ಶತಮಾನಗಳಿಂದ ಎಸ್‌ಸಿ ಜನರನ್ನು ಕೆಟ್ಟದಾಗಿ ನಡೆಸಿಕೊಂಡಿರುವುದಕ್ಕೆ ನಾಚಿಕೆಯಿಂದ ತಲೆತಗ್ಗಿಸಬೇಕು: ಮದ್ರಾಸ್‌ ಹೈಕೋರ್ಟ್‌

ಸ್ಮಶಾನಕ್ಕೆ ತೆರಳುವುದಕ್ಕೆ ರಸ್ತೆಯ ವ್ಯವಸ್ಥೆ ಇಲ್ಲದೇ ಎಸ್‌ಸಿ ಸಮುದಾಯ ಪಡಿಪಾಟಲು ಪಡುತ್ತಿರುವ ಕುರಿತು ಪತ್ರಿಕೆಯಲ್ಲಿ ಪ್ರಕಟವಾದ ವರದಿ ಆಧರಿಸಿ ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡು ವಿಚಾರಣೆ ನಡೆಸುವಾಗ ನ್ಯಾಯಾಲಯವು ಮೇಲಿನಂತೆ ಹೇಳಿದೆ.
Ambedkar
Ambedkar
Published on

ಶತಮಾನಗಳಿಂದ ಪರಿಶಿಷ್ಟ ಜಾತಿಗೆ ಸೇರಿದವರನ್ನು ಕೆಟ್ಟದಾಗಿ ನಡೆಸಿಕೊಂಡಿರುವುದಕ್ಕೆ ನಾವು ನಾಚಿಕೆಯಿಂದ ತಲೆತಗ್ಗಿಸಬೇಕು ಎಂದು ಸೋಮವಾರ ಅಭಿಪ್ರಾಯಪಟ್ಟಿರುವ ಮದ್ರಾಸ್‌ ಹೈಕೋರ್ಟ್, ಇಂದಿಗೂ ಪರಿಸ್ಥಿತಿಯಲ್ಲಿ ಅಂಥ ಬದಲಾವಣೆ ಕಾಣುತ್ತಿಲ್ಲ ಎಂದಿದೆ.

ಸ್ಮಶಾನಕ್ಕೆ ತೆರಳುವುದಕ್ಕೆ ರಸ್ತೆಯ ವ್ಯವಸ್ಥೆ ಇಲ್ಲದೇ ಪರಿಶಿಷ್ಟ ಜಾತಿಯವರು ಪಡಿಪಾಟಲು ಪಡುತ್ತಿರುವ ಕುರಿತು ಪತ್ರಿಕೆಯಲ್ಲಿ ಪ್ರಕಟವಾದ ವರದಿಯನ್ನು ಆಧರಿಸಿ ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡು ವಿಚಾರಣೆ ನಡೆಸುವಾಗ ನ್ಯಾಯಾಲಯವು ಮೇಲಿನಂತೆ ಕಠಿಣವಾಗಿ ನುಡಿದಿದೆ.

ಸ್ಮಶಾನಕ್ಕೆ ತೆರಳಲು ಸರಿಯಾದ ರಸ್ತೆಯ ವ್ಯವಸ್ಥೆ ಇಲ್ಲದೇ ಇರುವುದರಿಂದ ತಮಿಳುನಾಡಿನ ಮೇಲೂರು ತಾಲ್ಲೂಕಿನ ಮರುಥೂರ್‌ ಕಾಲೊನಿಯಲ್ಲಿ ಹೆಣ ಒತ್ತುಕೊಂಡು ಬೆಳೆಯ ಮಧ್ಯೆಯೇ ನಡೆದು ಹೋಗುವ ಸ್ಥಿತಿ ಇದೆ ಎಂಬುದನ್ನು ಉಲ್ಲೇಖಿಸಿ ʼದಿನಕರನ್‌ʼ ಪತ್ರಿಕೆಯು ಡಿಸೆಂಬರ್‌ 21ರ ಆವೃತ್ತಿಯಲ್ಲಿ ಸುದ್ದಿ ಪ್ರಕಟಿಸಿತ್ತು.

“ಶತಮಾನಗಳಿಂದ ಪರಿಶಿಷ್ಟ ಜಾತಿಗೆ ಸೇರಿದವರನ್ನು ಕೆಟ್ಟದಾಗಿ ಮತ್ತು ತಾರತಮ್ಯದಿಂದ ನಡೆಸಿಕೊಂಡಿರುವುದಕ್ಕೆ ನಾವು ನಾಚಿಕೆಯಿಂದ ತಲೆತಗ್ಗಿಸಬೇಕು… ಇಂದಿಗೂ ಅವರನ್ನು ಸರಿಯಾಗಿ ನಡೆಸಿಕೊಳ್ಳಲಾಗುತ್ತಿಲ್ಲ. ಅವರ ವಿರುದ್ಧದ ಅಪರಾಧಗಳು ಮುಂದುವರಿದಿದ್ದು, ಅವರಿಗೆ ಸರಿಯಾದ ಮೂಲಸೌಕರ್ಯ ದೊರೆಯುತ್ತಿಲ್ಲ,” ಎಂದು ನ್ಯಾಯಮೂರ್ತಿಗಳಾದ ಎನ್‌ ಕಿರುಬಾಕರನ್‌ ಮತ್ತು ಬಿ ಪುಗಳೇಂದಿ ಅವರಿದ್ದ ವಿಭಾಗೀಯ ಪೀಠವು ಅಭಿಪ್ರಾಯಪಟ್ಟಿದೆ.

ಪರಿಶಿಷ್ಟ ಜಾತಿ ಮತ್ತು ಪಂಗಡಕ್ಕೆ ಸೇರಿದ ಜನರ ಘನತೆ ಕಾಪಾಡುವ ಉದ್ದೇಶದಿಂದ ಪರಿಶಿಷ್ಟ ಜಾತಿಗಳು ಮತ್ತು ಪರಿಶಿಷ್ಟ ಪಂಗಡಗಳ (ದೌರ್ಜನ್ಯ ನಿಯಂತ್ರಣ) ಕಾಯಿದೆ -1989 ಜಾರಿಗೊಳಿಸಲಾಗಿದೆ ಎಂದು ನ್ಯಾಯಾಲಯ ಹೇಳಿತು. ಕೆಲವರು ಕಾಯಿದೆಯನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದು, ಸರ್ಕಾರಿ ಉದ್ಯೋಗಿಗಳೂ ಅದನ್ನು ಹಳಿತಪ್ಪಿಸುತ್ತಿದ್ದಾರೆ ಎಂದೂ ನ್ಯಾಯಾಲಯ ಹೇಳಿದೆ.

ಸದರಿ ಪ್ರಕರಣದಲ್ಲಿ ಸರಿಯಾದ ರಸ್ತೆ ಇಲ್ಲದೇ ಇರುವುದರಿಂದ ಎಸ್‌ಸಿ ಸಮುದಾಯದವರು ಶವವನ್ನು ಬೆಳೆದು ನಿಂತಿರುವ ಫಸಲಿನ ಮಧ್ಯೆಯೇ ಕೊಂಡೊಯ್ಯಬೇಕಿದೆ. ಇದು ಸಾಕಷ್ಟು ಸಮಸ್ಯೆಯ ಜೊತೆಗೆ ಹೇಳಿಕೊಳ್ಳಲಾಗದ ಯಾತನೆ ಉಂಟುಮಾಡುತ್ತಿದೆ ಎಂಬುದನ್ನು ಪೀಠ ಪರಿಗಣಿಸಿದೆ.

Also Read
ಚೆನ್ನೈ ಪೊಲೀಸರಿಂದ ನಿವೃತ್ತ ನ್ಯಾಯಮೂರ್ತಿ ಸಿ ಎಸ್‌ ಕರ್ಣನ್‌ ಬಂಧನ

ಜೀವಂತವಾಗಿರುವವರಿಗೆ ಮಾತ್ರವಲ್ಲದೇ ಶವಕ್ಕೂ ಗೌರವ ನೀಡಬೇಕಿದೆ ಎಂದು ಒತ್ತಿ ಹೇಳಿರುವ ನ್ಯಾಯಾಲಯವು “ಸ್ಮಶಾನಕ್ಕೆ ಎಸ್‌ಸಿ ಜನರಿಗೆ ರಸ್ತೆ ಇರಬೇಕು. ಈ ಪತ್ರಿಕಾ ವರದಿಯಲ್ಲಿ ಸರಿಯಾದ ರಸ್ತೆ ಇಲ್ಲ ಎಂದು ವರದಿಯಾಗಿದೆ. ಈ ಹಿನ್ನೆಲೆಯಲ್ಲಿ ಇದು ಸ್ವಯಂಪ್ರೇರಿತವಾದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಎಂದು ಪರಿಗಣಿಸಲು ಅರ್ಹವಾಗಿದೆ ಎಂದು ನ್ಯಾಯಾಲಯ ತೀರ್ಮಾನಿಸಿದೆ” ಎಂದು ಹೇಳಿದೆ.

ಆದಿ ದ್ರಾವಿಡ ಮತ್ತು ಬುಡಕಟ್ಟು ಕಲ್ಯಾಣ ಇಲಾಖೆಯ ಮುಖ್ಯ ಕಾರ್ಯದರ್ಶಿ, ರಾಜ್ಯ ಕಂದಾಯ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಮತ್ತು ಪೌರಾಡಳಿತ ಮತ್ತು ಜಲ ಮಂಡಳಿ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಅವರನ್ನು ಸ್ವಯಂಪ್ರೇರಿತವಾಗಿ ನ್ಯಾಯಾಲಯವು ಪ್ರಕರಣದಲ್ಲಿ ಪ್ರತಿವಾದಿಗಳನ್ನಾಗಿಸಿದೆ.

Kannada Bar & Bench
kannada.barandbench.com