ಸುದ್ದಿಗಳು

ಯಾವುದೇ ವಿಕಲಚೇತನ ವಿದ್ಯಾರ್ಥಿ ಸಿಎಲ್ಎಟಿ ಪರೀಕ್ಷೆಯಿಂದ ವಂಚಿತರಾಗದಂತೆ ನೋಡಿಕೊಳ್ಳಿ: ಸುಪ್ರೀಂ ಕೋರ್ಟ್ ನಿರ್ದೇಶನ

Bar & Bench

ಸಾಮಾನ್ಯ ಕಾನೂನು ಪ್ರವೇಶ ಪರೀಕ್ಷೆ (ಸಿಎಲ್‌ಎಟಿ) ತೆಗೆದುಕೊಂಡಿರುವ ಯಾವುದೇ ವಿಕಲಚೇತನ ವಿದ್ಯಾರ್ಥಿ ಪರೀಕ್ಷೆ ಬರೆಯುವುದರಿಂದ ವಂಚಿತರಾಗದಂತೆ ನೋಡಿಕೊಳ್ಳಿ ಎಂದು ರಾಷ್ಟ್ರೀಯ ಕಾನೂನು ವಿಶ್ವವಿದ್ಯಾಲಯಗಳ ಒಕ್ಕೂಟಕ್ಕೆ (ಸಿಎನ್‌ಎಲ್‌ಯು) ಸುಪ್ರೀಂ ಕೋರ್ಟ್ ಗುರುವಾರ ನಿರ್ದೇಶನ ನೀಡಿದೆ.

ಪರೀಕ್ಷೆ ಇನ್ನು ಮೂರು ದಿನಗಳಿರುವಂತೆ (ಪರೀಕ್ಷೆ ನಡೆಯಲಿರುವ ದಿನಾಂಕ ಡಿ 18) ಆದೇಶ ನೀಡಿರುವ ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಡಿ ವೈ ಚಂದ್ರಚೂಡ್ ಮತ್ತು ನ್ಯಾಯಮೂರ್ತಿ ಪಿ ಎಸ್ ನರಸಿಂಹ ಅವರನ್ನೊಳಗೊಂಡ ಪೀಠ ಯಾವುದೇ ವಿಕಲಚೇತನ ಅರ್ಹ ವಿದ್ಯಾರ್ಥಿ ಲಿಪಿಕಾರರನ್ನು ಪಡೆಯುವ ಅವಕಾಶವನ್ನು ಕಳೆದುಕೊಳ್ಳಬಾರದು ಎಂದು ಹೇಳಿತು.

“ಪರೀಕ್ಷೆಯಲ್ಲಿ ಕಾಣಿಸಿಕೊಳ್ಳುತ್ತಿರುವ 13 ವಿಕಲಚೇತನ ವಿದ್ಯಾರ್ಥಿಗಳ ಪಟ್ಟಿ ಗಮನಿಸಿ. ಅವರು ಯಾರೂ ಲಿಪಿಕಾರರನ್ನು ಬಳಸಿಕೊಳ್ಳುವ ಅವಕಾಶದಿಂದ ವಂಚಿತರಾಗದಂತೆ ನೋಡಿಕೊಳ್ಳಬೇಕು” ಎಂದು ನ್ಯಾಯಾಲಯ ನಿರ್ದೇಶಿಸಿತು.

ಅಲ್ಲದೆ, ಈ ವರ್ಷದ ಪರೀಕ್ಷೆ ಮುಗಿದ ಬಳಿಕ ಪ್ರಕರಣವನ್ನು ಮತ್ತೊಮ್ಮೆ ಪರಿಶೀಲಿಸಲಾಗುವುದು ಹೀಗಾಗಿ ನವೀಕೃತ ಅಫಿಡವಿಟ್ ಸಲ್ಲಿಸಲು ಒಕ್ಕೂಟಕ್ಕೆ ಪೀಠ ಸೂಚಿಸಿತು. ಪರೀಕ್ಷೆಯನ್ನು ನಡೆಸುವ ವಿಧಾನವನ್ನು ನಿರ್ಧರಿಸುವ ಒಕ್ಕೂಟವು ಮಂಡಿಸಿದ ಟಿಪ್ಪಣಿಯನ್ನು ನ್ಯಾಯಾಲಯ ಪರಿಗಣಿಸಿದ ನಂತರ ಈ ಆದೇಶ ನೀಡಲಾಯಿತು.

ಅಭ್ಯರ್ಥಿಗಳು ಪಡೆಯಲಿರುವ ಲಿಪಿಕಾರರು 11ನೇ ತರಗತಿ ಅಥವಾ ಅದಕ್ಕಿಂತಲೂ ಕಡಿಮೆ ವಯಸ್ಸಿನವರಾಗಿರಬೇಕು ಮತ್ತು ಯಾವುದೇ ಕೋಚಿಂಗ್‌ ಸೆಂಟರ್‌ಗಳಲ್ಲಿ ತರಬೇತಿ ಪಡೆದಿರಬಾರದು ಎಂಬ ಇತ್ತೀಚಿನ ನಿಯಮಾವಳಿಗಳನ್ನು ವಿಕಲಚೇತನರ ಪರ ಹೋರಾಟ ಮಾಡುವ ವಕೀಲ ಅರ್ನಾಬ್‌ ರಾಯ್‌ ಅವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆಯಲ್ಲಿ (ಪಿಐಎಲ್‌) ಆಕ್ಷೇಪಿಸಲಾಗಿತ್ತು.

ನಿನ್ನೆಯ ವಿಚಾರಣೆ ವೇಳೆ ಸಿಜೆಐ ಚಂದ್ರಚೂಡ್‌ ಅವರು “ಗುರುತರ ಅಂಗವೈಕಲ್ಯ ಮಾನದಂಡ ಎಂಬುದು ಮೀಸಲಾತಿ ಉದ್ದೇಶಕ್ಕಾಗಿ ಮಾತ್ರ ಇದ್ದು, ಅದನ್ನು ಲಿಪಿಕಾರರ ಬಳಕೆ ನಿರಾಕರಿಸಲು ಬಳಸಿಕೊಳ್ಳುವಂತಿಲ್ಲ” ಎಂದಿದ್ದರು. ಪರೀಕ್ಷೆ ಬರೆಯುತ್ತಿರುವ ಎಲ್ಲಾ ವಿಕಲಚೇತನರು ಲಿಪಿಕಾರರನ್ನು ಬಳಸಿಕೊಳ್ಳಲು ಎನ್‌ಎಲ್‌ಯುಗಳು ನಿಯಮಗಳ ಚೌಕಟ್ಟು ರೂಪಿಸಬೇಕು” ಎಂದು ಪೀಠ ಸೂಚಿಸಿತ್ತು.