ಅಬಕಾರಿ ನೀತಿ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಮಾಜಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಹಾಗೂ ತೆಲಂಗಾಣ ಜಾಗೃತಿ ಪಕ್ಷದ ಅಧ್ಯಕ್ಷೆ ಕೆ ಕವಿತಾ ಸೇರಿ ಎಲ್ಲಾ 23 ಆರೋಪಿಗಳನ್ನು ದೆಹಲಿ ನ್ಯಾಯಾಲಯ ಖುಲಾಸೆಗೊಳಿಸಿದ್ದನ್ನು ಪ್ರಶ್ನಿಸಿ ಸಿಬಿಐ ದೆಹಲಿ ಹೈಕೋರ್ಟ್ ಮೆಟ್ಟಿಲೇರಿದೆ.
ತೀರ್ಪು ಪರಿಶೀಲಿಸುವಂತೆ ಕೋರಿ ಸಿಬಿಐ ಸಲ್ಲಿಸಿರುವ 974 ಪುಟಗಳ ಅರ್ಜಿಯನ್ನು ಹೋಳಿ ರಜೆ ಬಳಿಕ ಮಾರ್ಚ್ 9ರಂದು ನ್ಯಾ. ಸ್ವರಣ ಕಾಂತ ಶರ್ಮಾ ಆಲಿಸಲಿದ್ದಾರೆ.
ವಿಚಾರಣಾ ನ್ಯಾಯಾಲಯದ ನ್ಯಾಯಾಧೀಶ ಜಿತೇಂದ್ರ ಸಿಂಗ್ ಅವರು ನೀಡಿದ ತೀರ್ಪು ಸ್ಪಷ್ಟವಾಗಿ ಕಾನೂನುಬಾಹಿರ ಹಾಗೂ ಮೇಲ್ನೋಟಕ್ಕೆ ದೋಷಯುಕ್ತ ಎಂದು ಸಿಬಿಐ ಸಲ್ಲಿಸಿರುವ ಅರ್ಜಿ ತಿಳಿಸಿದೆ. ಆರೋಪಗಳನ್ನು ನಿಗದಿಪಡಿಸುವ ಹಂತದಲ್ಲಿಯೇ ನ್ಯಾಯಾಧೀಶರು ಸಾಕ್ಷ್ಯಗಳನ್ನು ಅತಿಯಾಗಿ ವಿಶ್ಲೇಷಿಸಿ ಕ್ಲುಪ್ತ ವಿಚಾರಣೆ ನಡೆಸಿದೆ ಎಂದಿತು.
ಸಂಚಿನ ಅಂಶವನ್ನು ಸಮಗ್ರವಾಗಿ ವಿಚಾರಣೆ ನಡೆಸದೆ ಅದರ ಭಿನ್ನ ಭಾಗಗಳನ್ನು ಪ್ರತ್ಯೇಕವಾಗಿ ಪರಿಶೀಲಿಸಿ ವಿಚಾರಣಾ ನ್ಯಾಯಾಲಯ ಎಡವಿದೆ. ಪ್ರತಿವಾದದ ಆಯ್ದ ಭಾಗವನ್ನು ಮಾತ್ರವನ್ನು ಓದಿ ಅಪರಾಧ ಎಸಗಿರುವಲ್ಲಿ ಆರೋಪಿಗಳ ಪಾತ್ರವನ್ನು ಹೇಳುವ ಪ್ರಮುಖ ಸಾಕ್ಷ್ಯಗಳನ್ನು ಕಡೆಗಣಿಸಲಾಗಿದೆ ಎಂದು ಅದು ಹೇಳಿದೆ.
ಅರವಿಂದ್ ಕೇಜ್ರಿವಾಲ್ ಮತ್ತು ಮನೀಷ್ ಸಿಸೋಡಿಯಾ ಅವರ ಪಾತ್ರವನ್ನು ವಿಚಾರಣಾ ನ್ಯಾಯಾಲಯ ಸೂಕ್ತವಾಗಿ ವಿಶ್ಲೇಷಿಸಿಲ್ಲ ಎಂದಿರುವ ಅದು ತನಿಖೆ ನಡೆಸಿದ ಸಿಬಿಐ ಅಧಿಕಾರಿಯ ವಿರುದ್ಧ ಇಲಾಖಾ ಕ್ರಮ ಕೈಗೊಳ್ಳುವಂತೆ ನೀಡಿದ ನಿರ್ದೇಶನ ಆಘಾತಕಾರಿಯಾಗಿದೆ. ಹೀಗಾಗಿ ಈ ನಿರ್ದೇಶನಕ್ಕೆ ತಡೆ ನೀಡಬೇಕು ಎಂದು ಕೋರಲಾಗಿದೆ.
2021-22ರ ಅಬಕಾರಿ ನೀತಿ ಮದ್ಯ ವ್ಯಾಪಾರದಲ್ಲಿ ಏಕಸ್ವಾಮ್ಯಕ್ಕೆ ಸಹಕಾರಿಯಾಗಿದೆ ಎಂಬ ಆರೋಪದ ಮೇಲೆ ಸಿಬಿಐ ಎಫ್‌ಐಆರ್ ದಾಖಲಿಸಿಕೊಂಡಿತ್ತು. ಆಮ್ ಆದ್ಮಿ ಪಕ್ಷದ ನಾಯಕರು ಲಂಚ ಪಡೆದಿದ್ದಾರೆ ಎಂದೂ ಆರೋಪಿಸಲಾಗಿತ್ತು. ಬಳಿಕ ಇ ಡಿ ಕೂಡ ಅಕ್ರಮ ಹಣ ವರ್ಗಾವಣೆ ಕಾಯಿದೆಯಡಿ ಪ್ರಕರಣ ದಾಖಲಿಸಿತ್ತು. ವಿರೋಧ ಪಕ್ಷದ ನಾಯಕರನ್ನು ಬಂಧಿಸಲಾಗಿತ್ತು. ಬಳಿಕ ಸುಪ್ರೀಂ ಕೋರ್ಟ್ ಅವರಿಗೆ ಜಾಮೀನು ನೀಡಿತ್ತು.