಳಲ್ಲಿ ನಾನು ಹಲವು ಪ್ಯಾಕೇಜ್‌ಗಳನ್ನು ಆರ್ಡರ್ ಮಾಡಿದ್ದು, ಇವೆಲ್ಲವೂ ಸುಂಕ ಇಲಾಖೆಯ ಪರಿಶೀಲನೆಯಲ್ಲಿ ಸಿಲುಕದೆ ಹೊರಬಂದಿವೆ. ಮಾದಕ ವಸ್ತು ಮತ್ತು ಅಪರಾಧಗಳನ್ನೇ ಬದುಕಾಗಿಸಿಕೊಂಡಿದ್ದರಿಂದ ಮಾದಕ ವಸ್ತುಗಳ ಹವ್ಯಾಸಿ ಬಳಕೆದಾರನಾಗಿ ಬದಲಾಗಿದ್ದು, ಅವುಗಳನ್ನು ರೇವ್ ಪಾರ್ಟಿಗೆ ಪೂರೈಸುತ್ತಿದ್ದೆ.
ಬೆಂಗಳೂರಿನಲ್ಲಿ ಎಂಜಿನಿಯರಿಂಗ್ ಅರ್ಧಕ್ಕೆ ಬಿಟ್ಟು ಎಂಡೋವೆನ್ ತಾಂತ್ರಿಕ ವಿಶ್ವವಿದ್ಯಾಲಯದ ಬಿ. ಎಸ್‌ಸಿ ಕಂಪ್ಯೂಟರ್ ಸೈನ್ಸ್‌ನ ಪದವಿಗಾಗಿ ನೋಂದಾಯಿಸಿ ಆಮ್‌ಸ್ಟರ್ಡ್ಯಾಮ್‌ಗೆ ತೆರಳಿದೆ. ಈ ಸಂದರ್ಭದಲ್ಲಿ ಎಎಂಎಸ್‌ನಲ್ಲಿ ಬಿಟ್‌ಕಾಯಿನ್ ಉದ್ಯಮದ ಜಾಲದಲ್ಲಿ ನನ್ನ ಸಂಪರ್ಕವನ್ನು ಹೆಚ್ಚಿಸಿಕೊಂಡೆ. ನನ್ನ ಸ್ನೇಹಿತರಾದ ಟಿಮ್ ಕಮೇರ್ ಮತ್ತು ಇಡು ಡ್ರೈಸೆನ್ ಅವರು ಬಿಟ್‌ಕಾಯಿನ್ ಬದಲಾಯಿಸಲು ಸ್ಯಾಟೋಸ್.ಎನ್‌ಎಲ್ ಎಂಬ ಕಾನೂನುಬದ್ಧ ವಿನಿಮಯ ಕೇಂದ್ರವನ್ನು ಆರಂಭಿಸಿದ್ದರು. ಎಬಿಎನ್ ಆಮ್ರೋ ಬ್ಯಾಂಕ್‌ನ ಕಡ್ಡಾಯ ಕೆವೈಸಿ ನಿಯಮಗಳ ಅನುಸಾರ ಇದು ನಡೆಯುತ್ತಿತ್ತು. ಎಂಡೋವೆನ್ ತಾಂತ್ರಿಕ ವಿಶ್ವವಿದ್ಯಾಲಯದಲ್ಲಿದ್ದಾಗ ವಾಲಿದ್ ಅಟ್ಟಾಡ್ಲೊಯಿ ಎಂಬ ಚಾಲಕನ ಪರಿಚಯವಾಗಿದ್ದು, ಆತ ಹಣ ವಿನಿಮಯಕ್ಕೆ ಸಂಬಂಧಿಸಿದಂತೆ ದೇಶಾದ್ಯಂತ ನನ್ನನ್ನು ಸುತ್ತಾಡಿಸುತ್ತಿದ್ದ. ಈ ಸಂದರ್ಭದಲ್ಲಿ ನಮ್ಮ ಪ್ರತಿನಿತ್ಯದ ವಹಿವಾಟು 50 ಸಾವಿರ -100 ಸಾವಿರ ಯುರೊ ಇತ್ತು.
ಒಂದು ದಿನ ನನ್ನ ಸಹೋದರನ ಮನೆಯ ಕೀಯನ್ನು ನನ್ನ ಚಾಲಕನ ಕಾರಿನಲ್ಲಿ ಬಿಟ್ಟುಬಿಟ್ಟಿದ್ದೆ. ಈ ಕೀಗಳನ್ನು ಬಳಸಿ ಚಾಲಕ ವಾಲಿದ್ ಮನೆಗೆ ಕಾನೂನುಬಾಹಿರವಾಗಿ ನುಗ್ಗಿ ನನ್ನ ಮತ್ತು ಸಹೋದರನ ಪಾಸ್‌ಪೋರ್ಟ್, ಎರಡು ಲ್ಯಾಪ್‌ಟಾಪ್, ಯುರೊ ನಗದು, ಹಾರ್ಡ್ ಡ್ರೈವ್ ಮತ್ತು ಎರಡು ಕ್ಯಾಮೆರಾಗಳನ್ನು ಕಳವು ಮಾಡಿದ್ದ. ವಾಲಿದ್‌ನನ್ನು ಬಂಧಿಸಿ, ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದ್ದರೂ ನನಗೆ ನನ್ನ ಪರಿಕರಗಳು ಸಿಗಲಿಲ್ಲ. ನನ್ನ ಲ್ಯಾಪ್‌ಟಾಪ್‌ನಲ್ಲಿದ್ದ ಸುಮಾರು 3 ಮಿಲಿಯನ್ ಡಾಲರ್ ಮೌಲ್ಯದ ಬಿಟಿಸಿ ಇತ್ತು.
ಎಲ್ಲವನ್ನೂ ಕಳೆದುಕೊಂಡು ಹಣವಿಲ್ಲದೇ ಇದ್ದುದರಿಂದ ಮತ್ತೆ ಹೊಸದಾಗಿ ಇಟಲಿ ಸ್ವಿಟ್ಜರ್ಲೆಂಡ್, ಸ್ವೀಡನ್, ಫ್ರಾನ್ಸ್ ಮತ್ತು ಜರ್ಮನಿಯಲ್ಲಿ ಸ್ನೇಹಿತರ ಕೂಟ ಕಟ್ಟಲು ಆರಂಭಿಸಿದೆ. ವಿನಿಮಯ ಕೇಂದ್ರದ ಮೇಲೆ ದಾಳಿ (ಬಿಟ್‌ಫಿನೆಕ್ಸ್) ಮಾಡಿದ ಬಳಿಕ ನಷ್ಟದಲ್ಲಿದ್ದ ನನ್ನನ್ನು ಚೇತರಿಸಿಕೊಳ್ಳಲು ಬಿಟ್‌ಕಾಯಿನ್ ಉದ್ಯಮಿಗಳ ಜಾಲ ಅವಕಾಶ ಮಾಡಿಕೊಟ್ಟಿತು.
2015ರಲ್ಲಿ ಭಾರತಕ್ಕೆ ಮರಳಿದ ಬಳಿಕ ಉಮರ್ ನಲಪಾಡ್ ಮತ್ತು ಕಂಪೆನಿಯ ಜೊತೆಗೂಡಿದೆ. ನನ್ನ ಸ್ನೇಹಿತ ಮನೀಷ್ ಡಿ ಕೆ, ನಲಪಾಡ್‌ನ ಸಹಪಾಠಿಯಾಗಿದ್ದನು. 2018ರ ವರೆಗೆ ಮೂರು ವರ್ಷಗಳ ನಾವು ಒಟ್ಟಾಗಿ ಹಲವು ಪಾರ್ಟಿಗಳನ್ನು ಮಾಡಿದ್ದೇವೆ. 2018ರಲ್ಲಿ ಫರ್ಜಿ ಕೆಫೆಯಲ್ಲಿ ನಡೆದ ಗಲಾಟೆ ಪ್ರಕರಣದಲ್ಲಿ ನಲಪಾಡ್ ಸೇರಿದಂತೆ ಹಲವರನ್ನು ನಾಲ್ಕು ತಿಂಗಳ ಕಾಲ ಜೈಲಿನಲ್ಲಿ ಇಡಲಾಗಿತ್ತು. ಈ ಪ್ರಕರಣದಲ್ಲಿ ನನಗೆ ಜಾಮೀನು ಸಿಗುವವರೆಗೆ ನಾಪತ್ತೆಯಾಗಿದ್ದೆ. ಆ ಬಳಿಕ ನಾನು ಸುನೇಶ್ ಹೆಗ್ಡೆ ಹಾಗೂ ಅವರ ಕೂಟದ ಜೊತೆ ಹೆಚ್ಚು ಆತ್ಮೀಯತೆ ಹೊಂದಿದ್ದು, ಇವರಿಗೆ ಪ್ರಸಿದ್ಧ್ ಶೆಟ್ಟಿ ಪರಿಚಯಿಸಿಕೊಟ್ಟಿದ್ದರು. ಈ ಸಂದರ್ಭದಲ್ಲಿ ನಲಪಾಡ್ ಜೊತೆಗಿನ ಸಂಬಂಧ ಕ್ಷೀಣಿಸಿತ್ತು.
ಬಿಟ್‌ಕಾಯಿನ್ ಕಳುಹಿಸಲು ಮತ್ತು ಸ್ವೀಕರಿಸಲು ಅಧಿಕೃತವಾದ ಬಿಟ್‌ಕಾಯಿನ್ ಕೋರ್ ಸಾಫ್ಟ್‌ವೇರ್ ಅನ್ನು ನಾನು ಡೌನ್‌ಲೋಡ್ ಮಾಡಿಕೊಂಡಿದ್ದೆ. ಬಹುಕಾಲದಿಂದ ಇದನ್ನು ನಾನು ಬಳಸುತ್ತಿದ್ದು, ಇದರ ಮೂಲಕ ಹಲವು ವಿನಿಮಯಗಳನ್ನು ಮಾಡಿದ್ದೇನೆ.
2016ರ ಡಿಸೆಂಬರ್‌ನಲ್ಲಿ ರಿಮೋಟ್ ಲೋಡ್ ಎಕ್ಸಿಕ್ಯೂಷನ್ ಬಳಸಿ ನೆಟ್4ಇಂಡಿಯಾ ಡೇಟಾ ಕೇಂದ್ರವನ್ನು ಹ್ಯಾಕ್ ಮಾಡಿದ್ದೆ. ಇದರ ಮೂಲಕ ಎನ್‌ಡಿಟಿವಿ, ವಿಜಯ್ ಮಲ್ಯ, ರಾಹುಲ್ ಗಾಂಧಿ, ಬರ್ಖಾ ದತ್ ವೆಬ್‌ಸೈಟ್‌ಗಳು, ಟ್ವಿಟರ್ ಖಾತೆ ಮಾಹಿತಿ ಡಿಎನ್‌ಎಸ್ ವಿಳಾಸಗಳನ್ನು ಹ್ಯಾಕ್ ಮಾಡಿದ್ದೆ. ಈ ಸರ್ವರ್‌ಗಳ ಮೇಲ್ ಸರ್ವರ್ ದಾಖಲೆಗಳನ್ನು ಬದಲಾಯಿಸಿ, ಮೇಲಿನ ಖ್ಯಾತನಾಮರ ಟ್ವಿಟರ್ ಖಾತೆಗಳ ಪಾಸ್‌ವರ್ಡ್‌ಗಳನ್ನು ಮರು ನಮೂದಿಸಿದ್ದೆ (ರಿಸೆಟ್). ಈ ಮೂಲಕ ಹೈಪ್ರೊಫೈಲ್ ಖಾತೆಗಳ ಆಕ್ಸಸ್ ಪಡೆದಿದ್ದೆ. ಮೇಲಿನ ಹ್ಯಾಕ್‌ಗೆ ಸಂಬಂಧಿಸಿದ ಲಾಗ್ ಮಾಹಿತಿಯ ಚಾಟ್ ನನ್ನ ಸ್ಕೈಪ್ ಖಾತೆಯಲ್ಲಿದೆ. ಈ ಸಂಬಂಧ ದೆಹಲಿಯ ಆರ್ಥಿಕ ಅಪರಾಧಗಳ ವಿಭಾಗದಲ್ಲಿ ಲೀಜನ್ ಎಂಬ ಹೆಸರಿನ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
2017ರ ಡಿಸೆಂಬರ್‌ನಲ್ಲಿ ಬಿಟ್‌ಕ್ಲಬ್ ನೆಟ್‌ವರ್ಕ್‌ನ ವಿನಿಮಯ ಸರ್ವರ್ ಅನ್ನು ಹ್ಯಾಕ್ ಮಾಡಿ, ಪ್ರಮುಖ ಸರ್ವರ್‌ಗೆ ಪ್ರವೇಶಿಕೆ ಪಡೆದಿದ್ದೆ. ಈ ಮೂಲಕ 100 ಬಿಟಿಸಿ ಪಡೆದಿದ್ದು, ಸೋರ್ಸ್ ಕೋಡ್, ಬಳಕೆದಾರರ ಖಾತೆ ದತ್ತಾಂಶಗಳಾದ ಬಳಕೆದಾರರ ಹೆಸರು, ಪಾಸ್‌ವರ್ಡ್‌ಗಳು, ಬಿಟಿಸಿ ವಿಳಾಸ ಇತ್ಯಾದಿಯನ್ನು ಸಂಗ್ರಹಿಸಿಟ್ಟಿದೆ (ಡಂಪ್).
2019ರ ಮೇ/ಜೂನ್‌ನಲ್ಲಿ ಕರ್ನಾಟಕ ಸರ್ಕಾರದ ಇ-ಪ್ರೊಕ್ಯೂರ್‌ಮೆಂಟ್ ವೆಬ್‌ಸೈಟ್ ಅನ್ನು ಹ್ಯಾಕ್ ಮಾಡಿ, ರಿಮೋಟ್ ಕೋಡ್ ಎಕ್ಸಿಕ್ಯೂಷನ್ ಅನ್ನು ಅಪಾರವಾಗಿ ಬಳಿಸಿ, ಬಿಡ್ಡರ್‌ಗಳ ಮಾಹಿತಿ ಮತ್ತು ಆ ಸಂದರ್ಭದಲ್ಲಿ ಬಿಡ್‌ಗೆ ಸಂಬಂಧಿಸಿದ ಎಲ್ಲಾ ಫೈಲ್‌ಗಳನ್ನು ಡೌನ್‌ಲೋಡ್ ಮಾಡಿಕೊಂಡಿದ್ದೆ. ಹ್ಯಾಕ್ ಮಾಡಿದ್ದರಿಂದ ವಿನಿಮಿಯ ವಿವರ, ಬಿಡ್ ಉಲ್ಲೇಖ, ಹಣ ಪಾವತಿ, ಐಎಫ್‌ಎಸ್‌ಸಿ ಕೋಡ್‌ಗಳು, ಬಿಡ್ಡರ್‌ಗಳ ಖಾತೆ ನಂಬರ್‌ಗಳನ್ನು ಎಕ್ಸೆಲ್ ಫೈಲ್‌ನಲ್ಲಿ ಡೌನ್‌ಲೋಡ್ ಮಾಡಿಕೊಳ್ಳಲು ಅವಕಾಶವಾಗಿತ್ತು.
2018ರ ಆಗಸ್ಟ್‌ನಲ್ಲಿ ಎಸ್‌ಕ್ಯುಮ್ಯಾಪ್ ಮೂಲಕ ಇ-ಪ್ರೊಕ್ಯೂರ್‌ಮೆಂಟ್ ಸೈಟ್ ಹ್ಯಾಕ್ ಮಾಡಲು ಪ್ರಯತ್ನಿಸಿದ್ದೆ. ಈ ಸಂದರ್ಭದಲ್ಲಿ ನನ್ನ ಪ್ರಯತ್ನ ವಿಫಲವಾಗಿತ್ತು.
2019ರಲ್ಲಿ Eproc.karnataka.gov.in ಹ್ಯಾಕ್ ಮಾಡಿ ಮೂರು ಪ್ರತ್ಯೇಕ ವರ್ಗಾವಣೆಗಳನ್ನು ಮಾಡಿದ್ದೇವೆ. ಹೇಮಂತ್ ಮುದಪ್ಪ ಎಂಬವರು ಎರಡು ಖಾತೆಗಳನ್ನು ನೀಡಿದ್ದು, ಒಂದರಲಿ 18 ಕೋಟಿ ರೂಪಾಯಿ ಮತ್ತು ಮತ್ತೊಂದರಲ್ಲಿ 28 ಕೋಟಿ ರೂಪಾಯಿ ಹಣವಿತ್ತು. ಆಯೂಬ್ ಅವರಿಂದ 2 ಕೋಟಿ ರೂಪಾಯಿ ಸಂಗ್ರಹಿಸಿರುವುದಾಗಿ ಹೇಮಂತ್ ಹೇಳಿದ್ದರು. ಆದರೆ, ಆಯೂಬ್ ಬಗ್ಗೆ ನನಗೆ ಮಾಹಿತಿ ಇಲ್ಲ. ಹೇಮಂತ್ ಮುದಪ್ಪ ಅವರು 11 ಕೋಟಿ ರೂಪಾಯಿಗಳನ್ನು ಸಂಗ್ರಹಿಸಿದ್ದಾರೆ ಎಂದು ಸಿಐಡಿ ಹೇಳಿದೆ. 28 ಕೋಟಿ ರೂಪಾಯಿಗಳ ಎರಡನೇ ಹಣ ವರ್ಗಾವಣೆಯನ್ನು ನಾನು ಸುನೀಶ್ ಹೆಗ್ಡೆಯ ಸಲಹೆಯಂತೆ ಹಿಮಾಲಯದ ಆನಂದ ಸ್ಪಾ ಮತ್ತು ರೆಸಾರ್ಟ್‌ನಲ್ಲಿ ಕೂತು ವರ್ಗಾವಣೆ ಮಾಡಿದ್ದೆ.
ನಕಲಿ ವರ್ಗಾವಣೆಯ ಬಗ್ಗೆ ಸರ್ಕಾರಕ್ಕೆ ತಿಳಿದಿದ್ದ ಹಿನ್ನೆಲೆಯಲ್ಲಿ ಅದನ್ನು ಮರುಪಾವತಿ ಮಾಡಲಾಗಿತ್ತು ಎನ್ನಲಾಗಿದೆ. ಇದರಿಂದ ನನಗೆ ಯಾವುದೇ ಲಾಭವಾಗಿಲ್ಲ. ಆದರೆ, ಈ ಪ್ರಕ್ರಿಯೆ ಸಂದರ್ಭದಲ್ಲಿ ನಾನು ಪಂಚತಾರಾ ಹೋಟೆಲ್‌ನಲ್ಲಿ ಉಳಿದುಕೊಂಡು ಐಷಾರಾಮಿ ಜೀವನ ನಡೆಸಿದ್ದೆ.
2015ರಲ್ಲಿ ಬಿಟ್‌ಫಿನೆಕ್ಸ್ ಅಥವಾ ಬಿಟ್ ಸೆಂಟ್ರಲ್ ಹ್ಯಾಕ್ ಮಾಡುವ ಮೂಲಕ ಬಿಟಿಸಿಯಲ್ಲಿ 1.5 ಕೋಟಿ ಸಂಪಾದಿಸಿದ್ದೆ. ಇದೆಲ್ಲವನ್ನೂ ಹೋಟೆಲ್ ಶುಲ್ಕ ಪಾವತಿಸಲು ಮತ್ತು ಗೆಳೆಯರಿಗೆ ಸಹಾಯ ಮಾಡಲು ಬಳಕೆ ಮಾಡಿದ್ದೆ.
2018ರ ಫರ್ಜಿ ಕೆಫೆಯಲ್ಲಿನ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ನಾನು ಸಿಸಿಬಿ ಪೊಲೀಸರಿಗೆ ಹೇಳಿಕೆ ನೀಡಿದ್ದೇನೆ.
ನಾನು ಯಾವುದೇ ಬ್ಯಾಂಕ್ ಖಾತೆ ಹೊಂದಿಲ್ಲ. ಬಿಟ್‌ಕಾಯಿನ್‌ಗೆ ಸಂಬಂಧಿಸಿದ ಎಲ್ಲಾ ವರ್ಗಾವಣೆಯನ್ನು ಸ್ನೇಹಿತ ರಾಬಿನ್ ಖಂಡೇಲ್‌ವಾಲ್ ಮೂಲಕ ನಡೆಸಲಾಗಿದೆ. ಹ್ಯಾಕ್ ಮಾಡಿದ ಬಿಟ್‌ಕಾಯಿನ್‌ಗಳನ್ನು ನಾನು ರಾಬಿನ್‌ಗೆ ನೀಡುತ್ತಿದ್ದೆ. ಆತ ಅವುಗಳನ್ನು ಮಾರಾಟ ಮಾಡಿ, ಹಣ ನೀಡುತ್ತಿದ್ದ. ಇಲ್ಲಿಯವರೆಗೆ ರಾಬಿನ್‌ಗೆ ನಾನು 8 ಕೋಟಿ ರೂಪಾಯಿಗೂ ಅಧಿಕ ಮೊತ್ತದ ಬಿಟ್‌ಕಾಯಿನ್‌ಗಳನ್ನು ನೀಡಿದ್ದೇನೆ.
ನನ್ನ ಕ್ಲೌಡ್ ಖಾತೆಯಲ್ಲಿ ಹಲವು ಖಾಸಗಿ ಕೀಗಳಿದ್ದು, ಅದರ ಅಕ್ಸೆಸ್‌ಗೆ ಅನುಮತಿಸಿದರೆ ಕಳವು ಮಾಡಿರುವ ಬಿಟ್ ಕಾಯಿನ್‌ಗಳನ್ನು ವಾಪಸ್ ಮಾಡಲಾಗುವುದು ಎಂದು ಶ್ರೀ ಕೃಷ್ಣ ಹೇಳಿಕೆಯಲ್ಲಿ ತಿಳಿಸಿದ್ದಾನೆ.