“ನ್ಯಾಯಾಧೀಶರು ಆರೋಪಿಗೆ ಜಾಮೀನು ಅಥವಾ ಅವರನ್ನು ಖುಲಾಸೆ ಮಾಡಿದಾಗ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಟೀಕೆ ವ್ಯಕ್ತವಾಗುತ್ತದೆ. ಏಕೆಂದರೆ, ವಿದ್ಯಾವಂತ ವರ್ಗಕ್ಕೂ ಜಾಮೀನು ಮತ್ತು ಖುಲಾಸೆ ನಡುವಿನ ವ್ಯತ್ಯಾಸ ಅರ್ಥವಾಗುವುದಿಲ್ಲ. ಟೀಕೆ ಮಾಡುವವರಿಗೆ ಏಕೆ ಜಾಮೀನು ನೀಡಲಾಗಿದೆ ಎಂಬುದು ತಿಳಿದಿರುವುದಿಲ್ಲ” ಎಂದು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಅಭಯ್ ಶ್ರೀನಿವಾಸ್ ಓಕ್ ಹೇಳಿದರು.
ಬೆಂಗಳೂರಿನಲ್ಲಿರುವ ಕರ್ನಾಟಕ ನ್ಯಾಯಾಂಗ ಅಕಾಡೆಮಿಯ ಸಭಾಂಗಣದಲ್ಲಿ ಎನ್‌ಎಲ್‌ಎಸ್‌ಎ, ಕರ್ನಾಟಕ ಹೈಕೋರ್ಟ್ ಸಹಯೋಗದಲ್ಲಿ ಶುಕ್ರವಾರ ಆಯೋಜಿಸಿದ್ದ ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ರಜತ ಮಹೋತ್ಸವ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
“ವ್ಯಾಪಕವಾಗಿ ಕಾನೂನು ಅರಿವು ಕಾರ್ಯಕ್ರಮ ಆಯೋಜಿಸುವ ಅಗತ್ಯವಿದೆ. ಕಳೆದ 19 ವರ್ಷಗಳಲ್ಲಿ ನನಗೆ ಅರ್ಥವಾಗಿರುವುದು ಏನೆಂದರೆ ವಿದ್ಯಾವಂತರಿಗೂ ಕಾನೂನಿನ ನಿಬಂಧನೆಗಳು ಅರ್ಥವಾಗಿಲ್ಲ. ಅದರಲ್ಲೂ ವಿಶೇಷವಾಗಿ ಕ್ರಿಮಿನಲ್ ಕಾನೂನಿನ ನಿಬಂಧನೆಗಳ ಬಗ್ಗೆ ಅವರಿಗೆ ತಿಳಿದಿಲ್ಲ. ಅದಕ್ಕಾಗಿಯೇ ನ್ಯಾಯಾಧೀಶರು ಆರೋಪಿಗೆ ಜಾಮೀನು ನೀಡಿದಾಗ ಅಥವಾ ಆರೋಪಿಯನ್ನು ಖುಲಾಸೆ ಮಾಡಿದಾಗ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಟೀಕೆ ವ್ಯಕ್ತವಾಗುತ್ತದೆ. ವಿದ್ಯಾವಂತ ವರ್ಗಕ್ಕೂ ಜಾಮೀನು ಮತ್ತು ಖುಲಾಸೆ ನಡುವಿನ ವ್ಯತ್ಯಾಸ ಅರ್ಥವಾಗಿಲ್ಲ. ಟೀಕೆ ಮಾಡುವವರಿಗೆ ಏಕೆ ಜಾಮೀನು ನೀಡಲಾಗಿದೆ ಎಂಬುದು ತಿಳಿಯುವುದಿಲ್ಲ. ಹೀಗಾಗಿ, ವ್ಯಾಪಕವಾಗಿ ಕಾನೂನು ಅರಿವು ಕಾರ್ಯಕ್ರಮ ಆಯೋಜಿಸುವುದು ಅತ್ಯಗತ್ಯ. ಅದು ಸದ್ಯದ ತುರ್ತು” ಎಂದು ಹೇಳಿದರು.
“ನ್ಯಾಯದಾನ ವ್ಯವಸ್ಥೆಯ ಬಗ್ಗೆ ಅರಿವಿಲ್ಲದಿರುವುದರಿಂದ ನಾವು (ನ್ಯಾಯಾಂಗ) ಸಾಕಷ್ಟು ಟೀಕೆ ಎದುರಿಸಬೇಕಿದೆ. ಆದ್ದರಿಂದ ಅರಿವು ಮೂಡಿಸುವ ಕೆಲಸವಾಗಬೇಕಿದೆ. ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರವು ಕಾನೂನು ಸೇವಾ ಶಿಬಿರ ಆಯೋಜಿಸುವುದರ ಜೊತೆಗೆ ಸಾರ್ವಜನಿಕ ಹಿತಾಸಕ್ತಿ ಇಟ್ಟುಕೊಂಡು ಹಲವು ಮನವಿಗಳನ್ನು ಸಲ್ಲಿಸಿದೆ” ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ದಿನೇಶ್ ಮಹೇಶ್ವರಿ, ನ್ಯಾ. ಓಕ್, ಕರ್ನಾಟಕ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ, ಕೆಎಸ್‌ಎಲ್‌ಎಸ್‌ಎ ಕಾರ್ಯಕಾರಿ ಅಧ್ಯಕ್ಷ ನ್ಯಾ. ಬಿ ವೀರಪ್ಪ, ಹೈಕೋರ್ಟ್ ಕಾನೂನು ಸೇವಾ ಪ್ರಾಧಿಕಾರದ ಅಧ್ಯಕ್ಷ ನ್ಯಾ. ದಿನೇಶ್ ಕುಮಾರ್ ಅವರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು.