ಸುದ್ದಿಗಳು

ನ್ಯಾಯಾಂಗದ ಟೀಕೆಗಾಗಿ ಸರ್ಕಾರ, ಸಾರ್ವಜನಿಕ ವೇದಿಕೆ ಬಳಸಬಾರದು: ನಿವೃತ್ತ ಸಿಜೆಐ ರಂಜನ್ ಗೊಗೊಯ್

Bar & Bench

ನ್ಯಾಯಮೂರ್ತಿಗಳ ನೇಮಕಾತಿಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಮತ್ತು ಸುಪ್ರೀಂ ಕೋರ್ಟ್‌ ನಡುವೆ ಸಂಘರ್ಷ ಮುಂದುವರೆದಿರುವುದರ ನಡುವೆಯೇ ಎರಡೂ ಕಡೆಯಿಂದ ಮುತ್ಸದ್ದಿತನ ತೋರಿಸಬೇಕಾದ ಅಗತ್ಯತೆಯ ಕುರಿತು ಸುಪ್ರೀಂ ಕೋರ್ಟ್‌ ನಿವೃತ್ತ ಮುಖ್ಯ ನ್ಯಾಯಾಮೂರ್ತಿ ಹಾಗೂ ರಾಜ್ಯಸಭಾ ಸದಸ್ಯ ರಂಜನ್‌ ಗೊಗೊಯ್‌  ಕರೆ ನೀಡಿದರು.

ಶುಕ್ರವಾರ ಗುಜರಾತ್‌ನ ʼಸೂರತ್‌ ಸಾಹಿತ್ಯೋತ್ಸವʼದಲ್ಲಿ ಮಾತನಾಡಿದ ರಂಜನ್‌ ಗೊಗೊಯ್‌ ಅವರು ʼಕೊಲಿಜಿಯಂ ವ್ಯವಸ್ಥೆ ಮೇಲೆ ಬೀಸುತ್ತಿರುವ ಬಿರುಗಾಳಿಯʼ ಬಗ್ಗೆ ಪ್ರತಿಕ್ರಿಯಿಸಿದರು.

ಕೊಲಿಜಿಯಂ ವ್ಯವಸ್ಥೆಯಲ್ಲಿ ಬದಲಾವಣೆ ಅಗತ್ಯವಿದೆ ಎಂದು ಸರ್ಕಾರಕ್ಕೆ ಅನಿಸಿದರೆ, ಸಾರ್ವಜನಿಕ ವೇದಿಕೆಗಳಲ್ಲಿ ನ್ಯಾಯಾಂಗವನ್ನು  ಟೀಕಿಸುವ ಬದಲು ಅದು ಬೇರೆಡೆ ಚರ್ಚಿಸಬೇಕು ಎಂದು ಕೂಡ ಅವರು ಸಲಹೆ ನೀಡಿದರು.

ನ್ಯಾ. ಗೊಗೊಯ್‌ ಭಾಷಣದ ಪ್ರಮುಖಾಂಶಗಳು

  • ಎರಡೂ ಕಡೆಯವರು ಚಾತುರ್ಯ, ನಾಯಕತ್ವ ಹಾಗೂ ಮುತ್ಸದ್ದಿತನ ತೋರುವ ಅಗತ್ಯವಿದೆ.

  • ನ್ಯಾಯಮೂರ್ತಿಗಳ ನೇಮಕದ ವಿಚಾರದಲ್ಲಿ ಯಾರು ಶ್ರೇಷ್ಠರು ಅಥವಾ ಯಾರು ಅಂತಿಮ ಎಂಬುದು ಪ್ರಶ್ನೆಯಲ್ಲ.

  • ರಾಜಕೀಯ ಅಧಿಕಾರಸ್ಥರು ಅಭಿಪ್ರಾಯಪಟ್ಟಿರುವಂತೆ ನೇಮಕಾತಿಗಳಲ್ಲಿ ಬದಲಾವಣೆ ಆಗಬೇಕಿದ್ದರೆ ಅದನ್ನು ಚರ್ಚಿಸಲು ಬೇರೆ ಜಾಗ ಇದೆ, ನ್ಯಾಯಾಂಗವನ್ನು ಟೀಕಿಸಲು ಸಾರ್ವವಜನಿಕ ವೇದಿಕೆಗಳನ್ನು ಬಳಸಿಕೊಳ್ಳಬಾರದು.

  • ನ್ಯಾಯಮೂರ್ತಿಗಳು ಕೂಡ ಏನಾದರೂ ಹೇಳಬೇಕೆಂದಿದ್ದರೆ ಅದನ್ನು ನ್ಯಾಯಮೂರ್ತಿ ಸ್ಥಾನದಲ್ಲಿ ಕುಳಿತು ಹೇಳಬಾರದು.

  • ಎರಡೂ ಕಡೆಯವರು ಹೆಚ್ಚಿನ ಹೊಣೆಗಾರಿಕೆ ಪ್ರದರ್ಶಿಸುವ ಅಗತ್ಯವಿದೆ.

  • ನ್ಯಾಯಾಲಯಗಳಲ್ಲಿ ಅತಿದೊಡ್ಡ ದಾವೆದಾರನಾಗಿರುವ ಸರ್ಕಾರ ಪ್ರಕರಣಗಳು ಬಾಕಿ ಉಳಿಯುವುದನ್ನು ತಪ್ಪಿಸುವ ನಿಟ್ಟಿನಲ್ಲಿ ಸುಧಾರಣೆ ಕೈಗೊಳ್ಳುವ ಅಗತ್ಯವಿದೆ.

  • ಸರ್ಕಾರ ಪ್ರತಿಯೊಂದು ಪ್ರಕರಣದಲ್ಲೂ ಮೇಲ್ಮನವಿ ಸಲ್ಲಿಸುತ್ತದೆ ಏಕೆಂದರೆ ಯಾರೂ ಹೊಣೆ ಹೊರಲು ಬಯಸುವುದಿಲ್ಲ.

  • ಕೆಲ ಕಾನೂನುಗಳ ರದ್ದತಿ ಅಥವಾ ಮರುಪರಿಶೀಲನೆ ಕುರಿತಂತೆ ಚರ್ಚೆ ನಡೆಯುತ್ತಿಲ್ಲ.

  • ಕ್ರಿಮಿನಲ್‌ ಮೇಲ್ಮನವಿಗಳ ವಿಚಾರಣೆಗೆ ಹೆಚ್ಚು ಸಮಯ ಹಿಡಿಯುತ್ತಿದ್ದು ಕೆಲವು ಸಂದರ್ಭಗಳಲ್ಲಿ ಆರೋಪಿಗಳು ತೀರಿಕೊಂಡರೂ ಪ್ರಕರಣ ಇತ್ಯರ್ಥವಾಗಿರುವುದಿಲ್ಲ.

  • ಹಲವು ನ್ಯಾಯಾಧೀಶರು ಬೆಳಿಗ್ಗೆ 9ರಿಂದ 5ಗಂಟೆಯವರೆಗೆ ಮಾತ್ರ ಕಾರ್ಯ ನಿರ್ವಹಿಸುತ್ತಿದ್ದಾರೆ. ಉತ್ಸಾಹ, ಬದ್ಧತೆಯಿಂದ ಕೆಲಸ ಮಾಡುವವರು ಎಷ್ಟು ಮಂದಿ ಇದ್ದಾರೆ?

  • ನ್ಯಾಯಾಧೀಶರಾದ ಅನೇಕ ಯುವಕರು ವ್ಯವಸ್ಥೆ ತಮಗೆ ರಕ್ಷಣೆ ಒದಗಿಸುತ್ತಿಲ್ಲ ಎಂದು ವಿಷಾದಿಸಿರುವುದನ್ನು ಕಂಡಿರುವೆ.