Justices Vipin Sanghi and Jasmeet Singh

 
ಸುದ್ದಿಗಳು

ಮದುವೆಗೂ ಮುನ್ನ ಮಾನಸಿಕ ಅಸ್ವಸ್ಥತೆ ಬಹಿರಂಗಪಡಿಸದಿರುವುದು ವಂಚನೆ: ದೆಹಲಿ ಹೈಕೋರ್ಟ್‌

ನ್ಯಾಯಾಲಯ ರಚಿಸಿದ್ದ ವೈದ್ಯಕೀಯ ಮಂಡಳಿಯಲ್ಲಿ ಮಾನಸಿಕ ಆರೋಗ್ಯ ತಪಾಸಣೆಗೆ ಪತ್ನಿ ಒಳಗಾಗದಿರುವುದನ್ನು ಪೀಠವು ಪರಿಗಣಿಸಿದೆ ಎಂದು ಪೀಠವು ಹೇಳಿದೆ.

Bar & Bench

ವಿವಾಹಕ್ಕೂ ಮುನ್ನ ಮಾನಸಿಕ ಅಸ್ವಸ್ಥತೆ ಬಗ್ಗೆ ತಿಳಿಸದಿರುವುದು ವಂಚನೆಯಾಗುತ್ತದೆ ಎಂದು ಶುಕ್ರವಾರ ಹೇಳಿರುವ ದೆಹಲಿ ಹೈಕೋರ್ಟ್‌ 16 ವರ್ಷಗಳ ಹಿಂದೆ ನಡೆದಿದ್ದ‌ ಮದುವೆಯನ್ನು ರದ್ದುಗೊಳಿಸಿ ತೀರ್ಪು ಪ್ರಕಟಿಸಿದೆ.

ಹಿಂದೂ ವಿವಾಹ ಕಾಯಿದೆ ಸೆಕ್ಷನ್‌ 12ರ ಅಡಿ ವಿಚ್ಛೇದನ ಕೋರಿ ಸಂದೀಪ್‌ ಅಗರ್ವಾಲ್‌ ಸಲ್ಲಿಸಿದ್ದ ಮನವಿಯನ್ನು ವಜಾ ಮಾಡಿದ್ದ ಕೌಟುಂಬಿಕ ನ್ಯಾಯಾಲಯದ ಆದೇಶ ಪ್ರಶ್ನಿಸಿ ಸಲ್ಲಿಸಿದ್ದ ಮೇಲ್ಮನವಿಯನ್ನು ನ್ಯಾಯಮೂರ್ತಿಗಳಾದ ವಿಪಿನ್‌‌ ಸಾಂಘಿ ಮತ್ತು ಜಸ್ಮೀತ್‌ ಸಿಂಗ್‌ ನೇತೃತ್ವದ ವಿಭಾಗೀಯ ಪೀಠವು ನಡೆಸಿತು.

“ಸುದೀರ್ಘವಾದ ಈ ಪ್ರಕ್ರಿಯೆಯಲ್ಲಿ ಪತಿ ಸಂದೀಪ್‌ ಅವರ ಬದುಕನ್ನು ಹಾಳು ಮಾಡಲಾಗಿದೆ. 16 ವರ್ಷಗಳಿಂದ ಯಾವುದೇ ನಿರ್ಧಾರ ಕೈಗೊಳ್ಳಲಾಗದೇ ಅವರು ಈ ಸಂಬಂಧದಲ್ಲಿ ಸಿಲುಕಿಕೊಂಡಿದ್ದಾರೆ. ಈ ಮೂಲಕ ತಮ್ಮ ಬದುಕಿನ ಬಹುಮುಖ್ಯ ವರ್ಷಗಳನ್ನು ಕಳೆದುಕೊಂಡಿದ್ದಾರೆ. ಒಂದೊಮ್ಮೆ ಹೀಗಾಗದಿದ್ದಲ್ಲಿ ಅವರು ತಮ್ಮ ವೈವಾಹಿಕ ಬದುಕಿನ ಆನಂದ ಮತ್ತು ತೃಪ್ತಿಯನ್ನು ಅನುಭವಿಸುತ್ತಿದ್ದರು” ಎಂದು ನ್ಯಾಯಾಲಯವು ಹೇಳಿದೆ.

“ವಿವಾಹಕ್ಕೂ ಮುನ್ನ ಪ್ರತಿವಾದಿಯಾದ ಪತ್ನಿಯು ತನ್ನ ಮಾನಸಿಕ ಆರೋಗ್ಯದ ಅಸಮತೋಲನದ ಕುರಿತು ತಿಳಿಸುವಲ್ಲಿ ವಿಫಲವಾಗಿದ್ದಾರೆ ಎಂದು ಮೇಲ್ಮನವಿದಾರರಾದ ಪತಿ ಆರೋಪಿಸಿದ್ದಾರೆ. ಇದು ಮೇಲ್ಮನವಿದಾರರನ್ನು ಗುರಿಯಾಗಿಸಿರುವ ವಂಚನೆಯಲ್ಲದೇ ಬೇರೇನು ಅಲ್ಲ” ಎಂದು ಪೀಠವು ತೀರ್ಪಿನಲ್ಲಿ ಹೇಳಿದೆ.

“2005ರಲ್ಲಿ ಯುವತಿಯನ್ನು ವಿವಾಹವಾಗಿದ್ದು, ಆ ಸಂದರ್ಭದಲ್ಲಿ ಆಕೆಯ ಕುಟುಂಬದವರು ಯುವತಿಯು ತೀವ್ರ ತರಹದ ಸ್ಕಿಜೋಫ್ರೇನಿಯಾದಿಂದ ಬಳಲುತ್ತಿದ್ದಾರೆ ಎಂಬ ವಿಚಾರ ತಿಳಿಸಿಲ್ಲ. ನಮ್ಮ ಮನೆಯಲ್ಲಿ ನೆಲೆಸಿದ್ದಾಗ ಮತ್ತು ಮಧುಚಂದ್ರಕ್ಕೆ ತೆರಳಿದ್ದ ಸಂದರ್ಭದಲ್ಲಿ ಆಕೆಯು ವಿಚಿತ್ರವಾಗಿ ವರ್ತಿಸಿದ್ದಳು. ಹೀಗಾಗಿ, ಏಮ್ಸ್‌ನಲ್ಲಿನ ನರ ಮನೋವಿಜ್ಞಾನಿ ಸೇರಿದಂತೆ ಹಲವು ವೈದ್ಯರ ಬಳಿ ಕರೆದೊಯ್ಯಲಾಯಿತು. ಪತ್ನಿ ಸ್ಕಿಜೋಫ್ರೇನಿಯಾದಿಂದ ಬಳಲುತ್ತಿದ್ದಾಳೆ ಎಂದು ವೈದ್ಯರು ತಿಳಿಸಿದ್ದರು” ಎಂದು ಪತಿ ವಾದಿಸಿದ್ದರು.

“ಈ ವಿಚಾರದ ಕುರಿತು ಪತ್ನಿಯ ಮನೆಯವರಿಗೆ ತಿಳಿಸಿದಾಗ ಮದುವೆಯಾದ ಕೇವಲ ಒಂಭತ್ತು ವಾರಗಳಲ್ಲೇ ಆಕೆಯನ್ನು ಅವರ ಕುಟುಂಬದವರು ಕರೆದೊಯ್ದರು” ಎಂದು ಹೇಳಿದ್ದರು.

ಇತ್ತ ಪತ್ನಿಯು ನ್ಯಾಯಾಲಯಕ್ಕೆ ಸಲ್ಲಿಸಿರುವ ಲಿಖಿತ ಹೇಳಿಕೆಯಲ್ಲಿ “ತಾನು ಯಾವುದೇ ಮಾನಸಿಕ ಅನಾರೋಗ್ಯದಿಂದ ಬಳಲುತ್ತಿಲ್ಲ. ಕಾಲೇಜು ದಿನಗಳಲ್ಲಿ ತಲೆನೋವು ಬರುತ್ತಿದ್ದರಿಂದ ಶಿಕ್ಷಣ ಮೊಟಕುಗೊಳಿಸಿದೆ. ಇದನ್ನು ಪತಿಯ ಕುಟುಂಬದವರಿಗೆ ತಿಳಿಸಲಾಗಿತ್ತು” ಎಂದಿದ್ದರು.

“ನ್ಯಾಯಾಲಯ ನೇಮಿಸಿದ ವೈದ್ಯಕೀಯ ಮಂಡಳಿಯಿಂದ ಆರೋಗ್ಯ ತಪಾಸಣೆಗೆ ಒಳಗಾಗಲು ಪತ್ನಿಯು ಖಡಾಖಂಡಿತವಾಗಿ ನಿರಾಕರಿಸಿರುವುದರಿಂದ ಸತ್ಯ ಅರಿಯಲು ನ್ಯಾಯಾಲಯಕ್ಕೆ ಹಿನ್ನಡೆಯಾಗಿದೆ. ಹೀಗಾಗಿ, ಪತಿಯ ಆರೋಪವನ್ನು ಸಾಬೀತುಪಡಿಸಲು ಸಾಧ್ಯವಾಗಿಲ್ಲ” ಎಂದು ನ್ಯಾಯಾಲಯ ಹೇಳಿದ್ದು, ಅಂತಿಮವಾಗಿ ವಿವಾಹವನ್ನು ರದ್ದುಪಡಿಸಿತು. ಅಲ್ಲದೆ, ಪತಿಯ ಕಾನೂನು ವೆಚ್ಚವೆಂದು ರೂ.10 ಸಾವಿರ ಪಾವತಿಸಲು ಸೂಚಿಸಲಾಯಿತು.