Lubna Shuja, President of Law Society of England and Wales, UK
Lubna Shuja, President of Law Society of England and Wales, UK 
ಸುದ್ದಿಗಳು

ಭಾರತೀಯ ವಕೀಲರ ಕೆಲಸ ಕಸಿಯುವ ಉದ್ದೇಶ ಇಂಗ್ಲೆಂಡ್‌ ಮತ್ತು ವೇಲ್ಸ್‌ ವಕೀಲರಿಗೆ ಇಲ್ಲ: ಬ್ರಿಟನ್ ಲಾ ಸೊಸೈಟಿ ಅಧ್ಯಕ್ಷೆ

Bar & Bench

ಡಭಾರತದಲ್ಲಿ ವಿದೇಶಿ ವಕೀಲರು ಮತ್ತು ಕಾನೂನು ಸಂಸ್ಥೆಗಳು ಅಂತೆಯೇ ವಿದೇಶದಲ್ಲಿ ಭಾರತೀಯ ವಕೀಲರು ಪರಸ್ಪರ ಅನುವು ಮಾಡಿಕೊಡುವ ಆಧಾರದಲ್ಲಿ ಪ್ರಾಕ್ಟೀಸ್‌ ಮಾಡುವುದಕ್ಕೆ ಬಿಸಿಐ ಅನುಮತಿಸಿದ್ದ ನಿರ್ಧಾರದಿಂದಾಗಿ ದೇಶದಲ್ಲಿರುವ ವಕೀಲರ ಕೆಲಸಕ್ಕೆ ಕುತ್ತು ಬರುವುದಿಲ್ಲ ಎಂದು ಇಂಗ್ಲೆಂಡ್ ಮತ್ತು ವೇಲ್ಸ್ ಲಾ ಸೊಸೈಟಿಯ ಅಧ್ಯಕ್ಷೆ ಲುಬ್ನಾ ಶುಜಾ ಶನಿವಾರ ಭಾರತೀಯ ವಕೀಲರಿಗೆ ಭರವಸೆ ನೀಡಿದ್ದಾರೆ.

ಭಾರತೀಯ ವಕೀಲರ ಪರಿಷತ್‌ ವತಿಯಿಂದ ನವದೆಹಲಿಯಲ್ಲಿ ನಡೆಯುತ್ತಿರುವ ಅಂತರರಾಷ್ಟ್ರೀಯ ವಕೀಲರ ಸಮ್ಮೇಳನದ ಅಂಗವಾಗಿ “ಜಾಗತಿಕ ಸಮಸ್ಯೆಗಳಿಗಾಗಿ ಜಾಗತಿಕ ಕಾನೂನು” ಎಂಬ ವಿಷಯವನ್ನೊಳಗೊಂಡ ತಾಂತ್ರಿಕ ಅಧಿವೇಶನದಲ್ಲಿ ಶುಜಾ ಶನಿವಾರ ಮಾತನಾಡಿದರು.

ಭಾರತದಲ್ಲಿ ವಿದೇಶಿ ವಕೀಲರು ಮತ್ತು ವಿದೇಶಿ ಕಾನೂನು ಸಂಸ್ಥೆಗಳು ಕೆಲಸ ಮಾಡಲು ಅನುವು ಮಾಡಿಕೊಟ್ಟ ಬಿಸಿಐ ನಿಯಮಗಳ ಬಗ್ಗೆ ಸಂಭ್ರಮಿಸಲು ನಮಗಿಂದು ಅವಕಾಶ ದೊರೆತಿದೆ. ನಿಮ್ಮ ಕೆಲಸವನ್ನು ನಿಮ್ಮಿಂದ ದೂರ ಮಾಡುವ ಉದ್ದೇಶ ಇಂಗ್ಲೆಂಡ್‌ ಮತ್ತು ವೇಲ್ಸ್‌ ವಕೀಲರಿಗೆ ಇಲ್ಲ ಎಂದು ನಾನು ನಿಮಗೆ ಭರವಸೆ ನೀಡಲು ಬಯಸುತ್ತೇನೆ. ಅವರು ಭಾರತೀಯ ಕಾನೂನನ್ನು ಪ್ರಾಕ್ಟೀಸ್‌ ಮಾಡುವುದಿಲ್ಲ. ಅವರಿಗೆ ಅಂತಾರಾಷ್ಟ್ರೀಯ ಕಾನೂನು, ಗಡಿಯಾಚೆಗಿನ ಕೆಲಸ ಮತ್ತು ಮಧ್ಯಸ್ಥಿಕೆಯಲ್ಲಿ ಮಾತ್ರ ಆಸಕ್ತಿ ಇದೆ. ಭಾರತದಲ್ಲಿನ ತಮ್ಮ ಕಕ್ಷಿದಾರರಿಗೆ ವಿದೇಶಿ ಕಾನೂನಿನ ಬಗ್ಗೆ ಸಲಹೆ ನೀಡಬಹುದಾದ್ದರಿಂದ ಅವರು ಭಾರತದಲ್ಲಿ ಕಛೇರಿ ತೆರೆಯಲು ಬಯಸುತ್ತಾರೆ. ಆ ಕೆಲಸ ಈಗಾಗಲೇ ಬಹಳಷ್ಟು ನಡೆಯುತ್ತಿದೆ. ಆದರೆ ಭಾರತದಾಚೆಗೆ ಅಂದರೆ ದುಬೈ, ಲಂಡನ್ ಮತ್ತು ಸಿಂಗಾಪುರದಂತಹ ಸ್ಥಳಗಳಲ್ಲಿ ಈ ಕಾರ್ಯು ನಡೆಯುತ್ತಿದೆ. (ಬಿಸಿಐನ) ಹೊಸ ನಿಯಮಗಳು ಈ ಕೆಲಸ ಭಾರತದಲ್ಲಿ ನಡೆಯಲು ಅನುವು ಮಾಡಿಕೊಡಲಿದ್ದು ಇದು ನಿಮ್ಮ ಆರ್ಥಿಕತೆಗೆ ಸಹಕಾರಿಯಾಗಲಿದೆ ಮತ್ತು ನಿಮ್ಮ ವೃತ್ತಿಗೆ ಪ್ರಗತಿದಾಯಕವಾಗುತ್ತದೆ” ಎಂದು ಶುಜಾ ಅವರು ಭಾರತದ ವಕೀಲರನ್ನುದ್ದೇಶಿಸಿ ಹೇಳಿದರು.

ಇಂಗ್ಲಿಷ್ ಮತ್ತು ವೆಲ್ಷ್ ಸಂಸ್ಥೆಗಳು ಭಾರತೀಯ ಕಾನೂನು ಸಂಸ್ಥೆಗಳು ಮತ್ತು ವಕೀಲರೊಂದಿಗೆ ಕೆಲಸ ಮಾಡಲು ಉತ್ಸುಕವಾಗಿವೆ. ಭಾರತ ಮತ್ತು ಬ್ರಿಟನ್‌ ಈಗಾಗಲೇ ಕಾನೂನು, ವ್ಯಾಪಾರ,  ಸಂಸ್ಕೃತಿ ಸೇರಿದಂತೆ ಹಲವಾರು ಕ್ಷೇತ್ರಗಳಲ್ಲಿ ಬಲವಾದ ಸಂಬಂಧ ಹೊಂದಿವೆ. ಬ್ರಿಟನ್‌ ಭಾರತೀಯ ವ್ಯವಹಾರಗಳಿಗೆ ಸ್ವಾಗತಾರ್ಹ ತಾಣವಾಗಿದ್ದು ಅದರ ನ್ಯಾಯವ್ಯಾಪ್ತಿ ದೀರ್ಘಕಾಲದವರೆಗೆ ಭಾರತೀಯ ವಕೀಲರು ಮತ್ತು ಸಂಸ್ಥೆಗಳಿಗೆ ಮುಕ್ತವಾಗಿದೆ. ಬ್ರಿಟನ್‌ ಸುಮಾರು 100 ಬಗೆಯ ನ್ಯಾಯವ್ಯಾಪ್ತಿಯ ಕಾನೂನು ವೃತ್ತಿಪರರಿಗೆ ನೆಲೆಯಾಗಿದೆ. ಅಂತರರಾಷ್ಟ್ರೀಯ ಪ್ರತಿಭೆಗಳಿಗೆ ಅಂತಹ ಮುಕ್ತತೆ ಕಲ್ಪಿಸಿರುವುದರಿಂದ ದೇಶ ಜಾಗತಿಕ ನಾಯಕನಾಗಿ ಪರಿವರ್ತನೆಯಾಗಲು ಸಹಾಯ ಮಾಡಿದೆ ಎಂದು ಅವರು ಹೇಳಿದರು.

ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳಾದ ಸಂಜಯ್ ಕಿಶನ್ ಕೌಲ್, ಎಂ ಎಂ ಸುಂದರೇಶ್ ಬೇಲಾ ಎಂ ತ್ರಿವೇದಿ, ಹಿರಿಯ ವಕೀಲ ಮತ್ತು ರಾಜ್ಯಸಭಾ ಸದಸ್ಯ ಪಿ ವಿಲ್ಸನ್ ಮತ್ತು ಹಿರಿಯ ವಕೀಲ ನಿಶಿತ್ ದೇಸಾಯಿ ಸೇರಿದಂತೆ ಅಧಿವೇಶನದಲ್ಲಿ ಅನೇಕರು ನ್ಯಾಯಾಂಗಕ್ಕೆ ಸಂಬಂಧಿಸಿದ ತಮ್ಮ ವಿಚಾರಗಳನ್ನು ಮಂಡಿಸಿದರು.

ಸಮ್ಮೇಳನದ ಉದ್ಘಾಟನಾ ಕಾರ್ಯಕ್ರಮದಲ್ಲಿ ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್‌, ಪ್ರಧಾನಿ ನರೇಂದ್ರ ಮೋದಿ ಮತ್ತಿತರ ಗಣ್ಯರು ಭಾಗವಹಿಸಿದ್ದರು. ಸಮಾವೇಶ ಇಂದು ಸಮಾರೋಪಗೊಳ್ಳಲಿದೆ.