

ಅಬಕಾರಿ ನೀತಿ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಮಾಜಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಹಾಗೂ ತೆಲಂಗಾಣ ಜಾಗೃತಿ ಪಕ್ಷದ ಅಧ್ಯಕ್ಷೆ ಕೆ ಕವಿತಾ ಸೇರಿ ಎಲ್ಲಾ 23 ಆರೋಪಿಗಳನ್ನು ದೆಹಲಿ ನ್ಯಾಯಾಲಯ ಶುಕ್ರವಾರ ಖುಲಾಸೆಗೊಳಿಸಿದೆ.
ಭ್ರಷ್ಟಾಚಾರ ನಿಗ್ರಹ ಕಾಯಿದೆಯಡಿ ರೂಪುಗೊಂಡಿರುವ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಜಿತೇಂದ್ರ ಸಿಂಗ್ ಅವರು ಸಿಬಿಐ ದಾಖಲಿಸಿದ್ದ ಪ್ರಕರಣ ಮುಕ್ತಾಯಗೊಳಿಸುವಂತೆ ಆದೇಶಿಸಿದರು.
ಪ್ರಕರಣದಲ್ಲಿ ಯಾವುದೇ ವ್ಯಾಪಕ ಸಂಚು ಕಂಡುಬಂದಿಲ್ಲ. ಅಪರಾಧ ಎಸಗುವ ಉದ್ದೇಶ ಇಲ್ಲ. ಸಿಬಿಐ ಕೇವಲ ಊಹೆಯ ಆಧಾರದ ಮೇಲೆ ಪಿತೂರಿ ಎಂಬ ಕತೆ ಕಟ್ಟಲು ಹೊರಟಿದ್ದರಿಂದ ಪ್ರಾಸಿಕ್ಯೂಷನ್ ವಾದ ನಿಲ್ಲುವುದಿಲ್ಲ. 23 ಆರೋಪಿಗಳ ವಿರುದ್ಧ ಯಾವುದೇ ಮೇಲ್ನೋಟದ ಪ್ರಕರಣ ಕೂಡ ಸಾಬೀತಾಗಿಲ್ಲ ಎಂದು ನ್ಯಾಯಾಲಯ ಹೇಳಿತು.
ಅಲ್ಲದೆ ತನಿಖೆಯ ಲೋಪ ಸರಿದೂಗಿಸಲು ಹಾಗೂ ಇನ್ನಷ್ಟು ಮಂದಿಯನ್ನು ಆರೋಪಿಯನ್ನಾಗಿ ಮಾಡುವುದಕ್ಕಾಗಿ ಆರೋಪಿಗಳಲ್ಲಿ ಒಬ್ಬರಿಗೆ ಕ್ಷಮಾದಾನ ನೀಡಿ ಅವರನ್ನು ಮಾಫಿ ಸಾಕ್ಷಿಯಾಗಿಸಿದ್ದಕ್ಕೆ ಸಿಬಿಐಯನ್ನು ನ್ಯಾಯಾಲಯ ತರಾಟೆಗೆ ತೆಗೆದುಕೊಂಡಿತು.
“ಇಂತಹ ನಡೆ ಅನುಮತಿಸಿದರೆ ಅದು ಸಂವಿಧಾನದ ಮೂಲ ತತ್ವಗಳ ಗಂಭೀರ ಉಲ್ಲಂಘನೆಯಾಗುತ್ತದೆ. ಆರೋಪಿಗೆ ಕ್ಷಮಾದಾನ ನೀಡಿ ನಂತರ ಅವನ ಹೇಳಿಕೆಗಳನ್ನು ತನಿಖೆಯ ಪೊಳ್ಳುತನ ಹೋಗಲಾಡಿಸಲು ಬಳಸುವುದು ತಪ್ಪು” ಎಂದು ನ್ಯಾಯಾಧೀಶರು ಅಸಮಾಧಾನ ವ್ಯಕ್ತಪಡಿಸಿದರು. ಜೊತೆಗೆ ಸಿಬಿಐನ ಕೆಲ ಅಧಿಕಾರಿಗಳ ವಿರುದ್ಧ ಇಲಾಖಾ ತನಿಖೆಗೆ ಶಿಫಾರಸು ಮಾಡುವುದಾಗಿ ತಿಳಿಸಿತು.
ಸಿಬಿಐ ಈ ಕೆಳಗಿನ 23 ಜನರ ವಿರುದ್ಧ ಆರೋಪಪಟ್ಟಿ ಸಲ್ಲಿಸಿತ್ತು:
ಕುಲದೀಪ್ ಸಿಂಗ್
ನರೇಂದ್ರ ಸಿಂಗ್
ವಿಜಯ್ ನಾಯರ್
ಅಭಿಷೇಕ್ ಬೊಯಿನಪಲ್ಲಿ
ಅರುಣ್ ರಾಮಚಂದ್ರ ಪಿಳ್ಳೈ
ಮೂಥಾ ಗೌತಮ್
ಸಮೀರ್ ಮಹೇಂದ್ರು
ಮನೀಶ್ ಸಿಸೋಡಿಯಾ
ಮನ್‌ದೀಪ್ ಸಿಂಗ್ ಧಲ್
ಅರ್ಜುನ್ ಪಾಂಡೆ
ಬುಚ್ಚಿಬಾಬು ಗೋರಂಟ್ಲ
ರಾಜೇಶ್ ಜೋಶಿ
ದಾಮೋದರ್ ಪ್ರಸಾದ್ ಶರ್ಮಾ
ಪ್ರಿನ್ಸ್ ಕುಮಾರ್
ಅರವಿಂದ್ ಕುಮಾರ್ ಸಿಂಗ್
ಚನ್‌ಪ್ರೀತ್ ಸಿಂಗ್ ರಾಯತ್
ಕವಿತಾ ಕಲ್ವಕುಂಟ್ಲ @ ಕೆ. ಕವಿತಾ
ಅರವಿಂದ್ ಕೇಜ್ರಿವಾಲ್
ದುರ್ಗೇಶ್ ಪಾಠಕ್
ಅಮಿತ್ ಅರೋರಾ
ವಿನೋದ್ ಚೌಹಾಣ್
ಆಶಿಷ್ ಚಂದ್ ಮಥುರ
ಶರತ್ ಚಂದ್ರ ರೆಡ್ಡಿ
2021-22ರ ಅಬಕಾರಿ ನೀತಿ ಮದ್ಯ ವ್ಯಾಪಾರದಲ್ಲಿ ಏಕಸ್ವಾಮ್ಯಕ್ಕೆ ಸಹಕಾರಿಯಾಗಿದೆ ಎಂಬ ಆರೋಪದ ಮೇಲೆ ಸಿಬಿಐ ಎಫ್‌ಐಆರ್ ದಾಖಲಿಸಿಕೊಂಡಿತ್ತು. ಆಮ್ ಆದ್ಮಿ ಪಕ್ಷದ ನಾಯಕರು ಲಂಚ ಪಡೆದಿದ್ದಾರೆ ಎಂದೂ ಆರೋಪಿಸಲಾಗಿತ್ತು. ಬಳಿಕ ಇ ಡಿ ಕೂಡ ಅಕ್ರಮ ಹಣ ವರ್ಗಾವಣೆ ಕಾಯಿದೆಯಡಿ ಪ್ರಕರಣ ದಾಖಲಿಸಿತ್ತು. ವಿರೋಧ ಪಕ್ಷದ ನಾಯಕರನ್ನು ಬಂಧಿಸಲಾಗಿತ್ತು. ಬಳಿಕ ಸುಪ್ರೀಂ ಕೋರ್ಟ್ ಅವರಿಗೆ ಜಾಮೀನು ನೀಡಿತ್ತು.