ಪತಿ ವಿರುದ್ಧ ಮದ್ಯಸೇವನೆಯ ಸುಳ್ಳು ಆರೋಪ, ನಿರಂತರ ಅಪಮಾನ ಕ್ರೌರ್ಯ: ಮಧ್ಯಪ್ರದೇಶ ಹೈಕೋರ್ಟ್

ಸಾಮಾಜಿಕ ವಲಯದಲ್ಲಿ ತನ್ನ ಗಂಡನನ್ನು ಮದ್ಯವ್ಯಸನಿ ಎಂದು ನಿರಂತರ ಅಪಹಾಸ್ಯ ಮಾಡುವ ಹೆಂಡತಿಯ ವರ್ತನೆ ಗಂಭೀರವಾಗಿ ಪರಿಗಣಿಸಬೇಕಾದ ವಿಚಾರ ಎಂದು ನ್ಯಾಯಾಲಯ ಹೇಳಿದೆ.
Jabalpur Bench of Madhya Pradesh High Court, Couple
Jabalpur Bench of Madhya Pradesh High Court, Couple
Published on

ಪತಿ ಮೇಲೆ ಹೆಂಡತಿ ಮದ್ಯಸೇವನೆಯ ಸುಳ್ಳು ಆರೋಪ ಮಾಡಿದ್ದಲ್ಲದೆ ಆತ ಸಲ್ಲಿಸಿದ್ದ ವಿಚ್ಛೇದನ ಅರ್ಜಿ ಪ್ರಶ್ನಿಸಿದ್ದ ಮಹಿಳೆಯೊಬ್ಬಳ ಪ್ರಕರಣಕ್ಕೆ ಸಂಬಂಧಿಸಿದಂತೆ ಮಧ್ಯಪ್ರದೇಶ ಹೈಕೋರ್ಟ್‌ ಈಚೆಗೆ ವಿಚ್ಛೇದನಕ್ಕೆ ಆದೇಶಿಸಿದೆ.

ಪತ್ನಿ ತನ್ನ ಗಂಡನನ್ನು ಸಾಮಾಜಿಕ ವಲಯದಲ್ಲಿ ಮದ್ಯವ್ಯಸನಿ ಎಂದು ನಿರಂತರವಾಗಿ ಅಪಹಾಸ್ಯ ಮಾಡುವುದು ಗಂಭೀರ ವಿಷಯವಾಗಿದ್ದು, ಇದು ಮಾನಸಿಕ ಕ್ರೌರ್ಯಕ್ಕೆ ಸಮ ಎಂದು ನ್ಯಾಯಮೂರ್ತಿಗಳಾದ ವಿಶಾಲ್ ಧಗತ್ ಮತ್ತು ಅನುರಾಧಾ ಶುಕ್ಲಾ ಅವರಿದ್ದ ವಿಭಾಗೀಯ ಪೀಠ, ಅಭಿಪ್ರಾಯಪಟ್ಟಿದೆ.

Also Read
ಹಿಂದೂ ಕಾಯಿದೆಯಡಿ ವಿಚ್ಛೇದನ ನಿಬಂಧನೆಗಳ ಉದಾರ ಅರ್ಥೈಸುವಿಕೆಯಿಂದ ವಿವಾಹ ಪಾವಿತ್ರ್ಯತೆಗೆ ಧಕ್ಕೆ: ದೆಹಲಿ ಹೈಕೋರ್ಟ್‌

ಪ್ರಕರಣದಲ್ಲಿ ವೈವಾಹಿಕ ಹೊಣೆಗಾರಿಕೆಯಿಂದ ನುಣುಚಿಕೊಳ್ಳುವುದಕ್ಕಾಗಿ ಹೆಂಡತಿ, ಮೇಲ್ಮನವಿ ಸಲ್ಲಿಸಿರುವ ಗಂಡನಿಗೆ ಕುಡಿತದ ಚಟ ಇದೆ ಎಂದು ಆಧಾರರಹಿತ ಆರೋಪ ಮಾಡಿದ್ದಾಳೆ. ಆ ಮೂಲಕ ಸಾರ್ವಜನಿಕ ಸೇವೆ ಸಲ್ಲಿಸುತ್ತಿರುವ ಪತಿಯ ಸಾಮಾಜಿಕ ಸ್ಥಾನಮಾನಕ್ಕೆ ಧಕ್ಕೆ ತಂದು ಸಮಾಜ ಆತನನ್ನು ಅಪಹಾಸ್ಯ, ತಿರಸ್ಕಾರದಿಂದ ಕಾಣುವಂತೆ ಮಾಡಿದ್ದಾಳೆ. ಇಂತಹ ಆಧಾರರಹಿತ ಆರೋಪಗಳು ಭವಿಷ್ಯದಲ್ಲಿ ಇಬ್ಬರ ವೈವಾಹಿಕ ಸಂಬಂಧದ ಮೇಲೆ ಖಂಡಿತ ನಿರ್ಣಾಯಕ ಪರಿಣಾಮ ಬೀರಲಿದೆ ಎಂದು ಅದು ವಿವರಿಸಿದೆ. 

2004ರಲ್ಲಿ ವಿವಾಹವಾದ ದಂಪತಿಗೆ ಇಬ್ಬರು ಮಕ್ಕಳು ಜನಿಸಿದ್ದರು. ದಂಪತಿ 2017ರಿಂದ ಪ್ರತ್ಯೇಕವಾಗಿ ವಾಸಿಸುತ್ತಿದ್ದರು. ಕೌಟುಂಬಿಕ ಹಿಂಸಾಚಾರದಿಂದ ಮಹಿಳೆಯರ ರಕ್ಷಣೆ ಕಾಯಿದೆಯಡಿ ಪತ್ನಿ ಈ ಹಿಂದೆ ಗಂಡನ ವಿರುದ್ಧ ಅರ್ಜಿ ಸಲ್ಲಿಸಿದ್ದರು. ನಂತರ ಪ್ರಕರಣ ಮುಕ್ತಾಯಗೊಂಡಿತ್ತು.

2018ರಲ್ಲಿ ವಿಚ್ಛೇದನ ಕೋರಿ ಪತಿ ಅರ್ಜಿ ಸಲ್ಲಿಸಿದರು. ತನ್ನ ವಿರುದ್ಧ ಪತ್ನಿ ಸುಳ್ಳು ಆರೋಪ ಮಾಡುತ್ತಿದ್ದಾಳೆ ಎಂಬುದು ಆತನ ಆರೋಪವಾಗಿತ್ತು. ಆದರೆ ಈ ಅರ್ಜಿಯನ್ನು ಪ್ರಶ್ನಿಸಿದ ಪತ್ನಿ ತಾನೇ ಕ್ರೌರ್ಯಕ್ಕೆ ಒಳಗಾಗಿದ್ದು ಪತಿ ಕ್ಷಮೆಯಾಚನೆ ಬಳಿಕ ರಾಜಿ ಮಾಡಿಕೊಳ್ಳಲಾಗಿತ್ತು ಎಂದಿದ್ದರು.

ಪತಿ ಸಲ್ಲಿಸಿದ್ದ ವಿಚ್ಛೇದನ ಅರ್ಜಿಯನ್ನು 2021ರಲ್ಲಿ, ಕೌಟುಂಬಿಕ ನ್ಯಾಯಾಲಯ ತಿರಸ್ಕರಿಸಿತು. ಪತಿ ರೂಢಿಗತ ಮದ್ಯವ್ಯಸನಿಯಾಗಿದ್ದು ಹೆಂಡತಿಗೆ ಕಿರುಕುಳ ನೀಡುತ್ತಿದ್ದಾನೆ ಎಂದು ತೀರ್ಪು ನೀಡಿತು. ನಂತರ ಪತಿ ಹೈಕೋರ್ಟ್‌ಗೆ ಪ್ರಸ್ತುತ ಮೇಲ್ಮನವಿ ಸಲ್ಲಿಸಿದ್ದರು.

ಪತಿಯ ಮದ್ಯದ ಚಟದ ಬಗ್ಗೆ ತೀರ್ಪು ನೀಡಲು ಕೌಟುಂಬಿಕ ನ್ಯಾಯಾಲಯ ಅವಲಂಬಿಸಿದ್ದ ರಾಜಿಸಂಧಾನದ ದಾಖಲೆಗಳಿಗೆ ಯಾವುದೇ ಸಾಕ್ಷಿ ಮೌಲ್ಯವಿಲ್ಲ ಎಂದು ಹೈಕೋರ್ಟ್‌ ಹೇಳಿದೆ.

ಈ ದಾಖಲೆಗಳಲ್ಲಿ ಯಾವುದೂ ಪತಿ ಮದ್ಯಸೇವನೆಯ ಅಭ್ಯಾಸ ಹೊಂದಿದ್ದಾನೆ ಎಂದು ಹೇಳುತ್ತಿಲ್ಲ. ಪತ್ನಿ ಪೊಲೀಸರಿಗೆ ನೀಡಿದ್ದ ದೂರು ಆಧರಿಸಿ ಅವರು ಕೂಡ ಕ್ರಮ ಕೈಗೊಂಡಿಲ್ಲ. 2011ರಲ್ಲಿ ಪತಿ ದುಷ್ಕೃತ್ಯ ಎಸಗಿದ್ದಾಗಿ ಒಪ್ಪಿದರೂ ಅಂತಹ ಘಟನೆ ವೈವಾಹಿಕ ಜೀವನದ ನಂತರದ ವರ್ಷಗಳಲ್ಲಿ ಮರುಕಳಿಸಿಲ್ಲ. ಇದಲ್ಲದೆ, ಮದ್ಯಸೇವನೆ ಬಗ್ಗೆ ಪತ್ನಿ ಹೇಳಿದ್ದೆಲ್ಲವನ್ನೂ, ಪತಿ ಸಲ್ಲಿಸಿರುವ ಪ್ರಮಾಣಪತ್ರ ತಿರಸ್ಕರಿಸಿದೆ ಎಂದು ನ್ಯಾಯಾಲಯ ವಿವರಿಸಿದೆ.

Also Read
ಹಿಂದೂ ಕಾಯಿದೆಯಡಿ ವಿಚ್ಛೇದನ ನಿಬಂಧನೆಗಳ ಉದಾರ ಅರ್ಥೈಸುವಿಕೆಯಿಂದ ವಿವಾಹ ಪಾವಿತ್ರ್ಯತೆಗೆ ಧಕ್ಕೆ: ದೆಹಲಿ ಹೈಕೋರ್ಟ್‌

ಹೀಗಾಗಿ, ಪತಿಯ ವಿರುದ್ಧದ ಮದ್ಯದ ಚಟದ ಆರೋಪಗಳನ್ನು ಪತ್ನಿಸೂಕ್ತ ರೀತಿಯಲ್ಲಿ ಸಾಬೀತುಪಡಿಸಿಲ್ಲ ಎಂದು ಅದು ತೀರ್ಪು ನೀಡಿದೆ. ಪತಿ ರೂಢಿಗತ ಮದ್ಯವ್ಯಸನಿ ಎಂದು ತೀರ್ಮಾನಿಸುವಲ್ಲಿ ವಿಚಾರಣಾ ನ್ಯಾಯಾಲಯ ಎಡವಿದೆ ಎಂದು ಪೀಠ ಹೇಳಿದೆ.

ಪತಿ ನಾಲ್ಕನೇ ದರ್ಜೆ ನೌಕರನಾಗಿದ್ದು ಪತ್ನಿ ಅಧಿಕಾರಿ ಹುದ್ದೆಯಲ್ಲಿರುವುದನ್ನು  ಗಣನೆಗೆ ತೆಗೆದುಕೊಂಡ ನ್ಯಾಯಾಲಯ, ದೈನಂದಿನ ಜೀವನದಲ್ಲಿ ಸಾಮಾನ್ಯ ಜಗಳ-ಬಿಕ್ಕಟ್ಟನ್ನು ಗಂಭೀರ ವಿಚಾರವೆಂದು ಪರಿಗಣಿಸಬಾರದಾದರೂ ಪತ್ನಿ ಸಾಮಾಜಿಕ ವಲಯದಲ್ಲಿ ಗಂಡನನ್ನು ಅಪಮಾನಿಸುವ ದೃಢನಿಶ್ಚಯ ಮಾಡಿದ್ದಳು ಎಂದಿತು. ಅಂತೆಯೇ ವಿಚ್ಛೇದನ ಕೋರಿದ್ದ ಪತಿಯ ಮೇಲ್ಮನವಿಯನ್ನು ಅದು ಪುರಸ್ಕರಿಸಿತು.

[ಆದೇಶದ ಪ್ರತಿ]

Attachment
PDF
Divorce_decree
Preview
Kannada Bar & Bench
kannada.barandbench.com