“ಪ್ರತಿ ಬಾರಿಯೂ ಕಾನೂನು ಸೇವೆಗಳ ಪ್ರಾಧಿಕಾರದ ನೇತೃತ್ವದಲ್ಲಿ ನಡೆದಿರುವ ಲೋಕ ಅದಾಲತ್‌ನಲ್ಲಿ ಪ್ರಕರಣಗಳ ವಿಲೇವಾರಿ ಹೆಚ್ಚುತ್ತಲೇ ಸಾಗಿದೆ. ಇದರಿಂದ ನ್ಯಾಯಾಲಯಗಳ ಮೇಲಿನ ಒತ್ತಡ ಕಡಿಮೆಯಾಗುತ್ತಿದ್ದು, ಬಾಕಿ ಉಳಿಯುವ ಪ್ರಕರಣಗಳಲ್ಲಿ ಇಳಿಕೆಯಾಗಿದೆ. ಇದು ಕಾನೂನು ಸೇವೆ ಪ್ರಾಧಿಕಾರಿಗಳ ಪ್ರಾಮುಖ್ಯತೆಗೆ ಸಾಕ್ಷಿಯಾಗಿದೆ” ಎಂದು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಹಾಗೂ ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರದ (ಎನ್‌ಎಲ್‌ಎಸ್‌ಎ) ಮುಖಸ್ಥರಾದ ಯು ಯು ಲಿಲಿತ್ ಅವರು ಹೇಳಿದರು.
ಬೆಂಗಳೂರಿನಲ್ಲಿರುವ ಕರ್ನಾಟಕ ನ್ಯಾಯಾಂಗ ಅಕಾಡೆಮಿಯ ಸಭಾಂಗಣದಲ್ಲಿ ಎನ್‌ಎಲ್‌ಎಸ್‌ಎ, ಕರ್ನಾಟಕ ಹೈಕೋರ್ಟ್ ಸಹಯೋಗದಲ್ಲಿ ಗುರುವಾರ ಆಯೋಜಿಸಿದ್ದ ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ರಜತ ಮಹೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
“2021ರ ಮೇನಲ್ಲಿ ಎನ್‌ಎಸ್‌ಎಲ್‌ಎಸ್‌ಎ ಅಧ್ಯಕ್ಷನಾಗಿ ಕೆಲಸ ಆರಂಭಿಸಿದೆ. ಮೊದಲ ಬಾರಿಗೆ ಜುಲೈನಲ್ಲಿ ನಡೆದ ರಾಷ್ಟ್ರೀಯ ಲೋಕ ಅದಾಲತ್‌ನಲ್ಲಿ 29 ಲಕ್ಷ, ಆನಂತರ ಸೆಪ್ಟೆಂಬರ್‌ನಲ್ಲಿ 42 ಲಕ್ಷ, ಬಳಿಕ ಡಿಸೆಂಬರ್‌ನಲ್ಲಿ 56 ಲಕ್ಷ, ಈಚೆಗೆ ಮಾರ್ಚ್‌ನಲ್ಲಿ 79 ಲಕ್ಷ ಪ್ರಕರಣಗಳನ್ನು ದೇಶಾದ್ಯಂತ ಎಲ್ಲರ ಪರಿಶ್ರಮದಿಂದ ವಿಲೇವಾರಿ ಮಾಡಲಾಗಿದೆ. ಕಳೆದ ನಾಲ್ಕು ಲೋಕ ಅದಾಲತ್‌ಗಳಲ್ಲಿ ವಿಲೇವಾರಿ ಮಾಡಲಾದ ಒಟ್ಟಾರೆ 2 ಕೋಟಿಗೂ ಅಧಿಕ ಪ್ರಕರಣಗಳ ಪೈಕಿ 75 ಲಕ್ಷ ಪ್ರಕರಣಗಳು ಬಾಕಿ ಉಳಿದಿದ್ದ ದಾವೆಗಳಾಗಿವೆ. ಒಟ್ಟಾರೆ ನ್ಯಾಯಾಲಯಗಳಲ್ಲಿ ಆರು ಕೋಟಿ ಪ್ರಕರಣಗಳು ಬಾಕಿ ಇರುವಾಗ ಈ ಪ್ರಮಾಣದಲ್ಲಿ ಬಾಕಿ ದಾವೆಗಳನ್ನು ವಿಲೇವಾರಿ ಮಾಡಿದರೆ ಅದು ಅತ್ಯುತ್ತಮ ಕೆಲಸವಾಗಿದೆ. ಇದೆಲ್ಲವೂ ಕಾನೂನು ಸೇವೆಗಳ ಪ್ರಕ್ರಿಯೆಯಲ್ಲಿ ಭಾಗವಹಿಸಿರುವವರ ಪರಿಶ್ರಮದಿಂದ ಸಾಧ್ಯವಾಗಿದೆ” ಎಂದರು.
“ಕಾನೂನು ಸೇವೆ ಒದಗಿಸುವ ವಕೀಲರ ಸಂಭಾವನೆ ಹೆಚ್ಚಿಸುವ ಅಗತ್ಯವಿದೆ. ಇದನ್ನು ಆಕರ್ಷಕಗೊಳಿಸಬೇಕು ಎಂದು ನಾನು ಹೇಳುತ್ತಲೇ ಬರುತ್ತಿದ್ದೇನೆ. ಕಾನೂನು ಸೇವೆ ನೀಡುವ ಪ್ರಕ್ರಿಯೆಯಲ್ಲಿ ವಿದ್ಯಾರ್ಥಿಗಳು ಮತ್ತು ವಕೀಲರನ್ನು ಹೆಚ್ಚಿನ ಪ್ರಮಾಣದಲ್ಲಿ ಒಳಗೊಳ್ಳುವ ಅವಶ್ಯಕತೆ ಇದೆ” ಎಂದರು.
“ವೈದ್ಯಕೀಯ ವಿದ್ಯಾರ್ಥಿಗಳಿಗೆ ಇಂಟರ್ನ್‌ಶಿಪ್ ಕಡ್ಡಾಯ ಮಾಡಿರುವ ರೀತಿಯಲ್ಲಿ ಕಾನೂನು ಕಾಲೇಜುಗಳ ವಿದ್ಯಾರ್ಥಿಗಳಿಗೂ ಕಾನೂನು ಸೇವೆ ಸಹಾಯ ಕಲ್ಪಿಸುವ ನಿಟ್ಟಿನಲ್ಲಿ ಇಂಟರ್ನ್‌ಶಿಪ್ ಕಡ್ಡಾಯ ಮಾಡುವ ಸಂಬಂಧ ಭಾರತೀಯ ವಕೀಲರ ಪರಿಷತ್ ಜೊತೆ ಚರ್ಚಿಸಲಾಗುತ್ತಿದೆ” ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಮಾನವ ಕಳ್ಳಸಾಗಣೆ ವಿಶೇಷ ಕಾರ್ಯಪಡೆ ಯೋಜನೆ, ಕೆಎಸ್‌ಎಲ್‌ಎಸ್‌ಎ (ತೃತೀಯ ಲಿಂಗಿ ಸಮುದಾಯಕ್ಕೆ ಕಾನೂನು ಸಲಹೆ ಮತ್ತು ಸೇವಾ ಯೋಜನೆ 2022), ನ್ಯೂಸ್ ಲೆಟರ್ ಅನ್ನು ಬಿಡುಗಡೆ ಮಾಡಲಾಯಿತು.
ಎನ್‌ಎಸ್‌ಎಲ್‌ಎಸ್‌ಎ ಮಾಜಿ ಮುಖ್ಯಸ್ಥರು ಹಾಗೂ ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಮೂರ್ತಿ ಆರ್ ವಿ ರವೀಂದ್ರನ್, ಲೋಕಾಯುಕ್ತ ನಿವೃತ್ತ ನ್ಯಾಯಮೂರ್ತಿ ವಿಶ್ವನಾಥ್ ಶೆಟ್ಟಿ ಅವರು ಸೇರಿದಂತೆ ಕೆಎಸ್‌ಎಲ್‌ಎಸ್‌ಎ ಪದನಿಮಿತ್ತ ಮುಖ್ಯಸ್ಥರು ಮತ್ತು ಕೆಎಸ್‌ಎಲ್‌ಎಸ್‌ಎ ಕಾರ್ಯಕಾರಿ ಮುಖ್ಯಸ್ಥರನ್ನು ಇದೇ ವೇಳೆ ಸನ್ಮಾನಿಸಲಾಯಿತು.
ಕರ್ನಾಟಕ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ, ಕರ್ನಾಟಕದವರೇ ಆದ ಮಧ್ಯಪ್ರದೇಶ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ರವಿ ಮಳೀಮಠ, ಗುಜರಾತ್ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಅರವಿಂದ್ ಕುಮಾರ್, ಕೆಎಸ್‌ಎಲ್‌ಎಸ್‌ಎ ಕಾರ್ಯಕಾರಿ ಅಧ್ಯಕ್ಷ ನ್ಯಾಯಮೂರ್ತಿ ಬಿ ವೀರಪ್ಪ, ಹೈಕೋರ್ಟ್ ಕಾನೂನು ಸೇವೆಗಳ ಪ್ರಾಧಿಕಾರದ ಮುಖ್ಯಸ್ಥರಾದ ನ್ಯಾಯಮೂರ್ತಿ ದಿನೇಶ್ ಕುಮಾರ್, ಅಡ್ವೊಕೇಟ್ ಜನರಲ್ ಪ್ರಭುಲಿಂಗ ನಾವದಗಿ, ಹೆಚ್ಚುವರಿ ಸಾಲಿಸಿಟರ್ ಜನರಲ್ ಎಂ ಬಿ ನರಗುಂದ್, ಕರ್ನಾಟಕ ರಾಜ್ಯ ವಕೀಲರ ಪರಿಷತ್ ಅಧ್ಯಕ್ಷ ಎಂ ಕಾಶೀನಾಥ್, ಬೆಂಗಳೂರು ವಕೀಲರ ಸಂಘದ ಅಧ್ಯಕ್ಷ ವಿವೇಕ್ ಸುಬ್ಬಾರೆಡ್ಡಿ ಉಪಸ್ಥಿತರಿದ್ದರು.