Twitter, Karnataka High Court 
ಸುದ್ದಿಗಳು

[ಟ್ವಿಟರ್ ಪ್ರಕರಣ] ಖಾತೆದಾರರಿಗೆ ನೋಟಿಸ್‌ ನೀಡದಿರುವುದು ನಿರ್ಬಂಧ ಆದೇಶ ದುರ್ಬಲಗೊಳಿಸದು: ಕೇಂದ್ರದ ವಾದ

ಭಾರತ ಆಕ್ರಮಿತ ಕಾಶ್ಮೀರದ ಕುರಿತು ಯಾರೋ ಒಬ್ಬರು ಪಾಕಿಸ್ತಾನ ಸರ್ಕಾರದ ಹೆಸರಿನಲ್ಲಿ ಟ್ವೀಟ್‌ ಮಾಡುತ್ತಾರೆ. ಮತ್ತಾರೋ ಪ್ರಭಾಕರ್‌ ಹೀರೊ, ಮರಳಿ ಬರುತ್ತಿದ್ದಾರೆ ಎನ್ನುತ್ತಾರೆ. ಇದೆಲ್ಲ ಅಪಾಯಕಾರಿ ಎಂದು ಹೈಕೋರ್ಟ್‌ ಮುಂದೆ ವಾದಿಸಿದ ಎಎಸ್‌ಜಿ.

Bar & Bench

ಕೇಂದ್ರ ಸರ್ಕಾರ ಹೊರಡಿಸಿರುವ ನಿರ್ಬಂಧ ಆದೇಶ ಪ್ರಶ್ನಿಸಿ ಟ್ವಿಟರ್‌ ಸಲ್ಲಿಸಿರುವ ಅರ್ಜಿಯಲ್ಲಿ ಪರಿಹಾರ ಪಡೆಯಲು ಅದು ಅರ್ಹವಾಗಿಲ್ಲ ಎಂದು ಭಾರತ ಸರ್ಕಾರವು ಗುರುವಾರ ಕರ್ನಾಟಕ ಹೈಕೋರ್ಟ್‌ಗೆ ತಿಳಿಸಿದೆ.

ವ್ಯಕ್ತಿಗತವಾಗಿ ಖಾತೆಗಳನ್ನು ನಿಷೇಧಿಸುವಂತೆ ಕೇಂದ್ರ ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಇಲಾಖೆ ಜಾರಿ ಮಾಡಿರುವ ನಿರ್ಬಂಧ ಆದೇಶಗಳನ್ನು ಪ್ರಶ್ನಿಸಿ ಟ್ವಿಟರ್‌ ಸಲ್ಲಿಸಿರುವ ಅರ್ಜಿ ವಿಚಾರಣೆಯನ್ನು ನ್ಯಾಯಮೂರ್ತಿ ಕೃಷ್ಣ ಎಸ್‌. ದೀಕ್ಷಿತ್‌ ಅವರ ನೇತೃತ್ವದ ಏಕಸದಸ್ಯ ಪೀಠವು ನಡೆಸಿತು.

ಭಾರತ ಸರ್ಕಾರವನ್ನು ಪ್ರತಿನಿಧಿಸಿದ್ದ ಹೆಚ್ಚುವರಿ ಸಾಲಿಸಿಟರ್‌ ಜನರಲ್‌ ಆರ್‌ ಶಂಕರನಾರಾಯಣನ್‌ ಅವರು “ಟ್ವಿಟರ್‌ ವಿದೇಶಿ ಕಾರ್ಪೊರೇಟ್‌ ಸಂಸ್ಥೆಯಾಗಿರುವುದರಿಂದ ಸಂವಿಧಾನದ 19ನೇ ವಿಧಿಯಡಿ ಪರಿಹಾರ ಪಡೆಯಲು ಅರ್ಹವಾಗಿಲ್ಲ. 14ನೇ ವಿಧಿಯಡಿ ಯಾವುದೇ ಸ್ವೇಚ್ಛಾಚಾರ ನಡೆದಿಲ್ಲ ಮತ್ತು ಐಟಿ ನಿಯಮ 69 (ಎ) ಅನ್ನು ಸೂಕ್ತವಾದ ರೀತಿಯಲ್ಲಿ ಪಾಲಿಸಲಾಗಿದೆ. ಟ್ವಿಟರ್‌ ಖಾತೆ ಹೊಂದಿರುವವರಿಗೆ ನೋಟಿಸ್‌ ನೀಡದಿರುವುದು ಇಡೀ ಪ್ರಕ್ರಿಯೆಯನ್ನು ದುರ್ಬಲಗೊಳಿಸುವುದಿಲ್ಲ. ಹೀಗಾಗಿ, ಯಾವುದೇ ರೀತಿಯ ಪರಿಹಾರ ಪಡೆಯಲು ಟ್ವಿಟರ್‌ ಅರ್ಹವಾಗಿಲ್ಲ” ಎಂದರು.

“ಐಟಿ ನಿಯಮ 2021ರ ಅಡಿ ಟ್ವಿಟರ್‌ ಪ್ರಮುಖ ಸಾಮಾಜಿಕ ಮಧ್ಯಸ್ಥಿಕೆ ಮಾಧ್ಯಮವಾಗಿದ್ದು, ನಿಯಮ 4ರ ಪ್ರಕಾರ ಹೆಚ್ಚುವರಿ ಕಾರ್ಯತತ್ಪರತೆ ತೋರಬೇಕಿದೆ. “ಖಾತೆದಾರರ ಮಾಹಿತಿ ಒದಗಿಸುವುದು ಮಧ್ಯಸ್ಥಿಕೆದಾರರ ಕರ್ತವ್ಯವಾಗಿದೆ. ಸರ್ಕಾರದ ನೋಟಿಸ್‌ಗಳಿಗೆ ಟ್ವಿಟರ್‌ ಪ್ರತಿಕ್ರಿಯಿಸಿಲ್ಲ. ಈ ಮಧ್ಯೆ, ದುಷ್ಕರ್ಮಿಗಳು ಪ್ರಚೋದನಾಕಾರಿ ಮಾಹಿತಿ ಹಾಕುವುದನ್ನು ಮುಂದುವರಿಸಿದ್ದಾರೆ” ಎಂದು ವಾದಿಸಿದರು.

“ಭಾರತ ಆಕ್ರಮಿತ ಕಾಶ್ಮೀರದ ಕುರಿತು ಯಾರೋ ಒಬ್ಬರು ಊಹಾತ್ಮಕವಾದ ಪಾಕಿಸ್ತಾನ ಸರ್ಕಾರದ ಹೆಸರಿನಲ್ಲಿ ಟ್ವೀಟ್‌ ಮಾಡುತ್ತಾರೆ. ಮತ್ತಾರೋ ಪ್ರಭಾಕರ್‌ ಹೀರೊ (ಹತರಾದ ಎಲ್‌ಟಿಟಿಇ ಮುಖಂಡ), ಅವರು ಮರಳಿ ಬರುತ್ತಿದ್ದಾರೆ ಎನ್ನುತ್ತಾರೆ. ಇದೆಲ್ಲವೂ ಅಪಾಯಕಾರಿಯಾಗಿದ್ದು, ಗಲಭೆ ಸೃಷ್ಟಿಸಬಹುದು. ಇದರ ಮೇಲೆ ನಿಗಾ ಇಡುವುದು ಸರ್ಕಾರಕ್ಕೆ ಕಷ್ಟವಾಗಿದ್ದು, ಅದಕ್ಕೆ ಬೆಂಬಲಬೇಕಿದೆ” ಎಂದು ವಾದ ಪೂರ್ಣಗೊಳಿಸಿದರು. ನ್ಯಾಯಾಲಯವು ವಿಚಾರಣೆಯನ್ನು ಏಪ್ರಿಲ್‌ 10ಕ್ಕೆ ಮುಂದೂಡಿತು.