National Commission for Scheduled Castes
National Commission for Scheduled Castes 
ಸುದ್ದಿಗಳು

ನಕಲಿ ಪ್ರಮಾಣಪತ್ರ ಪಡೆಯುವ ಮೂಲಕ ಎಸ್‌ಸಿ, ಎಸ್‌ಟಿ ಅಭ್ಯರ್ಥಿಗಳ ಅವಕಾಶ ಕಸಿಯಲಾಗುತ್ತಿದೆ: ಮದ್ರಾಸ್‌ ಹೈಕೋರ್ಟ್‌

Bar & Bench

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಸಮುದಾಯಕ್ಕೆ ಸೇರದವರೂ ಆ ಸಮುದಾಯದಕ್ಕೆ ಸೇರಿದ್ದೇವೆ ಎಂದು ನಕಲಿ ಪ್ರಮಾಣ ಪತ್ರ ಪಡೆದುಕೊಳ್ಳುತ್ತಿರುವುದಕ್ಕೆ ಶುಕ್ರವಾರ ಮದ್ರಾಸ್‌ ಹೈಕೋರ್ಟ್‌ ಕಳವಳ ವ್ಯಕ್ತಪಡಿಸಿದ್ದು, ತನ್ಮೂಲಕ ಎಸ್‌ಸಿ/ಎಸ್‌ಟಿ ಸಮುದಾಯಗಳಿಗೆ ಮೀಸಲಿಟ್ಟಿರುವ ಅವಕಾಶಗಳನ್ನು ಕಸಿದುಕೊಳ್ಳುತ್ತಿದ್ದಾರೆ. ಚುನಾವಣೆ, ಶೈಕ್ಷಣಿಕ ಪ್ರವೇಶಾತಿ ಅಥವಾ ಉದ್ಯೋಗದಲ್ಲಿಯೂ ಇದು ಸರ್ವೇಸಾಮಾನ್ಯ ಎನ್ನುವಂತಾಗಿದೆ ಎಂದಿದೆ.

“ನಕಲಿ ದಾಖಲೆಗಳನ್ನು ಪಡೆದುಕೊಳ್ಳುವ ಮೂಲಕ ಎಸ್‌ಸಿ/ಎಸ್‌ಟಿ ಸಮುದಾಯವರಿಗೆ ಇರುವ ಸಾಂವಿಧಾನಿಕ ಹಕ್ಕುಗಳನ್ನು ಕಸಿದುಕೊಳ್ಳುವ ಅನರ್ಹರು ಅನ್ಯಾಯಮಾರ್ಗದಲ್ಲಿ ಲಾಭ ಪಡೆದುಕೊಳ್ಳುತ್ತಿದ್ದಾರೆ,” ಎಂದು ಮಧ್ಯಂತರ ಆದೇಶದಲ್ಲಿ ನ್ಯಾಯಮೂರ್ತಿಗಳಾದ ಎನ್‌ ಕಿರುಬಾಕರನ್‌ ಮತ್ತು ಟಿ ವಿ ತಮಿಳ್‌ಸೆಲ್ವಿ ಅವರಿದ್ದ ವಿಭಾಗೀಯ ಪೀಠವು ಪ್ರಕರಣವೊಂದರ ವಿಚಾರಣೆ ವೇಳೆ ಹೇಳಿದೆ.

ವಾಸ್ತವದಲ್ಲಿ ಎಸ್‌ಸಿ/ಎಸ್‌ಟಿ ಸಮುದಾಯದವರಿಗೆ ಮೀಸಲಾಗಿರುವ ಹಕ್ಕುಗಳನ್ನು ಉಲ್ಲಂಘಿಸಿ, ನಕಲಿ ದಾಖಲೆಗಳ ಮೂಲಕ ಎಸ್‌ಸಿ/ಎಸ್‌ಟಿ ಪ್ರಮಾಣ ಪತ್ರ ಪಡೆಯಲಾಗುತ್ತಿದೆ. ಆ ಮೂಲಕ ತಾವು ಎಸ್‌ಸಿ/ಎಸ್‌ಟಿ ಸಮುದಾಯಕ್ಕೆ ಸೇರಿದವರು ಎಂದು ಘೋಷಿಸಿಕೊಳ್ಳುವ ಅನರ್ಹರು ಅವರಿಗೆ ಮೀಸಲಾಗಿರುವ ಕ್ಷೇತ್ರಗಳು ಅಥವಾ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಸ್ಪರ್ಧಿಸಲು, ಶೈಕ್ಷಣಿಕ ಪ್ರವೇಶಾತಿ ಪಡೆಯಲು, ಉದ್ಯೋಗಾವಕಾಶ ಗಿಟ್ಟಿಸಲು ಇದನ್ನು ಬಳಸುತ್ತಿದ್ದಾರೆ. ಎಸ್‌ಸಿ/ಎಸ್‌ಟಿ ಸಮುದಾಯದವರ ಸಾಂವಿಧಾನಿಕ ಹಕ್ಕುಗಳನ್ನು ಉಲ್ಲಂಘಿಸಿ ನಕಲಿ ದಾಖಲೆಗಳನ್ನು ಇತರೆ ಸಮುದಾಯವರು ಪಡೆದುಕೊಳ್ಳುತ್ತಿರುವ ಮತ್ತು ಅಂತಹ ಪ್ರಮಾಣಪತ್ರಗಳನ್ನು ಅಕ್ರಮವಾಗಿ ನೀಡುತ್ತಿರುವ ಸಂಬಂಧ ಹಲವು ಪ್ರಕರಣಗಳು ನ್ಯಾಯಾಲಯದ ಮುಂದೆ ಬರುತ್ತಿವೆ. ನಕಲಿ ದಾಖಲೆಗಳನ್ನು ಪಡೆದುಕೊಳ್ಳುವ ಮೂಲಕ ಅನರ್ಹರು ಎಸ್‌ಸಿ/ಎಸ್‌ಟಿ ಸಮುದಾಯವರಿಗೆ ಇರುವ ಹಕ್ಕುಗಳನ್ನು ಪಡೆದುಕೊಂಡು ಅನ್ಯಾಯಮಾರ್ಗದಲ್ಲಿ ಲಾಭ ಪಡೆಯುತ್ತಿದ್ದಾರೆ ಎಂದು ಪೀಠ ತನ್ನ ಆದೇಶದಲ್ಲಿ ತಿಳಿಸಿದೆ.

ಇಂತಹ ದುಷ್ಕೃತ್ಯಗಳಿಗೆ ತಡೆ ಹಾಕುವ ಸಲುವಾಗಿ ಪ್ರತಿ ಜಿಲ್ಲೆಯಲ್ಲೂ ಕಂದಾಯ ವಿಭಾಗೀಯ ಅಧಿಕಾರಿಗಳನ್ನು ನೇಮಿಸಿ ಸೂಕ್ತ ವಿಚಾರಣೆಯ ನಂತರ ಜಾತಿ, ಆದಾಯ ಮತ್ತು ವಾಸ ಸ್ಥಳ ಪ್ರಮಾಣ ಪತ್ರ ನೀಡುವ ಅಧಿಕಾರವನ್ನು ಅವರಿಗೆ ನೀಡುವಂತೆ ಸಲಹೆ ಮಾಡಿರುವ ನ್ಯಾಯಾಲಯವು ಈ ಕುರಿತು ಪ್ರತಿಕ್ರಿಯಿಸುವಂತೆ ರಾಜ್ಯ ಸರ್ಕಾರಕ್ಕೆ ಸೂಚಿಸಿದೆ.

ತಮಿಳುನಾಡಿನ ಹೊರಗಿನ ವಿದ್ಯಾರ್ಥಿಗಳು ಅನುಕೂಲ ಪಡೆಯುವ ಉದ್ದೇಶದಿಂದ ಎರಡು ವಾಸ ಸ್ಥಳ ಪ್ರಮಾಣ ಪತ್ರಗಳನ್ನು ಪಡೆಯುವ ಮೂಲಕ ವೈದ್ಯಕೀಯ ಕೋರ್ಸ್‌ಗಳಿಗೆ ಪ್ರವೇಶ ಪಡೆಯುತ್ತಿದ್ದಾರೆ ಎಂಬ ಆರೋಪ ಹಿಂದೆ ಇದ್ದದ್ದನ್ನು ಸಹ ಈ ವೇಳೆ ಪೀಠ ತಿಳಿಸಿತು. “ಎಸ್‌ಸಿ/ಎಸ್‌ಟಿ ಜಾತಿ ಪ್ರಮಾಣ ಪತ್ರ ಮಾತ್ರವಲ್ಲದೇ ಆದಾಯ, ವಾಸ ಸ್ಥಳ ಇತ್ಯಾದಿ ಪ್ರಮಾಣ ಪತ್ರ ನೀಡಲು ಪ್ರತಿ ಜಿಲ್ಲೆಯಲ್ಲೂ ಕಂದಾಯ ವಿಭಾಗ ಅಧಿಕಾರಿಗಿಂತ ಕೆಳಗಿನ ದರ್ಜೆ ಹೊಂದಿರದ ಅಧಿಕಾರಿಯನ್ನು ನೇಮಿಸುವ ತುರ್ತು ಇಂದು ರಾಜ್ಯ ಸರ್ಕಾರಕ್ಕೆ ಒದಗಿ ಬಂದಿದೆ. ರಾಜ್ಯದ ಕೋಟಾದಡಿ ವೈದ್ಯಕೀಯ ಕೋರ್ಸ್‌ಗೆ ಪ್ರವೇಶ ಪಡೆಯಲು ವಾಸ ಸ್ಥಳ ಪ್ರಮಾಣ ಪತ್ರ ಅತ್ಯಗತ್ಯ” ಎಂದು ನ್ಯಾಯಾಲಯ ಹೇಳಿತು.

ಕೃಷ್ಣಗಿರಿ ಗ್ರಾಮದಲ್ಲಿ ಎಸ್‌ಟಿಗೆ ಮೀಸಲಾಗಿದ್ದ ಕ್ಷೇತ್ರದಲ್ಲಿ 'ವಕ್ಕಲಿಗಾರ್‌' ಸಮುದಾಯಕ್ಕೆ ಸೇರಿದ್ದ ವ್ಯಕ್ತಿ, ಸ್ಪರ್ಧಿಸಿ, ಅಧ್ಯಕ್ಷನಾಗಿದ್ದರ ವಿರುದ್ಧ ಕೇಳಿ ಬಂದಿದ್ದ ಹಲವು ಆರೋಪಗಳ ಸಂಬಂಧದ ಪ್ರಕರಣದ ವಿಚಾರಣೆ ವೇಳೆ ನ್ಯಾಯಾಲಯ ಮಧ್ಯಂತರ ಆದೇಶ ನೀಡಿದೆ. ಪ್ರಕರಣದ ವಿಚಾರಣೆಯನ್ನು ಜುಲೈ 9ಕ್ಕೆ ಮುಂದೂಡಲಾಗಿದೆ.