Supreme Court Judges
Supreme Court Judges 
ಸುದ್ದಿಗಳು

ಇಡಬ್ಲ್ಯೂಎಸ್ ಮೀಸಲಾತಿ: ಸೆ. 13ರಿಂದ ವಿಚಾರಣೆ ಆರಂಭಿಸಲಿರುವ ಸುಪ್ರೀಂ ಕೋರ್ಟ್ ಸಾಂವಿಧಾನಿಕ ಪೀಠ

Bar & Bench

ಆರ್ಥಿಕವಾಗಿ ದುರ್ಬಲ ವರ್ಗಗಳಿಗೆ (ಇಡಬ್ಲ್ಯುಎಸ್) ಶೇ 10ರಷ್ಟು ಮೀಸಲಾತಿ ಒದಗಿಸಿದ ಸಂವಿಧಾನದ (ನೂರಾಮೂರನೇ) ತಿದ್ದುಪಡಿ ಕಾಯಿದೆಯ ಸಾಂವಿಧಾನಿಕ ಸಿಂಧುತ್ವ ಪ್ರಶ್ನಿಸಿದ್ದ ಅರ್ಜಿಗಳ ವಿಚಾರಣೆಯನ್ನು ಸುಪ್ರೀಂ ಕೋರ್ಟ್‌ ಸೆಪ್ಟೆಂಬರ್ 13 ರಿಂದ ಆರಂಭಿಸಲಿದೆ [ಜನ್‌ಹಿತ್‌ ಅಭಿಯಾನ ಮತ್ತು ಭಾರತ ಒಕ್ಕೂಟ ನಡುವಣ ಪ್ರಕರಣ].

ಆರ್ಥಿಕವಾಗಿ ದುರ್ಬಲ ವರ್ಗಗಳಿಗೆ (ಇಡಬ್ಲ್ಯುಎಸ್) ಶೇ 10 ರಷ್ಟು ಮೀಸಲಾತಿ ಒದಗಿಸಿದ ಸಂವಿಧಾನದ (ನೂರಾಮೂರನೇ) ತಿದ್ದುಪಡಿ ಕಾಯಿದೆಯನ್ನು ಪ್ರಶ್ನಿಸಿದ್ದ ಅರ್ಜಿಯನ್ನು 2020ರ ಆಗಸ್ಟ್‌ನಲ್ಲಿ ಅಂದಿನ ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಎಸ್‌ ಎ ಬೋಬ್ಡೆ ನೇತೃತ್ವದ ತ್ರಿಸದಸ್ಯ ಪೀಠ ಐವರು ಸದಸ್ಯರ ಸಾಂವಿಧಾನಿಕ ಪೀಠಕ್ಕೆ ಉಲ್ಲೇಖಿಸಿತ್ತು.

ಇಂದು ನಡೆದ ವಿಚಾರಣೆ ವೇಳೆ, ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಯು ಯು ಲಲಿತ್, ನ್ಯಾಯಮೂರ್ತಿಗಳಾದ ದಿನೇಶ್ ಮಹೇಶ್ವರಿ, ಎಸ್ ರವೀಂದ್ರ ಭಟ್, ಬೇಲಾ ಎಂ ತ್ರಿವೇದಿ ಹಾಗೂ ಜೆ ಬಿ ಪರ್ದಿವಾಲಾ ಅವರಿರುವ ಐವರು ಸದಸ್ಯರ ಸಾಂವಿಧಾನಿಕ ಪೀಠ 5 ದಿನಗಳಲ್ಲಿ ವಿಚಾರಣೆ ಪೂರ್ಣಗೊಳಿಸಲು ನಿರ್ಧರಿಸಿರುವುದಾಗಿ ತಿಳಿಸಿದೆ.

ಆದರೂ ಪರಿಣಾಮಕಾರಿ ಮತ್ತು ಸುಗಮ ವಿಚಾರಣೆಗಾಗಿ ನಿರ್ದೇಶನಗಳನ್ನು ನೀಡಲು ಸೆ. 8ರಂದು ಮತ್ತೆ ಪ್ರಕರಣವನ್ನು ಪಟ್ಟಿ ಮಾಡುತ್ತಿದ್ದೇವೆ ಎಂದು ಸಿಜೆಐ ಲಲಿತ್‌ ಹೇಳಿದರು.

"ಮುಖ್ಯ ಪ್ರಕರಣವನ್ನು ಆಲಿಸುವ ಮೊದಲು, ಮತ್ತೆ ನಿರ್ದೇಶನಗಳಿಗಾಗಿ ಈ ಪ್ರಕರಣವನ್ನು ಪಟ್ಟಿ ಮಾಡುತ್ತೇವೆ. ಇದರಿಂದ ವಿಚಾರಣೆ ಸುಗಮವಾಗಿ ಮತ್ತು ಪರಿಣಾಮಕಾರಿಯಾಗಿ ನಡೆಯುತ್ತದೆ. ಸೆಪ್ಟೆಂಬರ್ 8 ರಂದು ನಿರ್ದೇಶನಗಳಿಗಾಗಿ ಪ್ರಕರಣವನ್ನು ಮತ್ತೊಮ್ಮೆ ಪಟ್ಟಿ ಮಾಡಿ. ನಾವು ಮುಂದಿನ ಮಂಗಳವಾರ ವಿಷಯವನ್ನು ಪ್ರಾರಂಭಿಸುತ್ತೇವೆ. ನೀವು ಅನುಕ್ರಮವನ್ನು ಮನಸ್ಸಿನಲ್ಲಿಟ್ಟುಕೊಳ್ಳಬೇಕು ಎಂದು ಸಿಜೆಐ ಲಲಿತ್‌ " ಹೇಳಿದರು.

ಮೀಸಲಾತಿಗೆ ಆರ್ಥಿಕ ವರ್ಗೀಕರಣವೇ ಏಕೈಕ ಆಧಾರವಾಗಿರಬಾರದು ಎಂಬ ಕಾರಣಕ್ಕಾಗಿ ಸಂವಿಧಾನದ (103 ನೇ ತಿದ್ದುಪಡಿ) ಕಾಯಿದೆ- 2019ರ ಸಿಂಧುತ್ವ ಪ್ರಶ್ನಿಸಿ ಎನ್‌ಜಿಒಗಳಾದ ಜನ್‌ಹಿತ್ ಅಭಿಯಾನ್‌ ಮತ್ತು ಯೂತ್ ಫಾರ್ ಈಕ್ವಾಲಿಟಿ ಸಲ್ಲಿಸಿದ್ದ ಅರ್ಜಿಗಳ ವಿಚಾರಣೆ ನ್ಯಾಯಾಲಯದಲ್ಲಿ ನಡೆಯಿತು.

ಸಂವಿಧಾನದ 103 ನೇ ತಿದ್ದುಪಡಿ ಕಾಯಿದೆಯು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳಿಗೆ ಹಾಗೂ ಇತರ ಹಿಂದುಳಿದ ವರ್ಗಗಳಿಗೆ ಸೇರದ ಆರ್ಥಿಕವಾಗಿ ದುರ್ಬಲ ವರ್ಗಗಳಿಗೆ ಖಾಸಗಿ ಹಾಗೂ ಸರ್ಕಾರಿ ಶಿಕ್ಷಣ ಸಂಸ್ಥೆಗಳಲ್ಲಿ ಹಾಗೂ ಸರ್ಕಾರಿ ಉದ್ಯೋಗದಲ್ಲಿ ಶೇ.10 ಮೀಸಲಾತಿ ನೀಡುತ್ತದೆ.