ಸುಳ್ಳು ಅತ್ಯಾಚಾರದ ಆರೋಪವು ಆರೋಪಿಯ ಪಾಲಿಗೆ ಜೀವಮಾನವಿಡೀ ಕಾಡುವ ಗಾಯದ ಗುರುತನ್ನು ಉಳಿಸುತ್ತದೆ. ಹೀಗಾಗಿ ಇಂತಹ ಪ್ರಕರಣಗಳನ್ನು ಸೂಕ್ಷ್ಮವಾಗಿ ಪರಿಶೀಲಿಸುವ ಅಗತ್ಯವಿದೆ ಎಂದು ದೆಹಲಿ ಹೈಕೋರ್ಟ್ ಈಚೆಗೆ ಅಭಿಪ್ರಾಯಪಟ್ಟಿದೆ [ದೆಹಲಿ ರಾಷ್ಟ್ರರಾಜಧಾನಿ ಪ್ರದೇಶ ಸರ್ಕಾರ ಮತ್ತು ತೋಷಿಬ್ ಅಲಿಯಾಸ್ ಪಾರಿತೋಷ್ ಇನ್ನಿತರರ ನಡುವಣ ಪ್ರಕರಣ].
ಸುಳ್ಳು ಅತ್ಯಾಚಾರ ಆರೋಪಗಳು ಸಂತ್ರಸ್ತರಿಗೆ ಮಾತ್ರವಲ್ಲದೆ ಆರೋಪಿಗಳಿಗೂ ದೂರಗಾಮಿ ಪರಿಣಾಮಗಳನ್ನು ಬೀರುತ್ತವೆ ಎಂದು ನ್ಯಾಯಮೂರ್ತಿ ಸ್ವರಣಕಾಂತ ಶರ್ಮಾ ಹೇಳಿದರು.
ಪ್ರಕರಣದಲ್ಲಿ ದೋಷಮುಕ್ತರಾಗುವುದು ಅಥವಾ ಆರೋಪಿಗಳ ಬಗೆಗೆ ಆಡುವ ಕೆಲವು ಸಹಾನುಭೂತಿಯ ಮಾತುಗಳು ಸುಳ್ಳೇ ಆರೋಪಿತನಾಗಿರುವ ವ್ಯಕ್ತಿಗೆ ಉಂಟಾದ ಹಾನಿಯನ್ನು ಸರಿಪಡಿಸಲು ಸಾಕಾಗದು ಎಂದು ನ್ಯಾಯಾಲಯ ಹೇಳಿದೆ.
"ಲೈಂಗಿಕ ದೌರ್ಜನ್ಯದ ನಿಜವಾದ ಪ್ರಕರಣಗಳಲ್ಲಿ ಘನತೆ ಮತ್ತು ದೈಹಿಕ ಸಮಗ್ರತೆಯ ಉಲ್ಲಂಘನೆಯು ಆಳವಾದ ಮತ್ತು ಶಾಶ್ವತವಾದ ಗಾಯಗಳನ್ನು ಬಿಟ್ಟುಹೋಗುವಂತೆಯೇ, ಸುಳ್ಳು ಆರೋಪಕ್ಕೆ ತುತ್ತಾದ ವ್ಯಕ್ತಿಗೆ ಉಂಟಾಗುವ ಗೌರವ ನಷ್ಟ, ಸೆರೆವಾಸ, ಸಾಮಾಜಿಕ ಕಳಂಕ ಹಾಗೂ ಮಾನಸಿಕ ಆಘಾತ ಜೀವಿತಾವಧಿಯವರೆಗೂ ವಾಸಿಯಾಗದೆ ಉಳಿಯಬಹುದು. ಅಂತಹ ಹಾನಿಯನ್ನು ಕೇವಲ ಬಿಡುಗಡೆ ಆದೇಶ ಇಲ್ಲವೇ ಕೆಲ ಸಹಾನುಭೂತಿಯ ಮಾತುಗಳಿಂದ ಸರಿಪಡಿಸಲು ಸಾಧ್ಯವಿಲ್ಲ" ಎಂದು ಪೀಠ ವಿವರಿಸಿದೆ.
ಅಲ್ಲದೆ ಇಂತಹ ಸುಳ್ಳು ಅತ್ಯಾಚಾರ ಪ್ರಕರಣಗಳು ಲೈಂಗಿಕ ದೌರ್ಜನ್ಯದ ನಿಜವಾದ ಸಂತ್ರಸ್ತರ ಮೇಲೂ ಪರಿಣಾಮ ಬೀರುತ್ತವೆ ಎಂದು ಅದು ತಿಳಿಸಿದೆ.
“ಗಂಭೀರ ಆರೋಪಗಳನ್ನು ಮಾಡಿ, ನಂತರ ಯಾವುದೇ ವಿವರಣೆಯಿಲ್ಲದೆ ಅವುಗಳನ್ನು ಹಿಂತೆಗೆದುಕೊಳ್ಳುವ ಸಂದರ್ಭದಲ್ಲಿ, ಲೈಂಗಿಕ ಹಿಂಸೆಯ ಸಂತ್ರಸ್ತರನ್ನು ರಕ್ಷಿಸಲು ಉದ್ದೇಶಿಸಿದ ನ್ಯಾಯ ಪ್ರಕ್ರಿಯೆಯ ಮೇಲಿನ ಸಾರ್ವಜನಿಕ ನಂಬಿಕೆ ಕಡಿಮೆಯಾಗುತ್ತದೆ. ಇದರ ದೌರ್ಬಾಗ್ಯಕರ ಪರಿಣಾಮವೆಂದರೆ, ನಿಜವಾಗಿಯೂ ಇಂತಹ ಅಪರಾಧಗಳನ್ನು ಅನುಭವಿಸಿದ ಮಹಿಳೆಯರ ಧ್ವನಿಯೇ ಪ್ರಶ್ನೆಗೀಡಾಗಬಹುದು ಅಥವಾ ಅವರ ಕೆಟ್ಟ ಅನುಭವಗಳ ಮೇಲೆಯೇ ಅನುಮಾನ ಮೂಡಿಸಬಹುದು. ಈ ಕಾರಣದಿಂದಲೇ, ಲೈಂಗಿಕ ಅಪರಾಧಗಳ ಸುಳ್ಳು ಆರೋಪಗಳನ್ನು ಲಘುವಾಗಿ ಪರಿಗಣಿಸಬಾರದು; ಕಾನೂನಿನ ಪ್ರಕಾರ ಅವುಗಳನ್ನು ಸೂಕ್ಷ್ಮ ಹಾಗೂ ಕಟ್ಟುನಿಟ್ಟಾದ ಪರಿಶೀಲನೆಗೆ ಒಳಪಡಿಸಬೇಕು, ಆಗ ಮಾತ್ರ ಕೆಲವರ ದುರುಪಯೋಗದ ಕಾರಣದಿಂದ ನಿಜವಾದ ಸಂತ್ರಸ್ತರು ತೊಂದರೆ ಅನುಭವಿಸುವುದನ್ನು ತಪ್ಪಿಸಬಹುದು,” ಎಂದು ನ್ಯಾಯಾಲಯ ಹೇಳಿದೆ.
ಸುಳ್ಳು ಅತ್ಯಾಚಾರ ಪ್ರಕರಣಗಳಿಂದ ಉಂಟಾಗುವ ಹಾನಿಯನ್ನು ಕೇವಲ ಆರೋಪಿಯ ಬಿಡುಗಡೆ ಅಥವಾ ಕೆಲವು ಸಹಾನುಭೂತಿಯ ಮಾತುಗಳಿಂದ ಸರಿಪಡಿಸಲು ಸಾಧ್ಯವಿಲ್ಲ... ನಿಜವಾದ ಸಂತ್ರಸ್ತರು ಹಾನಿಗೊಳಗಾಗದಂತೆ ನೋಡಿಕೊಳ್ಳಲು, ಲೈಂಗಿಕ ಅಪರಾಧಗಳ ಸುಳ್ಳು ಆರೋಪಗಳು ಕಟ್ಟುನಿಟ್ಟಾದ ಪರಿಶೀಲನೆಗೆ ಒಳಪಡಬೇಕು.ದೆಹಲಿ ಹೈಕೋರ್ಟ್
ಉದ್ಯೋಗ ಕೊಡಿಸುವ ನೆಪದಲ್ಲಿ ಮೂವರು ಪುರುಷರು ತನ್ನ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ ಎಂದು ಮಹಿಳೆಯೊಬ್ಬರು ದೂರಿದ್ದರು. ಆದರೆ, ವಿಚಾರಣೆಯ ಸಮಯದಲ್ಲಿ, ಅವರು ತಮ್ಮ ಹೇಳಿಕೆಗಳನ್ನು ಹಿಂತೆಗೆದುಕೊಂಡಿದ್ದರು. ಆದ್ದರಿಂದ ವಿಚಾರಣಾ ನ್ಯಾಯಾಲಯ ಮೂವರು ಆರೋಪಿಗಳನ್ನು ಖುಲಾಸೆಗೊಳಿಸಿತ್ತು. ಇದನ್ನು ದೆಹಲಿ ಪೊಲೀಸರು ಹೈಕೋರ್ಟ್‌ನಲ್ಲಿ ಪ್ರಶ್ನಿಸಿದ್ದರು. ಡಿಸೆಂಬರ್ 15 ರಂದು ಹೈಕೋರ್ಟ್ ಈ ಮೇಲ್ಮನವಿಯನ್ನು ವಜಾಗೊಳಿಸಿದೆ.
ಗಮನಾರ್ಹ ಅಂಶವೆಂದರೆ, ಅತ್ಯಾಚಾರ ಸಂತ್ರಸ್ತರಿಗೆ ಲಭ್ಯವಿರುವ ಸಂತ್ರಸ್ತ ಪರಿಹಾರ ಯೋಜನೆಯನ್ನು ಕೆಲವು ಪ್ರಕರಣಗಳಲ್ಲಿ ದುರುಪಯೋಗಪಡಿಸಿಕೊಳ್ಳಲಾಗಿದೆ ಎಂದು ತೀವ್ರ ಕಳವಳ ವ್ಯಕ್ತವಾಗಿರುವುದನ್ನು ಅದು ಗಣನೆಗೆ ತೆಗೆದುಕೊಂಡಿತು.
ಈ ಹಿನ್ನೆಲೆಯಲ್ಲಿ ಅತ್ಯಾಚಾರ ಸಂತ್ರಸ್ತೆಯರು ನಂತರ ಆರೋಪ ಹಿಂತೆಗೆದುಕೊಂಡರೆ ಅಥವಾ ಅತ್ಯಾಚಾರ ಪ್ರಕರಣ ಸುಳ್ಳು ಎಂದು ಕಂಡುಬಂದರೆ ಅವರಿಗೆ ನೀಡಲಾಗಿದ್ದ ಮಧ್ಯಂತರ ಪರಿಹಾರ ಮೊತ್ತವನ್ನು ವಾಪಸ್ ಪಡೆಯುವಂತೆ ನ್ಯಾಯಾಲಯ ನಿರ್ದೇಶಿಸಿತು. ನಿರ್ದೋಷಿಗಳೆಂದು ತೀರ್ಮಾನವಾದರೆ, ವಿಚಾರಣಾ ನ್ಯಾಯಾಲಯಗಳು ಸಂಬಂಧಿತ ದಾಖಲೆಗಳನ್ನು ದೆಹಲಿ ರಾಜ್ಯ ಕಾನೂನು ಸೇವಾ ಪ್ರಾಧಿಕಾರಕ್ಕೆ ಕಳಹಿಸಬೇಕು. ಇದರಿಂದ ಪರಿಹಾರ ವಾಪಸ್ ಪಡೆಯಬೇಕೆ ಎಂಬುದನ್ನು ಪ್ರಾಧಿಕಾರ ನಿರ್ಧರಿಸಲು ಸಹಾಯಕವಾಗುತ್ತದೆ ಎಂದು ಅದು ತಿಳಿಸಿತು. ಅಲ್ಲದೆ ಪರಿಹಾರ ಮೊತ್ತ ಪಡೆದಿದ್ದರೆ ಅದರ ವಿವರಗಳನ್ನು ಸಂತ್ರಸ್ತರು ಅರ್ಜಿಯಲ್ಲಿ ಸಂಪೂರ್ಣ ವಿವರಗಳನ್ನು ಕಡ್ಡಾಯವಾಗಿ ಬಹಿರಂಗಪಡಿಸಬೇಕು ಎಂತಲೂ ಪೀಠ ಹೇಳಿದೆ.
[ತೀರ್ಪಿನ ಪ್ರತಿ]