ಸಾಕ್ಷ್ಯ ನುಡಿಯಲು ಶಾಂತಿ ಮತ್ತು ಸಾಮರಸ್ಯ ಸಮಿತಿಯ ಮುಂದೆ ಹಾಜರಾಗುವಂತೆ ಫೇಸ್‌ಬುಕ್ ಭಾರತದ ವ್ಯವಸ್ಥಾಪಕ ನಿರ್ದೇಶಕ ಅಜಿತ್ ಮೋಹನ್ ಅವರಿಗೆ ಸಮನ್ಸ್ ನೀಡಲಾಗಿದ್ದು, ಅವರ ವಿರುದ್ಧ ಯಾವುದೇ ತೆರನಾದ ದಬ್ಬಾಳಿಕೆಯ ಕ್ರಮಕೈಗೊಂಡಿಲ್ಲ. ಕ್ರಮ ತೆಗೆದುಕೊಳ್ಳುವ ಉದ್ದೇಶವೂ ಇರಲಿಲ್ಲ ಎಂದು ಸುಪ್ರೀಂ ಕೋರ್ಟ್‌ಗೆ ದೆಹಲಿ ಶಾಸನ ಸಭೆ ಮಂಗಳವಾರ ಸಲ್ಲಿಸಿರುವ ಅಫಿಡವಿಟ್‌ನಲ್ಲಿ ತಿಳಿಸಿದೆ.
ಮೋಹನ್ ಅವರು ಸಾಕ್ಷ್ಯಿಯಾಗಿದ್ದು, ಮೌನವಾಗಿ ಉಳಿಯುವ ಹಕ್ಕಿನ ನೆರವನ್ನು ಅವರು ಪಡೆಯಲಾಗದು ಎಂದು ಹೇಳಿದೆ. ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿರುವ ಅಫಿಡವಿಟ್‌ನಲ್ಲಿ ಹೀಗೆ ವಿವರಿಸಲಾಗಿದೆ:
“ಮೊದಲನೇ ಪ್ರತಿವಾದಿಯ (ಅಜಿತ್ ಮೋಹನ್) ವಿರುದ್ಧ ಯಾವುದೇ ದಬ್ಬಾಳಿಕೆಯ ಕ್ರಮಕೈಗೊಂಡಿಲ್ಲ. ಸಾಕ್ಷ್ಯ ನುಡಿಯುವ ಪ್ರಕ್ರಿಯೆಯಲ್ಲಿ ಭಾಗವಹಿಸುವ ಮಾತ್ರಕ್ಕೆ ಅವರ ವಿರುದ್ಧ ಯಾವುದೇ ತೆರನಾದ ಕ್ರಮಕೈಗೊಳ್ಳುವ ಉದ್ದೇಶವಿಲ್ಲ. ನೇರ ಪ್ರಸಾರದ ವ್ಯವಸ್ಥೆಯ ಮೂಲಕ ಅತ್ಯಂತ ಪಾರದರ್ಶಕವಾಗಿ ಪ್ರಕ್ರಿಯೆ ನಡೆಸುತ್ತಿರುವುದರಿಂದ ಮೊದಲನೇ ಪ್ರತಿವಾದಿ ಸೇರಿದಂತೆ ಯಾರೂ ಪ್ರಕ್ರಿಯೆಯ ಬಗ್ಗೆ ಆತಂಕಗೊಳ್ಳುವ ಅವಶ್ಯಕತೆ ಇಲ್ಲ.”
ಕಳೆದ ಫೆಬ್ರವರಿಯಲ್ಲಿ ದೆಹಲಿಯಲ್ಲಿ ನಡೆದ ಗಲಭೆಗೆ ಸಂಬಂಧಿಸಿದಂತೆ ಫೇಸ್‌ಬುಕ್ ಭಾರತದ ವ್ಯವಸ್ಥಾಪಕ ನಿರ್ದೇಶಕ ಅಜಿತ್ ಮೋಹನ್ ಅವರನ್ನು ತಜ್ಞ ಸಾಕ್ಷಿ ಎಂದು ಪರಿಗಣಿಸಿ ದೆಹಲಿ ವಿಧಾನಸಭೆಯ “ಶಾಂತಿ ಮತ್ತು ಸಾಮರಸ್ಯ ಸಮಿತಿ”ಯು ತನ್ನ ಮುಂದೆ ಹಾಜರಾಗುವಂತೆ ಸಮನ್ಸ್ ಜಾರಿಗೊಳಿಸಿತ್ತು.
ಎರಡು ಬಾರಿ ತನ್ನ ಮುಂದೆ ಹಾಜರಾಗುವಂತೆ ಸಮನ್ಸ್ ನೀಡಿದ್ದ ಸಮಿತಿಯು ಒಂದೊಮ್ಮೆ ಹಾಜರಾಗಲು ವಿಫಲವಾದರೆ ಅದನ್ನು ಹಕ್ಕು ಚ್ಯುತಿ ಎಂದು ಪರಿಗಣಿಸಲಾಗುವುದು ಎಂದು ಹೇಳಿದ್ದನ್ನು ಪ್ರಶ್ನಿಸಿ ಮೋಹನ್ ಅವರು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದಾರೆ.
ಸುಪ್ರೀಂ ಕೋರ್ಟ್ ಸೆಪ್ಟೆಂಬರ್ 23ರಂದು ಅರ್ಜಿ ವಿಚಾರಣೆ ನಡೆಸಿತ್ತು. ಅಂದೇ ಸಮಿತಿಯ ಮುಂದೆ ಹಾಜರಾಗಲು ಅಜಿತ್ ಮೋಹನ್ ಅವರಿಗೆ ಕೊನೆಯ ದಿನವನ್ನಾಗಿ ಸಮಿತಿಯು ನಿಗದಿಪಡಿಸಿತ್ತು. ಅಂದು ನೋಟಿಸ್ ಜಾರಿಗೊಳಿಸಿದ್ದ ಸುಪ್ರೀಂ ಕೋರ್ಟ್ ಮುಂದಿನ ಆದೇಶದವರೆಗೆ ಸಭೆ ನಡೆಸದಂತೆ ಸೂಚಿಸಿತ್ತು.
ಅರ್ಜಿಯನ್ನು ತಪ್ಪಾಗಿ ಗ್ರಹಿಸಲಾಗಿದೆ ಎಂದಿರುವ ದೆಹಲಿ ಸರ್ಕಾರವು ಹಕ್ಕು ಚ್ಯುತಿ ಅಥವಾ ನಿಂದನೆಗೆ ಸಂಬಂಧಿಸಿದ ಸಮನ್ಸ್ ಅನ್ನು ಮೋಹನ್ ಅವರಿಗೆ ನೀಡಲಾಗಿಲ್ಲ. ಸಮಿತಿಯು ಯಾವ ಸಂದರ್ಭದಲ್ಲೂ ಮೋಹನ್ ಅವರು ಹಕ್ಕು ಚ್ಯುತಿ ಅಥವಾ ನಿಂದನೆ ಮಾಡಿದ್ದಾರೆ ಎಂದು ಹೇಳಿಲ್ಲ ಎಂದು ದೆಹಲಿ ಸರ್ಕಾರದ ಅಫಿಡವಿಟ್‌ನಲ್ಲಿ ಅಧಿಕೃತವಾಗಿ ತಿಳಿಸಲಾಗಿದೆ.
ಸಾಕ್ಷಿಗೆ ಮೌನವಾಗಿ ಉಳಿಯುವ ಹಕ್ಕಿನ ನೆರವು ಸಿಗದು: ಸಮಿತಿಯ ಮುಂದೆ ಹಾಜರಾಗುವಂತೆ ಸೂಚಿಸುವ ಮೂಲಕ ಮೋಹನ್ ಅವರನ್ನು ಶಿಕ್ಷೆಯ ನೋವಿನಲ್ಲಿ ಇಡಲಾಗದು. ಸಂವಿಧಾನದ ಪರಿಚ್ಛೇದ 19(1) ಹಕ್ಕು, ಮೌನವಾಗಿ ಉಳಿಯುವ ಹಕ್ಕನ್ನೂ ಒಳಗೊಂಡಿದ್ದು, ಮೋಹನ್ ಅವರು ವಿವರಣೆ ನೀಡದೆ ಇರಬಹುದಾಗಿದೆ. ತನ್ನ ಅಧಿಕಾರ ಇರುವ ವಿಚಾರಗಳ ಮೇಲೆ ಸಮಿತಿ ನಿರ್ಧಾರ ಕೈಗೊಳ್ಳಬಹುದಾಗಿದ್ದು, ಅಮೆರಿಕ ಮೂಲದ ಸಂಸ್ಥೆಯ ಉದ್ಯೋಗಿಯಾದ ಮೋಹನ್ ಅವರನ್ನು ಸಮಿತಿಯ ಮುಂದೆ ವಿವರಣೆ ನೀಡುವಂತೆ ಬಲವಂತಪಡಿಸಲಾಗದು ಎಂದು ಹಿರಿಯ ವಕೀಲ ಹರೀಶ್ ಸಾಳ್ವೆ ವಾದಿಸಿದ್ದರು.
ಮೋಹನ್ ಅವರ ವಾದವನ್ನು ಅಲ್ಲಗಳೆದಿದ್ದ ಶಾಂತಿ ಮತ್ತು ಸಾಮರಸ್ಯ ಸಮಿತಿಯು ಭಾರತ ಮತ್ತು ಅಮೆರಿಕಾದ ಸಂಸದೀಯ ಸಂಸ್ಥೆಗಳ ಮುಂದೆ ಹಾಜರಾಗಿದ್ದೇನೆ ಎಂದು ಮೋಹನ್ ಅವರು ಯಾವ ಸಂಸ್ಥೆಯ ಮುಂದೆ ಹಾಜರಾಗಿ ಸಾಕ್ಷ್ಯ ನುಡಿಯಬೇಕು ಎಂಬುದನ್ನು “ಹೆಕ್ಕಿ-ಆರಿಸಲಾಗದು” (ಪಿಕ್ ಅಂಡ್ ಚೂಸ್) ಎಂದು ದೆಹಲಿ ವಿಧಾನಸಭೆ ಹೇಳಿದೆ.
“ಸಾಕ್ಷ್ಯ ನುಡಿಯುವಂತೆ ಮೊದಲನೇ ಪ್ರತಿವಾದಿ ಕರೆಯುವುದು ಮೂಲಭೂತ ಹಕ್ಕಾದ ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲೆ ಗಂಭೀರವಾದ ಪರಿಣಾಮ ಬೀರಲಿದೆ ಎಂದು ಹೇಳಿರುವುದು ಪ್ರಾಮಾಣಿಕವಲ್ಲದ, ತಪ್ಪಾದ ಮತ್ತು ನಿಷ್ಪ್ರಯೋಜಕ ವಾದವಾಗಿದೆ. ಮೊದಲ ಪ್ರತಿವಾದಿಗೆ ಮಾಹಿತಿ ಮತ್ತು ತಂತ್ರಜ್ಞಾನ ಸ್ಥಾಯಿ ಸಮಿತಿಯು ಇದೇ ಅಧಿಕಾರ ಬಳಿಸಿ ಸಾಕ್ಷ್ಯ ನುಡಿಯಲು ಹಾಜರಾಗುವಂತೆ ಸೂಚಿಸಿರುವಾಗ ಅರ್ಜಿದಾರರು ಈಗ ಈ ರೀತಿಯ ತಗಾದೆ ಎತ್ತುವುದು ಖಂಡನೀಯ” ಎಂದು ಹೇಳಿದೆ.
ಮೋಹನ್ ಅವರು ಕ್ರಿಮಿನಲ್ ಪ್ರಕರಣದಲ್ಲಿ ಆರೋಪಿಯಾಗಿಲ್ಲ. ಆದ್ದರಿಂದ ಸಂವಿಧಾನದ ಪರಿಚ್ಛೇದ 20ರ ಅಡಿ ಸಾಕ್ಷ್ಯಿಯು ಮೌನವಾಗಿ ಉಳಿಯುವ ಹಕ್ಕಿನ ನೆರವು ಕೋರಲಾಗದು. ಪರಿಚ್ಛೇದ 19(1)(a) ಹಕ್ಕುಗಳು, ದೆಹಲಿ ವಿಧಾನಸಭೆಯ ಕಾರ್ಯವಿಧಾನ ನಿಯಮಗಳ ಜೊತೆ ಘರ್ಷಣೆ ಹೊಂದಿಲ್ಲ ಎಂದು ಅಫಿಡವಿಟ್ ನಲ್ಲಿ ಸ್ಪಷ್ಟಪಡಿಸಲಾಗಿದೆ.
ಸದರಿ ರಿಟ್ ಅರ್ಜಿಯಲ್ಲಿ ಮೋಹನ್ ಅವರು ಪರಿಚ್ಛೇದ 14 ಮತ್ತು 21 ಅನ್ನು ಪ್ರಸ್ತಾಪಿಸಿದ್ದು, ತಜ್ಞ ವಿವರಣೆ ಬಯಸಿ ವ್ಯಕ್ತಿಗೆ ಸಮನ್ಸ್ ನೀಡಿರುವಾಗ ಮಾತ್ರಕ್ಕೆ ಅವರು ಮೇಲಿನ ಪರಿಚ್ಛೇದಗಳನ್ನು ಪ್ರಸ್ತಾಪಿಸಲಾಗದು ಎಂದು ಸಮಿತಿ ಹೇಳಿದೆ.
“ಸಮಿತಿಯ ಮುಂದೆ ಮೊದಲನೇ ಪ್ರತಿವಾದಿಯು (ಮೋಹನ್) ಹಾಜರಾಗಲು ನಿರಾಕರಿಸಿದ್ದು, ಬದಲಿಗೆ ಮತ್ತೊಂದು ವಿಧಾನದ ಮೂಲಕ ಪ್ರತಿಕ್ರಿಯಿಸಲು ನಿರ್ಧರಿಸದ್ದನ್ನು ಬೆರಳು ಮಾಡಿ, ಪ್ರತ್ಯಕ್ಷವಾಗಿ ಮೊದಲನೇ ಪ್ರತಿವಾದಿ ಹಾಜರಾಗದಿದ್ದರೆ ಅದನ್ನು ಹಕ್ಕು ಚ್ಯುತಿ ಎಂದು ಪರಿಗಣಿಸಲಾಗುವುದು” ಎಂದು ದೆಹಲಿ ಸರ್ಕಾರವು ವಕೀಲ ಶಾದನ್ ಫರಾಸತ್ ಅವರ ಮೂಲಕ ಸಲ್ಲಿಸಿರುವ ಅಫಿಡವಿಟ್‌ನಲ್ಲಿ ತಿಳಿಸಿದೆ.