Ashok Kheny
Ashok Kheny ashokkheny.in
ಸುದ್ದಿಗಳು

ಮತದಾರರ ಚೀಟಿಯಲ್ಲಿ ಸಹಿ ನಕಲು ಪ್ರಕರಣ: ವಿದೇಶ ಪ್ರವಾಸ ಕೈಗೊಳ್ಳಲು ಅಶೋಕ್‌ ಖೇಣಿಗೆ ಅನುಮತಿಸಿದ ವಿಶೇಷ ನ್ಯಾಯಾಲಯ

Bar & Bench

ಮತದಾರರ ಚೀಟಿಯಲ್ಲಿನ ಸಹಿ ನಕಲು ಪ್ರಕರಣದಲ್ಲಿ ಆರೋಪಿಯಾಗಿರುವ ಉದ್ಯಮಿ ಅಶೋಕ್‌ ಖೇಣಿ ಅವರು ವಿದೇಶ ಪ್ರವಾಸ ಕೈಗೊಳ್ಳಲು ಈಚೆಗೆ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಅನುಮತಿಸಿದೆ.

ಜಾಮೀನು ನೀಡುವಾಗ ವಿದೇಶ ಪ್ರವಾಸ ಕೈಗೊಳ್ಳದಂತೆ ಷರತ್ತು ವಿಧಿಸಿ ಮಾಡಿರುವ ಎರಡನೇ ಷರತ್ತಿನಲ್ಲಿ ಸಡಿಲಿಕೆ ಮಾಡಿ ಡಿಸೆಂಬರ್‌ 25ರಿಂದ ಜನವರಿ 6ವರೆಗೆ ಅಮೆರಿಕಾ ಪ್ರವಾಸ ಕೈಗೊಳ್ಳಲು ಅನುಮತಿ ನೀಡುವಂತೆ ಕೋರಿ ಖೇಣಿ ಸಲ್ಲಿಸಿದ್ದ ಅರ್ಜಿಯನ್ನು ಜನಪ್ರತಿನಿಧಿಗಳ ವಿಶೇಷ (ಮ್ಯಾಜಿಸ್ಟ್ರೇಟ್‌) ನ್ಯಾಯಾಲಯದ ನ್ಯಾಯಾಧೀಶೆ ಜೆ ಪ್ರೀತ್‌ ಅವರು ಪುರಸ್ಕರಿಸಿದ್ದಾರೆ.

ಕುಟುಂಬವು ಅಮೆರಿಕದಲ್ಲಿ ನೆಲೆಸಿದ್ದು, ಪತ್ನಿಯು ಕ್ಯಾನ್ಸರ್‌ಗೆ ಚಿಕಿತ್ಸೆ ಪಡೆಯುತ್ತಿದ್ದಾರೆ. ಕುಟುಂಬ ಸದಸ್ಯರನ್ನು ಭೇಟಿ ಮಾಡಲು ಮತ್ತು ಉದ್ಯಮದ ಚಟುವಟಿಕೆಯ ಹಿನ್ನೆಲೆಯಲ್ಲಿ ವಿದೇಶ ಪ್ರವಾಸ ಕೈಗೊಳ್ಳಬೇಕಿದೆ. ಇದಕ್ಕಾಗಿ ಜಾಮೀನು ಷರತ್ತಿನಲ್ಲಿ ಸಡಿಲಿಕೆ ಮಾಡಬೇಕು ಎಂದು ಖೇಣಿ ಮನವಿ ಮಾಡಿದ್ದರು. ಇದನ್ನು ನ್ಯಾಯಾಲಯ ಪುರಸ್ಕರಿಸಿದೆ.

2013ರ ಏಪ್ರಿಲ್‌ 1ರಂದು ಬೀದರ್‌ ದಕ್ಷಿಣ ವಿಧಾನ ಸಭಾ ಕ್ಷೇತ್ರದ ಮತದಾರರ ಪಟ್ಟಿಗೆ ತಮ್ಮ ಹೆಸರು ಸೇರಿಸುವಂತೆ ಕೋರಿ ಅಶೋಕ್‌ ಖೇಣಿ ಸಲ್ಲಿಸಿದ್ದ ಫಾರ್ಮ್‌ 6ರಲ್ಲಿ ಅವರು ಸಹಿ ಮಾಡಿರಲಿಲ್ಲ. ಬದಲಿಗೆ ಅಶೋಕ್‌ ಖೇಣಿ ಅವರ ಸಹಿಯನ್ನು ಅವರ ಸಹೋದರ ಸಂಜಯ್‌ ಖೇಣಿ ನಕಲು ಮಾಡಿದ್ದಾರೆ. ಈ ಸಂದರ್ಭದಲ್ಲಿ ಅಶೋಕ್‌ ಖೇಣಿ ಅವರು ವಿದೇಶ ಪ್ರವಾಸದಲ್ಲಿದ್ದರು ಎಂದು ಆರೋಪಿಸಿ ಅಬ್ರಹಾಂ ಖಾಸಗಿ ದೂರು ದಾಖಲಿಸಿದ್ದರು. ಇದನ್ನು ಪರಿಗಣಿಸಿ ನ್ಯಾಯಾಲಯವು ಪ್ರಕರಣ ದಾಖಲಿಸಿ, ವಿಚಾರಣೆ ನಡೆಸಲು ಆದೇಶಿಸಿತ್ತು.

ಇದನ್ನು ವಜಾ ಮಾಡುವಂತೆ ಖೇಣಿ ಅರ್ಜಿ ವಿಚಾರಣೆ ನಡಸಿದ್ದ ಕರ್ನಾಟಕ ಹೈಕೋರ್ಟ್‌ “ಬೆಂಗಳೂರು 62ನೇ ಹೆಚ್ಚುವರಿ ಮುಖ್ಯ ಮೆಟ್ರೊಪಾಲಿಟನ್‌ ಮ್ಯಾಜಿಸ್ಟ್ರೇಟ್‌ ಅವರು ಏಪ್ರಿಲ್‌ 16ರಂದು ಮಾಡಿರುವ ಆಕ್ಷೇಪಿತ ಆದೇಶವನ್ನು ಬದಿಗೆ ಸರಿಸಲಾಗಿದೆ. ಉಭಯ ಪಕ್ಷಕಾರರು ಎತ್ತಿರುವ ಎಲ್ಲಾ ರೀತಿಯ ಆಕ್ಷೇಪಗಳನ್ನು ಮುಕ್ತವಾಗಿರಿಸಲಾಗಿದ್ದು, ಅರ್ಜಿ ವಿಲೇವಾರಿ ಮಾಡಲಾಗಿದೆ. ಹೊಸದಾಗಿ ಪ್ರಕರಣವನ್ನು ಪರಿಗಣಿಸಬೇಕು” ಎಂದು ಪೀಠವು ಆದೇಶದಲ್ಲಿ ಹೇಳಿತ್ತು.